Home ವಿದೇಶ ಐಟಿ ದೈತ್ಯಗಳಿಗೂ ಬೆದರಿಕೆ: ಗೂಗಲ್‌, ಮೈಕ್ರೋಸಾಫ್ಟ್‌ ಸೇರಿ ಹಲವು ಕಂಪನಿಗಳೇ ಇನ್ನು ಇರಾನ್‌ನ ಟಾರ್ಗೆಟ್

ಐಟಿ ದೈತ್ಯಗಳಿಗೂ ಬೆದರಿಕೆ: ಗೂಗಲ್‌, ಮೈಕ್ರೋಸಾಫ್ಟ್‌ ಸೇರಿ ಹಲವು ಕಂಪನಿಗಳೇ ಇನ್ನು ಇರಾನ್‌ನ ಟಾರ್ಗೆಟ್

0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಈಗ ಹೊಸ ತಿರುವು ಪಡೆದಿದೆ. ಇದುವರೆಗೆ ಸೇನಾ ನೆಲೆಗಳು, ತೈಲಾಗಾರಗಳು ಹಾಗೂ ವಿಮಾನ ನಿಲ್ದಾಣಗಳಿಗೆ ಸೀಮಿತವಾಗಿದ್ದ ದಾಳಿ–ಪ್ರತಿದಾಳಿಗಳು ಇದೀಗ ಆರ್ಥಿಕ ಸಂಸ್ಥೆಗಳನ್ನೇ ನೇರವಾಗಿ ಗುರಿಯಾಗಿಸಿಕೊಳ್ಳುವ ಹಂತಕ್ಕೆ ತಿರುಗಿವೆ.

ರಾಜಧಾನಿ ಟೆಹ್ರಾನ್ ಲ್ಲಿ ಬ್ಯಾಂಕ್‌ ಒಂದರ ಮೇಲೆ ನಡೆದ ದಾಳಿಯ ಬೆನ್ನಲ್ಲೇ ಕುಪಿತಗೊಂಡಿರುವ ಇರಾನ್, ಮಧ್ಯಪ್ರಾಚ್ಯದಲ್ಲಿರುವ ಬ್ಯಾಂಕ್‌ಗಳು ಹಾಗೂ ಐಟಿ ಕಂಪನಿಗಳ ಮೇಲೆ ಆಕ್ರಮಣ ನಡೆಸುವುದಾಗಿ ಘೋಷಿಸಿದೆ.

ಈ ಕುರಿತು Islamic Revolutionary Guard Corps (ಐಆರ್‌ಜಿಸಿ) ಯ ಖತಮ್ ಅಲ್-ಅನ್ಬಿಯಾ ಪ್ರಧಾನ ಕಚೇರಿಯ ವಕ್ತಾರ ಪ್ರತಿಕ್ರಿಯಿಸಿ, “ಅಮೆರಿಕ ಮತ್ತು ಇಸ್ರೇಲ್‌ಗೆ ಸೇರಿದ ಬ್ಯಾಂಕ್‌ಗಳು ಸೇರಿದಂತೆ ಹಲವು ಆರ್ಥಿಕ ಸಂಸ್ಥೆಗಳನ್ನು ಗುರಿಯಾಗಿಸಲು ಅವರೇ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಮಧ್ಯಪ್ರಾಚ್ಯದಲ್ಲಿರುವ ಶತ್ರುರಾಷ್ಟ್ರಗಳಿಗೆ ಸೇರಿದ ಆರ್ಥಿಕ ಕೇಂದ್ರಗಳ ಮೇಲೆ ದಾಳಿ ನಡೆಸಲಾಗುತ್ತದೆ. ನಾಗರಿಕರು ಆ ಪ್ರದೇಶಗಳಿಂದ ದೂರವಿರುವುದು ಒಳಿತು,” ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದೊಮ್ಮೆ ಅತ್ಯಂತ ಸುರಕ್ಷಿತ ನಗರವೆಂದು ಗುರುತಿಸಿಕೊಂಡಿದ್ದ ದುಬೈ ಸೇರಿದಂತೆ ಸೌದಿ ಅರೇಬಿಯ ಆರ್ಥಿಕ ಕೇಂದ್ರಗಳನ್ನು ಅಸ್ಥಿರಗೊಳಿಸುವ ಉದ್ದೇಶ ಇರಾನ್ ಹೊಂದಿದೆ ಎಂಬ ಆತಂಕ ವ್ಯಕ್ತವಾಗಿದೆ.

ಇದಕ್ಕೆ ನಡುವೆಯೇ ಮಧ್ಯಪ್ರಾಚ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಐಟಿ ಕಂಪನಿಗಳೂ ಇರಾನ್‌ನ ಹೊಸ ಗುರಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಐಆರ್‌ಜಿಸಿಗೆ ಸಂಬಂಧಿಸಿದ ತನ್ಸಿಂ ಪತ್ರಿಕೆಯಲ್ಲಿ ಗೂಗಲ್, ಮೈಕ್ರೋಸಾಫ್ಟ್, ಒರಾಕಲ್, ಐಬಿಎಂ ಮತ್ತು Nvidia ಸೇರಿದಂತೆ ಹಲವು ಕಂಪನಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಕಂಪನಿಗಳು ಇಸ್ರೇಲ್ ಗೆ ಯುದ್ಧದಲ್ಲಿ ಸಹಕಾರ ನೀಡುತ್ತಿವೆ ಎಂದು ಆರೋಪಿಸಿ, ಇದೇ ಕಾರಣಕ್ಕೆ ಅವುಗಳೇ ಇರಾನ್‌ನ ಹೊಸ ಗುರಿಗಳಾಗಿವೆ ಎಂದು ಪತ್ರಿಕೆ ವರದಿ ಮಾಡಿದೆ.

ಈ ಬೆಳವಣಿಗೆಯ ನಡುವೆ ಕೆಲವು ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ಭಾಗಶಃ ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದ್ದು, ಮಧ್ಯಪ್ರಾಚ್ಯದ ಆರ್ಥಿಕ ಸ್ಥಿತಿಗತಿಗಳ ಮೇಲೆ ಇದರಿಂದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

You cannot copy content of this page

Exit mobile version