Friday, June 14, 2024

ಸತ್ಯ | ನ್ಯಾಯ |ಧರ್ಮ

ಮನೆಗೆ ಬಂದ ಮಹಾಲಕ್ಷ್ಮಿ

(ಈವರೆಗೆ…)
ಗಂಗೆಯ ಅಮ್ಮ ನೀರು ತರಲೆಂದು ಮಟ ಮಟ ಮಧ್ಯಾಹ್ನ ಹೊಳೆಯ ಬದಿಗೆ ಹೋಗುತ್ತಾಳೆ. ಅಲ್ಲಿ ಮಗುವೊಂದು ಚೀರಾಡುವ ಶಬ್ದಕೇಳಿ ಆ ಶಬ್ದದ ಜಾಡು ಹಿಡಿದು ನಡೆಯುತ್ತಾಳೆ. ಬಿದಿರುಮೆಳೆಯೊಳಗೆ ಹೆಂಗಸೊಬ್ಬಳು ಹಸುಗೂಸೊಂದನ್ನು ಕತ್ತು ಹಿಸುಕಿ ಸಾಯಿಸುವ ಪ್ರಯತ್ನದಲ್ಲಿರುವುದನ್ನು ಕಂಡು ಆ ಮಗುವನ್ನು ತಾನು ಸಾಕುವ ನಿರ್ಧಾರ ಮಾಡಿ ಮನೆಗೆ ತರುತ್ತಾಳೆ. ಕೂಸು ಲಕ್ಷ್ಮಿ ಬೆಳೆದು ಯುವತಿಯಾಗಿ ಒಂದು ಅನಾಹುತ ಮಾಡಿಬಿಟ್ಟಳು. ಏನದು? ಉತ್ತರಕ್ಕಾಗಿ  ಓದಿ..ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ ಅಂಕಣದ ಆರನೆಯ ಕಂತು

ಹಸುಳೆ ಲಕ್ಷ್ಮಿ ಮನೆ ಸೇರಿದ ನಾಲ್ಕು ದಿನಕ್ಕೆ ಅವ್ವನ ಹೆರಿಗೆಯಾಗಿ ಗಿರಿಧರ ಹುಟ್ಟಿದ. ಮನೆಯಲ್ಲಿ ಈಗ ಎರಡು ತೊಟ್ಟಿಲುಗಳಾಡ ತೊಡಗಿದವು. ಇಬ್ಬರು ಮಕ್ಕಳಿಗೂ ಕುಡಿಸಿ ಸುರಿದು ಹೋಗುವಷ್ಟು ಹಾಲು ಗಟ್ಟಿಗಿತ್ತಿ ಅವ್ವನ ಎದೆ ತುಂಬಿತ್ತು. ಲಕ್ಷ್ಮಿ ಗಿರಿಧರನೊಡಗೂಡಿ ಬಹಳ ಅಕ್ಕರೆಯಲ್ಲಿ ಬೆಳೆಯ ತೊಡಗಿದಳು.

ಹೀಗೆ ಕಣ್ಣು ಮಿಟುಕಿನಲ್ಲಿಯೇ ಕಳೆದು ಹೋದ ವರುಷ ಒಪ್ಪತ್ತಿನಲ್ಲಿ ಅವ್ವ, ಒಂದು ಹೆಣ್ಣು, ನಾಲ್ಕು ಗಂಡು ಮಕ್ಕಳಿಗೆ ಜನ್ಮವಿತ್ತಳು. ಅವ್ವ ಅಪ್ಪನ ಪುಟ್ಟ ಕುಟುಂಬವೀಗ ಬರೋಬ್ಬರಿ ಎಂಟು ಮಕ್ಕಳ ತುಂಬು ಕುಟುಂಬವಾಗಿ ಬೆಳೆದಿತ್ತು. ದಿನೇ ದಿನೇ ಹೆಚ್ಚುತ್ತಲೇ ಇದ್ದ ಅವ್ವ ಅಪ್ಪನ ಪರಿಶ್ರಮದಿಂದಾಗಿ ಊರ ತುಂಬಾ ಜಮೀನುಗಳು ಏಳತೊಡಗಿದವು. ಮನೆ ತುಂಬಿ ತುಳುಕುವ ಕರಾವು, ದವಸ ಧಾನ್ಯ, ಆಳು ಕಾಳು ಒಟ್ಟಿನಲ್ಲಿ ಆ ಸಂಸಾರ ಸಂತುಷ್ಟವಾದ ಸಿರಿವಂತ ಕುಟುಂಬವಾಗಿ  ಹಳೇ ನಾರಿಪುರದಲ್ಲಿ  ತಲೆ ಎತ್ತಿ ನಿಂತಿತ್ತು.

ಅವ್ವನ ಕುರುಡು ಮೋಹದಲ್ಲಿ ಬೆಳೆದು ಬಲಗೊಳ್ಳ ತೊಡಗಿದ್ದ ಗಂಡು ಮಕ್ಕಳು ವಯಸ್ಸಿಗೆ ಬಂದಂತೆಲ್ಲಾ ಸೋಮಾರಿತನವನ್ನು ಮೈಗೂಡಿಸಿ ಕೊಂಡು ಅಪ್ಪನ ಉರಿಗಣ್ಣಿಗೆ ಒಳಗಾದರು. ಸಾಲದೆಂಬಂತೆ ಹೆಡ್ಡ ಗಂಡ ಮತ್ತು ಆರುಜನ ಮಕ್ಕಳೊಂದಿಗೆ ಒಂದೇ ಮನೆಗೆ ಅಡ್ಡಲಾಗಿ ನಿಂತಿದ್ದ ಗೋಡೆಯಾಚೆ ಅಸಂತೃಪ್ತ ಜೀವನ ಸಡೆಸುತ್ತಿದ್ದ ಸೋದರತ್ತೆಯ (ಅಪ್ಪನ ತಂಗಿ) ಅಸೂಯೆಯ ಕೇಡುಗಣ್ಣು ಅಣ್ಣನ ಕುಟುಂಬದ ಮೇಲೆ ಕತ್ತಿ ಮಸೆಯ ತೊಡಗಿತ್ತು.

ಸೋದರತ್ತೆಯ ಬೆಡಗಿನ  ಮುತ್ತು ಸುರಿಸುವಂತಹ ಮಾತು,  ಈ ಮನೆಯ ಗಂಡು ಮಕ್ಕಳಿಗೆ ನಶೆ ಏರಿಸಿತ್ತು. ಬಹು ಬೇಗ  ಅವಳ ಕೈ ಗೊಂಬೆಗಳಾಗಿ ಆಟ ಆರಂಭಿಸಿದರು. ಅತ್ತೆಯ ಆಣತಿಯಂತೆ ಎಲ್ಲರ ಕಣ್ಣು ತಪ್ಪಿಸಿ, ಮನೆಯ ವಸ್ತುಗಳನ್ನು ಕಳುವು ಮಾಡಿ, ತಮ್ಮ ಬೇಕು ಬೇಡಗಳನ್ನು ಪೂರೈಸಿ ಕೊಳ್ಳುವ ವಿದ್ಯೆಯನ್ನು ಕಲಿತರು. ಅವ್ವನನ್ನು ಬ್ಲ್ಯಾಕ್ ಮೇಲ್ ಮಾಡಿ ತಮ್ಮೆಲ್ಲಾ ಮಾತಿಗೂ ತಲೆ ಆಡಿಸುವಂತೆ ಮಾಡಿಕೊಂಡರು. ಅಪ್ಪನ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬಿದ್ದು, ಬೀದಿರಂಪ ಮಾಡುವುದನ್ನು ಕಲಿತು, ನಾಲ್ಕು ಜನಕ್ಕೆ ನ್ಯಾಯ ಹೇಳುತ್ತಿದ್ದ ಅಪ್ಪ ಮರಿಯಾದಿಗಂಜಿ ಮೌನ ಹೊದ್ದು ಆಗಾಗ  ಹೊಲದ ಗುಡಿಸಲು ಸೇರುವಂತೆ ಮಾಡಿದ್ದರು.

ಏಳು ಮಕ್ಕಳ ನಡುವೆ ಒಂದು ಕೈ ಹೆಚ್ಚಾಗಿಯೇ ಪ್ರೀತಿ ಪಡೆದು ಬೆಳೆದ ಲಕ್ಷ್ಮಿ ಮೂರನೇ ತರಗತಿವರೆಗು ಸ್ಕೂಲ್ ಮೆಟ್ಟಿಲೇರಿ ಬಂದಳು. ಒಮ್ಮೆ ಶಾಲೆಯ ಮಾಸ್ಟರು ಎಲ್ಲಾ ಮಕ್ಕಳೆದುರು ಅವಳ ಲಂಗ ಎತ್ತಿ ಚಡ್ಡಿ ಇಲ್ಲದ ಖಾಲಿ ಕುಂಡಿಗೆ ಬಾಸುಂಡೆ ಬರುವಂತೆ ಹೊಡೆದರು ಎಂದು ಸ್ಲೇಟನ್ನು ಮುರಿದು ಪುಡಿ ಪುಡಿ ಮಾಡಿ ಬಚ್ಚಲ ನೀರ ಒಲೆಗೆ ತುರುಕಿದಳು. ಅದನ್ನು ಧಗ ಧಗಿಸುವ ಬೆಂಕಿಯಲ್ಲಿ ಉರಿಸಿ ಮೇಷ್ಟರ ಮೇಲಿದ್ದ ರೊಚ್ಚು ತೀರಿಸಿ ಕೊಂಡಳು. ಅಂದೇ ಕೊನೆ, ಅಪ್ಪಿ ತಪ್ಪಿಯೂ “ಇಸ್ಕೂಲು” ಅನ್ನುವ ಪದ ಅವಳ ಬಾಯಿಂದ ಹೊರಡಲಿಲ್ಲ.

ಹೀಗೆ ಓದಿಗೆ ಎಳ್ಳು ನೀರು ಬಿಟ್ಟವಳು ಅವ್ವನೊಂದಿಗೆ ಅಡಿಗೆ ಕೋಣೆ ಸೇರಿ ಒಲೆ ಮುಂದೆ ಬೇಯುವುದನ್ನು ಬಹು ಬೇಗ ರೂಢಿಸಿಕೊಂಡಳು. ಸಿನಿಕತೆಯಲ್ಲಿಯೇ ಕೊಬ್ಬಿ ನಿಂತಿದ್ದ ಅಣ್ಣತಮ್ಮಂದಿರ ಕಣ್ಗಾವಲಿನಲ್ಲಿ, ಸೂರಿನಾಚೆ ತಲೆ ಹಾಕದಂತೆ, ನಾಲ್ಕು ಗೋಡೆಯೊಳಗೇ ಕಣ್ಣು ಕುಕ್ಕುವಂತೆ ಅರಳಿ ನಿಂತಳು. ಹಳೇ ನಾರಿಪುರವಿರಲಿ ಸುತ್ತಮುತ್ತಲ ನಾಲ್ಕು ಹಳ್ಳಿಯ  ಜನರ ಬಾಯಲ್ಲೂ ಲಕ್ಷ್ಮಿಯ ಅಂದ ಚಂದದ ಮಾತೆ ಹರಿದಾಡುತ್ತಿತ್ತು.

ಅಕ್ಕ ಪಕ್ಕದ ಊರ ಗೌಡರ ಆದಿಯಾಗಿ ದೂರದೂರಿನ ಇಂಜಿನಿಯರುಗಳು ಕೂಡ  ಆ ಮನೆಗೆ ಹೆಣ್ಣಿಗಾಗಿ ಎಡತಾಕ ತೊಡಗಿದರು. ಕೊನೆಗೆ ಅಪ್ಪ ಅವ್ವ ಅಳೆದು ಸುರಿದು, ಮಗಳು ಕಣ್ಣ ಮುಂದೆಯೇ ಇರಲೆಂದು ನಿರ್ಧರಿಸಿ, ಪಕ್ಕದ ಜೋಗತಿ ಕಟ್ಟೆಯ ಗೌಡರ ಮಗನಿಗೆ ಮಗಳನ್ನು ಕೊಡುವುದಾಗಿ ಮಾತಾಯಿತು.

ಮದುವೆಗೆ ತಿಂಗಳೊಪ್ಪತ್ತು ಎನ್ನುವಂತಿತ್ತು. ಅಂದು ಅವ್ವನಿಗೆ ವಿಪರೀತ ಜ್ವರ ಬಂದು ಹಾಸಿಗೆ ಹಿಡಿದಿದ್ದಳು. ಭಾನುವಾರವಾದ್ದರಿಂದ  ಅಣ್ಣ ತಮ್ಮಂದಿರೆಲ್ಲಾ ಊರಿನವರೊಂದಿಗೆ ಜೇನು ಕಲ್ಲು ಬೆಟ್ಟಕ್ಕೆ ಸೌದೆ ಕಡಿದು ತರಲು ಹೋಗಿದ್ದರು. ಮಧ್ಯಾಹ್ನ ಊಟದ ಹೊತ್ತು ಮೀರುತ್ತಾ ಬಂದಿತ್ತು. ಹೊಲಕ್ಕೆ ಹೋಗಿದ್ದ ಅಪ್ಪನಿಗೆ ಊಟ ತೆಗೆದುಕೊಂಡು ಹೋಗುವವರಿಲ್ಲದೆ ಲಕ್ಷ್ಮಿ ತಾನೇ ಬುತ್ತಿ ತೆಗೆದು ಕೊಂಡು ಹೋಗಲು ನಿರ್ಧರಿಸಿದಳು. ಹಾಗೆಯೇ ಹೊಲದೊಳಗೆ ಹರಿಯುತ್ತಿದ್ದ ಕಾಲುವೆಯಲ್ಲಿ ತೊಳೆದು ಕೊಂಡು ಬರಲೆಂದು, ಮೈಲಿಗೆ ಬಟ್ಟೆ ಮತ್ತು ಪಾತ್ರೆಗಳನ್ನು ತುಂಬಿಕೊಂಡು ಕೊನೆಯ ತಮ್ಮ ಶಂಕರನೊಡನೆ ಹೊಲದ ಕಡೆ ಹೊರಟಳು.

ಎಂದೂ ಊರ ಹೆದ್ದಾರಿ ಒಳಗೆ ಓಡಾಡದ ಲಕ್ಷ್ಮಿ, ಮನೆಯ ಹಿಂದಿದ್ದ ಹಿತ್ತಿಲ ಒಳ ದಾರಿಯಲ್ಲೇ ನಡೆದು ಮೈಲು ದೂರದ ಗದ್ದೆಗೆ ಬಂದು ತಲುಪಿದಳು . ಹೊಲ ಉಳುವುದರಲ್ಲಿ ಮಗ್ನನಾಗಿದ್ದ ಅಪ್ಪ ಮಗಳನ್ನು ಕಂಡು ಗಾಬರಿಯಾದ. ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಓಡಿ ಬಂದು ಲಕ್ಷ್ಮಿಯ ತಲೆ ಮತ್ತು ಕಂಕುಳಲ್ಲಿ ಹಿಡಿದಿದ್ದ ಬಟ್ಟೆ ಪಾತ್ರೆಗಳನ್ನು ಕೆಳಗಿಳಿಸಿದ. “ನೀನ್ಯಾಕವ್ವ ಬರಕೋದೆ ಒಂದು ಹೊತ್ತು ಉಂಡಿಲ್ಲ ಅಂದ್ರೇನು ಸತ್ತೋಗ್ತಿದ್ನ. ಆ ರಾಕ್ಷಸ್ರು ನಿಮ್ಮಣ್ಣ ತಮ್ಮದಿರಿಗೆ ಗೊತ್ತಾದ್ರೆ ನಿನ್ ಬುಟ್ಟಾರೇನವ್ವ. ಬಿರ್ನೋಗಿ ಮನೆ ಸೇರ್ಕೋ”, ಎಂದು ಹೇಳಿದ. ಹೆಚ್ಚು ಮಾತಾಡದ ಲಕ್ಷ್ಮಿ ಸರಿಯೆಂದು ತಲೆ ಆಡಿಸಿ ಅನತಿ ದೂರದಲ್ಲಿ ಹರಿಯುತ್ತಿದ್ದ ಕಾಲುವೆ ಕಡೆ ಹೆಜ್ಜೆ ಹಾಕಿದಳು.

ಸಣ್ಣ ವಯಸ್ಸಿನಲ್ಲಷ್ಟೇ ಅಲ್ಲಿಗೆ ಬಂದಿದ್ದ  ಅವಳಿಗೆ ಆ ಹಸಿರುಟ್ಟ ಗದ್ದೆ ಬಯಲು, ಜುಳು ಜುಳು ಸದ್ದಿನೊಂದಿಗೆ ಹರಿಯುವ ನೀರು, ಆ ಉರಿ ಬಿಸಿಲಿನಲ್ಲಿ ತಣ್ಣಗೆ ಬೀಸುತ್ತಿದ್ದ ಗಾಳಿ, ದೊಡ್ಡ ಅರಳಿ ಮರದಲ್ಲಿ ಗೂಡು ಕಟ್ಟಿ ಕಿಚ ಪಿಚ ಎನ್ನುತ್ತಿದ್ದ ಹಕ್ಕಿ ಮರಿಗಳ ಸದ್ದು, ಇವೆಲ್ಲವೂ ಹೊಸ ಚೈತನ್ಯ ನೀಡಿದವು. ಮನೆಯ ಮಂದಿಯೆಲ್ಲಾ ವಾರಕ್ಕೆರಡು ಬಾರಿ ಬಂದು ಆ ಕಾಲುವೆಯ ಪಕ್ಕವೇ ಉರಿ ಹಾಕಿ ನೀರು ಕಾಯಿಸಿ ಸ್ನಾನ ಮಾಡಿ ಹೋಗುತ್ತಿದ್ದುದು ವಾಡಿಕೆ. ಆದರೆ ಲಕ್ಷ್ಮಿಗೆ ಮಾತ್ರ ಇಲ್ಲಿ ಸುಳಿಯಲು ಅನುಮತಿ ಇರಲಿಲ್ಲ. ತುಸು ಹತ್ತಿರವಿರುವ ಹೊಳೆಯಿಂದಲೇ ನೀರು ಹೊತ್ತು ತಂದು ಅವಳು ಮನೆಯಲ್ಲಿಯೇ ಸ್ನಾನ ಮಾಡಲು ವ್ಯವಸ್ಥೆ ಮಾಡಿದ್ದರು. ಹಾಗಾಗಿ ಲಕ್ಷ್ಮಿ ಇಂದು ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಕುಪ್ಪಳಿಸುತ್ತಾ, ಅಲ್ಲಿ ಇದ್ದ ದೊಡ್ಡ ತಪ್ಪಲೆಗೆ ನೀರು ತುಂಬಿಸಿ ಒಲೆಗೆ ಉರಿ ಹಾಕಿದಳು.

ನೀರು ಕಾಯುವುದರೊಳಗೆ ಬಟ್ಟೆ ಪಾತ್ರೆಯ ಕೆಲಸ ಮುಗಿಸಿ ಕೊಂಡಳು. ಶಂಕರನೊಂದಿಗೆ ಸೇರಿ ಕಾಲುವೆಯ ಸಂದು ಗೊಂದುಗಳಲ್ಲಿ ಅಡಗಿದ್ದ ಏಡಿಗಳನ್ನು ಹಿಡಿದು ಪಾತ್ರೆಗೆ ತುಂಬಿಸಿದಳು. ತಮ್ಮನಿಗೆ ಉಜ್ಜುವ ಕಲ್ಲಿನಿಂದ ಚೆನ್ನಾಗಿ ಮೈತಿಕ್ಕಿ ಸ್ನಾನ ಮಾಡಿಸಿದಳು. ಪಕ್ಕದಲ್ಲಿಯೇ ಹೆಂಗಸರಿಗಾಗಿಯೇ ಹೆಣೆದು ನಿಲ್ಲಿಸಿದ್ದ ತೆಂಗಿನ ಸೋಗೆಯ ಮರೆಯಲ್ಲಿ ತಾನೂ ಸ್ನಾನಕ್ಕಿಳಿದಳು. ಬೆಳ್ಳಗೆ ರಕ್ತ ಚಿಮ್ಮುವಂತಿದ್ದ ಅವಳ ಮೈ, ಉಜ್ಜುವ ಕಲ್ಲಿನ ಒರಟುತನಕ್ಕೆ ಇನ್ನಷ್ಟು ಕೆಂಪಾಗಿ ರಂಗು ರಂಗಾಗಿ ಹೋಯಿತು. ಕಣ್ಣು ಮುಚ್ಚಿ ಬಿಸಿ ನೀರಿನ ಆನಂದ ಅನುಭವಿಸುತ್ತಿದ್ದವಳಿಗೆ, ಅದೆಲ್ಲಿತ್ತೊ ಇದ್ದಕ್ಕಿದ್ದಂತೆ ಭಾರಿ ಗಾತ್ರದ ನೊಣವೊಂದು ಭಯಂಕರ ಸದ್ದು ಮಾಡುತ್ತಾ ಹಾರಿ ಬಂದು, ಕಣ್ಣು ಮುಚ್ಚಿ ಬಿಡುವುದರೊಳಗೆ ಅವಳ  ತೊಡೆಯ ಮಾಂಸ ಕಿತ್ತು ಬರುವಂತೆ ಕಚ್ಚಿ, ಹಾರಿ ಹೋಯಿತು. ತೊಡೆಯಿಂದ ಚಿಮ್ಮಿದ ರಕ್ತ ತಡೆಯಲು ಸಾಹಸ ಮಾಡಿದಳು. ಕೊನೆಗೆ ಅವ್ವನ ಒಳ ಲಂಗದ ಅಂಚು ಅರಿದು ತೊಡೆಗೆ ಬಿಗಿಯಾಗಿ ಕಟ್ಟಿಕೊಂಡಳು. ಅಪ್ಪಿ ತಪ್ಪಿಯು ಇದನ್ನು ಯಾರಿಗೂ ತಿಳಿಸಬಾರದೆಂದು ನಿರ್ಧರಿಸಿ, ಬಂದ ದಾರಿಯಲ್ಲಿಯೇ ಮನೆಯ ಕಡೆ ಹೊರಟಳು.

ಮಗಳಿಗಾಗಿ ಅಕ್ಕ ಪಕ್ಕದ ಮನೆಗಳನ್ನೆಲ್ಲಾ ಹುಡುಕಿ ಸುಸ್ತಾಗಿ ಬಂದ ಅವ್ವ, ಮನೆಯ ಹಟ್ಟಿ ಬಾಗಿಲಲ್ಲಿಯೇ ತಲೆ ಮೇಲೆ ಕೈ ಹೊತ್ತು ಕೂತಳು. ಗದ್ದೆಯಿಂದ ಹಸು ಕರುಗಳಿಗೆ ಹುಲ್ಲು ಕೊಯ್ದು ಕೊಂಡು ಹೋಗುತ್ತಿದ್ದ ಅಕ್ಕಜ್ಜಮ್ಮ, ಅವ್ವನನ್ನು ಮಾತಾಡಿಸಿ  ಹೊಲದಲ್ಲಿ ಬಟ್ಟೆ ತೊಳೆಯುತ್ತಿದ್ದ ಲಕ್ಷ್ಮಿಯ ಬಗ್ಗೆ ಮಾಹಿತಿ ನೀಡಿದಳು. ಗಾಬರಿಯಾದ ಅವ್ವ ಅಲ್ಲಿಗೆ ಹೋಗುವ ತ್ರಾಣವಿಲ್ಲದೆ ಹಿತ್ತಿಲ ನಡು ಹಾದಿಯಲ್ಲಿ ಮಗಳಿಗಾಗಿ ಕಾಯತೊಡಗಿದಳು. ಲಕ್ಷ್ಮಿಯನ್ನು ದೂರದಿಂದಲೇ ಕಂಡು ಕಾಲೆಳೆಯುತ್ತಾ ಹತ್ತಿರ ಓಡಿದಳು. ಕಣ್ಣಿನಲ್ಲಿ ನೀರು ತುಳುಕಿಸುತ್ತಾ “ಅಯ್ಯೋ ನನ್ನ ತಾಯಿ ಸೋಕು ಗೀಕು ಆದ್ರೆ ಏನೇ ಮಾಡದು. ನನಗೆ ಒಂದು ಮಾತು ಹೇಳ್ದೆ ಯಾಕವ್ವ ಹೋದೆ.  ಅಣ್ಣತಮ್ಮದಿರ್ಗೆ ಗೊತ್ತಾದ್ರೆ ನಿನ್ ಸುಮ್ನೆ ಬುಟ್ಟಾರೆನೆ. ಹಿಂಗೆ ಯಾವತ್ತು ಮಾಡದಿಲ್ಲ ಅಂತ ನನ್ನ ತಲೆ ಮೇಲೆ ಕೈ ಇಟ್ಟು ಪ್ರಮಾಣ ಮಾಡು” ಎಂದು ಪ್ರಮಾಣ ಮಾಡಿಸಿ ಕೊಂಡು ಮಗಳ ಕೈಲಿದ್ದ ಬಟ್ಟೆ ಪಾತ್ರೆಯ ಕುಕ್ಕೆಗಳನ್ನು ತೆಕೊಂಡು ಮನೆಗೆ ಕರೆತಂದಳು.

(ಮುಂದುವರೆಯುವುದು…)

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು