Home ದೆಹಲಿ ಮೋದಿ ಮತ್ತು ಅಮಿತ್ ಶಾ ಹೆಸರು ಕೇಳಿದರೆ ನಾವು ಹೆದರಿ ನಡುಗುತ್ತಿದ್ದೆವು, ಇಂದು ನೀವು ಅವರನ್ನೇ...

ಮೋದಿ ಮತ್ತು ಅಮಿತ್ ಶಾ ಹೆಸರು ಕೇಳಿದರೆ ನಾವು ಹೆದರಿ ನಡುಗುತ್ತಿದ್ದೆವು, ಇಂದು ನೀವು ಅವರನ್ನೇ ನಡುಗಿಸಿದ್ದೀರಿ: ಸಿಜೆಪಿ ವೇದಿಕೆಯಲ್ಲಿ ಮಣಿಶಂಕರ್ ಅಯ್ಯರ್

0

ದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಚಳವಳಿಯಲ್ಲಿ ಭಾಗವಹಿಸಿದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಈ ಹೋರಾಟವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಸರ್ಕಾರದೊಂದಿಗಿನ ಮಾತುಕತೆಯಿಂದ ಧನಾತ್ಮಕ ಫಲಿತಾಂಶ ಬರಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಸಿಜೆಪಿ ವೇದಿಕೆಯಲ್ಲಿ ಮಾತನಾಡಿದ ಮಣಿಶಂಕರ್ ಅಯ್ಯರ್, “ಇಂದು ಇಲ್ಲಿರುವ ಯುವಜನರು ಕೇವಲ ವಿದ್ಯಾರ್ಥಿಗಳಲ್ಲ, ಅವರು ಇಡೀ ದೇಶಕ್ಕೆ ಒಂದು ಪಾಠ ಕಲಿಸುತ್ತಿದ್ದಾರೆ. ಅದೇನೆಂದರೆ ನಿರ್ಭಯರಾಗಿರಿ ಎಂಬುದು. ನಮ್ಮ ಪೀಳಿಗೆಯು ತೀವ್ರ ಭಯದಲ್ಲೇ ಬದುಕಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹೆಸರು ಕೇಳಿದರೆ ನಾವೆಲ್ಲವೂ ನಡುಗುತ್ತಿದ್ದೆವು.

ನಾವು ಧ್ವನಿ ಎತ್ತಿದರೆ ನಮ್ಮ ಗತಿಯೇನು, ಮುಂದಿನ ವಿಳಾಸ ತಿಹಾರ್ ಜೈಲಾಗಲಿದೆಯೇ ಎಂಬ ಅನುಮಾನ ನಮ್ಮಲ್ಲಿ ಮೂಡುತ್ತಿತ್ತು. ನಾವು ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರನ್ನು ನೋಡಿದ್ದೇವೆ. ಅವರನ್ನು ವರ್ಷಗಳಿಂದ ಜೈಲಿನಲ್ಲಿಡಲಾಗಿದೆ. ಇಷ್ಟೊಂದು ವರ್ಷಗಳ ನಂತರವೂ ಅವರ ಮೇಲಿರುವ ಆರೋಪಗಳೇನು ಎಂಬುದನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ” ಎಂದರು.

ನೀವು ಭಯವಿಲ್ಲದವರು – ಮಣಿಶಂಕರ್ ಅಯ್ಯರ್

ಮಾತು ಮುಂದುವರಿಸಿದ ಕಾಂಗ್ರೆಸ್ ನಾಯಕ, “ಅಂತಹ ಪರಿಸ್ಥಿತಿಯಲ್ಲಿ ನಾವು ಹೆದರಿದ್ದೆವು. ನಾನು ನನ್ನ ಧ್ವನಿಯನ್ನು ಎತ್ತಲು ಪ್ರಯತ್ನಿಸಿದಾಗಲೂ ಒಳಗಿನಿಂದ ಭಯವಿತ್ತು. ಆದರೆ ಇಂದು ನೀವು ಯಾವುದೇ ಭಯವಿಲ್ಲದೆ ಹೋರಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಧೈರ್ಯದ ಪಾಠವನ್ನು ಕಲಿಯಲು ನಾವು ಇಂದು ಇಲ್ಲಿಗೆ ಬಂದಿದ್ದೇವೆ. ನೀವು ನಿರ್ಭಯರಾಗಿದ್ದೀರಿ ಮತ್ತು ಈ ದೇಶವೂ ನಿರ್ಭಯವಾಗಬೇಕಿದೆ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಣಿಶಂಕರ್ ಅಯ್ಯರ್ ಪತ್ನಿ ಭಾಗಿ

ಮಣಿಶಂಕರ್ ಅಯ್ಯರ್ ಅವರ ಪತ್ನಿ ಸುನೀತ್ ಮಣಿ ಅಯ್ಯರ್ ಕೂಡ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿದ ಅವರು, ಶಾಂತಿಯುತ ಮಾತುಕತೆಗೆ ಕರೆ ನೀಡಿದರು. “ಮಕ್ಕಳು, ವಿದ್ಯಾರ್ಥಿಗಳು, ಕಾರ್ಮಿಕರು ಅಥವಾ ರೈತರು ಯಾರೇ ಇರಲಿ, ಕಲ್ಲು ತೂರಾಟ ಅಥವಾ ಹಿಂಸಾಚಾರ ನಡೆಯಬಾರದು. ಇದೊಂದು ಶಾಂತಿಯುತ ಪ್ರತಿಭಟನೆಯಾಗಿದೆ. ನಾವು ಇಲ್ಲಿ ಜನರ ಧ್ವನಿಯನ್ನು ಕೇಳಲು ಮತ್ತು ನಮ್ಮ ಧ್ವನಿಯನ್ನು ಅದಕ್ಕೆ ಸೇರಿಸಲು ಬಂದಿದ್ದೇವೆ” ಎಂದು ತಿಳಿಸಿದರು.

ಸಿಜೆಪಿ ಪ್ರತಿನಿಧಿಗಳು ಹಾಗೂ ಕೇಂದ್ರ ಸಚಿವರ ನಡುವೆ ನಡೆದ ಮಾತುಕತೆಯನ್ನು ಸ್ವಾಗತಿಸಿದ ಅವರು, “ಮಾತುಕತೆ ನಡೆಸುವುದು ಒಳ್ಳೆಯ ಸಂಗತಿ. ಸಮಸ್ಯೆಗಳನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳಬಹುದೇ ಹೊರತು ಕಲ್ಲುಗಳಿಂದ ಅಥವಾ ಲಾಠಿಗಳಿಂದಲ್ಲ” ಎಂದು ಹೇಳಿದರು.

You cannot copy content of this page

Exit mobile version