Monday, July 28, 2025

ಸತ್ಯ | ನ್ಯಾಯ |ಧರ್ಮ

‘INDIA’ ಸಭೆ : PM ಅಭ್ಯರ್ಥಿಯಾಗಿ ಮಮತಾ, ಕೇಜ್ರಿವಾಲ್ ಕಡೆಯಿಂದ ಖರ್ಗೆ ಹೆಸರು ಪ್ರಸ್ತಾಪ

28 ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಒಕ್ಕೂಟ I.N.D.I.A ಬಣದ ನಾಲ್ಕನೇ ದೊಡ್ಡ ಸಭೆ ಮಂಗಳವಾರ ನವದೆಹಲಿಯ ಅಶೋಕ ಹೋಟೆಲ್ನಲ್ಲಿ ನಡೆಯಿತು. 2024 ರ ಲೋಕಸಭೆ ಚುನಾವಣೆಯ ತಯಾರಿ, ಪ್ರಚಾರ ಸಮಿತಿ, ಬಿಜೆಪಿ ಕಟ್ಟಿ ಹಾಕಲು ತಗೆದುಕೊಳ್ಳಬೇಕಾದ ನಿಲುವುಗಳು ಸೇರಿದಂತೆ ಪ್ರಧಾನಿ ಅಭ್ಯರ್ಥಿ ಆಯ್ಕೆಯ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ದೊಡ್ಡ ಸೋಲಿನ ನಂತರ ಈ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಸೋಲಿನ ಪರಾಮರ್ಶೆ ಕೂಡಾ ನಡೆದಿದೆ. ಹಾಗೆಯೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಣೆದಿದ್ದ ತಂತ್ರಗಾರಿಕೆ ಮತ್ತು ಪ್ರತಿಪಕ್ಷಗಳ ಸೋಲಿನ ಜೊತೆಗೆ ಮುಂದೆ ಬಿಜೆಪಿ ವೇಗವನ್ನು ಕಟ್ಟಿ ಹಾಕಲು ಮಾಡುವ ತಂತ್ರಗಾರಿಕೆ ಬಗ್ಗೆಯೂ ಸಮಿತಿ ಒಂದು ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಇದರ ಜೊತೆಯಲ್ಲೇ I.ND.I.A ಕೂಟದ ಕಡೆಯಿಂದ ಪ್ರಧಾನಿ ಅಭ್ಯರ್ಥಿ ಬಗ್ಗೆಯೂ ವಿವಿಧ ಪಕ್ಷಗಳು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಸಭೆಗೂ ಮುನ್ನ, ತೃಣಮೂಲ ಕಾಂಗ್ರೆಸ್ ನಾಯಕಿ (ಟಿಎಂಸಿ) ಮಮತಾ ಬ್ಯಾನರ್ಜಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿರೋಧ ಪಕ್ಷದ ಹಲವು ನಾಯಕರು ಮಲ್ಲಿಕಾರ್ಜುನ ಖರ್ಗೆಯವರನ್ನು INDIA ಬಣದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಖರ್ಗೆ ಆಯ್ಕೆಯ ಬಗ್ಗೆ ಬಹುತೇಕ ಪಕ್ಷಗಳೂ ಒಮ್ಮತದ ಅಭಿಪ್ರಾಯ ಹೊಂದಿದ್ದು ಈ ಹಂತದಲ್ಲಿ ಕಂಡುಬಂದಿದೆ.

ಆ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮೈತ್ರಿಕೂಟದ ನಾಲ್ಕನೇ ಸಭೆಯಲ್ಲಿ 28 ಪಕ್ಷಗಳ ಕಡೆಯಿಂದ ವಿಶೇಷವಾಗಿ ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್ ಅವರು ದೇಶದ “ಮೊದಲ ದಲಿತ ಪ್ರಧಾನಿ” ಆಗಬಹುದು ಎಂದು ಹೇಳುವ ಮೂಲಕ ಖರ್ಗೆ ಅವರ ಹೆಸರನ್ನು ವಿರೋಧ ಪಕ್ಷದ INDIA ಬ್ಲಾಕ್‌ನ ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಿದರು.

ಸಲಹೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ವಿಚಾರವನ್ನು ನಂತರ ನಿರ್ಧರಿಸಲಾಗುವುದು ಮತ್ತು ಒಟ್ಟಾಗಿ ಕೆಲಸ ಮಾಡುವ ಮೂಲಕ ಬಹುಮತ ಪಡೆಯಲು ಪ್ರಯತ್ನಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

“ಮೊದಲು ನಾವೆಲ್ಲರೂ ಗೆಲ್ಲಬೇಕು, ಗೆಲುವಿಗೆ ಏನು ಮಾಡಬೇಕು ಎಂದು ಯೋಚಿಸಬೇಕು, ಯಾರು ಪ್ರಧಾನಿಯಾಗುತ್ತಾರೆ, ಇದು ನಂತರ ನಿರ್ಧಾರವಾಗುತ್ತದೆ. ಕಡಿಮೆ ಸಂಸದರಿರುವಾಗ ಪ್ರಧಾನಿ ಬಗ್ಗೆ ಮಾತನಾಡುವುದು ಉಚಿತವಲ್ಲ. ಮೊದಲು ನಮ್ಮ ಸಂಖ್ಯೆಯನ್ನು ಹೆಚ್ಚಿಸಲು, (ಒಟ್ಟಾಗಿ) ನಾವು ಬಹುಮತವನ್ನು ತರಲು ಪ್ರಯತ್ನಿಸೋಣ, ಮೊದಲು ನಾವು ಗೆಲ್ಲಲು ಪ್ರಯತ್ನಿಸೋಣ ”ಎಂದು ಮಲ್ಲಿಕಾರ್ಜುನ ಖರ್ಗೆಯವರು ಒತ್ತಿ ಹೇಳಿದ್ದಾರೆ.

INDIA ಮೈತ್ರಿಕೂಟದ ಕಡೆಯಿಂದ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂಬ ವಿಚಾರ ಪ್ರಸ್ತಾಪದ ನಂತರ ಬಿಜೆಪಿ ಕಡೆಯಿಂದ ಸಹಜವಾಗಿ INDIA ಮೈತ್ರಿಕೂಟವನ್ನು ಕಟ್ಟಿ ಹಾಕುವ ಹೇಳಿಕೆ ಬಂದಿದೆ. ಬಿಜೆಪಿಗೆ ಸೇರಿದ ವಿವಿಧ ನಾಯಕರು, ರಾಹುಲ್ ಗಾಂಧಿಯನ್ನು ಹೊರಗಿಟ್ಟಿರುವ INDIA ಮೈತ್ರಿಕೂಟ ರಾಹುಲ್ ರನ್ನು ನಾಯಕ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಇದು INDIA ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದರ ಜೊತೆಗೆ ನಮಗೆ ನರೇಂದ್ರ ಮೋದಿಯಂತಹ ಅಪ್ರತಿಮ ನಾಯಕ ಸಿಕ್ಕಿರುವುದು ಸೌಭಾಗ್ಯ. ಈ ಸಂದರ್ಭದಲ್ಲೂ ಮೋದಿಯೇ ನಮಗೆ ನಾಯಕ. ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ. ಹೀಗಾಗಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಏನೇ ನಡೆದರೂ ಅದು ಎಲ್ಲರಿಗೂ ತಿಳಿದಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ, ಅಖಿಲೇಶ್ ಯಾದವ್ ಅವರು ಕಮಲ್ ನಾಥ್ ಬಗ್ಗೆ ಏನು ಮಾತನಾಡಿದ್ದಾರೆ ಮತ್ತು ಛತ್ತೀಸ್‌ಗಢದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page