ಏನೀ ಮರುಕುಂಬಿ ಪ್ರಕರಣ? ಇಂತಹ ತೀರ್ಪು ಬರಲು ಕಾರಣವೇನು? ಇದರ ಹಿಂದೆ ಏನೆಲ್ಲಾ ನಡೆದಿತ್ತು ಇವುಗಳ ಕುರಿತು ಸ್ವಲ್ಪ ಬೆಳಕು ಚೆಲ್ಲುವ ಪ್ರಯತ್ನದ ಭಾಗದ ವಿಶೇಷವಾಗಿ ಈ ಬರಹ. ಲೇಖಕರಾದ ಹೆಚ್.ಆರ್.ನವೀನ್ ಕುಮಾರ್ ಅವರು ಪ್ರಕರಣ, ಅದರ ಹಿನ್ನೆಲೆ, ನಂತರದ ಪರಿಣಾಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ತಪ್ಪದೇ ಓದಿ
ಮರುಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ, ಕೊಪ್ಪಳದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ೨೦೨೪ರ ಅಕ್ಟೋಬರ್ ೨೪ರಂದು ಪ್ರಕಟಿಸಿದ ಮಹತ್ವದ ತೀರ್ಪಿನಲ್ಲಿ ೧೦೧ ಅಪರಾಧಿಗಳಲ್ಲಿ ೯೮ ಜನರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ೫೦೦೦ ರೂ. ದಂಡ ವಿಧಿಸಲಾಗಿದೆ. ೩ ಜನರಿಗೆ ೫ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ೨೦೦೦ ರೂ. ದಂಡ ವಿಧಿಸಲಾಗಿದೆ. ಈ ತೀರ್ಪು ಚರಿತ್ರಾರ್ಹವಾದುದು. ಇದು ರಾಜ್ಯದ ಎಲ್ಲ ದಲಿತರಿಗೂ, ಸಾಮಾಜಿಕ ತಾರತಮ್ಯದ ವಿರುದ್ದ ದ್ವನಿ ಎತ್ತುತ್ತಿರುವ ಎಲ್ಲ ಎಡ ಮತ್ತು ಪ್ರಗತಿಪರ ಶಕ್ತಿಗಳಿಗೆ ಮತ್ತಷ್ಟು ಬಲವನ್ನು ತಂದು ಕೊಟ್ಟಿದೆ. ಮಾತ್ರವಲ್ಲ, ಜಾತಿ ದೌರ್ಜನ್ಯದಲ್ಲಿ ತೊಡಗಿರುವವರಿಗೆ ಎಚ್ಚರಿಕೆಯ ಘಂಟೆಯಾಗಿದೆ. ಈ ಪ್ರಕರಣವನ್ನು ‘ಚಿತ್ರಮಂದಿರದಲ್ಲಿ ನಡೆದ ಸವರ್ಣೀಯರು ಮತ್ತು ದಲಿತ ಯುವಕರ ನಡುವಿನ ಗಲಾಟೆ, ಇದಕ್ಕೆ ಪ್ರತೀಕಾರವಾಗಿ ದಲಿತರ ಮೇಲಿನ ದಾಳಿ’ ಎಂಬಷ್ಟಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಸಾವಿರಾರು ವರ್ಷಗಳಿಂದ ಹಳ್ಳಿಗಳಲ್ಲಿ ಮಡುಗಟ್ಟಿರುವ ಕ್ರೂರ ಮತ್ತು ಅನಿಷ್ಟ ಜಾತಿ ಪದ್ಧತಿಯ ಕರಾಳ ರೂಪವಾಗಿ ಇದು ವ್ಯಕ್ತವಾಗಿದೆ ಎಂಬುದನ್ನು ಗುರುತಿಸಬೇಕು.
ಕೊಪ್ಪಳ ಜಿಲ್ಲೆಯ ಮರುಕುಂಬಿ ಗ್ರಾಮದಲ್ಲಿ ೨೦೧೪ರಲ್ಲಿ ನಡೆದಿದ್ದ ದಲಿತರು ಮತ್ತು ದಲಿತ ಕೇರಿಯ ಮೇಲೆ ಸಾಮೂಹಿಕ ಹಲ್ಲೆ ಹಾಗೂ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ೧೦ ವರ್ಷಗಳ ಕಾನೂನು ಹೋರಾಟದ ನಂತರ ೧೦೧ ಅಪರಾಧಿಗಳಲ್ಲಿ ೯೮ ಜನರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ೫೦೦೦ ರೂ. ದಂಡ ವಿಧಿಸಲಾಗಿದೆ. ೩ ಜನರಿಗೆ ೫ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ೨೦೦೦ ರೂ. ದಂಡ ವಿಧಿಸಲಾಗಿದೆ. ಕೊಪ್ಪಳದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ೨೦೨೪ರ ಅಕ್ಟೋಬರ್ ೨೪ರಂದು ಪ್ರಕಟಿಸಿದ ಮಹತ್ವದ ಈ ತೀರ್ಪು ಚರಿತ್ರಾರ್ಹವಾದುದು. ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿರುವುದು ಇದೇ ಮೊದಲು ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ.
ಏನೀ ಮರುಕುಂಬಿ ಪ್ರಕರಣ?
ಏನೀ ಮರುಕುಂಬಿ ಪ್ರಕರಣ? ಇಂತಹ ತೀರ್ಪು ಬರಲು ಕಾರಣವೇನು? ಇದರ ಹಿಂದೆ ಏನೆಲ್ಲಾ ನಡೆದಿತ್ತು ಇವುಗಳ ಕುರಿತು ಸ್ವಲ್ಪ ಬೆಳಕು ಚೆಲ್ಲುವ ಪ್ರಯತ್ನದ ಭಾಗವಾಗಿ ಈ ಬರಹ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವಂತೆ ಈ ಪ್ರಕರಣದ ಮೂಲ ೨೦೧೪ರಲ್ಲಿ ಗಂಗಾವತಿಯ ಚಿತ್ರಮಂದಿರ ಒಂದರಲ್ಲಿ ಪುನಿತ್ ರಾಜ್ ಕುಮಾರ್ ಅವರ ‘ಪವರ್’ ಸಿನಿಮಾ ವೀಕ್ಷಣೆಗೆಂದು ಮರುಕುಂಬಿಯ ದಲಿತ ಯುವಕರು ಹೋಗಿದ್ದಾಗ, ಅಲ್ಲಿ ದಲಿತ ಯುವಕರು ಹಾಗೂ ಸವರ್ಣೀ ಯುವಕರ ನಡುವೆ ಗಲಾಟೆ ನಡೆಯಿತು. ಈ ಗಲಾಟೆ ವಿಭಿನ್ನ ತಿರುವು ತೆಗೆದುಕೊಂಡಿತು. ಇದು ಊರಿನ ಸವರ್ಣೀಯರ ನಡುವೆ ಸುದ್ದಿಯಾಯಿತು. ಸುಮಾರು ೧೫೦ ಜನ ಸವರ್ಣೀಯರು ಮರುಕುಂಬಿಯ ದಲಿತ ಕಾಲೋನಿಗೆ ನುಗ್ಗಿದರು. ಮಹಿಳೆಯರು, ಮಕ್ಕಳು ವೃದ್ಧರೆನ್ನದೆ ಕೈಗೆ ಸಿಕ್ಕ ಎಲ್ಲರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದರು. ೪ ಗುಡಿಸಲುಗಳಿಗೆ ಬೆಂಕಿಯಿಟ್ಟು ಸುಟ್ಟು ಬೂದಿ ಮಾಡಿದರು. ಆಗ ಸವರ್ಣೀಯರ ಮೇಲೆ ದಾಖಲಾಗಿದ್ದ ಈ ಪ್ರಕರಣ ೧೦ ವರ್ಷಗಳ ನಂತರ ಇಂತಹದೊಂದು ಮಹತ್ತರ ತೀರ್ಪನ್ನು ನೀಡಿದೆ ಎಂಬುದು ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ.
ಸಾವಿರಾರು ವರ್ಷಗಳಿಂದ ಮಡುಗಟ್ಟಿರುವ ಕ್ರೂರ ಮತ್ತು ಅನಿಷ್ಟ ಜಾತಿ ಪದ್ಧತಿ
ಈ ಪ್ರಕರಣವನ್ನು ‘ಚಿತ್ರಮಂದಿರದಲ್ಲಿ ನಡೆದ ಸವರ್ಣೀಯ ಮತ್ತು ದಲಿತ ಯುವಕರ ನಡುವಿನ ಗಲಾಟೆ, ಇದಕ್ಕೆ ಪ್ರತೀಕಾರವಾಗಿ ದಲಿತರ ಮೇಲಿನ ದಾಳಿ’ ಎಂಬಷ್ಟಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಸಾವಿರಾರು ವರ್ಷಗಳಿಂದ ಹಳ್ಳಿಗಳಲ್ಲಿ ಮಡುಗಟ್ಟಿರುವ ಕ್ರೂರ ಮತ್ತು ಅನಿಷ್ಟ ಜಾತಿ ಪದ್ಧತಿಯ ಕರಾಳ ರೂಪವಾಗಿ ಇದು ವ್ಯಕ್ತವಾಗಿದೆ ಎಂಬುದನ್ನು ಗುರುತಿಸಬೇಕು. ಅವಿಭಜಿತ ರಾಯಚೂರು ಜಿಲ್ಲೆಯಲ್ಲಿದ್ದ ಗಂಗಾವತಿ ತಾಲ್ಲೂಕು (ಈಗ ಕೊಪ್ಪಳ ಜಿಲ್ಲೆ) ಅತಿ ಹೆಚ್ಚು ದಲಿತರಿರುವ ಮತ್ತು ಬಡ ಭೂಹೀನ ಕೂಲಿಕಾರರಿರುವ ಮತ್ತು ಪಾಳೇಗಾರಿ ಮೌಲ್ಯಗಳನ್ನು ಮೈತುಂಬ ಹೊದ್ದು ಮಲಗಿರುವ ತಾಲ್ಲೂಕು. ಇಲ್ಲಿ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಜಾತಿ ನಿಂದನೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ.
೨೨ ವರ್ಷಗಳ ಹಿಂದೆಯೂ ನಡೆದಿತ್ತು ಜಾತಿ ದೌರ್ಜನ್ಯ
ಒಟ್ಟು ಸುಮಾರು ೪೦೦ ಕುಟುಂಬಗಳಿರುವ ಮರುಕುಂಬಿ ಗ್ರಾಮದಲ್ಲಿ ೬೦ ದಲಿತ ಕುಟುಂಬಗಳಿವೆ. ಇನ್ನುಳಿದಂತೆ ಎಲ್ಲಾ ಜಾತಿಗಳಿಗೆ ಸೇರಿದ ಸವರ್ಣೀಯರು ಈ ಗ್ರಾಮದಲ್ಲಿದ್ದಾರೆ. ದಲಿತರ ಬದುಕನ್ನು ಹಸನು ಮಾಡುವ ಉದ್ದೇಶದಿಂದ ವಿವಿಧ ಸರ್ಕಾರಗಳು ದಲಿತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿ ದಲಿತ ಕೇರಿಗಳಲ್ಲಿ ಮದುವೆ, ಮತ್ತಿತರೆ ಸಮಾರಂಭಗಳನ್ನು ನಡೆಸಿಕೊಳ್ಳಲು ಅನುಕೂಲವಾಗುವಂತೆ, ಸಮಾಜ ಕಲ್ಯಾಣ ಇಲಾಖೆಯಿಂದ ಮರುಕುಂಬಿಯ ದಲಿತ ಕೇರಿಯಲ್ಲಿ ಸರ್ಕಾರಿ ಸಮುದಾಯ ಭವನವನ್ನು ನಿರ್ಮಿಸಲಾಗಿತ್ತು. ಆದರೆ ಈ ಸಮುದಾಯ ಭವನವನ್ನು ದಲಿತರು ಬಳಕೆ ಮಾಡುವ ಮೊದಲೇ ಊರಿನ ಸಾಹುಕಾರ (ಸವರ್ಣೀಯ ಜಮೀನ್ದಾರ) ಊರಿಗೆ ಏನೇ ಬಂದರೂ ಅದನ್ನು ಮೊದಲು ನಾನೇ ಅನುಭವಿಸಬೇಕು ಎಂಬ ದೃಷ್ಟಿಯವನು. ಆ ಸಾಹುಕಾರ ತನ್ನ ಜಮೀನಿನಲ್ಲಿ ಬೆಳೆದಿದ್ದ ಸುಮಾರು ೭೧೩ ಚೀಲ ನೆಲ್ಲನ್ನು (ಭತ್ತ) ಸಮುದಾಯ ಭವನದಲ್ಲಿ ತುಂಬಿಸಿ ಇಟ್ಟಿದ್ದ. ವರ್ಷಾನುಗಟ್ಟಲೆ ಈ ದಾಸ್ತಾನನ್ನು ಖಾಲಿ ಮಾಡುವ ಯಾವ ಯೋಚನೆಯನ್ನೂ ಸಾಹುಕಾರ ಮಾಡಲೇ ಇಲ್ಲ. ಇದೇ ಸಂದರ್ಭದಲ್ಲಿ ಊರಿನ ದಲಿತ ಯುವಕರು ಒಂದೆಡೆ ಸೇರಿ ಸಭೆ ಮಾಡಿದರು. ನಂತರ ಊರಿನ ಹಿರಿಯರೊಂದಿಗೆ ಚರ್ಚಿಸಿ, ಸಮುದಾಯ ಭವನದಲ್ಲಿರುವ ಭತ್ತದ ಚೀಲಗಳನ್ನು ಖಾಲಿ ಮಾಡಿ ಸಮುದಾಯದ ಮದುವೆಯಂತಹ ಶುಭ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಡಲು ಸಾಹುಕಾರರಿಗೆ ಮನವಿ ಮಾಡುವಂತೆ ಹಿರಿಯರಿಗೆ ಹೇಳಿದರು.
ಇವರುಗಳ ನಡುವೆ ಚರ್ಚೆಯಾದ ಈ ಸುದ್ದಿ ಗಾಳಿಯಲ್ಲಿ ತೇಲುತ್ತಾ ಸಾಹುಕಾರನ ಕಿವಿಗೆ ಮುಟ್ಟಿತು. ಇದರಿಂದ ಕೋಪಗೊಂಡ ಸಾಹುಕಾರನ ಮನಸ್ಸಿನಲ್ಲಿ ಜಾತಿ ಪ್ರಜ್ಞೆ ಜಾಗೃತವಾಯಿತು. ಇದಕ್ಕೆ ಏನಾದರೂ ಮಾಡಬೇಕೆಂದು ಯೋಚಿಸಿದ ಪಾಳೇಗಾರಿ ಮನಸ್ಥಿತಿಯ ಸಾಹುಕಾರ, ಸಮುದಾಯ ಭವನದಲ್ಲಿರುವ ಭತ್ತದ ಮೂಟೆಗಳು ಕಳವಾಗಿವೆ ಎಂದು ಐವರು ದಲಿತ ಯುವಕರ ಮೇಲೆ ಸುಳ್ಳು ಆರೋಪವನ್ನು ಮಾಡಿದ. ಆಳುಗಳನ್ನು ಕಳುಹಿಸಿ ಪಾಂಡುರಂಗ, ಭೀಮೇಶ, ಬಸವರಾಜ, ಹನುಮೇಶ ಮತ್ತು ಗೌರೀಶ ಎಂಬ ಐವರು ದಲಿತ ಯುವಕರನ್ನು ತನ್ನ ಮನೆಯ ಬಳಿ ಕರೆಸಿಕೊಂಡರು. ಐವರನ್ನೂ ವಿದ್ಯುತ್ ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ. ಜಾತಿ ನಿಂದನೆ ಮಾಡಿದ್ದು ಮಾತ್ರವಲ್ಲದೆ, ಭತ್ತದ ಮೂಟೆಗಳನ್ನು ಇವರೇ ಕಳ್ಳತನ ಮಾಡಿದ್ದಾರೆ ಎಂದು ಆರೋಪ ಹೊರಿಸಿದರು. ಇದನ್ನು ಪ್ರಶ್ನಿಸಿದ ಯುವಕರ ತಾಯಂದಿರ ಮೇಲೆ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ತೀರ್ವ ಗಾಯಗೊಂಡಿದ್ದ ಐವರು ಯುವಕರನ್ನೂ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ಪ್ರಕರಣ ನಡೆದದ್ದು ೨೦೦೨ ರಲ್ಲಿ, ಅಂದರೆ ಈಗ ತೀರ್ಪು ನೀಡಿರುವ ಪ್ರಕರಣ ನಡೆಯುವ ೧೦ ವರ್ಷಗಳ ಮೊದಲೇ ಇಲ್ಲಿ ಜಾತಿ ದೌರ್ಜನ್ಯ, ಸವರ್ಣೀಯರ ದಬ್ಬಾಳಿಕೆಗಳು ಎಗ್ಗಿಲ್ಲದೆ ನಡೆದಿದ್ದವು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸಂಪರ್ಕ
ಸವರ್ಣೀಯ ಸಾಹುಕಾರನ ಸುಳ್ಳು ಆರೋಪ, ಹಲ್ಲೆ ಮತ್ತು ಅವಮಾನವನ್ನು ಮರುಕುಂಬಿಯ ದಲಿತರು ಗಂಭೀರವಾಗಿ ತೆಗೆದುಕೊಂಡರು. ಜಿಲ್ಲೆಯಲ್ಲಿ ಬಡ ಮತ್ತು ದಲಿತ ಕೂಲಿಕಾರರ ನಡುವೆ ಕೆಲಸ ಮಾಡುತ್ತಿದ್ದ ಕೆಂಬಾವುಟದ ‘ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ’ (ಕೆಪಿಆರ್‌ಎಸ್)ದ ಮುಖಂಡರನ್ನು ಅವರು ಸಂಪರ್ಕಿಸಿದರು. ಕೆಪಿಆರ್‌ಎಸ್ ಮುಖಂಡರು ಮರಕುಂಬಿಗೆ ಭೇಟಿ ನೀಡಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಊರಿನ ಹಿರಿಯರು “ಇದನ್ನೇ ದೊಡ್ಡದು ಮಾಡುವುದು ಬೇಡ, ಹೇಗೋ ಅನುಸರಿಸಿಕೊಂಡು ಹೋಗೋಣ” ಎಂದು ಸಲಹೆ ನೀಡುತ್ತಾರೆ. ಆದರೆ ಈ ಸಲಹೆಯನ್ನು ಒಪ್ಪದ ಯುವಕರು, ಇಂತಹ ದೌರ್ಜನ್ಯಗಳನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ, ಇದರ ವಿರುದ್ಧ ಪ್ರಕರಣ ದಾಖಲು ಮಾಡಲೇಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಪಟ್ಟು ಹಿಡಿಯುತ್ತಾರೆ. ಆಗ ಪೊಲೀಸ್ ಠಾಣೆಯಲ್ಲಿ ದೂರು ಕೊಡಲಾಗುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ೧೪ ಆರೋಪಿಗಳ ವಿರುದ್ಧ ಎಫ್‌ಐಆರ್ ಮಾಡುತ್ತಾರೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಾರೆ, ಪ್ರಮುಖ ಆರೋಪಿ ಸಾಹುಕಾರ್ ತಲೆಮರೆಸಿಕೊಳ್ಳುತ್ತಾನೆ.
ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳಾಗಿದ್ದ ನಾಗಲಾಂಬಿಕ ದೇವಿಯವರು ಮರುಕುಂಬಿಗೆ ಭೇಟಿ ನೀಡಿ, ಗ್ರಾಮ ಸಭೆ ನಡೆಸುತ್ತಾರೆ. ಸರ್ಕಾರಿ ಸಮುದಾಯ ಭವನದಲ್ಲಿ ಅಕ್ರಮವಾಗಿ ತುಂಬಿದ್ದ ೭೧೩ ಚೀಲ ಭತ್ತವನ್ನು ವಶಪಡಿಸಿಕೊಂಡು ಎಪಿಎಂಸಿಗೆ ಕಳುಹಿಸುತ್ತಾರೆ. ಹಾಗೂ ಊರಿನಲ್ಲಿ ಮತ್ತೆ ಜಾತಿ ದೌರ್ಜನ್ಯ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡುತ್ತಾರೆ. ಈ ಪ್ರಕರಣದಲ್ಲಿ ಸಾಹುಕಾರ ಜಾಮೀನು ಪಡೆದು ಮರಳಿ ಊರಿಗೆ ಬರುತ್ತಾನೆ. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತದೆ. ಅಷ್ಟರಲ್ಲಿ ಸಂಘಟಿತರಾಗಿದ್ದ ದಲಿತರು ಕೂಲಿಕಾರರ ಸಂಘದ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಇಬ್ಬರು ಸದಸ್ಯರು ಗೆಲುವು ಪಡೆಯುತ್ತಾರೆ. ಪಂಚಾಯಿತಿಯ ಅಧ್ಯಕ್ಷರ ಎರಡನೇ ಅವಧಿಯ ಚುನಾವಣೆಯ ಸಂದರ್ಭದಲ್ಲಿ ದಲಿತ ಸಮುದಾಯದಿಂದ ಆಯ್ಕೆಯಾಗಿದ್ದ ದೇವದಾಸಿ ಹೆಣ್ಣುಮಗಳು ಅಧ್ಯಕ್ಷರಾಗುವ ಸಂದರ್ಭ ಬಂದಾಗ ಕಾಂಗ್ರೆಸ್ ಪಕ್ಷದಲ್ಲಿದ್ದ ಸಾಹುಕಾರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಕೂಲಿಕಾರ ದಲಿತರಿಗೆ ಬೆಂಬಲಿಸಿ ೨ ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ. ೨೦೧೩ ರವರೆಗೂ ಪರಿಸ್ಥಿತಿ ತಿಳಿಗೊಳ್ಳುತ್ತಿರುವಂತೆ ಕಂಡರೂ, ಜಾತಿಯ ವೈಷಮ್ಯ ಒಳಗೆ ಬೂದಿ ಮುಚ್ಚಿದ ಕೆಂಡದಂತಿತ್ತು.
ಹೋಟೆಲ್ ಮತ್ತು ಕ್ಷೌರದ ಅಂಗಡಿಯನ್ನೇ ಮುಚ್ಚಿದರು
೨೦೧೪ರಲ್ಲಿ ಮರುಕುಂಬಿಯಲ್ಲಿ ಹೋಟೆಲ್‌ಗಳಲ್ಲಿ ಪ್ರತ್ಯೇಕ ಲೋಟದ ವ್ಯವಸ್ಥೆ ಮತ್ತು ಕ್ಷೌರದ ಅಂಗಡಿಗಳಲ್ಲಿ ದಲಿತರಿಗೆ ಕ್ಷೌರದ ನಿರಾಕರಣೆ, ಅಂಗಡಿಗಳಲ್ಲಿ ದಲಿತರಿಗೆ ದಿನಸಿ ಸಾಮಾನು ನೀಡುವುದನ್ನು ನಿರಾಕರಿಸುವ ಪ್ರಕರಣಗಳು ಬೆಳಕಿಗೆ ಬರುತ್ತವೆ. ಈ ಸಂದರ್ಭದಲ್ಲಿ ಎಲ್ಲಾ ದಲಿತರು ಒಟ್ಟಿಗೆ ಸೇರಿ ಕೂಲಿಕಾರರ ಸಂಘ ಮತ್ತು ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷ(ಸಿಪಿಐಎಂ)ದ ನೇತೃತ್ವದಲ್ಲಿ ಗಂಗಾವತಿ ತಹಸಿಲ್ದಾರ್ ರನ್ನು ಭೇಟಿಮಾಡಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಿ ದಲಿತರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಸಲ್ಲಿಸುತ್ತಾರೆ. ಈ ಮನವಿಯ ಮೇರೆಗೆ ಮರುಕುಂಬಿಗೆ ಆಗಮಿಸಿದ ತಹಸಿಲ್ದಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಂತಿ ಸಭೆ ನಡೆಸುತ್ತಾರೆ. ಹೋಟೆಲ್‌ಗಳಲ್ಲಿರುವ ಎರಡು ಲೋಟ ಪದ್ದತಿಯನ್ನು ಕೂಡಲೇ ನಿಲ್ಲಿಸಬೇಕು, ಯಾವುದೇ ಜಾತಿ ತಾರತಮ್ಯ ಮಾಡದೇ ಎಲ್ಲರನ್ನೂ ಸಮಾನವಾಗಿ ನೋಡಬೇಕು, ಕ್ಷೌರದ ಅಂಗಡಿಯಲ್ಲಿ ದಲಿತರಿಗೂ ಕ್ಷೌರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳು ಆ ಸಬೆಯಲ್ಲಿ ಸೂಚಿಸುತ್ತಾರೆ. ಅಧಿಕಾರಿಗಳ ಈ ಸೂಚನೆಯನ್ನು ದಿಕ್ಕರಿಸಿದ ಸವರ್ಣಿಯರು ದಲಿತರಿಗೆ ಪ್ರವೇಶ ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಹೋಟೆಲ್ ಮತ್ತು ಕ್ಷೌರದ ಅಂಗಡಿಯನ್ನೇ ಸಂಪೂರ್ಣ ಮುಚ್ಚಿದರು. ಈ ಪ್ರಕರಣ ದಲಿತರ ನಡುವೆ ಒಂದು ರೀತಿಯ ಅಭದ್ರತೆಯನ್ನು ಉಂಟು ಮಾಡಿ ಸಾಮಾಜಿಕ ಭಹಿಷ್ಕಾರ ಮಾಡಿದಂತಹ ವಾತಾವರಣ ನಿರ್ಮಾಣವಾಗಿತ್ತು.
ಚಿತ್ರಮಂದಿರದಲ್ಲಿ ಕೆಲ ಯುವಕರ ನಡುವೆ ಗಲಾಟೆ
ಇದೇ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ‘ಪವರ್’ ಸಿನಿಮಾ ಬಿಡುಗಡೆಯಾಗಿರುತ್ತದೆ. ಈ ಸಿನಿಮಾವನ್ನು ವೀಕ್ಷಿಸಲು ಗಂಗಾವತಿಯ ಚಿತ್ರಮಂದಿರಕ್ಕೆ ಕಾಕತಾಳೀಯವಾಗಿ ಮರುಕುಂಬಿಯ ದಲಿತ ಯುವಕರೂ ಮತ್ತು ಸವರ್ಣೀಯ ಯುವಕರೂ ಒಂದೇ ದಿನ ಹೋಗಿರುತ್ತಾರೆ. ಇದೇ ಸಂದರ್ಭದಲ್ಲಿ ಮರುಕುಂಬಿಯ ಸವರ್ಣೀಯ ಗಂಗಾವತಿಯ ಕೆಲ ಯುವಕರ ನಡುವೆ ಟಿಕೇಟ್ ವಿಚಾರದಲ್ಲಿ ಗಲಾಟೆ ನಡೆಯುತ್ತದೆ. ಗಂಗಾವತಿಯ ಯುವಕರು ಮರುಕುಂಬಿಯ ಸವರ್ಣೀಯ ಯುವಕರ ಮೇಲೆ ಹಲ್ಲೆ ಮಾಡುತ್ತಾರೆ. ಈ ಗಲಾಟೆಯನ್ನು ಮರುಕುಂಬಿಯ ದಲಿತರೇ ಗಂಗಾವತಿಯ ಯುವಕರಿಂದ ಮಾಡಿಸಿದ್ದು ಎಂದು ಸವರ್ಣೀಯರು ಅನುಮಾನಿಸುತ್ತಾರೆ.
ದಲಿತ ಕೇರಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ ಇಟ್ಟು ಸುಟ್ಟರು
ಮರುದಿನ ಸೂರ್ಯ ಪಶ್ಚಿಮದ ಕಡೆ ಮುಖಮಾಡಿದ್ದ ಸಂಜೆ ೪ ಗಂಟೆಯ ಸಮಯದಲ್ಲಿ ಸುಮಾರು ೧೫೦ ಜನ ಸವರ್ಣೀಯರು ಒಟ್ಟಿಗೆ ಸೇರಿ ಮರುಕುಂಬಿಯ ದಲಿತ ಕೇರಿಗೆ ನುಗ್ಗುತ್ತಾರೆ. ಬೂದಿ ಮುಚ್ಚಿದ ಕೆಂಡದಂತಿದ್ದ ಜಾತಿ ವೈಷಮ್ಯದ ಕಟ್ಟೆ ಹೊಡೆದು ಸಿಕ್ಕ ಸಿಕ್ಕ ಹೆಂಗಸರು, ಮಕ್ಕಳು, ವೃದ್ಧರು ಎನ್ನುವುದನ್ನೂ ನೋಡದೆ ಎಲ್ಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಾರೆ. ಅತ್ಯಂತ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡುತ್ತಾರೆ. ಇಷ್ಟು ಮಾತ್ರವಲ್ಲದೆ “ನಿಮ್ಮನ್ನು ಜೀವಂತವಾಗಿ ಬಿಟ್ಟರೆ ಬಾರೀ ಮೆರಿತೀರಿ, ನಿಮ್ಮನ್ನು ಜೀವಂತ ಸುಟ್ಟು ಹಾಕುತ್ತೇವೆ” ಎಂದು ೪ ಗುಡಿಸಲುಗಳಿಗೆ ಬೆಂಕಿಯಿಟ್ಟು ಬೂದಿ ಮಾಡಿ ಅಟ್ಟಹಾಸ ಮೆರೆಯುತ್ತಾರೆ. ಗಲಾಟೆಯ ಕಾರಣದಿಂದ ಎಲ್ಲರೂ ಗುಡಿಸಲುಗಳಿಂದ ಹೊರ ಬಂದಿದ್ದರಿಂದ ಯಾರಿಗೂ ಪ್ರಾಣಾಪಾಯವಾಗಲಿಲ್ಲ. ಸಿಮೆಂಟ್ ಶೀಟುಗಳಿಂದ ನಿರ್ಮಿಸಿಕೊಂಡಿದ್ದ ದಲಿತರ ಮನೆಗಳನ್ನು ಸವರ್ಣೀಯರು ಪುಡಿಗಟ್ಟುತ್ತಾರೆ. ಊರಿನಲ್ಲಿ ಬಂದೂಬಸ್ತಿಗೆಂದು ನಿಯೋಜಿಸಿದ್ದ ಪೊಲೀಸರ ಮೇಲೂ ಕಲ್ಲುತೂರಾಟ ನಡೆಸಿ ಹಲ್ಲೆ ಮಾಡುತ್ತಾರೆ. ಇದರಿಂದ ತಲೆಗೆ ಪೆಟ್ಟು ಬಿದ್ದು ಇಬ್ಬರು ಪೊಲೀಸರ ತೀರ್ವ ಗಾಯಗೊಳ್ಳುತ್ತಾರೆ. ತೀರ್ವವಾಗಿ ಗಾಯಗೊಂಡಿದ್ದ ೨೭ ದಲಿತರನ್ನು ಆಸ್ಪತ್ರೆಗೆ ದಾಖಲಿಸಿ ೧೫ ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ.
ಮುಖ್ಯಮಂತ್ರಿಯವರಿಗೆ ಮನವಿ
ಈ ಪ್ರಕರಣದ ತೀವ್ರತೆಯನ್ನು ಅರಿತ ಸಿಪಿಐ(ಎಂ), ಕೆಪಿಆರ್‌ಎಸ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ದಲಿತ ಹಕ್ಕುಗಳ ಸಮಿತಿಯ ಮುಖಂಡರುಗಳು ಮರುಕುಂಬಿ ಗ್ರಾಮಕ್ಕೆ ಭೇಟಿ ನೀಡಿ ನೊಂದ ದಲಿತರಿಗೆ ಧೈರ್ಯ ತುಂಬುತ್ತಾರೆ. ಈ ಪ್ರಕರಣವನ್ನು ಖಂಡಿಸಿ, ತಪ್ಪಿತಸ್ತರಿಗೆ ಉಗ್ರ ಶಿಕ್ಷೆಯಾಗಬೇಕು ಮತ್ತು ಹಳ್ಳಿಗಳಲ್ಲಿ ಜಾತಿ ದೌರ್ಜನ್ಯ ನಿಂತು ಶಾಂತಿ ನೆಲೆಸಬೇಕು ಹಾಗೂ ದೌರ್ಜನ್ಯಕ್ಕೆ ಒಳಗಾಗಿರುವ ದಲಿತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಈ ಮುಖಂಡರುಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೇಟಿ ಮಾಡಿ ಮನವಿ ಸಲ್ಲಿಸುತ್ತಾರೆ. ಈ ತಂಡದಲ್ಲಿ ಸಿಪಿಐಎಂನ ಅಂದಿನ ರಾಜ್ಯ ಕಾರ್ಯದರ್ಶಿಗಳಾಗಿದ್ದ ಜಿ.ವಿ. ಶ್ರೀರಾಮರೆಡ್ಡಿ, ಮುಖಂಡರಾದ ಜಿ.ಎನ್. ನಾಗರಾಜ್, ನಿತ್ಯಾನಂದಸ್ವಾಮಿ, ಜಿ.ಸಿ. ಬಯ್ಯಾರೆಡ್ಡಿ, ಮಾರುತಿ ಮಾನ್ಪಡೆ, ಚಂದ್ರಪ್ಪ ಹೊಸ್ಕೆರಾ ಮತ್ತಿತರ ನಾಯಕರು ಭಾಗಿಯಾಗಿದ್ದರು.
ಮೂರು ದಿನ ೫೫ ಕಿಮೀ ಪಾದಯಾತ್ರೆ
ಮಾತ್ರವಲ್ಲದೆ, ಸಿಪಿಐ(ಎಂ) ನೇತೃತ್ವದಲ್ಲಿ ಕೆಪಿಆರ್‌ಎಸ್, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ, ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ದಲಿತ ಹಕ್ಕುಗಳ ಸಮಿತಿ, ಭಾರತ ವಿಧ್ಯಾರ್ಥಿ ಫೆಡರೇಷನ್ ಜಂಟಿಯಾಗಿ ದಲಿತರ ರಕ್ಷಣೆಗೆ ಹಾಗೂ ನ್ಯಾಯಕ್ಕಾಗಿ ವ್ಯಾಪಕ ಚಳುವಳಿಯಲ್ಲಿ ತೊಡಗಿದ್ದವು. ೨೦೧೪ರ ಆಗಸ್ಟ್ನಲ್ಲಿ ಮರುಕುಂಬಿಯಿAದ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಗೆ ಸುಮಾರು ೫೫ ಕಿಲೋಮೀಟರ್‌ಗಳನ್ನು ಮೂರು ದಿನ ಪಾದಯಾತ್ರೆ ಮಾಡಿ ಪ್ರತಿಭಟಿಸಲಾಯ್ತು. ಇದರಿಂದಾಗಿ ಮನೆ ಕಳೆದುಕೊಂಡವರಿಗೆ ಮತ್ತು ದೌರ್ಜನ್ಯಕ್ಕೆ ಒಳಗಾದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸ್ವಲ್ಪಮಟ್ಟಿನ ಪರಿಹಾರ ದೊರಕಿಸಿಕೊಡಲು ಸಾಧ್ಯವಾಯಿತು.
ಈ ಪ್ರಕರಣದಲ್ಲಿ ದಲಿತರ ರಕ್ಷಣೆಗೆ ನಿಂತ ಸಿಪಿಐ(ಎಂ) ಪಕ್ಷದ ಅಂದಿನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗಂಗಾಧರ ಸ್ವಾಮಿ ಹಾಗೂ ಅವರ ಪತ್ನಿ ಸೇರಿದಂತೆ ಪಕ್ಷದ ಇತರೆ ಮುಖಂಡರು, ಸದಸ್ಯರ ಮೇಲೂ ಹಲ್ಲೆ ನಡೆಸಲಾಗಿತ್ತು.
ರೈಲ್ವೇ ಹಳಿಗಳ ಮೇಲೆ ಶವವಾಗಿ ಸಾಕ್ಷಿದಾರ ವೀರೇಶಪ್ಪ
ಈ ಮಧ್ಯ ಗುಡಿಸಲಿಗೆ ಬೆಂಕಿಯಿಟ್ಟ ಮತ್ತು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಸಿದಂತೆ ಮೂವರು ಪಂಚನಾಮೆ ಸಾಕ್ಷಿದಾರರಾದ ವೀರೇಶಪ್ಪ, ಬಸವರಾಜು ಮತ್ತು ದೇವರಾಜು ಜಿಲ್ಲಾ ನ್ಯಾಯಾಲಯದಲ್ಲಿ ಹಾಜರಾಗಿ ಒಮ್ಮೆ ಸಾಕ್ಷಿ ನುಡಿದಿದ್ದರು. ಸಾಕ್ಷಿ ಹೇಳಿ ಬಂದ ಮೂರೇ ದಿನಗಳಲ್ಲಿ ಸಾಕ್ಷಿದಾರನಾಗಿದ್ದ ಮರುಕುಂಬಿಯ ದಲಿತ, ಸಿಪಿಐ(ಎಂ) ಪಕ್ಷದ ಕಾರ್ಯಕರ್ತ ಹಾಗೂ ಕೃಷಿ ಕೂಲಿಕಾರರ ಸಂಘದ ಮುಖಂಡರಾಗಿದ್ದ ವೀರೇಶಪ್ಪ ಕೊಪ್ಪಳದ ರೈಲ್ವೇ ಹಳಿಗಳ ಮೇಲೆ ಶವವಾಗಿ ಬಿದ್ದಿದ್ದ. ಇದು ದ್ವೇಷದಿಂದಲೇ ನಡೆಸಿದ ಕೊಲೆಯಾಗಿದ್ದು, ಇದನ್ನು ಸೂಕ್ತ ತನಿಖೆಗೆ ಒಳಪಡಿಸಬೇಕೆಂದು, ಗ್ರಾಮದಲ್ಲಿ ಶಾಂತಿ ಹಾಗೂ ದಲಿತರ ರಕ್ಷಣೆಗಾಗಿ ಆಗ್ರಹಿಸಿ ಗಂಗಾವತಿ ಪೊಲೀಸ್ ಠಾಣೆಯ ಎದುರು ಸುರಿಯುವ ಮಳೆಯ ನಡುವೆಯೇ ಪ್ರತಿಭಟನೆ ನಡೆಯುತ್ತದೆ. ಈ ಪ್ರತಿಭಟನೆಯಲ್ಲಿ ಸಿಪಿಐ(ಎಂ)ನ ಪೊಲೀಟ್ ಬ್ಯೂರೋ ಸದಸ್ಯರಾದ ಎಂ.ಎ. ಬೇಬಿ ಮತ್ತು ದಲಿತ ಶೋಷಣ್ ಮುಕ್ತಿ ಮಂಚ್‌ನ ರಾಷ್ಟೀಯ ಅಧ್ಯಕ್ಷರಾಗಿದ್ದ ಕೆ. ರಾಧಕೃಷ್ಣನ್‌ರವರು ಭಾಗವಹಿಸುತ್ತಾರೆ. ಪ್ರತಿಭಟನೆ ನಡೆಸಿದ ಕಾರಣಕ್ಕೆ ಹತ್ತಾರು ಮುಖಂಡರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು.
ಬೆಂಗಳೂರಿಗೆ ೩೭೦ ಕಿಮೀ ಪಾದಯಾತ್ರೆ
ಮರುಕುಂಬಿ ದಲಿತರಿಗೆ ನ್ಯಾಯ ಕೇಳಿ ಮತ್ತು ವೀರೇಶಪ್ಪನ ಕೊಲೆ ಪ್ರಕರಣವನ್ನು ತನಿಖೆಗೆ ಒಳಪಡಿಸಿ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಮರುಕುಂಬಿಯಿಂದ ಬೆಂಗಳೂರಿಗೆ ೨೦೧೪ ನವೆಂಬರ್ ೧೯ ರಂದು ಪಾದಯಾತ್ರೆಯನ್ನು ನಡೆಸಲಾಯಿತು. ೧೫ ದಿನಗಳ ಕಾಲ, ಸುಮಾರು ೩೭೦ ಕಿಲೋಮೀಟರ್ ಪಾದಯಾತ್ರೆಯಲ್ಲಿ ನೂರಾರು ಮಹಿಳೆಯರೂ ಸೇರಿದಂತೆ ಸುಮಾರು ೩೦೦ಕ್ಕೂ ಹೆಚ್ಚು ಜನ ಹೆಜ್ಜೆ ಹಾಕಿದರು. ಈ ಪಾದಯಾತ್ರೆಯಲ್ಲಿ ಸಿಪಿಐ(ಎಂ)ನ ಯು. ಬಸವರಾಜ, ಎಂ. ಬಸವರಾಜ, ಜಿ. ನಾಗರಾಜ, ನಿರುಪಾದಿ, ಗಂಗಾಂಧರಸ್ವಾಮಿ, ಮರಿನಾಗಪ್ಪ, ಮಂಜುನಾಥ್ ಡೆಗ್ಗಿ, ಹುಸೇನಪ್ಪ, ಹುಲಿಗೆಮ್ಮ, ದುರುಗಪ್ಪ ಬಡಿಗೇರಾ, ರಾಘವೇಂದ್ರ, ಭೀಮೇಶ್, ಹುಲ್ಲೇಶ್ ಬಡಿಗೇರಾ, ದುರಗೇಶ್ ಸೇರಿ ಹಲವರು ನೇತೃತ್ವ ನೀಡಿದ್ದರು. ಬೆಂಗಳೂರಿನ ಸ್ವತಂತ್ರö್ಯ ಉದ್ಯಾನವನದಲ್ಲಿ ಸಮಾವೇಶಗೊಂಡು, ಪ್ರಕರಣದ ತನಿಖೆ ಮಾಡಿ ಕೊಲೆಗಡುಕರನ್ನು ಶಿಕ್ಷಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನಯ್ಯನವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದ್ದರು. ಆ ನಂತರ ರಾಜ್ಯ ಸರ್ಕಾರ ವೀರೇಶಪ್ಪ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿತು. ಹಲವರನ್ನು ವಿಚಾರಣೆಗೊಳಪಡಿಸಿದರೂ ಸರಿಯಾದ ಸಾಕ್ಷಾö್ಯಧಾರಗಳಿಲ್ಲ ಎನ್ನುವ ಕಾರಣ ನೀಡಿ, ಯಾವುದೇ ನ್ಯಾಯ ಸಿಗದೆ ವೀರೇಶಪ್ಪನ ಕೊಲೆ ಪ್ರಕರಣ ಅಂತ್ಯಕಂಡಿತ್ತು.
ಬದುಕನ್ನು ಅರಸಿ ಪಟ್ಟಣಗಳಿಗೆ ವಲಸೆ
ಮರುಕುಂಬಿ ಗ್ರಾಮದ ಬೆರಳೆಣ ಕೆಯ ಕೆಲವು ದಲಿತರಿಗೆ ಮಾತ್ರ ಅರ್ಧ ಅಥವಾ ಒಂದು ಎಕ್ಕರೆಯಷ್ಟು ಭೂಮಿ ಇತ್ತು. ಅದನ್ನು ನಂಬಿ ಜೀವನ ನಡೆಸುವುದು ಕಷ್ಟಕರವಾಗಿತ್ತು. ಕೂಲಿಯನ್ನೇ ನಂಬಿ ಬದುಕಿದ್ದ ದಲಿತ ಕೂಲಿಕಾರರಿಗೆ ಸವರ್ಣೀಯರು ತಮ್ಮ ಜಮೀನಿನಲ್ಲಿ ಕೂಲಿ ಕೆಲಸ ನೀಡಲಿಲ್ಲ. ಈ ಎಲ್ಲಾ ಘಟನೆಗಳಿಂದ ಬೇಸತ್ತಿದ್ದ ದಲಿತರು ಗ್ರಾಮಗಳನ್ನು ಬಿಡಲು ಆರಂಬಿಸಿದ್ದರು, ಬದುಕನ್ನು ಅರಸಿ ಪಟ್ಟಣಗಳಿಗೆ ವಲಸೆ ಹೋಗಿ ಅಲ್ಲಿ ಕೂಲಿ ಮಾಡಿ ಬದುಕನ್ನು ಕಂಡುಕೊಳ್ಳಲು ಹರಸಾಹಸ ಪಟ್ಟರು. ಹುಟ್ಟಿ ಬೆಳೆದ ಭೂಮಿಯನ್ನು ಬಿಟ್ಟು ಪರ ಊರುಗಳಿಗೆ ಹೋಗಿ ನೆಲೆಸುವ ದಾರುಣ ಸ್ಥಿತಿ ನಿರ್ಮಾಣವಾಯಿತು. ಸಮಾಜದ ಅತ್ಯಂತ ಅನಿಷ್ಟ ಜಾತಿ ಪದ್ಧತಿಯಲ್ಲಿ ಸಿಲುಕಿಕೊಂಡು ದೌರ್ಜನ್ಯವನ್ನು ಸಹಿಸಲಾಗದೆ, ಅದನ್ನು ಎದುರಿಸಿ ಜೀವನವನ್ನು ಕಟ್ಟಿಕೊಳ್ಳಲೂ ಆಗದೆ ಹೆಣಗಾಡಿದ ದಲಿತರ ಸ್ಥಿತಿಯನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಕಷ್ಟದ ಕೆಲಸ.
೨೦೧೪ರಿಂದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ
ದಲಿತರ ಗುಡಿಸಲುಗಳನ್ನು ಸುಟ್ಟ ಮತ್ತು ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣ ೨೦೧೪ರಿಂದ ಕೊಪ್ಪಳದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ೧೧೭ ಜನರ ಮೇಲೆ ಆರೋಪ ಪಟ್ಟಿ ಹೊರಿಸಲಾಗಿತ್ತು. ೧೧೭ ಜನರಲ್ಲಿ ಇಬ್ಬರ ಹೆಸರು ಎರಡು ಸಾರಿ ಬಂದಿದೆ. ಹಾಗೂ ಒಬ್ಬರ ಹೆಸರು ಅಸ್ತಿತ್ವದಲ್ಲಿ ಇಲ್ಲದ ಕೃತಕ ಹೆಸರಾಗಿತ್ತು. ಅಂದರೆ, ಆರೋಪ ಪಟ್ಟಿಯಲ್ಲಿ ದಾಖಲಾದ ವ್ಯಕ್ತಿಗಳ ಸಂಖ್ಯೆ ೧೧೪ ಮಾತ್ರ. ವಿಚಾರಣೆಯ ಹಂತದಲ್ಲಿನ ಹತ್ತು ವರ್ಷಗಳಲ್ಲಿ ೧೧ ಜನ ನಿಧನರಾಗಿದ್ದರು. ಅಂತಿಮವಾಗಿ ೧೦೧ ಜನರ ಮೇಲಿನ ಆರೋಪ ಸಾಬೀತಾಗಿದ್ದು, ಅದರಲ್ಲಿ ೯೮ ಜನರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ೫೦೦೦ ರೂ. ದಂಡ ವಿಧಿಸಲಾಗಿದೆ. ೩ ಜನರಿಗೆ ೫ ವರ್ಷಗಳ ಕಠಿಣ ಶಿಕ್ಷೆ ಮತ್ತು ತಲಾ ೨೦೦೦ ರೂ. ದಂಡ ವಿಧಿಸಲಾಗಿದೆ. ಇಬ್ಬರು ಬಾಲ ನ್ಯಾಯಮಂಡಳಿ ವ್ಯಾಪ್ತಿಗೆ ಒಳಪಟ್ಟಿದ್ದರು. ೨೭ ಜನರು ಸಾಕ್ಷಿಗಳಾಗಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು.
ದೇಶದ ಗಮನವನ್ನು ಸೆಳೆದಿದ್ದ ಈ ಪ್ರಕರಣದ ಆರೋಪಿಗಳನ್ನು ಅಪರಾಧಿಗಳೆಂದು ಸಾಬೀತುಪಡಿಸಿ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಅಂದು ಈ ಪ್ರಕರಣ ದೇಶದ ಗಮನ ಸೆಳೆದಿತ್ತು. ಈಗ ಬಂದಿರುವ ನ್ಯಾಯಾಲಯದ ತೀರ್ಪು ಕೂಡಾ ದೇಶದ ಗಮನ ಸೆಳೆದಿದೆ. ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಕೇಳಲು ಭಯಬೀಳುತ್ತಿದ್ದ ದಲಿತರಿಗೆ ದೈರ್ಯನೀಡಿದ ಕೆಂಬಾವುಟದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ಮುಖಂಡರು ಇವರಿಗೆ ಧೈರ್ಯ ತುಂಬಿ, ಅವರನ್ನು ಸಂಘಟಿಸಿ ಸ್ವಾಭಿಮಾನದ ಮತ್ತು ಬದುಕಿನ ಹೋರಾಟವನ್ನು ಕಟ್ಟಿದರು. ಇವರೆಲ್ಲರ ನಿರಂತರ ಹೋರಾಟದ ಭಾಗವಾಗಿ ಇಂದು ನೊಂದ ದಲಿತರಿಗೆ ನ್ಯಾಯ ಸಿಕ್ಕಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಈ ಪ್ರಕರಣ ಜಾತಿ ಮನಸುಗಳಿಗೆ ಒಂದು ಪಾಠವಾಗಿ, ಎಲ್ಲರೂ ಮನುಷ್ಯರಾಗಿ, ಜಾತಿ ಮತಗಳನ್ನು ಬಿಟ್ಟು ಒಟ್ಟಿಗೆ ಬಾಳುವ ದಾರಿಯನ್ನು ತೋರುವಂತಾಗಲಿ.