Home ಅಂಕಣ ಮನುಷ್ಯ, ಆನೆ ಮತ್ತು ಇತರ ಜೀವಿಗಳು: ಸಹಬಾಳ್ವೆಯ ಪ್ರಶ್ನೆ

ಮನುಷ್ಯ, ಆನೆ ಮತ್ತು ಇತರ ಜೀವಿಗಳು: ಸಹಬಾಳ್ವೆಯ ಪ್ರಶ್ನೆ

0

ಪ್ರಕೃತಿಯ ನಿರಂತರ ಶೋಷಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದರಿಂದ ಉಂಟಾದ ಮತ್ತು ಆಗುತ್ತಿರುವ ಪ್ರಾಕೃತಿಕ ಅಸಮತೋಲನ ಹಾಗೂ ವಿನಾಶಗಳಿಗೂ ಮತ್ತು ಇಂದಿನ ಮಾನವ ಪ್ರಾಣಿ ಸಂಘರ್ಷಕ್ಕೂ ನೇರವಾದ ಸಂಬಂಧವಿದೆ ಎನ್ನುತ್ತಾರೆ ರಂಗಕರ್ಮಿ ಪ್ರಸಾದ್‌ ರಕ್ಷಿದಿ. ಹಿನ್ನೆಲೆಯಲ್ಲಿ ಅವರು ಮಾನವ ಮತ್ತು ಪ್ರಾಣಿ ಸಂಘರ್ಷವನ್ನು ವಿಶ್ಲೇ಼ಷಿಸುವ ಪ್ರಯತ್ನ ಮಾಡಿದ್ದಾರೆ. ಪ್ರತಿ ಶುಕ್ರವಾರ ಅವರ ಅಂಕಣ ʼಕಾಡು ಹೆಜ್ಜೆಯ ಜಾಡು ಹಿಡಿದುʼ ಓದಿ ನಿಮ್ಮ ಅಭಿಪ್ರಾಯ ಬರೆಯಿರಿ.

ಮಾನವ ಮತ್ತು ಪ್ರಾಣಿ ಸಂಘರ್ಷ

ಎಲ್ಲಾ ಕಡೆಗಳಲ್ಲಿ ಕಾಡಾನೆಗಳಿಂದ, ಇತರ ಪ್ರಾಣಿಗಳಿಂದ ಧಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೆ ಆನೆಗಳಿಂದ ಹತರಾದವರ ಸಂಖ್ಯೆ ಎಪ್ಪತ್ತೈದನ್ನು ದಾಟಿದೆ. ಪ್ರತಿ ಸಲ ಯಾರಾದರೂ ಸತ್ತಾಗ ಜನರು ಪ್ರತಿಭಟನೆ ಮಾಡುತ್ತಾರೆ. ಆಗ ಸ್ಥಳಕ್ಕೆ ಓಡಿಬರುವ ರಾಜಕಾರಣಿಗಳು, ಅಧಿಕಾರಿಗಳು ಮಾಮೂಲಾಗಿ ಒಂದಷ್ಟು ಹೇಳಿಕೆ, ಆಶ್ವಾಸನೆಗಳನ್ನು ನೀಡುತ್ತಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮೃತರ ಕುಟುಂಬದವರಿಗೆ ಸ್ಥಳದಲ್ಲೇ ಒಂದಷ್ಟು ಪರಿಹಾರ ನೀಡಿ ಧಾರಾಳವಾಗಿ ಅನುಕಂಪ ತೋರಲಾಗುತ್ತದೆ ಮತ್ತು ಭರವಸೆಗಳನ್ನು ನೀಡಲಾಗುತ್ತದೆ. ಯಥಾಪ್ರಕಾರ ರಾಜಕಾರಣಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಆದೇಶ ನೀಡುತ್ತಾರೆ. ಮತ್ತು ಸ್ಥಳದಿಂದ ಹೊರಡುವ ವೇಳೆಗೇ ಆ ಆದೇಶಗಳು ಏನೆಂಬುದು ಅವರಿಗೇ ಮರೆತು ಹೋಗಿರುತ್ತದೆ !

ಇತ್ತೀಚೆಗೆ ಸಕಲೇಶಪುರ ತಾಲ್ಲೂಕಿನಲ್ಲಿ ಹಾನಿಗೊಳಗಾದ ರೈತರು ಪ್ರತಿಭಟನೆ ಮಾಡಿದರು. ಅಲ್ಲಿಗೆ ಬಂದ ಮಾಜಿ ಮತ್ತು ಹಾಲಿ ಶಾಸಕರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅವೆಲ್ಲ ಪರಸ್ಪರ ಟೀಕೆ ಟಿಪ್ಪಣಿಗಳಲ್ಲಿ, ಮತ್ತು ವಿಷಯಕ್ಕೆ ಸಂಬಂಧಿಸದ ಶಾಸಕರ ಸಂಬಳ ಸಾರಿಗೆಗಳ ವಿಚಾರದಲ್ಲಿ ವಾಗ್ವಾದಗಳಿಗೆ ಸೀಮಿತವಾಯಿತೇ ವಿನಃ, ಪ್ರಸ್ತುತ ಸಮಸ್ಯೆಯ ವಿಚಾರಕ್ಕೆ ಅವರು ಬರಲೇ ಇಲ್ಲ. ತಮ್ಮ ತಮ್ಮ ಅಧಿಕಾರದ ಅವಧಿಯಿಂದ ಹಿಡಿದು ಸ್ಥಳಾಂತರಿಸಿದ ಆನೆಗಳ ಸಂಖ್ಯೆ, ಸತ್ತವರ ಕುಟುಂಬಕ್ಕೆ ಕೊಡಿಸಿದ ಪರಿಹಾರದ ಹಣ, ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸಾಧನೆಗಳೆಂಬಂತೆ ಬಿಂಬಿಸಿದರೇ ಹೊರತು, ಹಾಗೆ ಸ್ಥಳಾಂತರಿಸಿದ ಆನೆಗಳು ಏನಾಗಿವೆ? ಎಲ್ಲಿವೆ? ಎನ್ನುವ ಸಂಗತಿಯನ್ನು ವಿವರಿಸಲಿಲ್ಲ. ಈ ಮಾನವ ಪ್ರಾಣಿ ಸಂಘರ್ಷಕ್ಕೆ ತಾವೂ ಅಷ್ಟೇ ಹೊಣೆಗಾರರು ಎನ್ನುವ ವಿಚಾರವನ್ನೇ ಬಹಳ ನಾಜೂಕಾಗಿ ಪಕ್ಕಕ್ಕೆ ಸರಿಸಿ ಮಾತನಾಡಿದರು.

ನಗರ ಪ್ರದೇಶಕ್ಕೆ ಆನೆಗಳು ಅಥವಾ ಇನ್ನಾವುದೇ ಪ್ರಾಣಿಗಳು ಬಂದು ತೊಂದರೆ ಮಾಡಿದಾಗ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ಪ್ರಚಾರ, ಹಳ್ಳಿಗಳಲ್ಲಿ ರೈತರು, ಕೂಲಿ ಕಾರ್ಮಿಕರು ಸತ್ತಾಗಲಾಗಲೀ, ರೈತರ ಬೆಳೆ ನಾಶವಾದಾಗಲಾಗಲೀ ಸಿಕ್ಕುವುದಿಲ್ಲ. ಬದಲಿಗೆ ಇದೊಂದು ಮಾಮೂಲಿ ಸಂಗತಿಯಾಗಿ ಸುದ್ದಿಯಾಗುತ್ತದೆ ಅಷ್ಟೆ.  ಇಂತಹ ವಿದ್ಯಮಾನ ನಮ್ಮ ಬದುಕಿನ ಎಲ್ಲಾ ಸಂಗತಿಗಳ ವಿಚಾರಕ್ಕೂ ಅನ್ವಯಿಸುತ್ತದೆ.

ಇದನ್ನು ಬರಿಯ ಮಾಧ್ಯಮಗಳ ಸಮಸ್ಯೆಯೆಂದು ನೋಡಬಾರದು. ಇದು ನಮ್ಮ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದ ಎಲ್ಲಾ ಚಟುವಟಿಕೆಗಳು ನಗರ ಕೇಂದ್ರಿತವಾಗಿರುವುದರ ಭಾಗವಾಗಿಯೇ ನೋಡಬೇಕು. ನಮ್ಮ ಎಲ್ಲಾ ಚಟುವಟಿಕೆಗಳು ನಗರ ಕೇಂದ್ರಿತವಾಗಿ ಇರುವುದರಿಂದಲೇ, ಪ್ರಕೃತಿಯಲ್ಲಿರುವ ಎಲ್ಲಾ ಸಂಪತ್ತಿನ ಸಿಂಹಪಾಲನ್ನು ನಗರಗಳೇ ಕಬಳಿಸುತ್ತವೆ.  ಅದರಿಂದಾಗಿಯೇ ಪ್ರಕೃತಿಯ ನಿರಂತರ ಶೋಷಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದರಿಂದ ಉಂಟಾದ ಮತ್ತು ಆಗುತ್ತಿರುವ ಪ್ರಾಕೃತಿಕ ಅಸಮತೋಲನ ಹಾಗೂ ವಿನಾಶಗಳಿಗೂ ಮತ್ತು ಇಂದಿನ ಮಾನವ ಪ್ರಾಣಿ ಸಂಘರ್ಷಕ್ಕೂ ನೇರವಾದ ಸಂಬಂಧವಿದೆ.

ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಮಾನವ ಪ್ರಾಣಿ ಸಂಘರ್ಷವನ್ನು ನೋಡಬೇಕು.

ಈ ಬರಹಗಳಲ್ಲಿ ಆನೆ  ಮತ್ತು ಮನುಷ್ಯನ ನಡುವಿನ ಸಮಸ್ಯೆಗಳನ್ನು ಪ್ರಮುಖವಾಗಿ ಇಟ್ಟುಕೊಂಡಿದ್ದರೂ ಬೇರೆ ಎಲ್ಲಾ ಪ್ರಾಣಿಗಳಿಗೂ ಬಂದಿರುವ ಆಪತ್ತಿಗೂ  ಮನುಷ್ಯನೇ ಕಾರಣ ಎನ್ನುವುದನ್ನು ಇದರೊಂದಿಗೆ ನಾವು ಗಮನಿಸಬೇಕು.

ದಶಕಗಳ ಹಿಂದೆ

ಸುಮಾರು ಐದು ದಶಕಗಳ ಹಿಂದೆ, ನಮ್ಮಂತವರು ಶಾಲಾ ಬಾಲಕರಾಗಿದ್ದಾಗ ವರ್ಷಕ್ಕೋ ಎರಡು ವರ್ಷಗಳಿಗೋ ಒಮ್ಮೆ ತೋಟಕ್ಕೆ ಆನೆ ಬಂದ ಸುದ್ದಿಯಾಗುತ್ತಿತ್ತು.  ಸಾಮಾನ್ಯವಾಗಿ ಆನೆಯನ್ನು ಯಾರೂ ನೋಡಿರುತ್ತಿರಲಿಲ್ಲ. ತೋಟದಲ್ಲಿ ಮುರಿದಿರುವ ಒಂದೆರಡು ಬೈನೆ ಅಥವಾ ಬಾಳೆ, ಗದ್ದೆಯಲ್ಲಿ ಆನೆಯ ಹೆಜ್ಜೆಗುರುತುಗಳು ಮಾತ್ರ ಕಾಣಸಿಗುತ್ತಿದ್ದವು. ರಾತ್ರಿ ಬೇಕಾದ್ದನ್ನು ತಿಂದು ಹಗಲು ಹೊತ್ತಿನಲ್ಲಿ ಆನೆ ತನ್ನ ವಿಶ್ರಾಂತಿ ಸ್ಥಳವನ್ನು ತಲಪಿರುತ್ತಿತ್ತು. ಇಲ್ಲವೇ ಮುಂದೆ ಎಲ್ಲಿಗೋ ಹೋಗಿರುತ್ತಿತ್ತು.

ಮಾರನೆಯ ದಿನ  ಊರಲ್ಲೆಲ್ಲ  ತೋಟಗಳಿಗೆ ಆನೆ ಬಂದಿರುವ ಸುದ್ದಿಯಾಗುವುದು. ಯಾರ ಯಾರ ತೋಟಕ್ಕೆ ಬಂದಿದೆ? ಏನೇನು ತಿಂದಿದೆ? ಎಷ್ಟು ಆನೆಗಳಿವೆ ? ಅವುಗಳ ಹೆಜ್ಜೆಯ ಗಾತ್ರವೇನು? ಅದು ಎಷ್ಟು ಎತ್ತರ ಇರಬಹುದು ಇತ್ಯಾದಿ ತರ್ಕ, ಪುರಾವೆಗಳಿಂದ ಹಿಡಿದು ಆನೆಯನ್ನು ನೋಡದಿದ್ದರೂ ಕಣ್ಣಾರೆ ನೋಡಿದಂತೆ ವರ್ಣಿಸುವ ಸುದ್ದಿ ವೀರರು ಹುಟ್ಟಿಕೊಳ್ಳುತ್ತಿದ್ದರು. ನಾನೇ ನೋಡಿದೆ ಆನೆ ಎರಡಾಳು ಎತ್ತರವಿತ್ತು ಎನ್ನುವವರೂ ಇದ್ದರು. ಆನೆಯ ಬಗ್ಗೆ, ಆನೆಯ ಶಕ್ತಿಯ ಬಗ್ಗೆ ಉತ್ಪ್ರೇಕ್ಷಿತ ಕತೆಗಳು ಹುಟ್ಟಿಕೊಳ್ಳುತ್ತಿದ್ದವು.

ತಮ್ಮ ತೋಟಗಳಿಗೆ ಆನೆ ಬಂದಿದೆ ಎನ್ನುವುದೇ ರೈತರಿಗೆ ಒಂದು ವಿಶೇಷವಾದ ಖುಷಿಯ ಸಂಗತಿಯಾಗುತ್ತಿತ್ತು. ಇದಕ್ಕೆ ಕಾರಣಗಳಿವೆ.

ಆನೆ ಗಣಪತಿಯ ಪ್ರತಿರೂಪ ಎನ್ನುವ ಧಾರ್ಮಿಕ ಕಾರಣ ಒಂದೆಡೆಯಾದರೆ, ಆನೆ ಮೆಟ್ಟಿದ ನೆಲ ಬಹಳ ಫಲವತ್ತಾದುದು ಎನ್ನುವ ನಂಬಿಕೆ ರೈತರಲ್ಲಿ ವ್ಯಾಪಕವಾಗಿತ್ತು. ತಮ್ಮ ತೋಟಕ್ಕೇ ಆನೆ ಬಾರದಿದ್ದರೂ “ನಮ್ ತೋಟದಲ್ಲೂ ಒಂದು ಬೈನೆ ಮುರಿದಿತ್ತು” ಎಂದು ಹೇಳಿಕೊಳ್ಳುವವರೂ ಇರುತ್ತಿದ್ದರು. ಆನೆ ಬೈನೆ ಮುರಿದ ಜಾಗದಲ್ಲಿ ಕೆಲವು ಸಲ ಆನೆಯ ಬಾಲದ ತುದಿಯ ರೋಮ ಮುರಿದ ಬೈನೆಯ ಸಿಬರಿಗೆ ಸಿಕ್ಕಿಕೊಂಡಿದ್ದು ಅದು ರೈತರಿಗೋ ಕಾರ್ಮಿಕರಿಗೋ ಸಿಗುವುದು. ಅದು ಬಹಳ ಅದೃಷ್ಟದ ಸಂಗತಿ, ಅದನ್ನು ಕೆಲವರು ಉಂಗುರ ಮಾಡಿ ಬೆರಳಲ್ಲಿ ಧರಿಸುವರು, ಆನೆಯ ರೋಮ ಧರಿಸಿದರೆ ಸಂಪತ್ತು ಹೆಚ್ಚುತ್ತದೆ, ಗಂಡಸರಲ್ಲಿ  ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಮುಂತಾದ ನಾನಾ ವೈದ್ಯಕೀಯ ಮತ್ತು ಮಾಂತ್ರಿಕ ಗುಣಗಳು ಆರೋಪಿಸಲ್ಪಟ್ಟಿವೆ. ಅವು ಯಾವುವೂ ನಿಜವಲ್ಲ.

ಆನೆಗಳು ಯಾವಾಗಲೂ ಸಂಚರಿಸುವ ಆನೆದಾರಿಗಳು ಅದಕ್ಕೆ ಮಾತ್ರವಲ್ಲ ಆನೆಗಳೊಂದಿಗೆ ಅದರ ಹಿಂದಿನಿಂದ ಬರುವ ಅನೇಕ ಪ್ರಾಣಿಗಳಿಗೆ ಆಹಾರ ನೀಡುವ ಸ್ಥಳಗಳಾಗಿದ್ದು ಸಹಜವಾಗಿಯೇ ಫಲವತ್ತತೆಯನ್ನು ಹೊಂದಿರುವ ತಾಣಗಳಾಗಿರುತ್ತವೆ. ಆನೆ ತೋಟಕ್ಕೆ ಬಂದು ಹೋದ ಮರುದಿನ ಸಾಮಾನ್ಯವಾಗಿ ಆ ತೋಟದ ಮಾಲೀಕರ ಮನೆಯ ಹಿರಿಯರಿಂದ ಆನೆಯ ಹೆಜ್ಜೆಗೆ ಹಣ್ಣುಕಾಯಿ ಅರ್ಪಿಸಿ, ಊದುಕಡ್ಡಿ ಹಚ್ಚಿ, ಆರತಿ ಬೆಳಗುವ ಕಾರ್ಯಕ್ರಮ ನಡೆಯುವುದು. ಮಕ್ಕಳಿಗೆ ಚರುಪು ಸಿಗುವುದು. ಎಪ್ಪತ್ತರ ದಶಕದಲ್ಲೂ ಈ ವಿದ್ಯಮಾನವನ್ನು ನಾವು ಮಲೆನಾಡಿನಲ್ಲಿ ಕಾಣಬಹುದಿತ್ತು.

ಇಂದಿಗೂ ಆನೆಗಳಿಂದ ಇಷ್ಟೊಂದು ಜನರು ಸಾವಿಗೀಡಾದ ನಂತರವೂ ರೈತರಿಗೆ ಆನೆಗಳ ಬಗ್ಗೆ ಭಯವಿದ್ದರೂ ವಿಶೇಷವಾದ ಪ್ರೀತಿಯೂ ಇದೆ. ಟಿಂಬರ್ ಎಳೆಯುವ ಆನೆಗಳು ಬಂದಾಗಲೂ, ಆನೆ ಮನೆ ಬಾಗಿಲಿಗೆ ಬಂದರೆ ಒಂದು ತೆಂಗಿನ ಕಾಯಿ, ಎರಡಚ್ಚು  ಬೆಲ್ಲ, ಇದ್ದರೆ ಬಾಳೆಗೊನೆಯನ್ನು ತಿನ್ನಲು ಕೊಡುವರು. ಇತ್ತೀಚಿನ ವರ್ಷಗಳಲ್ಲಿ ಟಿಂಬರ್ ಎಳೆಯಲು ಮತ್ತು ಲಾರಿಗೆ ತುಂಬಿಸುವ ಕೆಲಸವನ್ನು ಯಂತ್ರಗಳು ಮಾಡುತ್ತಿವೆ. ಕೆಲಸಗಳಿಗಾಗಿ ಆನೆ ಸಾಕಿದ ಹಲವರು ಆ ಆನೆಗಳನ್ನೂ ಕಾಡಿಗೆ ಬಿಟ್ಟಿದ್ದಾರೆ. ಕೆಲವು ಸಲ ಕಾಡಾನೆಗಳ ಜೊತೆ ಅವೂ ನಾಡಿಗೆ ಬರುತ್ತವೆ.

ರೈತರಿಗೆ ಆನೆಗಳ ಬಗ್ಗೆ ಇರುವಂತಹ ಈ  ಭಾವನಾತ್ಮಕ ಸಂಬಂಧವನ್ನು ಇತರ ಕಾಡು ಪ್ರಾಣಿಗಳ ಜೊತೆ ನಾವು ಅಷ್ಟಾಗಿ ಕಾಣಲಾರೆವು.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

You cannot copy content of this page

Exit mobile version