ನವದೆಹಲಿ: ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಇಂದು ಶನಿವಾರ ಬೆಳಗ್ಗೆಯಿಂದ ನಡೆಯುತ್ತಿರುವ ನೀತಿ ಆಯೋಗದ ಸಭೆಯಿಂದ ಮಮತಾ ಬ್ಯಾನರ್ಜಿ ದಿಢೀರ್ ಎದ್ದು ಹೊರ ನಡೆದಿದ್ದಾರೆ.
ಕೇಂದ್ರ ಸರ್ಕಾರದಿಂದ ಅವರಿಗೆ ಮಾತನಾಡಲು ಸಮಯ ನಿರಾಕರಿಸಲಾಗಿದೆ. ಕೇವಲ ಐದು ನಿಮಿಷ ಮಾತನಾಡಿದ ಬಳಿಕ ನನ್ನನ್ನು ತಡೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಕೇಂದ್ರ ಬಜೆಟ್ ಅನ್ನೂ ಟೀಕಿಸಿರುವ ಅವರು, ತಾರತಮ್ಯದ ಬಜೆಟ್ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
‘ಸಭೆ ಬಹಿಷ್ಕರಿಸಿ ನಾನು ಹೊರಗೆ ಬಂದಿದ್ದೇನೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ ನೀಡಲಾಯಿತು. ಅಸ್ಸಾಂ, ಗೋವಾ, ಛತ್ತೀಸಗಢ ಮುಖ್ಯಮಂತ್ರಿಗಳೂ 10–12 ನಿಮಿಷ ಮಾತನಾಡಿದರು. ನಾನು ಮಾತು ಪ್ರಾರಂಭಿಸಿದ 5 ನಿಮಿಷವಾಗುವಾಗಲೇ ತಡೆದರು. ಇದು ಸರಿಯಲ್ಲ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ನಾನೊಬ್ಬಳೇ ಹಾಜರಿದ್ದೆ. ಸಹಕಾರಿ ಒಕ್ಕೂಟವನ್ನು ಬಲಪಡಿಸಬೇಕು ಎಂಬ ಕಾರಣಕ್ಕೆ ನಾನು ಸಭೆಯಲ್ಲಿ ಭಾಗವಹಿಸಿದ್ದೆ’ ಎಂದು ಮಮತಾ ತಿಳಿಸಿದರು.
‘ಈ ವರ್ಷದ ಬಜೆಟ್ ಕೂಡ ರಾಜಕೀಯ ಹಾಗೂ ತಾರತಮ್ಯದಿಂದ ಕೂಡಿದೆ. ನೀವ್ಯಾಕೆ ತಾರತಮ್ಯ ಮಾಡುತ್ತಿದ್ದೀರಿ ಎಂದು ನಾನು ಪ್ರಶ್ನಿಸಿದೆ. ನೀತಿಯ ಆಯೋಗಕ್ಕೆ ಹಣಕಾಸಿನ ಯಾವುದೇ ಅಧಿಕಾರ ಇಲ್ಲ. ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ. ಅದಕ್ಕೆ ಹಣಕಾಸಿನ ಅಧಿಕಾರ ನೀಡಿದದವರು ಯಾರು ಎಂದು ಪ್ರಶ್ನಿಸಿದ ಅವರು, ಯೋಜನಾ ಆಯೋಗವನ್ನು ಮತ್ತೆ ಜಾರಿಗೆ ತನ್ನಿ’ ಅವರು ಆಗ್ರಹಿಸಿದರು.
ನಿತೀಶ್‌ಕುಮಾರ್ ಗೈರು: ನೀತಿ ಆಯೋಗದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಿಲ್ಲ ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ತಿಳಿಸಿದ್ದಾರೆ. ನಿತೀಶ್ ಕುಮಾರ್ ಬದಲಿಗೆ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ರಾಜ್ಯವನ್ನು ಪ್ರತಿನಿಧಿಸಿದ್ದಾರೆ ಎಂದು ಅವರು ಹೇಳಿದರು.
ನಿರ್ಣಾಯಕ ಸಭೆಗೆ ನಿತೀಶ್ ಕುಮಾರ್ ಗೈರುಹಾಜರಾಗಲು ಕಾರಣವೆನೆಂಬ ಬಗ್ಗೆ ಅವರು ಖಚಿತಪಡಿಸಿಲ್ಲ. ನೀತಿ ಆಯೋಗದ ಸಭೆಗೆ ನಿತೀಶ್ ಕುಮಾರ್ ಗೈರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಗೈರಾಗಿದ್ದರು. ಆಗ ಅಂದಿನ ಉಪಮುಖ್ಯಮಂತ್ರಿ ಸಭೆಗೆ ಹಾಜರಾಗಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಈ ಬಾರಿಯೂ ಇಬ್ಬರು ಉಪಮುಖ್ಯಮಂತ್ರಿಗಳು ಸಭೆಗೆ ಹಾಜರಾಗಿದ್ದಾರೆ’ ಎಂದು ನೀರಜ್ ಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆ ಇಂದು ಆರಂಭವಾಗಿದೆ.ನೀತಿ ಆಯೋಗದ ಆಡಳಿತ ಮಂಡಳಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಹಲವು ಕೇಂದ್ರ ಮಂತ್ರಿಗಳನ್ನು ಒಳಗೊಂಡಿದೆ. ಪ್ರಧಾನಿ ಮೋದಿ ಅವರು ಆಯೋಗದ ಅಧ್ಯಕ್ಷರಾಗಿದ್ದಾರೆ.