Tuesday, December 24, 2024

ಸತ್ಯ | ನ್ಯಾಯ |ಧರ್ಮ

ಖೇಲ್ ರತ್ನ ಪ್ರಶಸ್ತಿ | ಪ್ರಶಸ್ತಿಗಳ ಹಿಂದೆ ಹೋಗುವುದು ನನ್ನ ಗುರಿಯಲ್ಲ ಎಂದ ಮನು ಬಾಕರ್

ಇದೇ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಎರಡು ಪದಕ ಗೆದ್ದುಕೊಟ್ಟ ಶೂಟರ್ ಮನು ಭಾಕರ್ ಖೇಲ್ ರತ್ನ ಪ್ರಶಸ್ತಿ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಗೊತ್ತೇ ಇದೆ.

ಅವರ ಕುಟುಂಬ ಸದಸ್ಯರು ಮತ್ತು ಕ್ರೀಡಾಭಿಮಾನಿಗಳು ಈಗಾಗಲೇ ಈ ವಿಷಯವಾಗಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಮನು ಬಾಕರ್ ಅವರು, ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಏನಾದರೂ ದೋಷವಿರಬಹುದು, ಅದನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಒಬ್ಬ ಕ್ರೀಡಾಪಟುವಾಗಿ ದೇಶಕ್ಕಾಗಿ ಆಡುವುದು ನನ್ನ ಜವಾಬ್ದಾರಿ. ಮನ್ನಣೆ ಮತ್ತು ಪ್ರಶಸ್ತಿಗಳು ನನಗೆ ಸ್ಫೂರ್ತಿ ನೀಡುತ್ತವೆ, ಆದರೆ ಅದೇ ನನ್ನ ಗುರಿಯಲ್ಲ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ ಅದಕ್ಕೂ ಮುನ್ನ ಅವರ ಕೋಚ್ ಜಸ್ಪಾಲ್ ರಾಣಾ ಪ್ರತಿಕ್ರಿಯಿಸಿದ್ದಾರೆ. ‘ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಮನು ಬಾಕರ್ ಯಾರು ಎಂಬುದು ಸಮಿತಿಗೆ ಗೊತ್ತಿಲ್ಲವೆ?’ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ದೇಶಕ್ಕೆ ಸಾಕಷ್ಟು ಕೀರ್ತಿ ತಂದ ಮನು ಅರ್ಜಿ ಹಾಕಿಲ್ಲ ಎನ್ನಲಾಗಿದೆ. ನೀವು ಅದನ್ನು ಹೇಗೆ ಹೇಳುತ್ತೀರಿ? ಅವರು ಅರ್ಜಿ ಸಲ್ಲಿಸದಿದ್ದರೂ, ಅವರ ಹೆಸರು ಪಟ್ಟಿಯಲ್ಲಿ ಖಂಡಿತವಾಗಿಯೂ ಇರಬೇಕು. ಧ್ಯಾನ್‌ಚಂದ್ ಖೇಲ್‌ ರತ್ನ ಅರ್ಜಿಯಲ್ಲಿ ಮನು ಹೆಸರು ಇಲ್ಲವೆಂದಾದರೆ, ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ನ್ಯಾಷನಲ್ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ ಏನು ಮಾಡುತ್ತಿವೆ? ಇದಕ್ಕೆ ನಾನು ಅವರನ್ನು ಹೊಣೆ ಮಾಡುತ್ತೇನೆʼ ಎಂದು ಅವರು ಹೇಳಿದರು. ಕ್ರೀಡಾ ಪಟುಗಳು ನೇರವಾಗಿ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ನಿಯಮ ಇರಬಾರದು ಎಂದು ಜಸ್ಪಾಲ್‌ ರಾಣಾ ಅಭಿಪ್ರಾಯಪಟ್ಟಿದ್ದಾರೆ.

12 ಸದಸ್ಯರನ್ನೊಳಗೊಂಡ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಸಮಿತಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಈ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಕ್ರೀಡಾಪಟುಗಳಿಗೆ ಸಚಿವಾಲಯವು ಅವಕಾಶವನ್ನು ಒದಗಿಸಿದೆ. ಆದರೆ ಮನು ಬಾಕರ್ ಈ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವುದು ವಿವಾದಕ್ಕೆ ಕಾರಣವಾಗಿದೆ. ಈ ಪ್ರಶಸ್ತಿಯ ಅಂತಿಮ ಪ್ರಸ್ತಾವನೆಗಳ ಪಟ್ಟಿ ಇನ್ನೂ ಸಿದ್ಧವಾಗಿಲ್ಲ, ಅದರಲ್ಲಿ ಅವರ ಹೆಸರನ್ನು ಸೇರಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಉನ್ನತ ಮೂಲಗಳು ಹೇಳುತ್ತಿವೆ.

”ಇನ್ನೂ ಅಂತಿಮ ಪಟ್ಟಿ ಸಿದ್ಧಪಡಿಸಿಲ್ಲ. ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪ್ರಸ್ತಾಪಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ಅವರು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಆಕೆಯ (ಮನು) ಹೆಸರು ಖಂಡಿತ ಇರುವ ಸಾಧ್ಯತೆ ಇದೆ” ಎಂದು ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page