Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಣಿಪುರ: ಲೈಂಗಿಕ ಹಿಂಸಾಚಾರದ ವಿಷಯದಲ್ಲಿ ಮಹಿಳೆಯರೂ ಶಾಮೀಲು, ಸಂತ್ರಸ್ಥೆಯ ಹೇಳಿಕೆ

ಮಹಿಳೆಯರ ಮೇಲಿನ ಲೈಂಗಿಕ ದಾಳಿಗೆ ಸಂಬಂಧಿಸಿದ ವೀಡಿಯೊಗಳು ಹೊರಬಂದ ನಂತರ, ಮಣಿಪುರದ ಭಯಾನಕ ಪರಿಸ್ಥಿತಿಯ ಕುರಿತು ಹಲವು ಪುರಾವೆಗಳು ಮುನ್ನೆಲೆಗೆ ಬರುತ್ತಿವೆ.

ಮಣಿಪುರ ಗಲಭೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 19 ವರ್ಷದ ಯುವತಿಯೊಬ್ಬರು ಇಂಗ್ಲಿಷ್ ಪತ್ರಿಕೆ ‘ದಿ ಟೆಲಿಗ್ರಾಫ್’ಗೆ ದಾಳಿಯ ಬಗ್ಗೆ ಮತ್ತು ದಾಳಿಕೋರರ ಕ್ರೌರ್ಯದ ಕುರಿತು ಮಾತನಾಡಿದ್ದಾರೆ.

ಇಂತಹ ನೂರಾರು ಪ್ರಕರಣಗಳು ನಡೆದಿವೆ ಎಂದು ಮಣಿಪುರದ ಮುಖ್ಯಮಂತ್ರಿ ಎಸ್.ಬಿರೇನ್ ಸಿಂಗ್ ಹೇಳಿದ ಕೆಲವೇ ಗಂಟೆಗಳ ನಂತರ, ಅದಕ್ಕೆ ಸಾಕ್ಷಿಯೆಂಬಂತೆ ಈ ಯುವತಿ ತನ್ನ ಮತ್ತು ಇತರ ಕೆಲವು ಮಹಿಳೆಯರ ಮೇಲೆ ನಡೆದ ಈ ಭಯಾನಕ ಚಿತ್ರಹಿಂಸೆಯ ಕಥೆಯನ್ನು ವಿವರಿಸಿದ್ದಾರೆ.

ಮುಖ್ಯಮಂತ್ರಿಯ ಬಳಿ ಇಬ್ಬರು ಸ್ತ್ರೀಯರನ್ನು ಬೆತ್ತಲೆ ಓಡಿಸಿದ ಮತ್ತು ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ವಿಷಯದ ಕುರಿತು ಕೇಳಿದಾಗ ಅವರು ಮೇಲಿನ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದರು.

ತಾನು ಮಣಿಪುರದ ಹೆಲ್ತ್‌ ಕೇರ್‌ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಯಾಗಿದ್ದು ನನ್ನ ಮೇಲೆ ಮೇ 4ರಂದು ಮೈತೇಯಿ ಸಮುದಾಯದ ಜನರ ಗುಂಪು ಹಲ್ಲೆ ನಡೆಸಿದೆ ಎಂದು ಯುವತಿ ದಿ ಟೆಲಿಗ್ರಾಫ್‌ ಪತ್ರಿಕೆಗೆ ತಿಳಿಸಿದ್ದಾರೆ.

ಇಂತಹ ಘೋರ ಅಪರಾಧಗಳಿಗೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲವೆಂದುದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಗುರುವಾರ ಹೇಳಿದ್ದಾರೆ “ಆದರೆ ಗುರುವಾರ ವೈರಲ್‌ ಆದ ವಿಡಿಯೋ ನೋಡಿದ ಮೇಲೂ ಅವರಿಗೆ ಹೀಗೆ ಹೇಳಲು ಮನಸ್ಸು ಹೇಗೆ ಬಂತು?” ಎಂದು ಯುವತಿ ಟೆಲಿಗ್ರಾಫ್‌ ಪತ್ರಿಕೆಗೆ ಕೇಳಿದ್ದಾರೆ.

“ಮಹಿಳೆಯರು ಒಂದು ಜನಾಂಗೀಯ ಗುಂಪಿಗೆ ಸೇರಿದವರು ಎಂಬ ಕಾರಣಕ್ಕೆ ಅವರ ಮೇಲೆ ಇಂತಹ ದಾಳಿಗಳು ನಡೆಯುತ್ತಿವೆಯೆನ್ನುವುದನ್ನು ನಂಬಲು ಮುಖ್ಯಮಂತ್ರಿ ಇನ್ನೂ ಎಷ್ಟು ವೀಡಿಯೊಗಳಿಗಾಗಿ ಕಾಯುತ್ತಾರೆ?” ಎಂದು 19 ವರ್ಷದ ಈ ಯುವತಿ ಕೇಳಿದರು.

“ಮುಖ್ಯಮಂತ್ರಿಗಳ ಇಂದಿನ (ಗುರುವಾರ) ಮಾತಿಗೆ ಯಾವುದೇ ಅರ್ಥವಿಲ್ಲ, ಏಕೆಂದರೆ FIR ದಾಖಲಾಗಿ 65 ದಿನಗಳು ಕಳೆದಿವೆ. ಆದರೆ ನನಗೆ ಈಗಲೂ ನ್ಯಾಯ ದೊರೆತಿಲ್ಲ”

“ಪ್ರಸ್ತುತ FIR ನಲ್ಲಿ ಮೇ 4ರ ಸಂಜೆ 150 ಜನರಿದ್ದ ಶಸ್ತ್ರಸಜ್ಜಿತ ಗಂಡಸರು ಮತ್ತು ಹೆಂಗಸರ ಗುಂಪು ನನ್ನ ಸಂಸ್ಥೆಯ ಮೇಲೆ ಹೇಗೆ ದಾಳಿ ಮಾಡಿತು ಮತ್ತು ಅವರು ನನ್ನನ್ನು ಹೇಗೆ ಗುರಿ ಮಾಡಿಕೊಂಡರು ಎನ್ನುವುದನ್ನು ವಿವರವಾಗಿ ತಿಳಿಸಿದ್ದೇನೆ.”

“ನಾನು ಈ ಹಿಂದೆ ಜೀರೋ FIR ದಾಖಲಿಸಿದ್ದೆ. (ಇದರಡಿ ಯಾವುದೇ ಠಾಣೆಯಲ್ಲಿ ಬೇಕಿದ್ದರೂ ದೂರು ನೀಡಬಹುದು. ಘಟನೆ ನಡೆದ ಠಾಣಾ ವ್ಯಾಪ್ತಿಯಲ್ಲೇ ನೀಡಬೇಕೆಂದಿಲ್ಲ.) ಮಣಿಪುರದಲ್ಲಿ ಚಿಕಿತ್ಸೆ ಪಡೆದ ನಂತರ ದೆಹಲಿಯ ಉತ್ತಮ ನಗರ ಪೊಲೀಸ್‌ ಠಾಣೆಯಲ್ಲಿಯೂ FIR ದಾಖಲಿಸಿದ್ದೇನೆ ಎಂದು ಯುವತಿ ಹೇಳಿದರು.

ಆಕೆ ಮಣಿಪುರಕ್ಕೆ ತರಳಿದ ನಂತರ ಚುರಾಚಾಂದ್‌ಪುರದಲ್ಲಿ ಮೇ 30ನೇ ತಾರೀಖನಿಂದು ಮತ್ತೊಂದು ಶೂನ್ಯ FIR ಕೂಡಾ ದಾಖಲಿಸಿದ್ದಾರೆ.

ಆಕೆ ನೀಡಿದ ವಿವರಗಳ ಪ್ರಕಾರ FIR ನಲ್ಲಿ ಆಯುಧಗಳಿಂದ ಹಲ್ಲೆ, ಮಹಿಳೆಯ ಅಪಮಾನ, ಅಪಹರಣ ಮತ್ತು ಕೊಲೆಯ ಆರೋಪಗಳನ್ನು ದಾಖಲಿಸಲಾಗಿದೆ.

ಅವರು ಹೇಳುವಂತೆ “ಈ FIRಗಳನ್ನು ನಂತರ ಸಂಬಂಧಿತ ಠಾಣೆಗಳಿಗೆ ಕಳುಹಿಸಲಾಗಿತ್ತು.”

“ನಾನು ಹಲವಾರು ದಿನ ಚಿಕಿತ್ಸೆ ಪಡೆಯುತ್ತಾ ಇಂಫಾಲದ ಆಸ್ಪತ್ರೆಯೊಂದರಲ್ಲಿ ಮಲಗಿದ್ದೆ. ಆದರೆ ಅಲ್ಲೇ ಪಕ್ಕದಲ್ಲಿದ್ದ ಇಂಫಾಲ ಪೊಲೀಸ್‌ ಠಾಣೆಯ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿರಲಿಲ್ಲ.” ಎನ್ನುತ್ತಾರೆ.

ಈಗ ಪೊಲೀಸರು ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ ಎನ್ನುವ ಮುಖ್ಯ ಮಂತ್ರಿಗಳ ಮಾತಿನ ಅರ್ಥವೇನೆಂದು ನನಗೆ ತಿಳಿಯುತ್ತಿಲ್ಲ ಎನ್ನುತ್ತಾರೆ ಯುವತಿ.

ಮೇ 4ರಂದು ನನ್ನ ಮೇಲೆ ಎಸಗಲಾದ ಕಳಂಕವನ್ನು ನಾನು ಈಗಲೂ ಹೊರುತ್ತಿದ್ದೇನೆ. ನಮ್ಮ ಸಂಸ್ಥೆಯನ್ನು ಪ್ರವೇಶಿಸಿದ ದಾಳಿಕೋರರು ಗುರುತಿನ ಚೀಟಿಗಳನ್ನು ನೋಡುವ ಮೂಲಕ ಕುಕಿ ವಿದ್ಯಾರ್ಥಿಗಳನ್ನು ಹುಡುಕಿ ಹುಡುಕಿ ತಮ್ಮ ಕ್ರೌರ್ಯಕ್ಕೆ ಅವರನ್ನು ಗುರಿಯಾಗಿಸಿದ್ದಾರೆ. ಹಾಸ್ಟೆಲ್ಲಿನಲ್ಲಿ ಸುಮಾರು 90 ವಿದ್ಯಾರ್ಥಿಗಳಿದ್ದರು.

ಅಲ್ಲಿ ನಾವು ಒಟ್ಟು ಹತ್ತು ಮಂದಿಯಿದ್ದೆವು. ಇಬ್ಬರನ್ನು ಪೊಲೀಸರು ರಕ್ಷಿಸಿದರೆ ಆರು ಜನ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ನಾನು ಮತ್ತು ನನ್ನ ಸ್ನೇಹಿತನನ್ನು ಗುರುತಿಸಿದ ಅವರು ನಮ್ಮನ್ನು ಹಿಡಿದುಕೊಂಡರು.‌ ನಮ್ಮನ್ನು ಅಂದು ಹಿಡಿದವರು ಅರಾಂಬಾಯಿ ತೆಂಗೋಲ್‌ ಮತ್ತು ಮೈತೇಯೀ ಲಿಪುನ್ (ಮೈತೇಯಿ ಯುವಕರ ಉಗ್ರಗಾಮಿ ಗುಂಪು) ಸಂಘಟನೆಯ ಯುವಕರು ಮತ್ತು ಮಹಿಳೆಯರು. ನಂತರ ಅವರು ನಮ್ಮನ್ನು ವಶಕ್ಕೆ ತೆಗೆದುಕೊಂಡರು.

ʼಅರ್ಧ ಗಂಟೆ ಕಾಲ ಫುಟ್‌ ಬಾಲ್‌ ಒದ್ದಂತೆ ಒದೆಯಲಾಯಿತುʼ

“ಅರ್ಧ ಗಂಟೆಗೂ ಹೆಚ್ಚು ಸಮಯ ಅವರು ನಮ್ಮನ್ನು ಫುಟ್‌ ಬಾಲ್‌ ಒದೆಯುವಂತೆ ಅತ್ತಿಂದಿತ್ತ ಒದ್ದರು. ಇನ್ನೂ ಕೆಲವರು ದೂರದಿಂದ ಓಡಿ ಬಂದು ನಮ್ಮ ಮೇಲೆ ಜಿಗಿಯುತ್ತಿದ್ದರು. ಆ ಹಿಂಸೆಯನ್ನು ವಿವರಿಸಲು ಈಗ ನನ್ನ ಬಳಿ ಶಬ್ದಗಳಿಲ್ಲ” ಎನ್ನುತ್ತಾರೆ ನೊಂದ ಧ್ವನಿಯಲ್ಲಿ.

“ನಮ್ಮ ಮೇಲೆ ಈ ರೀತಿಯಲ್ಲಿ ಕ್ರೌರ್ಯ ನಡೆಯುತ್ತಿರುವಾಗ ಸಂತೋಷದಿಂದ ಕೂಗುತ್ತಿದ್ದ ಮಹಿಳೆಯರ ದನಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮನ್ನು ಕೊಲ್ಲುವಂತೆ ಅಲ್ಲಿದ್ದ ಯುವಕರನ್ನು ಪ್ರಚೋದಿಸುತ್ತಿದ್ದರು.”

“ನನಗೆ ಪ್ರಜ್ಞೆ ತಪ್ಪುವ ಮೊದಲು ಅವರು ನಾನು ಸತ್ತಿರಬಹುದೇ ಎಂದು ಅವರು ಕೇಳುತ್ತಿರುವುದು ನನಗೆ ಕೇಳಿಸುತ್ತಿತ್ತು. ಬಹುಶಃ ಅವರು ನಾನು ಸತ್ತಿರಬಹುದೆಂದು ಭಾವಿಸಿ ಹೊರಟುಹೋಗಿದ್ದಾರೆ.”

“ಪ್ರಜ್ಞೆ ಮರಳಿದಾಗ ನಾನು ಇಂಫಾಲದ ಜವಾಹರಲಾಲ್ ನೆಹರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಂಸ್ಥೆಯ ICU ನಲ್ಲಿದ್ದೆ. ಪೊಲೀಸರು ಎತ್ತಿಕೊಂಡು ಬಂದು ನನ್ನನ್ನು ಅಲ್ಲಿಗೆ ಸೇರಿಸಿದ್ದಾಗಿ ನನಗೆ ತಿಳಿಸಲಾಯಿತು.” ಎಂದು ಅವರು ತಿಳಿಸಿದರು.

“ನಂತರ ನನ್ನ ಕೆಲವು ಸ್ನೇಹಿತರು ಮತ್ತು ಕುಟುಂಬ ಸದಸ್ಯರು ನನ್ನನ್ನು ದೆಹಲಿ ಏಮ್ಸ್‌ ಆಸ್ಪತ್ರೆಗೆ ಕರೆತಂದರು.”

“ಈಗ ನನಗೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಆಕಾಂಕ್ಷೆಯೇ ಹೊರಟುಹೋಗಿದೆ” ಎಂದು ಆಕೆ ನೋವಿನಿಂದ ಹೇಳುತ್ತಾರೆ.

“ಚುರಾಚಾಂದ್ಪುರದಲ್ಲಿ ನೀವು ನನ್ನಂತಹ ನೂರಾರು ಸಂತ್ರಸ್ಥ ಮಹಿಳೆಯರನ್ನು ಕಾಣಬಹುದು. ಈ ಮಹಿಳೆಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಅವರ ಯೋಜನೆ ಮೇ 3ರಿಂದ ಪ್ರಾರಂಭವಾಯಿತು. ಇಂತಹ ದಾಳಿಗಳು ಈಗಲೂ ನಡೆಯುತ್ತಿರುವುದನ್ನು ನಾವು ಕೇಳುತ್ತಿದ್ದೇವೆ. ಆದರೆ ಅವುಗಳ ಸಂಖ್ಯೆಯಲ್ಲಿ ಒಂದಷ್ಟು ಇಳಿಮುಖವಾಗಿದೆ ಅಷ್ಟೇ.”

‘ಮುಖ್ಯಮಂತ್ರಿಯಿಂದ ಹೆಚ್ಚಿನ ನಿರೀಕ್ಷೆಗಳಿಲ್ಲ’

“ನನಗೆ ಈಗ ಮುಖ್ಯಮಂತ್ರಿಯಿಂದ ಯಾವ ನಿರೀಕ್ಷೆಯೂ ಇಲ್ಲ” ಅವರು ಹೇಳಿದರು.

“ಆದರೆ ಅವರಿಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಆರೋಗ್ಯ ಸೇವೆಯ ವಿದ್ಯಾರ್ಥಿಗಳಾಗಿ, ಧರ್ಮ, ಜಾತಿ ಅಥವಾ ಇತರ ಮಾನದಂಡಗಳ ಆಧಾರದ ಮೇಲೆ ರೋಗಿಗಳ ವಿಷಯದಲ್ಲಿ ತಾರತಮ್ಯ ಮಾಡಬಾರದು ಎಂದು ನಮಗೆ ಕಲಿಸಲಾಗಿದೆ. ಧರ್ಮ, ಜನಾಂಗೀಯ ಗುಂಪು ಅಥವಾ ಜಾತಿಯನ್ನು ಲೆಕ್ಕಿಸದೆ ಎಲ್ಲಾ ಮಣಿಪುರಿಗಳಿಗೆ ಸೇವೆ ಸಲ್ಲಿಸುವುದಾಗಿ ಮುಖ್ಯಮಂತ್ರಿಗಳು ಪ್ರತಿಜ್ಞೆ ಸ್ವೀಕರಿಸಿದ್ದಾರೆಯೋ ಇಲ್ಲವೋ?

“ಸ್ವೀಕರಿಸಿದ್ದಲ್ಲಿ ಅವರು ಈ ಪ್ರತಿಜ್ಞೆಯ ಮರ್ಯಾದೆಯನ್ನು ಉಳಿಸಿದ್ದಾರೆಯೇ?”

ಈ ರೀತಿ ಹಲ್ಲೆಗೊಳಗಾದ ಮತ್ತು ಅವಮಾನಕ್ಕೊಳಗಾದ ಎಲ್ಲಾ ಮಹಿಳೆಯರಿಗೆ ಈ ವಿಷಯದಲ್ಲಿ ಅವರು ಉತ್ತರ ನೀಡಲೇಬೇಕು.”

(ಮೂಲ: BBC)

Related Articles

ಇತ್ತೀಚಿನ ಸುದ್ದಿಗಳು