Saturday, January 10, 2026

ಸತ್ಯ | ನ್ಯಾಯ |ಧರ್ಮ

ನಿಮ್ಮ ಗುಟ್ಟು ನನ್ನ ಬಳಿಯಿದೆ ಹುಷಾರು!: ಅಮಿತ್‌ ಶಾಗೆ ಬೆದರಿಕೆ ಹಾಕಿದ ಮಮತಾ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್‌ನ ರಾಜಕೀಯ ತಂತ್ರಗಾರಿಕೆ ಸಂಸ್ಥೆಯಾದ ಐ-ಪ್ಯಾಕ್ (I-PAC) ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿರುವುದನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಮತ್ತು ತಮ್ಮ ಸರ್ಕಾರದ ಮೇಲೆ ಮಿತಿಮೀರಿ ಒತ್ತಡ ಹೇರಿದರೆ, ಕಲ್ಲಿದ್ದಲು ಹಗರಣದಲ್ಲಿ ಅಮಿತ್ ಶಾ ಅವರಿಗೆ ಇರುವ ಸಂಬಂಧದ ಬಗ್ಗೆ ತಮ್ಮ ಬಳಿ ಇರುವ ಎಲ್ಲಾ ಸಾಕ್ಷ್ಯಗಳನ್ನು ಬಹಿರಂಗಪಡಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ತಮ್ಮ ಬಳಿ ಈ ಕುರಿತಾದ ಪೆನ್ ಡ್ರೈವ್‌ಗಳಿವೆ ಎಂದು ತಿಳಿಸಿರುವ ಅವರು, ತಮ್ಮ ಪದವಿಯ ಗೌರವಕ್ಕಾಗಿ ಈವರೆಗೆ ಮೌನವಾಗಿದ್ದಾಗಿ ಹೇಳಿದ್ದಾರೆ.

ಪಿಎಂಎಲ್‌ಎ ಕಾಯ್ದೆಯಡಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಅವರೇ ಸ್ಥಳಕ್ಕೆ ಧಾವಿಸಿ ಕೆಲವು ಫೈಲ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ತೆಗೆದುಕೊಂಡು ಬಂದಿರುವುದು ಉದ್ವಿಗ್ನತೆಗೆ ಕಾರಣವಾಗಿತ್ತು.

ಮುಂದಿನ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದ ಪಕ್ಷದ ಪ್ರಮುಖ ಕಾರ್ಯತಂತ್ರದ ದಾಖಲೆಗಳು ಆ ಫೈಲ್‌ಗಳಲ್ಲಿವೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಪಕ್ಷದ ಮುಖ್ಯಸ್ಥೆಯಾಗಿ ತಮ್ಮ ಚುನಾವಣಾ ತಂತ್ರಗಳನ್ನು ತನಿಖಾ ಸಂಸ್ಥೆಗಳಿಂದ ಕಾಪಾಡುವುದು ತಮ್ಮ ಹಕ್ಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಕಲ್ಲಿದ್ದಲು ಹಗರಣದ ಅಕ್ರಮ ಹಣವೆಲ್ಲಾ ಅಮಿತ್ ಶಾ ಅವರಿಗೆ ತಲುಪುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಮಮತಾ, ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಮೂಲಕ ಈ ವ್ಯವಹಾರ ನಡೆದಿದೆ ಎಂದು ದೂರಿದ್ದಾರೆ.

ಇದೇ ವೇಳೆ ಅವರು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯನ್ನು ‘ದ್ರೋಹಿ’ ಎಂದು ಕರೆದಿದ್ದಾರೆ. ಅಲ್ಲದೆ, ಕಲ್ಲಿದ್ದಲು ಸ್ಮಗ್ಲಿಂಗ್ ತಡೆಯುವಲ್ಲಿ ವಿಫಲವಾಗಿರುವ ಗಡಿ ರಕ್ಷಣಾ ಪಡೆ (BSF) ಮತ್ತು ಸಿಐಎಸ್ಎಫ್ (CISF) ಸಂಸ್ಥೆಗಳ ಪಾತ್ರದ ಬಗ್ಗೆಯೂ ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ.

ಒಂದು ವೇಳೆ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ತಮ್ಮ ಮೇಲೆ ಒತ್ತಡ ಮುಂದುವರಿಸಿದರೆ ಎಲ್ಲಾ ಗುಟ್ಟುಗಳನ್ನು ರಟ್ಟು ಮಾಡುವುದಾಗಿ ಅವರು ಪುನರುಚ್ಚರಿಸಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದ ಮಮತಾ ಬ್ಯಾನರ್ಜಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ರಾಜಕೀಯ ಸೇಡಿಗಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದೆಡೆ, ಈ ದಾಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ವೇಳೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಹೈಡ್ರಾಮಾ ನಡೆದಿದೆ. ವಕೀಲರ ನಡುವಿನ ಗದ್ದಲ ಮತ್ತು ತಳ್ಳಾಟದಿಂದ ಬೇಸತ್ತ ನ್ಯಾಯಾಧೀಶರಾದ ಜಸ್ಟಿಸ್ ಸುವ್ರಾ ಘೋಷ್ ಅವರು ಕೋರ್ಟ್‌ನಿಂದ ಹೊರನಡೆದರು. ಇದರಿಂದಾಗಿ ಇಡಿ ಮತ್ತು ತೃಣಮೂಲ ಕಾಂಗ್ರೆಸ್ ದಾಖಲಿಸಿದ್ದ ಪ್ರಕರಣಗಳ ವಿಚಾರಣೆಯು ಜನವರಿ 14ಕ್ಕೆ ಮುಂದೂಡಲ್ಪಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page