Thursday, June 13, 2024

ಸತ್ಯ | ನ್ಯಾಯ |ಧರ್ಮ

ಮನೆಮಗಳು ಈ ನಮ್ಮ ಗೌರಿ

ಗೌರಿ ಹಬ್ಬ ಮೂಲಭೂತವಾಗಿ ಕೃಷಿ ಮೂಲದ ಫಲವಂತಿಕೆಯ ಆಚರಣೆ. ಮಲೆನಾಡಿನಲ್ಲಿ ಗೌರಿ ಹಬ್ಬದ ಆಚರಣೆ ಬಹಳ ವಿಶೇಶವಾಗಿದೆ. ಸಾಗರ ಸೀಮೆಯಲ್ಲಿ ಚೌತಿಹಬ್ಬದ ಆಚರಣೆಯ ವೈಶಿಷ್ಟ್ಯದ ಕುರಿತು ಸಹಾಯಕ ಪ್ರಾಧ್ಯಾಪಕರಾದ ಡಾ. ಅಣ್ಣಪ್ಪ ಎನ್ ಮಳೀಮಠ್ ಅವರು ಹಳೆಪೈಕ ಕನ್ನಡ ಆಡುಬಾಷೆಯಲ್ಲಿ ಬರೆದ  ಈ ಸಣ್ಣಕತೆ ರೂಪದ ಬರೆಹ ಸೊಗಸಾಗಿದೆ.  

ಶ್ರಾವಣ ಹಬ್ಬದಾಗೆ ಮನೆ ಕೋಳಿಗೆ ಕಟ್ಟಿದ ದೇವರ ಮುಡುಪು ಇಳಿಸಿಕೊಂಡು ಬಂದ ಅಪ್ಪ ಅದರೊಳಗಿನ ಚಿಲ್ಲರೆ ಹಣವನ್ನು ದೊಡ್ಡ ಹರಿವಾಣಕ್ಕೆ ಬರ‍್ರನೇ ಸುರಿವಿದ. ಇನ್ನು ಹಬ್ಬದ ಮೇಲೆ ಹಬ್ಬ ನೋಡು, ಬಚೇಸೋದು ಕಷ್ಟ, ಈಗಂತೂ ರೇಟ್ ಬೇರೆ ಗಗನಕ್ಕೆ ಹೋಗೈತೆ, ಈ ಮಳೆ ಬೇರೆ. ಅಂಬಾರ ಒಡ್ಕ ಬೀಳಾಕೆ ಏನ್ ಸುರಿತೈತೆ ಅಂತ ತನ್ನ ಪಾಡಿಗೆ ಏನೋ ಹೇಳ್ತ ಇದ್ದ. ಅಲ್ಲೇ ಇದ್ದ ಅರುಣ, ಸೋಮು, ಮಂಜುಗೆ ಇದಾವ ಅರಿವು ಆಗಲಿಲ್ಲ. ಅಷ್ಟೊತ್ತಿಗೆ ಅವರಪ್ಪ “ತಮ್ಮರ್ರಾ ಗೌರಿ ಹಬ್ಬ ಇನ್ನು ಹದಿನೈದು ದಿನ ಐತೆ, ಹತಾರ ಈಗಿಂದ್ಲೆ ಹುಡ್ಕಂಡ್ರೆ ಒಳ್ಳೇದು, ಹೆಡತ್ರಿ ಕೆರೆದಂಡೆ ಹತ್ರ ಒಂದು ಕಾಕದಂಡೆ ಬಳ್ಳಿ ನೋಡಿನಿ, ಹಮಾ ಬಿಡ್ತಾವೆ, ಕಟ್ಟಿಗೇರ ಮನೆ ಹತ್ರ ಒಂದು ಕಂಗಾನಹಳ್ಳಿನ ಬಳ್ಳಿ ಐತೆ ಅದರಾಗು ಹಂಗೆ ನೋಡು, ಇಸ್ಕೂಲಿನಿಂದ ಬತ್ತಾ ತರ‍್ರಲೇ ಅಂದ, ಇನ್ನು ಮದ್ದರಸನ ಕಾಯಿ ಬಿಡು, ಇಲ್ಲೇ ಗೇಸರಿ ತಾವ ಸಿಗ್ತಾವೆ” ಅಂದ. ಅಪ್ಪನ ಈ ಅನುಮತಿಗೆ ಹುಡ್ರೆಲ್ಲ ಕೋಳಿಮರಿ ಸಿಕ್ಕ ಕಾಗೆ ತರ ಖುಷಿಯಾಗಿ ಬಿಟ್ಟವು. ಹೌದು ಕಣ ಅಪ್ಪ ಈ ಬಾರಿ, ವಾರ ಮೊದ್ಲೆ  ತರ‍್ತೀನಿ ತಡಿ ಎಂದು ಅಪ್ಪನಿಗೆ ಸಮಾಧಾನ ಮಾಡಿದ ಅರುಣ. ಜರ‍್ರೋ ಅಂತ ಸುರಿವ ಜಡಿ ಮಳೆಯಲ್ಲಿ ಮುಡುಪು ಹಿಡ್ಕಂಡು ಬಾವಿ ದಂಡೆ ತಾವ ಹೋಗಿ,  ಒಂದು, ಎರಡು ರೂಪಾಯಿ ಬಿಲ್ಲೆಗಳನ್ನು ಹರಿವಾಣಕ್ಕೆ ಹಾಕಿ, ಇಲ್ಲಿಂದಲೇ ಮನೆದೇವರು ಧರ್ಮಸ್ಥಳ ಮಂಜುನಾಥನ ಹುಂಡಿಗೆ ಕಾಣಿಕೆ ಹಾಕಿ, ಭಕ್ತಿಯಿಂದ ಮನೆಮಂದಿ ಪೂಜಿಸಿದರು.

ಮನೆಯಲ್ಲಿ ಆ ದಿನ ದೇವ್ರಿಗೆ ದುಡ್ಡು ಹಾಕೋ ಶ್ರಾವಣ ಹಬ್ಬ ಮಾಡ್ತಾ ಇದ್ರೂ ಅಪ್ಪ ಗೌರಿ ಹಬ್ಬದ ಬಗ್ಗೆ ತನ್ನ ಪಾಡಿಗೆ ಆಗೀಗ ಮಾತಾಡ್ತಾ ಇದ್ದ. ಅಷ್ಟೊತ್ತಿಗೆ ಅಪ್ಪ ಹುಡ್ರ ಹಬ್ಬ ಬಂತು, ಎಂತ ಮಾಡದೇನ ಅಂತ ಚಿಂತೆಯಲ್ಲಿರುವಾಗ, ಹುಡುಗರಿಗೆ ಅದ್ಯಾವ ಅರಿವಿಲ್ಲದೆ ಹಬ್ಬದ ಸಡಗರಕ್ಕೆ ಬೆನ್ನೆಲೆಬಾಗಿ ಒಳಗೊಳಗೆ ತಯಾರಿಗೆ ಸುರುವಾಗಿದ್ದರು. ಹದಿನೈದು ದಿನ ಹೆಂಗೆ ಹೋತೋ ಏನು ಅನ್ನುವ ಹಾಗೆ ಶ್ರಾವಣ ಕಳೆದು ಹದಿನೈದು ದಿನಕ್ಕೆ ಗೌರಿ ಹಬ್ಬ ಬಂದೇ ಬಿಡ್ತು. ಮಂಗ ಸೊಪ್ಪು ತಿನ್ನೋ ಕಾಲದಾಗೆ ಬರೋ ಈ ಹಬ್ಬವಾದರೂ ಮೈಯಲ್ಲ ಸಡಗರ ಮನೆಮಕ್ಕಳಿಗೆ. ಹೆಣ್ಣುಡ್ರು ಕರೆಯಾಕ ಬಸ್ ಚಾರ್ಜಗೆ ದುಡ್ಡಿಲ್ಲ ಮರಾಯ, ಅಡಿಕೆ ಮುಂಡಿಗೆ ಹೋಗಿದ್ರೆ, ಮುಂಡೆಗಂಡ ದುಡ್ಡಾದ್ರು ಕೊಡ್ತಿದ್ನೋ ಏನೋ ಅಂತ ಬೈಕಂಡೆ ಹಬ್ಬದ ಆಗಮನವನ್ನು ಅಪ್ಪ ಎದುರು ನೋಡ್ತಿದ್ದ. ಹಬ್ಬ ಅನ್ನೋದು ಅಪ್ಪ ತನ್ನ ಕುತ್ತಿಗೆ ಬಂದೈತೆ ಎಂಬಂತೆ ಅವರಿವರಿಗೆ ಬೈಕಂಡ ಇರ್ತಿದ್ದ. ಹೆಂಗೋ ಅಪ್ಪ ತನಗೆ ಬೇಕಾದ್ನ ಹೊಂದಿಸ್ಕಂಡು, ಹೆಣ್ನುಡ್ರು ಕರ‍್ದು ಬರ‍್ರಾ ಎಂದು ಒಪ್ಪಿಗೆ ಸಿಕ್ಕಮೇಲೆ ಇವರಿಗೆ ಎಲ್ಲಿಲ್ಲದ ಹುಮ್ಮಸ್ಸು. ಅಪ್ಪ ಹಬ್ಬದ ಸಂತೆಗೆ ಹೋಗಿ, ರಿಪ್ಪನ್ ಪೇಟೆ ನಾರಣಿ ಅಂಗಡಿಗೆ ಒಂದಷ್ಟು ಸಾಲ ಹೇಳಿ, ಊರ ಏಕಾಂಗಿ ವೀರ, ಜನಸೇವಕನಂತಿದ್ದ ವಿನಾಯಕ ಬಸ್ಸಿಗೆ ಸಂಜೆ ಇಳಿಯೋದನ್ನೇ ಕಾಯುತ್ತಿದ್ದರು. ಕುರಿಹಿಂಡು ದೊಡ್ಡಿಲಿ ತುಂಬಿದಂಗಿರುವ ಬಸ್ಸಿನಲ್ಲಿ ಹೆಂಗೆಂಗ್ಯೋ ಸಂತೆ ಸಾಮಾನು ತಂದಿರುವ ಅಪ್ಪನ ಚೀಲವನ್ನು ಕೆರೆಕೋಡಿ ಬಸ್ಟಾನಿಂದ ಹೊತ್ಕೊಂಡು ಇವರೆಲ್ಲ ಮನೆಗೆ ತಂದರು. ಈಗೀನ ರೇಟಾಗೆ ಸಾಮಾನಿಗೆ ಏನಾದ್ರು ಕೈಹಾಕಬಹುದಾನ ಮರೆಯಾ ಅಂತ ಸಾಮಾನ್ ಕೊಟ್ಟ ಅಂಗಡಿಯವನಿಗೆ ತನ್ನ ಪಾಡಿಗೆ ತಾನು ಸಾಬ್ಸತ್ತಿದ್ದ. ಶಾಲೆಗೆ ಹೋತ್ಲೆ ಇವರೆಲ್ಲಾ ಎಲ್ಲೆಲ್ಲಿ ಕಂಗಾನಹಳ್ಳು, ಮದ್ದರಸನಕಾಯಿ, ಕಾಕದಂಡೆ ಕಾಯಿ ಸಿಕ್ತೈತೆ ಅಂತ ಅಂದಾಜು ಮಾಡ್ಕೊಂಡು ತರಾಕೆ ಸಿದ್ದವಾಗಿರುತ್ತಿದ್ದರು. ಬೇರೆ ಯಾವನಾದ್ರು ಕೊಯ್ಕೊಂಡು ಹೋದ್ರೆ ಏನ್ ಗತಿ ಅಂತ ಮೈಯೆಲ್ಲ ಕಣ್ಣಾಗಿದ್ದರು.

ಮಲೆನಾಡ ಗೌರಿ

      ಹಬ್ಬಕೆ ನಾಕ್ ದಿನ ಇದ್ದಾಗ ಮನೆ ಕರಿ ಹೊಡ್ದು, ಅಂಗಳನೆಲ್ಲ ಸಗಣಿ ಹಾಕಿ ತೊಡ್ದು ಸಿದ್ದಮಾಡಿ ಹಬ್ಬದ ಆಗಮನಕ್ಕೆ ಎದುರು ನೋಡ್ತಾ ಇದ್ದರು. ಮದುವೆ ಮಾಡ್ಕೊಂಡು ಹೋದ ಇವರ ಅಕ್ಕರೆಲ್ಲ ಸ್ವಾಣೆ ಅಜ್ಜಿ ಹಬ್ಬದ ದಿನ ಬಂದರು. ಇಲಾಡಿ ದಿನ ಬಾವರೆಲ್ಲ ಬಂದರು. ಗೌರಿ ಹಬ್ಬದ ಹಿಂದಿನ ದಿನ ಸ್ವಾಣೆ ಅಜ್ಜಿ ಹಬ್ಬವನ್ನು ಗಮ್ಮಾತ್ತಾಗಿ ಮಾಡಿದರು. ಅರುಣನಿಗೆ ಅಜ್ಜಿ ಯಾಸ ಹಾಕಿದರು. ಅವನಿಗೆ ಖುಷಿಯೋ ಖುಷಿ. ಅಜ್ಜಿಯನ್ನು ಕರ‍್ಕೊಳ್ಳಾಕೆ ಬೇಕಾದ ಕೋಲು, ವಾರದ್ ಮುಂಚೆ ರೆಡಿಯಾಗಿತ್ತು. ಊರಾಗ ಶಾಲೆಗೆ ಹೊಗ್ತಾ ಇದ್ದ ಈ ಹುಡ್ರಿಗೆ ಹಬ್ಬ ಹತ್ರ ಬರ್ತಿದಂಗೆ ಶಾಲೆ ನೆಪಕಷ್ಟೆ. ಉಳಿದಂಗೆ ಹಬ್ಬದ ನಿರೀಕ್ಷೆಯಲ್ಲಿಯೇ ದಿನ ದೂಡ್ತ ಇದ್ದವು. ಅಂತು ಹಬ್ಬದ ಮುಂಚೆ ಬರುವ ಸ್ವಾಣೆ ಅಜ್ಜಿಯನ್ನು ಮನೆಗೆ ಬರಮಾಡಿಕೊಂಡ್ಲು ಅವರವ್ವ. ಸ್ವಾಣೆ ಅಜ್ಜಿ ಅವರ ಮನೆಯಲ್ಲಿರುವ ಗುಂಡುಕಲ್ಲು (ತಿರಸಾ ಕಲ್ಲು). ಅದಕ್ಕೊಂದು ಅವರವ್ವ ಹಳೆ ರವಿಕೆ ತೊಡಿಸಿ, ಕುಂಕುಮ ಹಚ್ಚಿ, ಪಕ್ಕದಲ್ಲಿ ಕೊಳಗ, ಕಡೆಗೋಲು ಇಟ್ಟು ಕೂರಿಸಿದ್ಲು. ಹೊರಗಡೆ ಅಂಗಳದಲ್ಲಿ ಬೊಮ್ಮಕ್ಕನ ಗಿಡ, ಕೆಸುವಿನ ಗಿಡ, ಗೌರಿ ಗಿಡವನ್ನು ಕೋಲಿಗೆ ಸಿಕ್ಕಿಸಿಕೊಂಡು ಅಜ್ಜಿ ವೇಷಧಾರಿ ಅರುಣ ಅಜ್ಜಿಯಂಗೆ ಹಂಗೆ ಕುಂಟುತ್ತಾ, ಮನೆಯೊಳಗೆ ಬಂದನು. ಅಂಗಳಾದಾಗೆ ಬಿದ್ದಿರೋ ಕೋಳಿ ಹೇಲು ಕೆಸರಿನ ಜೊತೆ ಸೇರಿ ಅಂಗಳ ತನ್ನ ನಿಜಬಣ್ಣ ಕಳ್ಕೊಂಡಿತ್ತು. ಮಳೇಲಿ ನಂದ ಹೇಲ್ ತರ ಇರೋ ಪಿಚಿ ಪಿಚಿ ಕೆಸರಲ್ಲಿ ಕುಂಟ್ಗೆಂತ ಬಂದ್ರೆ ಆ ಕೆಸರು ಕಾಲ್ ಬೆರಳು ಸಂದಿಯಿಂದ ಪಿಚಕ್ನೆ ಮೇಲೆಲ್ಲ ಹಾರಿ ಕಾಲೆಲ್ಲ ಸಗಣಿ ಬಡದಂಗೆ ಅರುಣನ ಕಾಲು ಕಾಣೋದು. ಹಾಗಿದ್ದರೂ ಅವನಿಗೆ ರಾಜ ಮರ್ಯಾದೆ. ಹಿಂಗೆ ಅಜ್ಜಿ ತಂದ ಅರುಣನನ್ನು ಬಾಳೆ ಎಲೆ ಮೇಲೆ ನಿಲ್ಲಿಸಿ, ಕಾಲ್ ತೊಳೆದು, ಪೂಜೆ ಮಾಡಿ ಕರ‍್ಕೊಂಡ್ರು. ಅವರ ಮನೆಗೆ ಈ ಸ್ವಾಣೆ ಅಜ್ಜಿಯು ಗೌರಿ ಬರುವ ಮುನ್ನ ಬಂದಳು. ಹಂಗಾಗಿ  ಭಕ್ತಿಭಾವದಿಂದೆ ಒಳಗೆ ಕರೆದುಕೊಂಡರು. ಅಜ್ಜಿ ಮುಂದೆ ಹೋಕ್ತಿದ್ದ ಹಾಗೆ, ಹಿಂದೆ ಹೊದ್ಲು ತೂರಕೊಂಡು ಸೋಮು, ಗೌರಿ, ಸುವರ್ಣ ಬಂದರು.

ಅಜ್ಜಿಗೆ ಬಹಳ ಇಷ್ಟವಾದ ಅಡುಗೆ ಏಡಿಸಾರು. ಅವರೆಲ್ಲ ಅಜ್ಜಿಗೆ ಬೇಕಾದ ಏಡಿಗಾಗಿ ವಾರ ಮುಂಚೆ ಕಪ್ಪೆಗಾಣ ಹಿಡ್ಕುಂಡು ಗದ್ದೆ ತ್ವಾಟ, ತೋಡು ಒಂದ್ ಮಾಡಿ ಏಡಿ ಹಿಡಿದಿದ್ದರು. ಅದರ ಕೊಂಬು, ಜಿಗ್ಗು ಮುರಿಯದೆ ಬಾನಿಯೊಳಗೆ ಹಾಕಿ ಇಟ್ಟಿದ್ದರು. ಆ ಏಡಿ ಪಾಪ ಉಪವಾಸ ಇರ್ತಾವೆ ಅಂತ ಹುಲ್ಲಿನ ಕಡ್ಡಿ ಹಾಕಿದರೂ ಪಾಪ ಅವು ಹುಲ್ಲು ತಿನ್ನದೆ ಸೋತು ಸೊರಗಿ ಹೋಗಿದ್ದವು. ಅಜ್ಜಿ ಎಡೆಗೆ ಏಡಿಸಾರಿನ ಜೊತೆಗೆ ರೊಟ್ಟಿ, ಬಂಗ್ಡೆ ಮೀನ್ ಸಾರು ತಯಾರಾಗಿತ್ತು.  ಜೊತೆಗೆ ಸ್ವಾಣೆ ಉಂಡೆ, ಹೊದ್ಲು ಉಂಡೆ, ಅತ್ರಾಸ ಅಂತ ಏನೇನೋ ಕಜ್ಜಾಯ ಸಿದ್ಧವಾಗಿತ್ತು. ಪೂಜೆ ಆದಮೇಲೆ ಅವ್ವ ಅಜ್ಜಿ ಎಡೆ

ಊಣ್ರೋ ಅಂದಿದ್ದೇ ತಡ ಈ ಹುಡ್ರು ನಾಮುಂದು, ತಾಮುಂದು ಅಂತ ಕೂಳಿಗೆ ಹಾತರದ ಕುನ್ನಿ ತರ ಸುತ್ತಾ ಕುತ್ಕೊಂಡು ಎಡೆಯಲ್ಲಿದ್ದುದು ಖಾಲಿ ಮಾಡಿದರು. ಮಾರನೆ ದಿನ ಅಜ್ಜಿ ರೂಪವಾಗಿರುವ ಗುಂಡು ಕಲ್ಲನ್ನೆಲ್ಲ ತೆಗೆದು, ಇರುವ ಬೊಮ್ಮಕ್ಕನ ಗಿಡನೆಲ್ಲ ಮನೆ ಮೇಲೆ ಎಸೆದರು.

ಇವರ ಮನೆಯಲ್ಲಿ ಇರೋ ಗೌರಿ ಕೋಳ್ ಗೌರಿ. ಕೆಲವರ ಮನೆಯಲ್ಲಿ ಚಪ್ಪರ ಗೌರಿ, ಕೆಳದಿ ಅರಸರ ಆಸ್ಥಾನದಲ್ಲಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಇರೋರದು ಅರಮನೆ ಗೌರಿ ಹೀಗೆ ನಾನಾ ಸ್ವರೂಪದ ಗೌರಿ ಮಂಟಪಗಳು ಇವೆ. ಅವರಪ್ಪ ಎರಡು ದಿನ ಮುಂಚೆ ಬಾಳೆ ಮರ ಕಡ್ದು ತಂದಿಟ್ಟಿದ್ದ. ಆ ಬಾಳೆ ಕಂಬದಲ್ಲಿ  ಒಂದುವರೆ ಅಡಿ ಎತ್ತರಕ್ಕೆ ನಾಲ್ಕು ಕಂಬ ಕಡ್ದು, ಮನೆಮುಂದಿನ ಧರೆಗೆ ಚಾಚಿದ್ದ. ಸೋಮು ಮತ್ತು ಮಂಜು ಸೇರಿ ಮುಂದಿನ ಎರಡು ಕಂಬಕೆ ಬಾಳೆ ರಂಬಾಟೆಯಲ್ಲಿ ಗರಗಸ ಮಾಡಿ, ಮೇಲೆ-ಕೆಳೆಗೆ, ಎಡ-ಬಲ ಚೂಪವಾಗಿರೋ ಕಡ್ಡಿ ಸಿಕ್ಕಿಸಿ ಕಟ್ಟಿದರು. ನಡುಮನೆಯಲ್ಲಿ ಮಂಟಪಕ್ಕೆ ಸಿಂಗಾರ ಮಾಡಿ ನಿಲ್ಲಿಸಿದ್ದರು. ಮದ್ದರಸನ ಕಾಯಿ, ಕಂಗಾನಹಳ್ಳು, ಕಾಕದಂಡೆಕಾಯಿ ಗುಜ್ಜು ಕಟ್ಟಿ, ಮಾವಿನ ತೋರಣದಿಂದ ಗೌರಿ ಮದುಮಗಳಂತೆ ಕಾಣುತ್ತಿದ್ದಳು. ಗೌರಿ ಹೂವು, ಡೇರೆ ಹೂವಿನ ಅಲಂಕಾರ. ಕೋಳಿನ ಮೇಲೆ ಸೀರೆ ಹೊದಿಸಿ, ಪ್ಯಾಟೆಯಲ್ಲಿ ತಂದ ಅಲಂಕಾರ ಮಾಡಿ ಮುಗಿಸೋ ಅಷ್ಟೊತ್ತಿಗೆ ಅವರಿಗೆ ಸಂಜೆ ಆಗಿತ್ತು.

ಗೌರಿ ಚಪ್ಪರ

ಇಳಿಸಂಜೆ ಬಾವಿಗೆ ಹೋಗಿ ಗೌರಿ ತರೋಕೆ ಹೊರಟರು. ಸೋಮು ದೀಪವನ್ನು ಹಿಡ್ಕಂಡ. ಈ ದೀಪ ಯಾವುದೇ ಕಾರಣಕ್ಕೆ ನಂದಿಹೋಗಬಾರದು, ಹುಷಾರು ಅಂತ ಅಪ್ಪ ಅವ್ವ ಇಬ್ಬರೂ ಆಣತಿ ಮಾಡಿದರು. ಒಂದೊಮ್ಮೆ ದೀಪ ನಂದಿಹೋದರೆ ಮನೆಗೆ ಏನೋ ಕೇಡುಗಾಲ ಅನ್ನೋದು ಅವರ ದ್ವನಿಯಿಂದ ಅವರಿಗೆಲ್ಲ ಅರಿವಾತು. ಒಳಗಿನ ಒಲೆಯಲ್ಲಿ ಹಚ್ಕೋಬಾ ಅಂತ ಅಪ್ಪ ಜಗುಲಿಯಿಂದ ಕೂಗಿ ಹೇಳ್ದ. ಹಾಗೆ ಅರುಣನ ಹತ್ರ ದೊಂದಿನೂ ಒಳಗಿನ ಒಲೆಯಲ್ಲಿ ಹಚ್ಕೋ ಬೇಕು ಅಂತ ತಾಕೀತು ಮಾಡಿದ. ಅಪ್ಪ ಈ ಮೊದ್ಲೆ ಉದ್ದನೆ ಬಿದಿರು ಸಿಬಿಕೆಯಿಂದ ದೊಂದಿ ಮಾಡಿ ಬಚ್ಚಲು ಮನೆ ಒಲೆ ಮೇಲಿನ ಬೆಸ್ಲು ತಟ್ಟಿ ಮೇಲೆ ಇಟ್ಟಿದ್ದ. ಅರುಣ ಅದನ್ನು ತಗೊಂಡು ಬಂದು, ಮನೆ ಒಳಗಿನ ಒಲೆಯಿಂದ ಹಚ್ಚಿಕೊಂಡು ಹೊರಬಂದನು. ದೊಂದಿ ಮತ್ತು ದೀಪ ಹಿಡಿಯುವವರು ಇಬ್ಬರೂ ತಲಿಗೆ ಮುಂಡಾಸು ಕಟ್ಟಿಕೊಳ್ಳಿ, ಹತ್ತಿಸಿದ ದೊಂದಿಯು ನಂದಿ ಹೋಗಂಗಿಲ್ಲ, ದೊಂದಿ ಹಿಡ್ದೋರೆ ಮುಂದೆ ಹೋಗಿ ಅಂತ ಅವ್ವ ಆಗೀಗ ಒಂದೊಂದೆ ನಿಯಮ ಹೇಳ್ತಾನೆ ಇದ್ಲು.  ಮನೆಯಿಂದ ಹೊರಡುವಾಗ ಜಾಗಟೆ ಹೊಡ್ಕೊಂಡು, ಹುಡ್ರು-ಮಕ್ಕಳೆಲ್ಲ ಬಾವಿ ದಂಡೆಗೆ ಹೊರಟವು. ಅವರ ಮನೆಯಲ್ಲಿ ದೊಂದಿ ಹಿಡಿಯೋದು ಅರುಣನದ್ದೇ ಖಾಯಂ ಕಾಯಕ.

ಬಾವಿ ಹತ್ರ ಹೋಗಿ ಗೌರಿಚಂಬಿಗೆ ನೀರು ತುಂಬಿ ಮತ್ತು ಕೊಡಪಾನದಲ್ಲೂ ನೀರು ತುಂಬಿ, ಇಟ್ಟುಪೂಜೆ ಮಾಡಿದರು. ಮನೆಯಲ್ಲಿರುವ ಅವ್ವ, ಮನೆಗೆ ಬಂದ ಹೆಣ್ಣಮಕ್ಕಳು, ಹೆಂಗಸರು ಸೇರಿ ಕೈ ಕೈ ಹಿಡ್ಕೊಂಡು ನೀರನ್ನು ಬಗೆದು, ಅದರೊಳಗಿರುವ ಕಲ್ಲನ್ನು ಸೇರಿಸಿ ತೆಗೆದು, ಚೆಂಬಿನೊಳಗೆ ಹಾಕಿದರು. ನೀರು-ಗೌರಿ. ಕಲ್ಲು-ಶಿವನಂತೆ. ಹೀಗೆ ಗೌರಿ ಮತ್ತು ಶಿವ ಇಬ್ಬರು ಮನೆಗೆ ಬರೋ ಈ ಹೊತ್ತಲ್ಲಿ ಒಳ್ಳೇದು ಮಾತಾಡ್ರಿ, ಗಲಾಟೆ ಮಾಡ್ಬೇಡಿ ಅಂತ ಅವ್ವನ ವಾರ‍್ನಿಂಗ್ ಆಗೀಗ ಇರ‍್ತಿತ್ತು. ತಂದಿರುವ ಪಟಾಕಿ ಹೊಡಿರ‍್ರಾ, ಜಾಗಟೆ ಹೊಡಿರ‍್ರಾ ಅಂತ ಅಪ್ಪ ಜೋರು ಮಾಡಿ, ಹುರಿದುಂಬಿಸಿದ. ಗೌರಿ ಪೂಜೆ ಮಾಡಿ, ಮನೆಗೆ ಗೌರಿಯನ್ನು ತಂದು ಮಂಟಪದ ಒಳಗೆ, ದೀಪದ ಮಣೆ ಇಟ್ಟು, ಬಾಳೆ ಎಲೆ, ಅದರ ಮೇಲೆ ಅಕ್ಕಿ ಹಾಕಿ, ಚೆಂಬಿಗೆ ಅವ್ವ ತನ್ನ ಮಣಿಸರ ಸುತ್ತಿ ಗೌರಮ್ಮನನ್ನು ಕೂರಿಸಿದಳು. ಮೂರು ದಿನ ಮನೆಯಲ್ಲಿರೋ ಗೌರಮ್ಮಂಗೆ ಮನೆಯಲ್ಲಿದ್ದ ಹೆಣ್ಣುಮಕ್ಕಳೆಲ್ಲ ಸೇರಿ ತರತರದ ತಿನಿಸುಗಳನ್ನು ಮಾಡಿಸಿ, ಎಡೆ ಇಟ್ಟರು. ಚಕ್ಕಲಿ, ಅತ್ರಾಸ, ಹೋಳಿಗೆ, ಸಂಕ್ರಪಿಳ್ಳೆ, ಕರಿಕಡುಬು, ಬೋಂಡ, ಸ್ವಾಣಿ ಉಂಡೆ ಹಿಂಗೆ ತಯಾರಾಗಿ ಮನೆಯೆಲ್ಲ ಕಜ್ಜಾಯದ ಕಂಪು ಗೊಮ್ಮಂತ ಹೊಡೆತಿತ್ತು.

ಹಬ್ಬದ ಮೂರನೆ ದಿನ ಗೌರಿ ಬಿಡೋದು ಬಂತು. ಬಾಳೆ ರಂಬಾಟೆ ಗಿಡ್ ಗಿಡ್ ಕತ್ರಿಸಿ, ಬಾವಿ ದಂಡೆ ಮೇಲೆ ಮೊದಲೆ ಇಟ್ ಬರ‍್ಬೇಕಾ ಹುಡ್ರ ಅಂತ ಅಪ್ಪ ಹೇಳಿದ.  ಮೊನ್ನೆ ಗೌರಿ ತಂದಾಗ ಇದ್ದ, ಉಳಿದ ಬಿದಿರು ಸಿಬಿಕೆಯನ್ನು ಅರುಣ ಜೋಪಾನವಾಗಿಟ್ಟಿದ್ದ. ಅದಕ್ಕೆ ಇನ್ನೊಂದಿಷ್ಟು ಬಿದಿರು ಸಿಬಿಕೆ ಸೇರಿಸಿ, ದೊಂದಿ ಸಿದ್ದ ಮಾಡಿದ. ಸೋಮು ಕಡಬತ್ತಿ ಸುತ್ತಿ ಬಾಳೆ ಎಲೆಯೊಳಗೆ ಇಟ್ಟ.  ಗೌರಿ ಬಿಡುವಾಗ, ಇವರೆಲ್ಲರೂ ಅದು, ಇದು ಅಂತ ಕೆಲಸ ಮಾಡ್ತಾನೆ, ಕತ್ತಲು ಆದದ್ದು ಗೊತ್ತಾಗಲೇ ಇಲ್ಲ. ಮನೆಯಲ್ಲಿದ್ದ ಹೆಂಗಸ್ರು, ಹುಡ್ರು ಮಕ್ಳಿರ‍್ತಾವೆ, ಬೇಗ ಬಿಡಾನ ಅಂದಿದ್ದೆಲ್ಲಾ ಸರಿ, ಆದ್ರೆ ಕಗ್ಗತ್ತಲು ಆವರಿಸಿ, ಜಿಪುರುಮಳೆ ಬಿಡ್ತಾನೆ ಇರಲಿಲ್ಲ. ಮಳೆ ಬಿಡೋದನ್ನು ಕಾಯ್ತಿರುವ ಇವರು ಗೌರಿ ಮಂಟಪ, ಬಿಚ್ಚಿ, ಅದರೊಳಗಿನ ಬಾಳೆ ಕಂಬ, ಹಾರತುರಾಯಿಯನ್ನೆಲ್ಲ ನೀರಿಗೆ ಎಸೆದು ಬಂದರು. ಗಂಟೆ, ಜಾಗಟೆ, ಪಟಾಕಿ ಸದ್ದಿನಲ್ಲಿ ಗೌರಮ್ಮನನ್ನು ಕಳಿಸಲು, ಬಾವಿ ದಂಡೆಯ ಕಡೆಗ ಹೊರಟರು.

ಗೌರಿ ಕಳಿಸೋ ಮೊದ್ಲು ಮನೆದೇವರು ಬೀರಪ್ಪನ ದೀಪವನ್ನು ಬಾಳೆ ಎಲೆ ಮೇಲೆ ಹಚ್ಚಿ ಅವ್ವ ಕಳಿಸಿದಳು. ಗೌರಿ ಮಂಟಪದೊಳಗೆ ಮೂರು ದಿನ ಇದ್ದ ಚೆಂಬಿನೊಳಗಿನ ಗೌರಿ ನೀರನ್ನು ಬಾವಿಗೆ ಚೆಲ್ಲಿದಳು. ಅವ್ವ ಗೌರಮ್ಮನನ್ನು ಕಳಿಸಿದ ಮೇಲೆ, ಬಾಳೆ ಎಲೆ ಮೇಲೆ ಕರ್ಪೂರ ಹಚ್ಚಿ, ಬುತ್ತಿ ಗಂಟು ಇಟ್ಟು, ಹೂವು ಹಾಕಿ ಇಂದು ಹೋಗಿ ಮುಂದ್ ಬಾ ತಾಯಿ ಎಂದಳು. ಈ ಬುತ್ತಿ ದೂರ ಪಯಣದಲ್ಲಿರೋ ಗೌರಿಗೆ ಊಟಕ್ಕೆ ಕಳಿಸುವುದಂತೆ. ನಂತರ ಗೌರಿ ಕಳಿಸೋದು ಉಳಿದವರ ಸರದಿ. ಎಲ್ಲರೂ ಬಾಳೆ ರಂಬಾಟೆಗೆ ಕಡಬತ್ತಿ ಹಚ್ಚಿ ಗೌರಮ್ಮ ಇಂದ್ ಸುಖವಾಗಿ ಹೋಗಿ ಮುಂದೆ ಸುಖವಾಗಿ ಬಾರಮ್ಮ. ಎಲ್ಲರಿಗೂ ಒಳ್ಳೇದು ಮಾಡು ಅಂತ ಬಿಟ್ಟರು. ದನ, ಕರ, ಮರಿ, ಊರು, ಜನರಿಗೆಲ್ಲಾ ಒಳ್ಳೇದು ಮಾಡಮ್ಮ ಎಂದು ಅಪ್ಪ ಗೌರಮ್ಮನನ್ನು ಕಳಿಸಿದ. ಅರುಣ ಮುಂಬರುವ ಪರೀಕ್ಷೆಯಲ್ಲಿ ಪಾಸು ಮಾಡಮ್ಮ ಎಂದು ಕಳಿಸಿದನು. ಅವರೆಲ್ಲ ರಂಬಾಟೆಗೆ ಕಡಬತ್ತಿ ಹಚ್ಚಿ ಗೌರಮ್ಮನನ್ನು ಬಿಡುವಾಗ ನಂದ್ ಮುಂದ್, ನಂದ್ ಮುಂದ್ ಅಂತ ತಳ್ಳಿದರು.

ಹೊಳೆಯಲ್ಲಿ ಗೌರಿಯನ್ನು ಬಿಡುತ್ತಾ ಗಂಗೆಯನ್ನು ತರುವುದು- photo- Harshakumar Kugwe

ಬಾವಿ ಮಧ್ಯ ಹೋದಾಗ ಖುಷಿ ಪಟ್ಟರು. ದೊಂದಿ ಬೆಳಕಲ್ಲಿ ಶಂಖ, ಜಾಗಟೆ ಸಮೇತ ಗಂಗಮ್ಮನೊಂದಿಗೆ ಮನೆಕಡೆ ಹೆಜ್ಜೆ ಹಾಕಿದರು.

ಗೌರಮ್ಮನನ್ನು ಬಿಟ್ಟ ಮೇಲೆ ಅವ್ವ  ಗಂಗಮ್ಮನನ್ನು ಮತ್ತು ಪಕ್ಕದಲ್ಲಿ ಬೆನ್ನಟೆ ಅಮ್ಮನನ್ನು ತಂದು ನಡು ಮನೆಯಲ್ಲಿ ಕೂರಿಸಲಾಯಿತು. ಗಂಗಮ್ಮನಿಗೆ ಬಡಿಸಿದ ಬಾಳೆ ಹಣ್ಣು, ಅದಕ್ಕೆ ಹಾಲು ಹಾಕಿ, ಎಡೆ ಇಟ್ಟು ಪೂಜೆ ಮಾಡಿದಳು. ಆ ಬಾಳೆ ಹಣ್ಣನ್ನು ಹುಡ್ರು, ಹುಡುಗಿಯರು ಯಾರೂ ತಿನ್ನಬಾರದು ಅಂತ ತಾಕೀತು ಮಾಡಿದಳು. ಬಂಜೆಯಾಗಿರೋ ಗಂಗಮ್ಮನಿಗೆ ಇಲ್ಲಿಯೂ ಸೂತಕ. ಮನೆಯೊಳಗೆ ಗಂಗಮ್ಮ, ಬೆನ್ನಟೆ ಅಮ್ಮ ಕೂತಿದ್ರೆ ಆ ಕಡೆ ಅರುಣ  ಬಾವಿ ದಡಕ್ಕೆ ಓಡಿದ. ಬಾವಿ ದಡದಲ್ಲಿ ಎಡೆಗಿಟ್ಟ ಕಜ್ಜಾಯನೆಲ್ಲ ಮುಗಿಸಿ ಬಂದು, ಗೊತ್ತಿಲ್ಲದ ತರ ಸುಮ್ಮನಿದ್ದ. ಬರಗೆಟ್ಟ ಇವನು ಅದ್ನ ಹೆಂಗೆ ಬಿಟ್ಟಾನು ಹೇಳಿ. ಮನೆಯಲ್ಲಿ ಅಪ್ಪ ಗಂಗಮ್ಮನ ಹಾಡು ಹಾಡಿದ

ತಂಗಿಯಾಗಿ ಬಂದೆ ಮನೆಗೆ
ಅಂಗೈಯೊಳಗೆ ನಿಂಗೆ ಪೂಜೆ
ಮಾಡುವೆ ಶಿವಗೆ
ಗಂಗಿಗೆ ಆರತಿ ಬೆಳಗೆ ಶಿವಗೆ ಶಂಕರಗೆ
ಗೌರಿಗೆ ಆರತಿ ಬೆಳಗೆ ಶಿವಗೆ ಶಂಕರಗೆ

ಗಂಗಮ್ಮನ ಈ ಹಾಡು ಗೌರಿ, ಶಿವ, ಗಂಗೆಯರನ್ನು ಭೂಮಿ ಮೇಲೆ ತಂದಿರಿಸಿತು. ಗೌರಿ ಹಾಡು, ಗಂಗಮ್ಮನ ಹಾಡುಗಳೆಲ್ಲ ಇವರಿಗೆ ಇವರಾರು ಆಗಿರದೆ ನಮ್ಮವರೇ ಅನ್ನಿಸಿತು. ಮಾರ್ನೆ ದಿನ ಗಂಗಮ್ಮನ ಬಿಟ್ಟು, ಉಳಿದದ್ದೆಲ್ಲ ಖಾಲಿ ಮಾಡಿ, ಊರಲ್ಲಿರೋ ಗಣಪತಿ ಬಿಟ್ಟು ಶಾಲೆ ಕಡೆ  ಹ್ಯಾಪು ಮೋರೆ ಹಾಕಿಕೊಂಡು ಹೊರಟರು. ಇದರ ನಡುವೆ ಹುಡ್ರು ಉಳಿದ ಕಜ್ಜಾಯವನೆಲ್ಲ ಮೂಲೆಯಲ್ಲಿ ಚೀಲ ತುಂಬಿ ಇಟ್ಟುಕೊಂಡರು. ಹಬ್ಬ ಮುಗಿತು. ಹಾಸ್ಟೆಲ್ ನಲ್ಲಿ ಗೌರಿ ಹಬ್ಬದ ಕಜ್ಜಾಯವೆಲ್ಲ ಟ್ರಂಕ್ ಅಡಿಗೆ ಹಾಕ್ಕೊಂಡು ಯಾರಿಗೂ ಗೊತ್ತಾಗದ ಹಾಗೆ ಅರುಣ ಉದರದೊಳಗೆ ಒಂದೊಂದೆ ಸೇರಿಸಿದ.

ಹಬ್ಬ ಮುಗಿಸಿ, ಅರುಣನ ಜೊತೆಗೆ ಬಂದ. ಸ್ವಾಣೆ ಉಂಡೆ ಮತ್ತು ಹೊದ್ಲ ಉಂಡೆ ಮಾತ್ರ ತಿಂಗಳತಂಕ ಪೆಟ್ಟಿಗೆಯೊಳಗೆ ಇರುತ್ತಿದ್ದವು ಮತ್ತು ಗೌರಿ ಹಬ್ಬ ನೆನಪಿಸುತ್ತಿದ್ದವು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಡಾ. ಅಣ್ಣಪ್ಪ ಎನ್ ಮಳೀಮಠ್
ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ಕಾಲೇಜು, ನರಸಿಂಹರಾಜಪುರ.

Related Articles

ಇತ್ತೀಚಿನ ಸುದ್ದಿಗಳು