Thursday, June 13, 2024

ಸತ್ಯ | ನ್ಯಾಯ |ಧರ್ಮ

ಮಣಿಪುರದಿಂದ ಮುಂಬೈಗೆ ರಾಹುಲ್‌ ‘ಭಾರತ್ ನ್ಯಾಯ ಯಾತ್ರೆ’

ಬೆಂಗಳೂರು: ಭಾರತ್ ಜೋಡೋ ಯಾತ್ರೆಯಂತೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈಶಾನ್ಯ ರಾಜ್ಯ ಮಣಿಪುರದಿಂದ ಪ್ರಚಾರ ಕಾರ್ಯವನ್ನು ಆರಂಭಿಸಲಿದ್ದಾರೆ. ಜನವರಿ 14 ರಂದು ಗಾಂಧಿ ಈ ಯಾತ್ರೆಗೆ ಚಾಲನೆ ನೀಡಲಿದ್ದು, ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಬುಧವಾರ ತಿಳಿಸಿದ್ದಾರೆ.

ಡಿಸೆಂಬರ್ 21 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಾಹುಲ್ ಗಾಂಧಿವರು ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಯನ್ನು ಪ್ರಾರಂಭಿಸಬೇಕು ಎಂಬ ಸರ್ವಾನುಮತದ ಅಭಿಪ್ರಾಯ ವ್ಯಕ್ತವಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ ಇದಕ್ಕೆ ‘ಭಾರತ್ ನ್ಯಾಯ ಯಾತ್ರೆ’ ಎಂದು ಹೆಸರಿಟ್ಟಿದ್ದು, ಜನವರಿ 14 ರಿಂದ ಮಾರ್ಚ್ 20 ರವರೆಗೆ, ಮಣಿಪುರದಿಂದ ಮುಂಬೈ ತನಕ ಈ ಯಾತ್ರೆ ನಡೆಯಲಿದೆ. ಭಾರತ್ ಜೋಡೋ ಯಾತ್ರೆಗಿಂತ ಭಿನ್ನವಾಗಿ, ಈ ಯಾತ್ರೆಯನ್ನು ಬಸ್‌ನಲ್ಲಿ ಕೈಗೊಳ್ಳಲಾಗುತ್ತದೆ

14 ರಾಜ್ಯಗಳು ಮತ್ತು 85 ಜಿಲ್ಲೆಗಳಲ್ಲಿ 65 ದಿನಗಳ ಪಾದಯಾತ್ರೆಯಲಿದ್ದು, ರಾಹುಲ್ ಗಾಂಧಿಯವರು 6,200 ಕಿಮೀ ದೂರವನ್ನು ಕ್ರಮಿಸಲಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ಈ ಯಾತ್ರೆ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆಯಲಿದೆ.

“ಈ ಯಾತ್ರೆಯಲ್ಲಿ, ರಾಹುಲ್ ಗಾಂಧಿ ಅವರು ಯುವಕರು, ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಜನತೆಯೊಂದಿಗೆ ಸಂವಾದ ನಡೆಸಲಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಬಸ್ ಯಾತ್ರೆಯಿಂದ ಯಾತ್ರೆಯ ಹಾದಿಯಲ್ಲಿ ಹೆಚ್ಚಿನ ಜನರಿಗೆ ಭಾಗವಹಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಡಿಗೆ ಕೂಡ ನಡೆಯಲಿದೆ,” ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 6 ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು 150 ದಿನಗಳ ಕಾಲ 4500 ಕಿಮೀ ಕ್ರಮಿಸಿ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಪೂರ್ಣಗೊಳಿಸಿದ್ದರು. ಕಾಂಗ್ರೆಸ್ ಪಕ್ಷದ ನಾಯಕರು ಮತ್ತೊಂದು ಯಾತ್ರೆ ಕೈಗೊಳ್ಳುವಂತೆ ಗಾಂಧಿಯವರಿಗೆ ಮನವಿ ಮಾಡುತ್ತಿದ್ದರು. ಡಿಸೆಂಬರ್ 21 ರಂದು ನಡೆದ ವರ್ಷದ ಕೊನೆಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಲಲಾಗಿದೆ.  

Related Articles

ಇತ್ತೀಚಿನ ಸುದ್ದಿಗಳು