ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಗ್ರಾಮವೊಂದರ ಮೇಲೆ ಸಶಸ್ತ್ರ ದುಷ್ಕರ್ಮಿಗಳು ನಡೆಸಿದ ಭೀಕರ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಜಿಲ್ಲೆಯ ಸೈತು-ಗಾಂಫಾಜೋಲ್ ಉಪವಿಭಾಗದ ಲೋಯಿಬೋಲ್ ಖುಲ್ಲೆನ್ ಗ್ರಾಮದಲ್ಲಿ ಮುಂಜಾನೆ 4 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದ್ದು, ಘಟನೆಯ ವೇಳೆ ದುಷ್ಕರ್ಮಿಗಳು ಕನಿಷ್ಠ ಏಳು ಮನೆಗಳಿಗೆ ಬೆಂಕಿ ಹಚ್ಚಿ ಭಸ್ಮಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿರೋಧಿ ಗುಂಪುಗಳ ನಡುವೆ ಕೆಲ ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿಯ ನಡುವೆ ಈ ಮೂವರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯಿಂದಾಗಿ ಭಯಭೀತರಾದ ಗ್ರಾಮಸ್ಥರು ಪ್ರಾಣ ಉಳಿಸಿಕೊಳ್ಳಲು ಹತ್ತಿರದ ಅರಣ್ಯ ಪ್ರದೇಶಗಳಿಗೆ ಓಡಿ ಹೋಗಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಮೃತರನ್ನು ಲೆತ್ಖೋಂಗಾಮ್ ಹಾಒಕಿಪ್, ತಿನ್ಮೇರಿ ಹಾಒಕಿಪ್ ಮತ್ತು ಜಾಂಗ್ಮಿನ್ಲಾಲ್ ಹಾಒಕಿಪ್ ಎಂದು ಗುರುತಿಸಲಾಗಿದೆ.
ರಾಜ್ಯದ ಕುಕಿ ಬುಡಕಟ್ಟು ಜನಾಂಗದ ಅತ್ಯುನ್ನತ ಸಂಸ್ಥೆಯಾದ ಕುಕಿ ಇನ್ಪಿ ಮಣಿಪುರ (KIM), ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಕೃತ್ಯ ಎಸಗಿದ ಅಪರಾಧಿಗಳನ್ನು ಪತ್ತೆಹಚ್ಚಿ ಬಂಧಿಸಲು ತಕ್ಷಣವೇ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
“ನಿಶಸ್ತ್ರ ನಾಗರಿಕರ ಮೇಲಿನ ಈ ಅನಾಗರಿಕ ಹಿಂಸಾಚಾರದ ಕೃತ್ಯವನ್ನು ಕೆಐಎಂ ಕಠಿಣ ಪದಗಳಲ್ಲಿ ಖಂಡಿಸುತ್ತದೆ. ನಿರಪರಾಧಿಗಳ ಉದ್ದೇಶಪೂರ್ವಕ ಕೊಲೆ, ಮನೆಗಳ ಧ್ವಂಸ ಮತ್ತು ಜೀವನೋಪಾಯಕ್ಕೆ ಧಕ್ಕೆ ತಂದಿರುವುದು ಮಾನವ ಘನತೆ ಹಾಗೂ ಮೂಲಭೂತ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ” ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
