Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಣಿಪುರ: ಕೆಲವು ಹೆಣ್ಣು ಪ್ರಶ್ನೆಗಳು

ನಮಗಿನ್ನೂ ಭರವಸೆಗಳಿವೆ. ಬದುಕುಳಿದು ಬಂದ ಕೆಲ ಕುಕಿಗಳು ಹೇಳುತ್ತಿರುವಂತೆ ನಾಗಾ, ಪಂಗಲ್, ಮೈತಿಗಳೂ ಸಹಾ ಕೆಲವು ಕುಕಿ ಕುಟುಂಬಗಳಿಗೆ ಆಶ್ರಯ ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಮತ್ತೆ ಕೆಲವರು ರಿಸ್ಕ್ ತೆಗೆದುಕೊಂಡು ತಪ್ಪಿಸಿಕೊಂಡು ಹೋಗಲು, ಅಡಗಿಕೊಳ್ಳಲು ಸಹಾಯ ಮಾಡಿದ್ದಾರೆ. ಹೆಣ್ಣು ಮತ್ತು ಹಿಂಸೆ ವಿರುದ್ಧ ಪದಗಳು. ನಾವೇನಿದ್ದರೂ ಪ್ರೇಮಿಸುವವರು, ಪ್ರಶ್ನಿಸುವವರು, ಪೊರೆಯುವವರು. ಇದು ಎಲ್ಲ ಮಹಿಳೆಯರ ಕಣ್ಣರಿವಾಗಲಿ – ಡಾ. ಎಚ್ ಎಸ್‌ ಅನುಪಮಾ, ವೈದ್ಯರು, ಲೇಖಕರು

ನಮಗೆ ಮಹಿಳೆಯರಿಗೆ ಮಣಿಪುರದ ಪ್ರಸಕ್ತ ಪರಿಸ್ಥಿತಿಯು ಹಲವು ಕಾರಣಗಳಿಂದ ಒಳಬೇಗುದಿಯಾಗಿ ಕಾಡತೊಡಗಿದೆ. ಕಣ್ಣಲ್ಲಿ ನೀರಲ್ಲ, ರಕ್ತ ಹರಿಯುವಷ್ಟು ಭಯಾನಕವಾದ ಆ ವೀಡಿಯೋ ನೋಡಿದ ಬಳಿಕ ಹೆಣ್ಣುಮನಸುಗಳು ಶಾಂತವಾಗಿ ಯೋಚಿಸಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಸಾವಿರದಷ್ಟು ಗಂಡಸರ ಮನಸ್ಸುಗಳಲ್ಲಿ ಇಬ್ಬರು ಹೆಣ್ಣುಗಳನ್ನು ಹಾಗೆ ಬತ್ತಲೆಗೊಳಿಸಿ ಎಳೆದೊಯ್ಯುವ, ಅದನ್ನು ಚಿತ್ರೀಕರಿಸಿ ಹಂಚಿಕೊಳ್ಳುವ ಕ್ರೌರ್ಯ ಹುಟ್ಟಿದ್ದು ಹೇಗೆ? ಮೊದಲು ಮೈತಿ ಮಹಿಳೆಯರನ್ನು ಕುಕಿ ಗಂಡಸರು ರೇಪ್ ಮಾಡುವ ವೀಡಿಯೋಗಳು ಹರಿದಾಡಿದವಂತೆ! ಅದನ್ನು ಕಂಡು ಕೆರಳಿ ಮೈತಿ ಗಂಡಸರು ಕುಕಿ ಹೆಣ್ಣುಗಳನ್ನು ತಂದು ಅತ್ಯಾಚಾರ ಮಾಡಿ ಸೇಡು ತೀರಿಸಿದರಂತೆ!! ತಮ್ಮ ಹೆಣ್ಣುಗಳು ನೊಂದಿದ್ದಕ್ಕೆ ಬಹುಮಾನವಾಗಿ ಅನ್ಯ ಹೆಣ್ಣುಗಳನ್ನು ನೋಯಿಸುವುದು, ಅಲಲಾ! ಯಾವುದಕ್ಕೆ ಯಾವುದು ಉತ್ತರ?! ನಾವು ಕೇಳಿದ ಕಥೆಯ ದ್ರೌಪದಿಗೆ ಆದಂತೆ ನಿಜಜೀವನದಲ್ಲಿ ಯಾವ ದೇವರೂ ಅತ್ಯಾಚಾರವಾಗುತ್ತಿರುವ ಮಹಿಳೆಗೆ ಬಟ್ಟೆ ಹೊದಿಸಿ ಅತ್ಯಾಚಾರಿಗಳ ಸಂಹಾರ ಮಾಡಲು ಬರುವುದಿಲ್ಲ ನಿಜ. ಆದರೆ ಪ್ರಜಾಪ್ರಭುತ್ವ ಭಾರತದ ಮಣಿಪುರದಲ್ಲಿ ಕೊನೆಯಪಕ್ಷ ಹೆಂಗಸರೂ ಅವರ ನೆರವಿಗೆ ಬರಲಿಲ್ಲವೇ? ಅತ್ಯಾಚಾರ ಮಾಡುವ ತಮ್ಮ ಗಂಡಸರನ್ನು ಮೈತಿ ಮಹಿಳಾ ಸಂಘಟನೆ `ಮೈರಾ ಪೈಬಿ’ಯಾದರೂ ತಡೆಯಬಹುದಿತ್ತಲ್ಲವೆ? ಹೆಣ್ಣುಗಳೂ ಅಸ್ಮಿತೆಯ ಕುರುಡಿಗೆ ಬಲಿಯಾಗಿ ಮತ್ತೊಂದು ಹೆಣ್ಣಿನ ಸಹಾಯಕ್ಕೆ ಧಾವಿಸದಿರುವ ಸಂದರ್ಭಗಳು ಏಕೆ ಮತ್ತೆಮತ್ತೆ ಪುನರಾವರ್ತನೆ ಅಗುತ್ತಿರುವ ಕಟುವಾಸ್ತವಗಳಾಗಿವೆ? ಇವೇ ಮುಂತಾದ ಸಂಕಟದ ಪ್ರಶ್ನೆಗಳು ಮಹಿಳಾ ಮನಸ್ಸುಗಳನ್ನು ಸುಡತೊಡಗಿವೆ. `ಸ್ತ್ರೀವಾದಿಗಳೇ ನೋಡಿ, ಮಹಿಳಾ ಸಂಘಟನೆಗಳ ಮನಸ್ಥಿತಿ’ ಎಂಬ ಕುಹಕದ ಮಾತುಗಳು ಎದ್ದು ಬರುತ್ತಿವೆ. ಬೆಂಕಿಗೆ ತುಪ್ಪ ಸುರಿವಂತೆ ಹೊಸಹೊಸ ಅಪ್ಡೇಟ್‍ಗಳು ಬರುತ್ತಿವೆ.

ಜೂನ್ 20, 2023. ಶಸ್ತ್ರಾಸ್ತ್ರ ಹೊಂದಿದ್ದ ಆಧಾರದ ಮೇಲೆ ನಾಲ್ವರು ಮೈತಿ ತರುಣರನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸೇನಾವಾಹನವನ್ನು ತಡೆಗಟ್ಟಿ ಮೈರಾ ಪೈಬಿ ಮಹಿಳೆಯರು ಅವರನ್ನು ಬಿಡುಗಡೆ ಮಾಡಿಸಿದರು. ಜೂನ್ 24, 2023. 1,200 ಮೈತಿ ಮಹಿಳೆಯರು ಪೂರ್ವ ಇಂಫಾಲದ ಇತ್ತಮ್ ಊರಿನ ರಸ್ತೆಯಲ್ಲಿ ಸೇನಾವಾಹನವನ್ನು ತಡೆಗಟ್ಟಿದರು. `ದ ಕ್ವಿಂಟ್’ ಮಾಡಿದ ವರದಿಯಂತೆ ಆ ವಾಹನದಲ್ಲಿ ನಿಷೇಧಿತ ಉಗ್ರ ಸಂಘಟನೆಯ 12 ಮೈತಿ ತರುಣರಿದ್ದು ಅವರನ್ನು ಬಿಡಬೇಕೆನ್ನುವುದು ಆ ಮಹಿಳೆಯರ ಒತ್ತಾಯವಾಗಿತ್ತು. 21 ಜುಲೈ, 2023. ಪೂರ್ವ ಇಂಫಾಲ ಜಿಲ್ಲೆಯಲ್ಲಿ 18 ವರ್ಷದ ತರುಣಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಬಳಿಕ ಆಕೆ ಮೈರಾ ಪೈಬಿ ಹೆಂಗಸರು ನಾಲ್ವರು ಶಸ್ತ್ರಧಾರಿಗಳಿಗೆ ತನ್ನನ್ನು ಒಪ್ಪಿಸಿದರು ಎಂದು ಹೇಳಿದಳು. `ದಿ ಕ್ಯಾರವಾನ್’ನಲ್ಲಿ ಕರಣ್ ಥಾಪರ್‌ರೊಂದಿಗಿನ ಸಂದರ್ಶನದಲ್ಲಿ ಸಂತ್ರಸ್ತರಾಗಿ ಎದ್ದುಬಂದ ಇಬ್ಬರು ಕುಕಿ ಮಹಿಳೆಯರು ಮೈರಾ ಪೈಬಿ ಮಹಿಳೆಯರೇ ತಮ್ಮ ಸಮುದಾಯದ ಪುರುಷರು ಕುಕಿ ಮಹಿಳೆಯರ ಮೇಲೆ ಅತ್ಯಾಚಾರ, ಹಿಂಸೆ ನಡೆಸಲು ಪ್ರಚೋದಿಸುತ್ತಾರೆ ಎಂದು ಆರೋಪಿಸಿದರು. ಊರು ಬಿಟ್ಟು ಬೇರೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಕುಕಿ ಗುಂಪಿನ ಮೇಲೆ ದಾಳಿ ಮಾಡಿ ಕೊಲೆ, ಲೂಟಿ, ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವಾಗಲೂ ಇದೇ ಪುನರಾವರ್ತನೆಯಾಯಿತು.

ಮೈತಿ ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ ಎಂದು ಹರಡಿದ ಸುಳ್ಳುಸುದ್ದಿಯೇ ಅದಕ್ಕೆ ಕಾರಣ ಎಂದು ಈಗ ಹೇಳಲಾಗುತ್ತಿದೆ. ಆಗ ಹರಡಿದ ಸುಳ್ಳು ಸುದ್ದಿಗಳಿವು:

1. ಚುರಾಚಾಂದಪುರದಲ್ಲಿ ಮೇ 3ರಂದು ಮೈತಿ ಸಮುದಾಯದ ನರ್ಸ್ ಒಬ್ಬಳ ಮೇಲೆ ಕುಕಿ ಪುರುಷರಿಂದ ಅತ್ಯಾಚಾರವಾಗಿದೆ. (ಬಳಿಕ ಆಕೆಯ ತಂದೆಯೇ ಮಾಧ್ಯಮದೆದುರು ಅದು ಸುಳ್ಳುಸುದ್ದಿ ಎಂದು ತಿಳಿಸಿದ.)

2. ಅದೇ ಸಮಯದಲ್ಲಿ 37 ಮೈತಿ ಮಹಿಳೆಯರ ಪೋಸ್ಟ್ ಮಾರ್ಟಂ ವರದಿ ಹರಿದಾಡಿತು. ಮಣಿಪುರದ ಶಿಜಾ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ನಡೆಯಿತೆಂದೂ, ಅದರ ಪ್ರಕಾರ ಆ ಮಹಿಳೆಯರ ಮೇಲೆ (ಕುಕಿಗಳಿಂದ) ಅತ್ಯಾಚಾರವಾಗಿದೆ ಎಂಬ ಸುದ್ದಿ ವೈರಲ್ ಆಯಿತು. (ಬಳಿಕ ಆ ಆಸ್ಪತ್ರೆಯೇ ತಾನಂತಹ ಪರೀಕ್ಷೆ ನಡೆಸಿಯೂ ಇಲ್ಲ, ವರದಿಯನ್ನೂ ನೀಡಿಲ್ಲ ಎಂದು ಅಲ್ಲಗಳೆಯಿತು)

3. ಗುಡ್ಡಗಾಡು ಪ್ರದೇಶವೊಂದರಲ್ಲಿ ಮೈತಿ ಮಹಿಳೆಯ ಅತ್ಯಾಚಾರ ನಡೆಯುತ್ತಿರುವ ದೃಶ್ಯ ಎಂದು ವೀಡಿಯೋ ವೈರಲ್ ಆಯಿತು. ದೆಹಲಿಯ ಮೈತಿ ಪ್ರತಿಭಟನಾಕಾರರೂ ಅದನ್ನು ಪ್ರದರ್ಶಿಸಿದರು. (ಆದರೆ ಅದು ಅರುಣಾಚಲ ಪ್ರದೇಶದ ಕೌಟುಂಬಿಕ ದೌರ್ಜನ್ಯವೊಂದರ ಫೇಸ್ಬುಕ್‍ನ ಹಳೆಯ ಪೋಸ್ಟ್ ಆಗಿತ್ತು.) ಆದರೆ ಇವೆಲ್ಲ ಸುಳ್ಳೋ, ನಿಜವೋ ತಿಳಿಯುವುದರೊಳಗೆ ಕಾಡ್ಗಿಚ್ಚು ಹೊತ್ತಿಕೊಂಡಿತು. ನಂದಿಸುವುದು ಅಸಾಧ್ಯವೋ ಎಂಬಂತೆ ಅದೀಗ ಧಗಧಗಿಸಿ ಉರಿಯುತ್ತಿದೆ.

ಈ ಕೋರೈಸುವ ಬೆಂಕಿ ಬೆಳಕಲ್ಲಿ ಮೈರಾ ಪೈಬಿ ಎಂಬ ಮಹಿಳಾ ಸಂಘಟನೆಯ ಹೆಣ್ಣು ಕಣ್ಣ ದೀಪ ಮಂಕಾದಂತೆ ಕಾಣಿಸುತ್ತಿದೆ.

ಶತಮಾನಗಳ ಇತಿಹಾಸವಿರುವ ಮೈರಾ ಪೈಬಿ ಎಂಬ ಮಹಿಳಾ ಸಂಘಟನೆ ಎಂತಹ ಹಿನ್ನೆಲೆಯಿರುವಂತಹುದು ಗೊತ್ತೆ?

ನವೆಂಬರ್ 2, 2000ನೇ ಇಸವಿಯಿಂದ 15 ವರ್ಷಗಳ ಕಾಲ `ಸಶಸ್ತ್ರ ಪಡೆಗಳ ವಿಶೇಷಾಧಿಕಾರ’ ರದ್ದು ಪಡಿಸಿ ಎಂದು ಉಪವಾಸ ಕುಳಿತ ಇರೋಂ ಶರ್ಮಿಳಾ ಚಾನು ಒಬ್ಬ ಮೈರಾ ಪೈಬಿ ಮಹಿಳೆ. 2004, ಜುಲೈ 15. `ಇಂಡಿಯನ್ ಆರ್ಮಿ, ರೇಪ್ ಅಸ್’, `ಇಂಡಿಯನ್ ಆರ್ಮಿ, ಟೇಕ್ ಅವರ್ ಫ್ಲೆಶ್’ ಎಂದು ಭಾರತೀಯ ಸಶಸ್ತ್ರ ಪಡೆಗಳು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯ ಖಂಡಿಸಿ, ತಂಗ್ಜಂ ಮನೋರಮಾ ಎಂಬ ಯುವತಿಯ ಮೇಲೆಸಗಿದ್ದ ಘನಘೋರ ಅತ್ಯಾಚಾರ-ಕೊಲೆ ಖಂಡಿಸಿ, ಅಸ್ಸಾಂ ರೈಫಲ್ಸ್ ಕಚೇರಿಯ ತನಕ ಇಂಫಾಲದ ಬೀದಿಗಳಲ್ಲಿ ಬೆತ್ತಲಾಗಿ ನಡೆದ 12 ಇಮಾಗಳು (ತಾಯಂದಿರು) ಇದೇ ಮೈರಾ ಪೈಬಿಗಳೇ. ಅದಾಗಿ ಹಲವು ವರ್ಷಗಳು ಕಳೆದಿವೆ. ಕಣಿವೆಯಲ್ಲಿ ಸಾಕಷ್ಟು ಹೊಸನೀರು ಹರಿದಿದೆ. ಈಗ ಜನಾಂಗೀಯ ದ್ವೇಷವೇ ಆಧಾರವಾಗಿ ಇಷ್ಟೊಂದು ಹೆಣ್ಣುಗಳನ್ನು ಬೆತ್ತಲಾಗಿಸಿ, ಮೆರವಣಿಗೆ ಮಾಡಿ, ಅತ್ಯಾಚಾರ-ಕೊಲೆ ನಡೆಯುತ್ತಿದ್ದರೂ ಬಂಡಾಯದ ಹೆಣ್ಣು ಮನಸ್ಸುಗಳು ಮೌನವಾಗಿರುವ ತನಕ ಅಲ್ಲಿನ ಸಮಾಜೋ ರಾಜಕೀಯ ಪರಿಸ್ಥಿತಿ ಕದಡಿ ಹೋಗಿದೆ.

ಈಗ ನಮ್ಮೆಲ್ಲರಲ್ಲೂ ಒಂದೇ ಪ್ರಶ್ನೆ: ಮೈರಾ ಪೈಬಿಗಳು ಹೀಗೇಕಾದರು? ಹೆಣ್ಣುಗಳೇಕಿಷ್ಟು ಹಿಂಸಾನಂದಿಗಳಾದರು?

’ಪಂಜುಧಾರಿಣಿ’ ಮೈರಾ ಪೈಬಿ

ಮೇಲಿನ ಪ್ರಶ್ನೆಗಳ ಗಹನತೆ ಅರಿಯಲು ಮಣಿಪುರದ ಇತಿಹಾಸವನ್ನು ಅಲ್ಲಿಯ ಹೆಣ್ಣು ಬದುಕಿನ ಮೂಲಕ ಒಮ್ಮೆ ನೋಡಬೇಕು.

ಬೆಟ್ಟಕಣಿವೆಗಳ ಮಣಿಪುರದ ಜನ ಶ್ರಮಜೀವಿಗಳು. ಶತಮಾನಗಳಿಂದಲೂ ಗಂಡಸರು ಗಡಿ ಕಾಯುವುದರಲ್ಲಿ, ರಾಜ್ಯ ವಿಸ್ತರಿಸುವುದರಲ್ಲಿ ಮುಳುಗಿರುವಾಗ ಹೊಟ್ಟೆಪಾಡಿಗಾಗಿ ಬೆವರು ಹರಿಸಿದವರು ಮಹಿಳೆಯರು. `ತಾತ ಮುತ್ತಾತನಿಂದ ಜ್ಞಾನ ಸಿಗುತ್ತೆ, ಅಮ್ಮಅಜ್ಜಿ ಕಾದಿಟ್ರೆ ಮಾತ್ರ ಆಸ್ತಿ ಸಿಗುತ್ತೆ’; `ಕಟ್ಟಿಗೆ ತರೋನಷ್ಟೇ ಗಂಡ, ಉಳಿದಿದ್ದನ್ನೆಲ್ಲ ತರೋಳೇ ಹೆಂಡತಿ’ ಮುಂತಾದ ಮಣಿಪುರಿಯ ಗಾದೆಗಳೇ ಅದನ್ನು ಹೇಳುತ್ತವೆ. ಸ್ವತಂತ್ರಪೂರ್ವ ಕಾಲದಲ್ಲಿ 17ರಿಂದ 60 ವರ್ಷದೊಳಗಿನ ಗಂಡಸು ಯಾವಾಗೆಂದರೆ ಆಗ ರಾಜನ ಸೇವೆಗೆ ಲಭ್ಯವಿರಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು. ಹೆಣ್ಣುಮಕ್ಕಳೇ ಮನೆಯ ಜವಾಬ್ದಾರಿ ಹೊರುತ್ತಿದ್ದರು. ಕೌಟುಂಬಿಕ ಕೆಲಸ ಕಾರ್ಯಗಳ ಜೊತೆಗೆ ಸಂಸಾರದ ಆರ್ಥಿಕ ಹೊರೆಯನ್ನೂ ನಿಭಾಯಿಸುವಂತಾಯಿತು. ಸ್ವಾತಂತ್ರ್ಯಾನಂತರವೂ ಬಡತನ, ನಿರುದ್ಯೋಗ, ಮಾದಕದ್ರವ್ಯ ವ್ಯಸನ, ಬಂಡುಕೋರ ಸಶಸ್ತ್ರ ಗುಂಪುಗಳ ಕದನ, ಸೇನಾ ದೌರ್ಜನ್ಯ ಮುಂತಾದ ಕೊನೆಯಿಲ್ಲದ ಸಮಸ್ಯೆಗಳಲ್ಲಿ ಮಹಿಳೆಯರ ಬದುಕೂ ಮುಳುಗಿಹೋಗಿತ್ತು. ಅದಕ್ಕೆಲ್ಲ ಉತ್ತರವೋ ಎಂಬಂತೆ ಹುಟ್ಟಿಕೊಂಡದ್ದು `ಮೈರಾ ಪೈಬಿ’. (ಕನ್ನಡದಲ್ಲಿ ’ಪಂಜುಧಾರಿಣಿ’). ಎರಡು ಅಡಿ ಉದ್ದದ ಬಿದಿರ ಗಳದಲ್ಲಿ ಸೀಮೆಎಣ್ಣೆ ತುಂಬಿ ಒಳಗೊಂದು ಬಟ್ಟೆ ತುಂಡು ನೇತುಬಿಟ್ಟು ಮೇಲ್ತುದಿಯನ್ನು ಉರಿಸಿದರೆ ಬೆಂಕಿಯೂ ಅದೇ, ಬೆಳಕೂ ಅದೇ, ದಾರಿದೀಪವೂ ಅದೇ. ಬೆಂಕಿ ಹಚ್ಚಿದ ಪಂಜು `ಮೈರಾ’ ನ್ಯಾಯ ಕೇಳುವ ಹೋರಾಟದ ಸಂಕೇತ. ರಾತ್ರಿ ಹೊತ್ತಿನ ಪುರುಸೊತ್ತಿನಲ್ಲೇ ಅವರು ಸಮಾಜದ ಕೆಲಸ ಮಾಡುತ್ತಿದ್ದದ್ದರಿಂದ ಮೊದಲೆಲ್ಲ ಚಲನವಲನಕ್ಕೆ ಪಂಜು ಹಿಡಿಯುವುದು ಅನಿವಾರ್ಯವಾಗಿತ್ತು. ಅದನ್ನು ಹಿಡಿದ ಮಹಿಳೆಯರ ಸಂಘಟನೆಯೇ ಮೈರಾ ಪೈಬಿಯಾಗಿ ಬೆಳೆಯಿತು. ಅದು ಮಣಿಪುರದ ಬಹುಸಂಖ್ಯಾತ ಮೈತಿ ಮಹಿಳೆಯರ ಸಂಘಟನೆಯಾಗಿ ಬೆಳೆಯಿತು.

ಅವರ ಮೊದಲ `ಮಹಿಳಾ ಯುದ್ಧ’ (ನೂಪಿ ಲಾನ್) 1904ರಲ್ಲಿ ನಡೆಯಿತು. ಬ್ರಿಟಿಷ್ ಅಧಿಕಾರಿಗಳ ನಿವಾಸ ಕಟ್ಟಲು ಅಗತ್ಯವಿರುವ ಮರಮುಟ್ಟು ಕಡಿಯಲು ಸಮುದಾಯದ ಗಂಡಸರನ್ನು ಪುಕ್ಕಟೆ ಬಳಸಿಕೊಳ್ಳುವುದರ ವಿರುದ್ಧ ನಡೆದ ಪ್ರತಿರೋಧ ಅದು. 1939ರಲ್ಲಿ ಎರಡನೆಯ ನೂಪಿ ಲಾನ್ ನಡೆಯಿತು. ಬೆಳೆದ ಅಕ್ಕಿಯನ್ನು ಆಳ್ವಿಕರು ರಫ್ತು ಮಾಡುತ್ತಿದ್ದದ್ದರಿಂದ ಬೆಳೆದವರಿಗೇ ಅನ್ನವಿಲ್ಲವಾಯಿತು. ಕಂಗೆಟ್ಟ ಮಹಿಳೆಯರು ಸ್ಥಳೀಯ ಉತ್ಪನ್ನ ಸ್ಥಳೀಯರಿಗೇ ಸಿಗಬೇಕೆಂದು ರಾಜನಿಗೆ ಅಹವಾಲು ಸಲ್ಲಿಸಿದರು. ಅಕ್ಕಿ ಮೂಟೆಯ ಹೇರು ಗಾಡಿಗಳನ್ನು ಅಡ್ಡಗಟ್ಟಿ ವಶಪಡಿಸಿಕೊಂಡರು. ರಾತ್ರೋರಾತ್ರಿ ಅಕ್ಕಿ ಗಿರಣಿ ಲೂಟಿ ಮಾಡಿದರು.

ನೂಪಿ ಲಾನ್


ನಂತರದ ನೂಪಿ ಲಾನ್ ಅತಿ ದೀರ್ಘವಾದದ್ದು. 70-80ರ ದಶಕದಲ್ಲಿ ಮತ್ತೊಂದು ಗಂಭೀರ ಸಾಮಾಜಿಕ ಸಮಸ್ಯೆ ತಲೆದೋರಿತು. ರಾಜ್ಯದ ಯುವ ಜನತೆ ಭೂಗತ ಚಟುವಟಿಕೆಗಳು ಹಾಗೂ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡರು. ಸಾರಾಯಿ-ಹೆರಾಯಿನ್‍ಗಳಲ್ಲಿ ಮುಳುಗಿಹೋದರು. ವಿಯೆಟ್ನಾಂ ಮತ್ತು ಲಾವೋಸ್‍ನಿಂದ ಭಾರತ-ಮ್ಯಾನ್ಮಾರ್ ಗಡಿ ಮೂಲಕ ಮಣಿಪುರಕ್ಕೆ ಮಾದಕ ವಸ್ತು ಬರುತ್ತದೆ. ಹೆರಾಯಿನ್‍ನ ಅತಿ ಶುದ್ಧ ರೂಪವಾದ ನಂ.4 ಅಲ್ಲದೇ ಇನ್ನೂ ಎಷ್ಟೋ ಮಾದಕ ವಸ್ತುಗಳು ಮಣಿಪುರದಲ್ಲಿ ಸುಲಭವಾಗಿ ಸಿಗುತ್ತವೆ. ಪರಿಣಾಮವಾಗಿ ಹದಿವಯಸ್ಸಿನ ಮಾದಕ ವ್ಯಸನಿಗಳ ಸಂಖ್ಯೆ ಏರತೊಡಗಿತು. ಇದಕ್ಕೆ ಬಂಡುಕೋರ ಗುಂಪುಗಳೂ ಕಾರಣವಾದವು. ಮಣಿಪುರದಲ್ಲಿ ಏಳು ಪ್ರಬಲ ಬಂಡುಕೋರ ಗುಂಪುಗಳಿದ್ದು ಅದರಲ್ಲಿ ಕನಿಷ್ಠ ಮೂರು ಸಮಾನಾಂತರ ಸರ್ಕಾರ ನಡೆಸುತ್ತ ತಮ್ಮ `ಜನ’ರ ಮೇಲೆ ತೆರಿಗೆ ವಿಧಿಸುತ್ತವೆ. ಗುಂಪುಗಳ ನಡುವಿನ ಜಗಳ, ಒಳಜಗಳಗಳಿಂದ ಅಪಹರಣ, ಕೊಲೆ, ಲೂಟಿ ಸರ್ವೇಸಾಮಾನ್ಯವಾಗಿದೆ. ಕನಿಷ್ಠ ಮೂರು ಗುಂಪುಗಳಿಗಾದರೂ ಹಫ್ತಾ ಕೊಡದೇ ಯಾವ ಸಾರಿಗೆ ವ್ಯವಸ್ಥೆಯೂ, ವ್ಯಾಪಾರ-ವ್ಯವಹಾರವೂ ಅಲ್ಲಿ ನಡೆಯಲು ಸಾಧ್ಯವಿಲ್ಲ. ಬಂಡುಕೋರ ಗುಂಪುಗಳ ಪ್ರಮುಖ ಆರ್ಥಿಕ ಚಟುವಟಿಕೆ ಮಾದಕ ವಸ್ತು ವ್ಯವಹಾರದ ಮೇಲೇ ನಿಂತಿದೆ. ಅಂತಾರಾಷ್ಟ್ರೀಯ ಮಾದಕ ವಸ್ತು ಸಾಗಣಾ ಜಾಲ ಅಬಾಧಿತವಾಗಿ ಹರಡಲು ಅಧಿಕಾರಸ್ಥರು ಶಾಮೀಲಾಗಿರುವುದೂ ಕಾರಣವಾಗಿದೆ.

ಮಾದಕ ವ್ಯಸನಿಗಳು ಅದೇ ಸಿರಿಂಜುಗಳನ್ನು ಮತ್ತೆಮತ್ತೆ ಗುಂಪುಗಳಲ್ಲಿ ಬಳಸುತ್ತ ಎಚ್‍ಐವಿ ಹರಡುವಿಕೆಗೂ ಕಾರಣವಾದರು. ಮಣಿಪುರವೆಂದರೆ ಭಾರತದ ಎಚ್ಚೈವಿ ರಾಜಧಾನಿಯೆನ್ನುವಂತಾಯಿತು. 1990ರಲ್ಲಿ ಹೆರಾಯಿನ್ ಚುಚ್ಚಿಕೊಳ್ಳುವವರಲ್ಲಿ 1-2% ಎಚ್‍ಐವಿ ಬಾಧಿತರಿದ್ದದ್ದು ಕೇವಲ ಆರು ತಿಂಗಳಲ್ಲಿ 50%ಗೇರಿತು. 1997ರ ಹೊತ್ತಿಗೆ ಈ ಸಂಖ್ಯೆ 89%ಕ್ಕೇರಿತು. ಯುವ ರೋಗಿಗಳು ಅಪೌಷ್ಟಿಕತೆ, ಓವರ್‍ಡೋಸ್, ಕಾಯಿಲೆಗಳಿಂದ ತೀರಿಕೊಳ್ಳತೊಡಗಿದರು. ಇಂಥ ಹೊತ್ತಿನಲ್ಲಿ, ಒಂದೆಡೆ ರಕ್ಷಣಾ ಪಡೆಗಳು ವಿಶೇಷಾಧಿಕಾರ ಪಡೆದು ತಮ್ಮ ಗಂಡ, ಮಕ್ಕಳನ್ನು ಹಿಂಸಿಸುವಾಗ, ಸಾರಾಯಿ-ಮಾದಕ ವ್ಯಸನದಿಂದ ಕುಟುಂಬಗಳು ಒಡೆದು ಹೋಗುವಾಗ ಮಹಿಳೆಯರು ಪ್ರತಿ ಊರುಕೇರಿಯಲ್ಲೂ ಪಂಜು ಹಿಡಿದು ಹೊರಟರು.

ಮೈರಾ ಪೈಬಿಗಳು ಮನೆಮನೆಗಳಿಗೆ ತೆರಳಿದರು. ವ್ಯಸನ ಮುಕ್ತಗೊಳಿಸುವ ಕ್ಯಾಂಪುಗಳನ್ನು ನಡೆಸಿದರು. ಪ್ರತಿರಾತ್ರಿ ಹಳ್ಳಿಯ ಹೊರವಲಯದಲ್ಲೊಂದು ಚಾದರ ಹಾಸಿಕೊಂಡು ಗುಂಪುಗಳಲ್ಲಿ ಕಾಯತೊಡಗಿದರು. ಕರೆಂಟು ಕಂಬಕ್ಕೆ ಕಲ್ಲು ಕುಟ್ಟಿ ಟಣ್‍ಟಣ್ ಸದ್ದಿನಿಂದ ಎಚ್ಚರಿಸುತ್ತಿದ್ದರು. ಕುಡಿದು ಬಂದು ಹೆಂಡತಿಯನ್ನು ಹೊಡೆವ, ಮಾದಕ ವ್ಯಸನಿಗಳಾಗಿ ಬಿದ್ದುಕೊಳ್ಳುವ, ಹೆಂಗಸರನ್ನು ಹಿಂಸಿಸುವ ಗಂಡಸರನ್ನು ರಾತ್ರಿಪಾಳಿಯ ಪೈಬಿಗಳು ತಡೆಯುತ್ತಿದ್ದರು, ಬಡಿಯುತ್ತಿದ್ದರು. ಸ್ಥಳೀಯವಾಗಿ ತಯಾರಾಗುತ್ತಿದ್ದ ಸಾರಾಯಿಯನ್ನು ವಶಪಡಿಸಿಕೊಂಡು ನಾಶಗೊಳಿಸತೊಡಗಿದರು. ಶಾಂತಿಯುತ ಸಮಾಜ ಕಟ್ಟುವ ಉದ್ದೇಶ ಹೊತ್ತು ಶುರುವಾದ ನಡೆ ಕ್ರಮೇಣ ಹಳ್ಳಿಹಳ್ಳಿಗೂ ತಂತಾನೇ ಹಬ್ಬಿತು. ಇಮಾ ಚೋಬಿ ನೇತೃತ್ವದಲ್ಲಿ `ಅಖಿಲ ಮಣಿಪುರ ಮಹಿಳಾ ಅಭಿವೃದ್ಧಿ ಮತ್ತು ಸುಧಾರಣಾ ಸಮಾಜ’ವೂ ಸೇರಿದಂತೆ ಹಲವು ಮಹಿಳಾ ಗುಂಪುಗಳು ಆರಂಭವಾದವು. ಎಲ್ಲವೂ ತಮ್ಮನ್ನು `ಮೈರಾ ಪೈಬಿ’ ಎಂದೇ ಗುರುತಿಸಿಕೊಂಡವು. ಕಳ್ಳತನ, ಉಗ್ರಗಾಮಿಗಳಿಂದ ಹಣ ವಸೂಲಿ, ವಿವಾಹ ಬಾಹಿರ ಸಂಬಂಧ, ಮಾದಕ ವ್ಯಸನ, ಪ್ರೇಮಿಸಿ ಮನೆ ಬಿಟ್ಟು ಹೋಗುವುದು, ಹೆಂಡತಿಯನ್ನು ಬಿಟ್ಟು ಹೋಗುವುದು, ಸೈನ್ಯ ಕಾರ್ಯಾಚರಣೆ ಮೊದಲಾದುವುಗಳಿಂದ ಉದ್ಭವಿಸುವ ಬಿಕ್ಕಟ್ಟುಗಳನ್ನು ಬಗೆಹರಿಸತೊಡಗಿದವು.

ಒಂದು ಕಡೆ ಆಂತರಿಕ ಸ್ವಾಯತ್ತತೆಗೆ ಹೊಡೆದಾಡುವ ವಿವಿಧ ಬಂಡುಕೋರ ಗುಂಪುಗಳು, ಇನ್ನೊಂದು ಕಡೆ ಆಧುನಿಕ-ಜಾಗತಿಕ-ಧಾರ್ಮಿಕ ಜಗತ್ತು ಒಡ್ಡುತ್ತಿರುವ ವಿಪ್ಲವಗಳು – ಈ ಎಲ್ಲದರ ನಡುವೆ ಉಸಿರು ಕಟ್ಟಿದಂತಹ ವಾತಾವರಣದಲ್ಲಿ ಹಿಂಸೆಗೆ ಪ್ರತಿಹಿಂಸೆ ಉತ್ತರವಾಗದಂತೆ ಅಹಿಂಸಾತ್ಮಕ ಪ್ರತಿರೋಧ ಶಕ್ತಿಯಾಗಿ, ಮಾದರಿಯಾಗಿ ಅವರು ನಮ್ಮ ಮುಂದಿದ್ದರು. ಮಹಿಳಾ ಚಳವಳಿ ಹುಡುಕುತ್ತಿರುವ ಪರ್ಯಾಯ ನ್ಯಾಯವ್ಯವಸ್ಥೆಯ ಮಾದರಿಯಾಗಬಲ್ಲಂಥ ಅನನ್ಯ ಮಹಿಳಾ ಶಕ್ತಿಯ ಪ್ರತೀಕ ಮೈರಾ ಪೈಬಿ ಎಂದು ಸೂಕ್ಷ್ಮ ಮಹಿಳಾ ಮನಸ್ಸುಗಳು ಅತ್ತ ನೋಡತೊಡಗಿದವು. 

ವಿನಾಶಕಾರಿ ನೂಪಿ-ಲಾನ್

ದಮನಿತ ಅಸ್ಮಿತೆಯನ್ನು ಗುರುತಿಸಿಕೊಂಡು ಅದರ ನಿವಾರಣೆಗಾಗಿ ಸಂಘಟಿತಗೊಂಡು ಹೋರಾಡಲು ಒಂದು ಐಡೆಂಟಿಟಿ ಬೇಕು, ನಿಜ. ಆದರೆ ಆ ಕಾರಣಕ್ಕಾಗಿ ಒಂದು `ಗುಂಪಿಗೆ ಸೇರಿದ’ ಐಡೆಂಟಿಟಿಯಾಗಿ ಹುಟ್ಟಿಕೊಳ್ಳುವ ಪ್ರಾದೇಶಿಕತೆ/ರಾಷ್ಟ್ರೀಯತೆ/ಜಾತಿ-ಧರ್ಮ-ಮತ-ಕುಲ-ಬುಡಕಟ್ಟು ಅಸ್ಮಿತೆಗಳು `ಗುಂಪಿಗೆ ಸೇರದ’ವರನ್ನು ಗುರುತಿಸಿ ಹೊರಗಿಡುವ ದೌಷ್ಟ್ಯದ ತನಕ ಮುಂದುವರೆಯುತ್ತವೆ. ಎಂದೇ ನಮ್ಮ ಅಸ್ಮಿತೆಗಳನ್ನು ಎಷ್ಟರಮಟ್ಟಿಗೆ, ಯಾತಕ್ಕೆ ಪೋಷಿಸಬೇಕೆನ್ನುವುದನ್ನು ಸ್ಪಷ್ಟಗೊಳಿಸಿಕೊಳ್ಳುವುದು ತೀರಾ ಅಗತ್ಯವಾಗಿದೆ. ಇಲ್ಲದೇ ಹೋದರೆ ಯಾವ ಹಿಂಸೆಯನ್ನು ವಿರೋಧಿಸುತ್ತೇವೋ ಇನ್ನೊಬ್ಬರ ಮೇಲೆ ಅದೇ ಹಿಂಸೆ ಸಂಭವಿಸಲು ನಾವೇ ಕಾರಣವಾಗುವ, ಹಿಂಸೆಯ ಉಪಕರಣಗಳಾಗುವ ಅಪಾಯ ಸೃಷ್ಟಿಯಾಗುತ್ತದೆ.

ಬಹುಶಃ ಈ ಐಡೆಂಟಿಟಿ ಪ್ರಜ್ಞೆಯೇ ಮೈರಾ ಪೈಬಿಗಳ ಬೌದ್ಧಿಕ ಹರವು ವಿಶಾಲಗೊಳ್ಳದೇ ಹೋಗಲು ಕಾರಣವಾಗಿದೆ. ಮಣಿಪುರವನ್ನು ಒಡೆದು ತಮಗೆ ಬೇರೆ ರಾಜ್ಯ ಕೊಡಬೇಕೆಂದು ಒತ್ತಾಯಿಸುವ ಕುಕಿ ಮತ್ತು ಜೋಮಿ ಬುಡಕಟ್ಟು ಹಾಗೂ ಗ್ರೇಟರ್ ನಾಗಾಲ್ಯಾಂಡಿಗೆ ಮಣಿಪುರದ ಕೆಲ ಭಾಗ ಸೇರಿಸಬೇಕೆನ್ನುವ ನಾಗಾ ಬುಡಕಟ್ಟುಗಳನ್ನು ಮೈರಾಗಳು ವಿರೋಧಿಸುತ್ತಿದ್ದರು. ಏಕೆಂದರೆ ಅವು ಮಣಿಪುರದ ಭೌಗೋಳಿಕ ಸಮಗ್ರತೆ, ಸಂಸ್ಕೃತಿಗಳಬಗ್ಗೆ ಹೇಳದೇ ತಂತಮ್ಮ ಕುಲಗಳ ಆಧಾರದ ಮೇಲೆ ಪ್ರತ್ಯೇಕ ರಾಜ್ಯ ಕೇಳುತ್ತ ಬಂಡುಕೋರ ಗುಂಪುಗಳನ್ನು ಕಟ್ಟಿಕೊಂಡಿದ್ದಾರೆಂದು ಆರೋಪಿಸುತ್ತಿದ್ದರು. ಎಂದೇ ಕುಕಿ, ಜೋಮಿ, ನಾಗಾಗಳ ಮೇಲೆ ನಡೆವ ಸೇನಾ ದೌರ್ಜನ್ಯ ಕುರಿತು ಮೈತಿಗಳ ಮೈರಾ ಪೈಬಿಗಳು ಮೌನ ತಾಳಿದ್ದರು. ಹೀಗೆ ಬುಡಕಟ್ಟುಗಳ ನಡುವಿನ ಹಿತಾಸಕ್ತಿ ಸಂಘರ್ಷ, ಭೌಗೋಳಿಕ-ಸಾಂಸ್ಕೃತಿಕ ಅಂತರಗಳು ಮೈತಿಯೇತರ ಮಹಿಳೆಯರು ಮೈರಾ ಪೈಬಿಯೊಳಗೆ ಬರದಂತೆ ಮಾಡಿತ್ತು. ಈಗ ಕೋಮುದ್ವೇಷದ ಆಧಾರದಲ್ಲಿಯೇ ರಾಜದಂಡ ಹಿಡಿಯ ಹೊರಟಿರುವ ಆಳುವವರಿಗೆ ಯಾವುದೇ ಸಂಘರ್ಷವನ್ನು ಕೋಮು ಸಂಘರ್ಷವಾಗಿ ಪರಿವರ್ತಿಸುವುದು ಸುಲಭವಾಗಿದೆ. ಮಾದಕವಸ್ತು, ಬಂಡುಕೋರ ಗುಂಪುಗಳಿಂದ ತಮ್ಮ ಯುವಜನರನ್ನು ರಕ್ಷಿಸಿಕೊಂಡ ಮೈರಾ ಪೈಬಿಗಳಿಗೆ ಈಗ ಎದುರಾದ ಸವಾಲು `ಕುಲದ ಹೆಮ್ಮೆ’, `ಧರ್ಮ ರಕ್ಷಣೆ’, `ರಾಷ್ಟ್ರಭಕ್ತಿ’ ಎಂದು ವೇಷ ಬದಲಿಸಿಕೊಂಡು ವಿರಾಟ್ ರೂಪದಲ್ಲಿ ಬೆಳೆದು ನಿಂತಿದೆ. ಅದರ ಹಿಂದಿನ ಪುರುಷ ಪ್ರಾಧಾನ್ಯ ಶಕ್ತಿಯು ತಮ್ಮ ಮೇಲೆ ಬಿಗಿಪಟ್ಟುಗಳನ್ನು ಹೇರುತ್ತಿದೆ ಎನ್ನುವುದನ್ನು ಗುರುತಿಸಲು ಅವರು ಅಸಮರ್ಥರಾಗಿದ್ದಾರೆ.

ಯಾಕೆಂದರೆ ಅವರು ಸಾಮಾಜಿಕವಾಗಿ ಜಾಗೃತರಾದರೂ ರಾಜಕೀಕರಣಗೊಂಡ ಹೆಣ್ಣುಪ್ರಜ್ಞೆಯನ್ನು ಗಳಿಸಿಕೊಳ್ಳಲಾಗಲಿಲ್ಲ. ಪಿತೃಪ್ರಾಧಾನ್ಯತೆಯ ವಿವಿಧ ಮುಖಗಳನ್ನು ಗುರುತಿಸಲಾಗಲಿಲ್ಲ. ಲೋಕದ ಹೆಣ್ಣುಗಳೊಡನೆ ತಮ್ಮನ್ನು ಗುರುತಿಸಿಕೊಳ್ಳಬೇಕೆಂಬ ಮಾಗಿದ ಬೌದ್ಧಿಕತೆಯನ್ನು ಪ್ರದರ್ಶಿಸಲಾಗಲಿಲ್ಲ. ಎಂದೇ ರಾಜ್ಯವನ್ನು ಅರಾಜಕತೆಗೆ ದೂಡಿದ ನಾಲಾಯಕ್ ಮುಖ್ಯಮಂತ್ರಿಯನ್ನು ಕೆಳಗಿಳಿಸಬೇಕಾದ ಮಹಿಳೆಯರೇ ಅವ `ತಮ್ಮವ’ನೆಂಬ ಕಾರಣಕ್ಕೆ ಅವನ ಕೈಯ ರಾಜೀನಾಮೆ ಪತ್ರ ಹರಿದು ಬಿಸುಡುವ ನಾಟಕ ಆಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ, ಮೈತಿ ಅಸ್ಮಿತೆಯನ್ನುಳಿಸಿಕೊಳ್ಳಲು ಅನ್ಯರನ್ನು ನಾಶ ಮಾಡಬೇಕೆಂಬ ವಿನಾಶಕಾರಿ ಕೋಮುಭಾವನೆಯನ್ನು `ನವ ನೂಪಿ ಲಾನ್’ ಎನ್ನಲಾಗುತ್ತಿದೆ!

ಪ್ರತಿ ವ್ಯಕ್ತಿಗೆ, ಅದರಲ್ಲೂ ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಅಸ್ಮಿತೆಗಳಿರುತ್ತವೆ. ಜಾತಿ/ಧರ್ಮ/ರಾಜಕೀಯ ಒಲವು/ಪ್ರದೇಶ/ಭಾಷೆ/ಪಕ್ಷ/ಸಂಘಟನಾ ಐಡೆಂಟಿಟಿಗಳ ಎದುರು ಹೆಣ್ಣು ತನ್ನ ಜೆಂಡರ್ ಐಡೆಂಟಿಟಿಯನ್ನು ಹಿಂದೆ ಸರಿಸುವಂತೆ ಸಮಾಜ ಮಾಡುತ್ತದೆ. ಮಾನವಪರ ಗುಂಪುಗಳೊಳಗೂ ಸಹ `ಮೂರು ಜಡೆ ಕೂಡದಿರಲಿ’ ಎಂದು ಹಾರೈಸುವ ಗಂಡು ಮನಸ್ಥಿತಿಯೇ ಮಹಿಳಾ ಒಗ್ಗೂಡುವಿಕೆಯನ್ನು ಬೇರೆಬೇರೆ ಐಡೆಂಟಿಟಿಗಳ ನೆಪದಲ್ಲಿ ಒಡೆಯುತ್ತದೆ. `ನಾವು, ಈ ಜಗದ ಹೆಣ್ಣುಗಳು, ನಾವೆಲ್ಲ ಒಂದು’ ಎನ್ನದ ಹಾಗೆ ಜಾತಿ/ಧರ್ಮ/ಉದ್ಯೋಗ/ಸಂಘಟನೆಗಳ ಗೋಡೆಗಳನ್ನು ಹೆಣ್ಣುಗಳ ನಡುವೆ ಎಬ್ಬಿಸಲಾಗುತ್ತದೆ. ಕುಕಿ ಹೆಣ್ಣುಗಳನ್ನು ಮೈತಿ ಹೆಣ್ಣುಗಳೇ ಹಿಡಿದುಕೊಟ್ಟು ಅತ್ಯಾಚಾರಕ್ಕೆ ಕಾರಣವಾಗುವ; ಬಿಲ್ಕಿಸ್ ಬಾನುವಿನ ಅತ್ಯಾಚಾರಿಗಳಿಗೆ ಅವರವರ ಮನೆಗಳ/ಕುಲಗಳ ಹೆಣ್ಣುಗಳು ಆರತಿಯೆತ್ತಿ ಸ್ವಾಗತಿಸುವ; ಖೈರ್ಲಾಂಜಿ ಹತ್ಯಾಕಾಂಡದಲ್ಲಿ ಸುರೇಖಾ ಭೋತಮಾಂಗೆಯ ಅತ್ಯಾಚಾರ/ಹತ್ಯೆಯನ್ನು ಕುಣಬಿ ಹೆಣ್ಣುಗಳು ಕೈಕಟ್ಟಿ ನೋಡುತ್ತ ಬೆಂಬಲಿಸುವ ಮತ್ತು ಇದರಂತಹ ಅಸಂಖ್ಯ ದುರದೃಷ್ಟಕರ ಅಪಸವ್ಯಗಳಿಗೆ ಇದೇ ಕಾರಣವಾಗಿದೆ. ಗಂಡುಹಿರಿಮೆಯೆಂಬ ಕೊಡಲಿಗೆ ತಾನು ಕಾವಾದರೆ ಅದು ಕೊನೆಗೆ ತನ್ನ ಬುಡವನ್ನೂ ಕಡಿಯುತ್ತದೆ ಎಂಬ ಅರಿವಿರದ `ಅ-ರಾಜಕೀಯ’ ಹೆಣ್ಣುಗಳೇ ಇವತ್ತಿನ ಸಮಾಜದಲ್ಲಿ ತುಂಬಿರುವುದರಿಂದ ಇಂತಹ ಘಟನೆಗಳು ಮತ್ತೆಮತ್ತೆ ಮರುಕಳಿಸುತ್ತಿವೆ. `ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಹುಸಿ ಗಾದೆ ಉಪ್ಪುಕಾರ ಹಚ್ಚಿಕೊಂಡು ಹರಿದಾಡುತ್ತಿದೆ.

ಆದರೆ ತನ್ನನ್ನು ತಾನೇ ಸಮಾಜ ಹೇಗಾದರೂ ಒಡೆದುಕೊಳ್ಳಲಿ, ಎಲ್ಲ ಮನುಷ್ಯರ ಪರವಾಗಿ ತಾಯಂದಿರು ಒಗ್ಗೂಡಲೇಬೇಕು. ನಮ್ಮ ಹೆಣ್ಣು ಅಸ್ಮಿತೆಯೇ ಮೊದಲು ಮತ್ತು ಮುಖ್ಯವಾಗಬೇಕು. ಆಗ ಎಲ್ಲ ಜಾತಿ, ವರ್ಗ, ಧರ್ಮ, ಉದ್ಯೋಗ, ಸಿದ್ಧಾಂತವೇ ಮೊದಲಾದ ಅಸ್ಮಿತೆಗಳ ಜೊತೆಜೊತೆಗೆ ಹೆಣ್ಣು ನ್ಯಾಯದ ಕಣ್ಣು ಹೊಂದಲು ಸಾಧ್ಯವಾಗುತ್ತದೆ. `ಅಸ್ಮಿತೆ ಪ್ರಜ್ಞೆ’ ಮತ್ತು `ಟೆರಿಟೋರಿಯಲ್ ಪ್ರಜ್ಞೆ’ಗಳೆಂಬ ಪುರುಷ ಪ್ರಜ್ಞೆಗಳನ್ನು ಮೀರಲು ಮಹಿಳೆಗೆ ಸಾಧ್ಯವಾಗುತ್ತದೆ. ಸುಳ್ಳುಸುದ್ದಿಗಳನ್ನು ನಂಬದಿರಲು, ಪ್ರಭುತ್ವದ ಪುರುಷ ಹುನ್ನಾರಗಳನ್ನರಿಯಲು, ಮನುಷ್ಯ ಮನಸ್ಸುಗಳನ್ನು ಸಂಕುಚಿಸುವ ಎಲ್ಲವನ್ನು ಮೀರಿದ ನ್ಯಾಯಸೂಕ್ಷ್ಮವನ್ನು ಸ್ತ್ರೀಪುರುಷರೆಲ್ಲರಲ್ಲಿ ಉದ್ದೀಪಿಸಲು ಸಾಧ್ಯವಾಗುತ್ತದೆ.

ಗಾಯವಾದರೆ ಎಲ್ಲ ಮನುಷ್ಯರಿಗೂ ಬರುವುದು ಹನಿ ಕಣ್ಣೀರು ಮತ್ತು ಒಸರುವುದು ಕೆಂಪು ರಕ್ತ. ನೊಂದವರೆಲ್ಲ ಒಂದುಗೂಡಲು ಈ ನೋವೇ ನೆಲೆಯಾಗಬೇಕು. ಮೈತಿ, ಕುಕಿ, ಜೋಮಿ, ನಾಗಾ ಎಂದು ಈಶಾನ್ಯದ ಸೋದರ, ಸೋದರಿಯರು ಒಡೆದು ಹೋಗದಿರಲು ಅಸ್ಮಿತೆಗಳಾಚೆಗಿನ ಮಾನವೀಯತೆ ಅರಳಬೇಕು. ಇದು ಸಾಧ್ಯವೋ ಅಸಾಧ್ಯವೋ ಗೊತ್ತಿಲ್ಲ ಮಣಿಪುರವೇ, ಇದು ನಮ್ಮ ಮನದಾಳದ ಪ್ರಾರ್ಥನೆ. ಹಾಗಾದಲ್ಲಿ ಮಾತ್ರ ಅಗ್ನಿಕುಂಡವಾಗಿರುವ ಈಶಾನ್ಯದ ನೆಲವು ಹೂದೋಟವಾಗಿ ನಳನಳಿಸಲು ಸಾಧ್ಯವಿದೆ.

ಹೌದು. ನಮಗಿನ್ನೂ ಭರವಸೆಗಳಿವೆ. ಮೇ 4ರಂದು ಚುರಾಚಾಂದಪುರದಲ್ಲಿದ್ದ ಮೈತಿಗಳು ಸುರಕ್ಷಿತ ಸ್ಥಳಗಳಿಗೆ ಹೊರಟಾಗ ಅವರನ್ನು ಕರೆದೊಯ್ಯುತ್ತಿದ್ದ ಸೇನಾವಾಹನಕ್ಕೆ ಬೆಂಬಲವಾಗಿ, ಹಿಂದಿನಿಂದ ಬರುತ್ತಿರುವ ಬಂಡುಕೋರ ಗುಂಪು ಅವರನ್ನು ತಡೆಯದಂತೆ ಜೋಮಿ ಮಹಿಳೆಯರು ಮಾನವ ಸರಪಳಿ ನಿರ್ಮಿಸಿ ಕಳಿಸಿಕೊಟ್ಟರು. ಬದುಕುಳಿದು ಬಂದ ಕೆಲ ಕುಕಿಗಳು ಹೇಳುತ್ತಿರುವಂತೆ ನಾಗಾ, ಪಂಗಲ್, ಮೈತಿಗಳೂ ಸಹಾ ಕೆಲವು ಕುಕಿ ಕುಟುಂಬಗಳಿಗೆ ಆಶ್ರಯ ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಮತ್ತೆ ಕೆಲವರು ರಿಸ್ಕ್ ತೆಗೆದುಕೊಂಡು ತಪ್ಪಿಸಿಕೊಂಡು ಹೋಗಲು, ಅಡಗಿಕೊಳ್ಳಲು ಸಹಾಯ ಮಾಡಿದ್ದಾರೆ. ಬತ್ತಲಾದ ಹೆಣ್ಣುಗಳನ್ನು ಗುಂಪು ಹಿಂಸಿಸುತ್ತಿದ್ದ ಆ ಭಯಾನಕ ವೀಡಿಯೋಗೆ ಜುಲೈ 20ರಂದು ಕೆಲವು ಮೈರಾ ಪೈಬಿ ಮಹಿಳೆಯರು ಪ್ರತಿಕ್ರಿಯಿಸಿ ಖಂಡಿಸಿದ್ದಾರೆ. `ಯಾರೋ ರೋಗಗ್ರಸ್ತ ಕ್ರಿಮಿನಲ್ಲುಗಳ ಹೇಯಕೃತ್ಯವು ಅವರ ಸಮುದಾಯದ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ. ಅದು ಅತಿ ಹೇಯ ಮತ್ತು ಪೈಶಾಚಿಕ ಕೃತ್ಯ. ಮೈತಿ ಸಮುದಾಯವು ಮಹಿಳೆಯರನ್ನು ಅತ್ಯಂತ ಗೌರವದಿಂದ ನೋಡುತ್ತದೆ. ಅತ್ಯಾಚಾರಿಗಳ ಕುಲ ಯಾವುದೇ ಆಗಿರಲಿ, ಅಂತಹ ಪ್ರಾಣಿಸದೃಶ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಲಿ. ಅವರಿಗೆ ನ್ಯಾಯ ಸಿಗಬೇಕೆನ್ನುವುದರಲ್ಲಿ ರಾಜಿಯೇ ಇಲ್ಲ’ ಎಂದು ಇಮಾ ಲೈರಿಕ್ಲಿಯೆಮಾ ಎಂಬ ಮಹಿಳೆ ಮಾಧ್ಯಮದೆದುರು ಹೇಳಿದ್ದಾರೆ. `ಅದು ಒಪ್ಪಲು ಅಸಾಧ್ಯವಾದ ಹೀನ ಕೃತ್ಯ. ನಮ್ಮ ಇಡೀ ಸಮುದಾಯವೇ ನ್ಯಾಯಕ್ಕಾಗಿ ಆಗ್ರಹಿಸುತ್ತದೆ’ ಎಂದು ಆರ್. ಕೆ. ತರಕ್ಸಾನಾ ಎಂಬ ಮೈರಾ ನಾಯಕಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ದುರದೃಷ್ಟವೆಂದರೆ ಭರವಸೆಗಳು ಎಂದೂ `ವೈರಲ್’ ಆಗದೇ ಮರೆಯಲ್ಲೇ ನಿಲ್ಲುತ್ತವೆ.

ಆದರೆ ನಮಗಿನ್ನೂ ಭರವಸೆಗಳಿವೆ. ಮನುಷ್ಯರ ಇತಿಹಾಸದಲ್ಲಿ ಬಿಕ್ಕಟ್ಟುಗಳ ಕಾಲದಲ್ಲೇ ಅವರ ಒಳ್ಳೆಯತನ ಹೊರಬಂದಿದೆ. ದೊಡ್ಡ ಮಿದುಳಿನ ಮನುಷ್ಯರ ಚಿಂತನೆಯಲ್ಲಿ ಸಹಕಾರ-ಸಹಬಾಳ್ವೆಯೇ ಮೂಲವಾಗಿದೆ. ಅವರು ಗುಂಪಾಗಿ ಜೀವಿಸಲಿಕ್ಕೆ, ಗುಂಪಿಗೆ ಹಿತವಾಗುವಂತೆ ನಡೆದುಕೊಳ್ಳಲಿಕ್ಕೆ ಸೃಷ್ಟಿಯಾಗಿದ್ದಾರೆ. ಬರಬರುತ್ತ ಸ್ವಮೋಹದಿಂದ ಖಾಸಗಿತನ, ಕೇಡು ಎದ್ದು ಕಾಣುವಂತೆ ಆಗಿದ್ದರೂ ಆಳದಲ್ಲಿ ಮನುಷ್ಯರು ಉದಾತ್ತತೆ, ಸಹಬಾಳ್ವೆಯನ್ನೇ ಮೂಲಗುಣವಾಗಿ ಹೊಂದಿದ್ದಾರೆ.

ಮತ್ತು,

ಹೆಣ್ಣು ಮತ್ತು ಹಿಂಸೆ ವಿರುದ್ಧ ಪದಗಳು. ನಾವೇನಿದ್ದರೂ ಪ್ರೇಮಿಸುವವರು, ಪ್ರಶ್ನಿಸುವವರು, ಪೊರೆಯುವವರು. ಇದು ಎಲ್ಲ ಮಹಿಳೆಯರ ಕಣ್ಣರಿವಾಗಲಿ. ನೊಂದವರಿಗೆಲ್ಲ ಒಂದು ಹೆಣ್ಣು ಮನವು ಆಸರೆಯಾಗಿ ದೊರೆಯಲಿ. ಲೋಕವೇ ಹೆಣ್ಣಾಗಲಿ. ಮನದ ತಾವರೆಗಳು ಅರಳಲಿ. ಓಂ ಮಣಿ ಪದ್ಮಯೇ..

ಡಾ. ಎಚ್. ಎಸ್. ಅನುಪಮಾ

ವೈದ್ಯರು, ಲೇಖಕರು

ಇದನ್ನೂ ಓದಿ-‘ಸಂಭ್ರಮ ಇದೆ, ಆದರೆ ‘ಸ್ವಾತಂತ್ರ್ಯ’ ಎಲ್ಲಿದೆ?!

Related Articles

ಇತ್ತೀಚಿನ ಸುದ್ದಿಗಳು