Friday, September 13, 2024

ಸತ್ಯ | ನ್ಯಾಯ |ಧರ್ಮ

ಕನ್ನಡಿ ಹಾವು ಕಚ್ಚಿ ವ್ಯಕ್ತಿ ಸಾವು: ಜೀವಕ್ಕೆ ಎರವಾದ ಬರಿಗೈಯಲ್ಲಿ ಹಾವು ಹಿಡಿಯುವ ಸಾಹಸ!

ಮಂಗಳೂರು: ವ್ಯಕ್ತಿಯೊಬ್ಬರು ವಿಷಯುಕ್ತ ಕನ್ನಡಿ ಹಾವನ್ನು ವಿಷವಿಲ್ಲದ ಹಾವೆಂದು ಭಾವಿಸಿ ಬರಿಗೈಯಲ್ಲಿ ಹಿಡಿದು ಅದರಿಂದ ಕಚ್ಚಿಸಿಕೊಂಡು ತನ್ನ ಪ್ರಾಣವನ್ನೇ ಬಲಿಕೊಟ್ಟಿದ್ದಾರೆ.

ಈ ಮಳೆಗಾಲದ ಸಮಯದಲ್ಲಿ ಎಲ್ಲೆಡೆ ಹಾವಿನ ಸಂಚಾರ ತುಸು ಹೆಚ್ಚೇ ಇರುತ್ತದೆ. ನಾವು ಹಾವು ಹಿಡಿಯುವುದರಲ್ಲಿ ಅನುಭವ ಇಲ್ಲದಿರುವವರಾದರೆ ಅವುಗಳಿಂದ ದೂರವಿರುವುದೇ ಒಳ್ಳೆಯದು. ಅಂತಹ ಸಂದರ್ಭಗಳಲ್ಲಿ ನಾವು ಹಾವು ಹಿಡಿಯುವ ವೃತ್ತಿಪರರಿಗೆ ಕರೆ ಮಾಡಬೇಕು. ಮತ್ತು ಅವುಗಳನ್ನು ಹಿಡಿದ ನಂತರವೂ ಅವುಗಳೊಂದಿಗೆ ವಿಡಿಯೋ, ಫೋಟೊ ತೆಗೆಸಿಕೊಳ್ಳುವ ಸಾಹಸದಲ್ಲಿ ಚೇಷ್ಟೆಗಳನ್ನು ಮಾಡಲು ಹೋಗಬಾರದು.

ಮೇಲಿನ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವ ದುರ್ದೈವಿಯನ್ನು ಬಜ್ಪೆಯ ರಾಮಚಂದ್ರ ಪೂಜಾರಿ(55) ಎಂದು ಗುರುತಿಸಲಾಗಿದೆ.

ಗುರುವಾರ ಈ ಪ್ರದೇಶದಲ್ಲಿ ಹಾವೊಂದು ಕಾಣಿಸಿಕೊಂಡಿತ್ತು. ಅದನ್ನು ಕಂಡ ರಾಮಚಂದ್ರ ಪೂಜಾರಿಯವರು ಬರಿಗೈಯಲ್ಲಿ ಹಿಡಿದೆತ್ತಿದ್ದಾರೆ. ಆ ಸಮಯದಲ್ಲಿ ಅದು ಅವರ ಕೈಗೆ ಕಚ್ಚಿದೆ. ಆದರೆ ಅವರು ಅದನ್ನು ನಿರ್ಲಕ್ಷಿಸಿ ಸೀದಾ ಮನೆಗೆ ಹೋಗಿದ್ದಾರೆ.

ಆದರೆ ಸಂಜೆಯ ನಂತರ ನಂಜು ಏರಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ನಂತರ ಅವರನ್ನು ಆಸ್ಪತ್ರೆಗೂ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ನಿಮ್ಮ ಪರಿಸರದಲ್ಲಿ ಹಾವು ಕಂಡುಬಂದರೆ ಅವುಗಳನ್ನು ನೀವೇ ಹಿಡಿಯಲು ಮುಂದಾಗದೆ ಹಾವು ಹಿಡಿಯುವ ತಜ್ಞರನ್ನು ಕರೆಯಿಸಿ. ಅವರು ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಕರಣಗಳನ್ನು ಬಳಸಿ ಹಿಡಿದು ನಂತರ ಅಡಿಗೆ ಬಿಡುತ್ತಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page