Sunday, June 23, 2024

ಸತ್ಯ | ನ್ಯಾಯ |ಧರ್ಮ

ತುಂಗೆ ಓಡಿದ ರಭಸಕ್ಕೆ ನಡುಗಿಹೋದ ಮಾರಯ್ಯ

(ಈ ವರೆಗೆ…)

ಕೊನೆಗೂ ಮಾರಯ್ಯನ ಜತೆ ಸಂಸಾರ ಮಾಡಲು ತುಂಗೆ ಒಪ್ಪಿಕೊಂಡಳು. ಅವ್ವ ಸ್ವಲ್ಪವೂ ತಡಮಾಡದೆ ಪ್ರಸ್ತದ ಶಾಸ್ತ್ರಕ್ಕೆ ಏರ್ಪಾಡು ಮಾಡಿಯೇ ಬಿಟ್ಟಳು.. ಊರವರನ್ನೆಲ್ಲ ಕರೆದು ಊಟ ಹಾಕಿಸಿದಳು. ಇತ್ತ ತುಂಗೆ ಮಾರಯ್ಯನನ್ನು ಗಂಡ ಎಂದು ಒಪ್ಪಿಕೊಳ್ಳಲು ಮನಸನ್ನು ಆದಷ್ಟೂ ಸಿದ್ಧಮಾಡಿಕೊಂಡು ಮಲಗುವ ಕೋಣೆಗೆ ನಡೆದಳು. ಮುಂದೇನಾಯ್ತು? ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಇಪ್ಪತ್ತೊಂಭತ್ತನೆಯ ಕಂತು.

ಮಾರಯ್ಯನನ್ನು ಗಂಡನೆಂದು ಒಪ್ಪಿಕೊಳ್ಳಲಾರದ ತುಂಗೆಯ ಮನಸ್ಸಿನ ತೊಳಲಾಟ, ಕಣ್ಣೀರಾಗಿ ಹರಿದು ನಿಟ್ಟುಸಿರು ಬಿಟ್ಟಿತು. ಆ ಕ್ಷಣ ಅವಳಿಗೆ ಪ್ರಸ್ತದ ಕೋಣೆಯಿಂದ ಓಡಿಬಿಡಬೇಕು ಎನ್ನಿಸಿತಾದರು, ಎದೆ ಕುಕ್ಕುವಂತಹ ಊರವರ ಗೇಲಿ ಮಾತುಗಳು, ತಲೆ ಎತ್ತಿ ಓಡಾಡಲಾರದೆ ಒದ್ದಾಡುತ್ತಿದ್ದ ಅವ್ವ ಅಪ್ಪನ ಸಂಕಟದ ನಿಟ್ಟುಸಿರು ಅವಳನ್ನು ಆ ಕೋಣೆಯ ಬಾಗಿಲಲ್ಲೇ ಹಿಡಿದು ನಿಲ್ಲಿಸಿತು‌.

ಮನಸ್ಸಿನ ತುಂಬಾ ತುಂಗೆಯನ್ನೇ ತುಂಬಿಕೊಂಡು ಅವಳ ಹಾಸಿಗೆಯಲ್ಲಿ ಅಂಗಾತ ಮಲಗಿ, ಮುಂದಿನ ಕ್ಷಣ ಎದುರಾಗಬಹುದಾದ ಆನಂದದ ರಸಗಳಿಗೆ ನೆನೆದು ಉತ್ಸಾಹದಲ್ಲಿ ತೇಲುತ್ತಿದ್ದ ಮಾರಯ್ಯನನ್ನು, ತುಂಗೆಯ ಕೇಳಿಯೂ ಕೇಳದಂತಹ ಸಣ್ಣ ಬಿಕ್ಕಳಿಕೆಯೊಂದು ವಾಸ್ತವಕ್ಕೆ ಎಳೆದು ತಂದಿತು. ಅಲ್ಲಿಯವರೆಗು ಬಿಡು ಬೀಸಾಕಿ ಮಲಗಿದ್ದ ಮಾರಯ್ಯ ಚಾಟಿ ಏಟು ತಿಂದವನಂತೆ ಧಡಕ್ಕನೆ ಮೇಲೆದ್ದು ಹಾಸಿಗೆಯಿಂದ ಮಾರು ದೂರ ಸರಿದು ನಿಂತ. ಬಾಯಿಗೆ ಸೆರಗೊತ್ತಿ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ಹತ್ತಿಕ್ಕಲು ಹೆಣಗುತ್ತಿದ್ದ ತುಂಗೆಯನ್ನು ಕಂಡು ಅವನಿಗೆ ಏನು ಮಾಡಬೇಕೆಂದು ತೋಚಲಿಲ್ಲ. “ಯಾಕ್ ತುಂಗವ್ವ ಅಲ್ಲೇ ನಿಂತ್ಕೊಂಡೆ…. ಅಳುವಂತದ್ದು ಏನಾಯ್ತು” ಎಂದು ಭಯದಲ್ಲಿಯೇ ತೊದಲಿದ.  ಏನೊಂದು ಮಾತಾಡದ ತುಂಗೆ ನಿಂತ ಜಾಗದಲ್ಲಿ ಕುಸಿದು ಮೊಳಕಾಲ ಒಳಗೆ ಮುಖ ತೂರಿಸಿ ಕೂತಳು. ಅವನ ದನಿ, ಕಿವಿ ಮೇಲೆ ಬಿದ್ದದ್ದೆ ಅವಳ ದುಃಖ ಮತ್ತಷ್ಟು ಹೆಚ್ಚಾಯಿತು.

ಮಾರಯ್ಯನಿಗೆ ಸೊರ ಸೊರ ಗೊಣ್ಣೆ ಎಳೆದು ಕೊಳ್ಳುತ್ತಾ, ಮಗುವಿನಂತೆ ಬಿಕ್ಕಳಿಸುತ್ತಿದ್ದ  ಹೆಂಡತಿಯನ್ನು, ಸಮಾಧಾನಿಸಿ ಹಾಸಿಗೆಗೆ ಕರೆತರಬೇಕೆಂದು ಉತ್ಕಟವಾಗಿ ಆಸೆಯಾಯಿತು. ಆದರೆ ಕಳೆದ ಬಾರಿ ಪ್ರಸ್ತದ ಕೋಣೆಯಲ್ಲಿ ಅವಳು ಎಬ್ಬಿಸಿದ ಅವಾಂತರ ನೆನೆದು  ತೆಪ್ಪಗಾದ.  ಅವಳ ಹತ್ತಿರ ಹೋಗಲು ಧೈರ್ಯವಾಗದೆ ದೂರದಲ್ಲಿಯೇ ನಿಂತು. “ಇದ್ರಲ್ಲಿ ನನ್ನ ತಪ್ಪು ಏನಿದ್ದಾತು ಹೇಳು ತುಂಗವ್ವ, ನಿಮ್ಮ ಅಪ್ಪೊರು ತಾನೆ, ನನ್ ಮಗ್ಳು ಕೊಡ್ತಿನಿ ನಮ್ಮ ಹೊಲ ಗದ್ದೆ ಗೆಯ್ಕೊಂಡಿರು ಅಂತ ನನ್ನ ಕರ್ಕೊಂಡು ಬಂದು  ನಿನ್ ಮೇಲೆ ನನಗೆ ಆಸೆ ಹುಟ್ಟೋ ಹಂಗ್ ಮಾಡಿದ್ದು. ನೀನೇ ನೋಡ್ದಂಗೆ  ನನ್ನಂಗ್ ಬಂದೋರು ಎಷ್ಟು ಜನ ನಿಮ್ಮ್ ಅಪ್ಪೋರ್  ಕಾಟ ತಡಿನಾರದೆ ಹೊಂಟ್ಹೊದ್ರು ಹೇಳು. ನಾನ್ ಯಾಕೆ ಅದ್ನೆಲ್ಲ ತಡ್ಕೊಂಡು ಇದ್ದೀನಿ ಗೊತ್ತಾ ತುಂಗವ್ವ, ನಿನ್ ಮೇಲಿನ ಪಿರೂತಿಯಿಂದ. ಇವತ್ತಲ್ಲ ನಾಳೆ ನನಗೆ ನಿನ್ನ ಕೊಟ್ಟು ಮದುವೆ ಮಾಡೇ ಮಾಡ್ತರೆ ಅನ್ನೋ ನಂಬ್ಕೆಯಿಂದ. ನಿಜ್ವಾಗ್ಲು ನಿನ್ನ ಆಸ್ತಿ ಅಂತಸ್ತು ನೋಡಿ ಅಲ್ಲ ಕನವ್ವ” ಎಂದು ಗದ್ಗದಿತನಾದ.

ಮಾರಯ್ಯನ ಕಟ್ಟಿದ ಗಂಟಲ ಸದ್ದು ಕೇಳಿ ತುಂಗೆ ತಲೆಯೆತ್ತಿ ಅವನನ್ನೇ ದಿಟ್ಟಿಸಿ ನೋಡಿದಳು. ಅರಿವಿಲ್ಲದೆ ಇಬ್ಬರ ಕಣ್ಣುಗಳು ಒಂದಕ್ಕೊಂದು ಬೆಸೆದು ಕೊಂಡವು. ಕಣ್ಣೀರು ತುಂಬಿ ಕೊಂಡಿದ್ದ ಮಾರಯ್ಯನ ಬಗ್ಗೆ ಕನಿಕರಗೊಂಡ ತುಂಗೆ ” ನೀನೊಬ್ಬ ನನ್ನ ಮೆಚ್ಕೋ ಬುಟ್ರೆ ಸಾಕಾ. ಯಾವತ್ತಾದ್ರೂ ನಾನು ಅವಳಿಗೆ ಇಷ್ಟ ಐಯ್ತೋ ಇಲ್ವೊ ಅಂತ ಯೋಚ್ನೆ ಮಾಡಿದ್ಯಾ?” ಎಂದು ತುಸು ಒರಟಾಗಿಯೇ ಕೇಳಿದಳು. ಅವಳ ಒರಟು ಮಾತಿನ ಹಿಂದಿರುವ ಪ್ರೀತಿಯ ಜಾಡು ಹಿಡಿದ ಮಾರಯ್ಯ, ಹತ್ತಿರ ಬಂದು “ಅಪ್ಪ ಅವ್ವುನ್ನ ಕಳ್ಳೊಂಡು ಅವ್ರಿವ್ರು ಹೊಲ್ದಲ್ಲಿ ಜೀತ ಮಾಡ್ಕೊಂಡೇ ಜೀವ್ನ ಹೊರ್ದೊನ್ಗೆ  ಈ‌ ಯೋಚ್ನೆ ಎಲ್ಲ ಹೆಂಗ್ ಬಂದಾತು ತುಂಗವ್ವ. ಹೆಂಗೋ ಬದುಕಂಚ್ಕೊಳಕೆ ಒಂದು ಜೀವ ಜೊತೆ ಆಯ್ತದಲ್ಲ ಅಂತ ನನಗೂ ಆಸೆ ಆಯ್ತು. ಇದು ತಪ್ಪೇನವ್ವ” ಎಂದು ಧೈರ್ಯ ಮಾಡಿ, ತಲೆತಗ್ಗಿಸಿ ಕುಳಿತಿದ್ದ ಅವಳ ಗಲ್ಲ ಹಿಡಿದು ಕೇಳಿದ. 

ಅವನ ಆರ್ದ್ರವಾದ ಅನುಕಂಪ ಹುಟ್ಟಿಸುವಂತಹ ಮಾತುಗಳು ತುಂಗೆಯ ಬಾಯಿ ಕಟ್ಟಿಸಿತು. ಏನೋ ಹೇಳಬೇಕೆಂದು ಕೊಂಡವಳು ಅವನ ಕಣ್ಣಿನಲ್ಲಿ ಒಸರುತ್ತಿದ್ದ ಪ್ರೀತಿಯನ್ನು ನಿರಾಕರಿಸಲಾರದೆ ಮತ್ತೆ ತಲೆತಗ್ಗಿಸಿದಳು. ಮಾರಯ್ಯನೆ ಮುಂದುವರಿದು “ಅಲ್ಲ ತುಂಗವ್ವ ನಿಮ್ಮಪ್ಪ, ಮಗ್ಳು ಕೊಡ್ತೀನಿ, ಮಗ್ಳು ಕೊಡ್ತೀನಿ, ಅಂತ ಗಟ್ಟಿಮುಟ್ಟಾಗಿರೊ ಗಂಡೈಕ್ಳುಗೆಲ್ಲಾ ಆಸೆ ಹುಟ್ಟ್ಸಿ ಕರ್ಕೊಂಡ್ ಬಂದು ಜೀತುಕ್ಕೆ ಮಡಿಕೊಬೇಕಾದ್ರೆ ನೀನು ಯಾಕವ್ವ ಸುಮ್ಕಿದ್ದೆ , ಅಪ್ಪುನ್ ಸಮುಕ್ಕೆ ನೀನು ನಿಂತು ಕೆಲ್ಸ ತಗುಸ್ತಿದ್ದೆ. ಅವತ್ತು ನಿಮ್ಮಪ್ಪಂಗೆ ಬುದ್ಧಿ ಹೇಳಿ ಸರಿ ಮಾಡ್ಕೊಂಡಿದ್ದಿದ್ರೆ ಇವತ್ತು ನಮ್ಮಿಬ್ರುಗು ಇಂಥ ಪರುಸ್ಥಿತಿ ಬತ್ತಿರ್ಲಿಲ್ಲ ಅಲ್ವೆನವ್ವ ?.. ಎಂದು ಕೇಳಿದ.

ಈ ದಾರಿಯಲ್ಲಿ ಯಾವತ್ತೂ ಯೋಚನೆ ಮಾಡದ ತುಂಗೆ ಆ‌ ಕ್ಷಣ ದಿಗ್ಮೂಡಳಾಗಿ ಕುಳಿತು ಬಿಟ್ಟಳು. ಅವಳಿಗೂ ಮಾರಯ್ಯನ ಮಾತು ಸರಿ ಎನ್ನಿಸಿತು. ತನ್ನೊಳಗೂ ಇದ್ದಂತಹ ಅಪ್ಪನ ಕೆಟ್ಟ ಗುಣ ಅವಳನ್ನು ಇರಿದಂತಾಯಿತು. ಒಮ್ಮೆಲೇ ದುಃಖ ಒತ್ತರಿಸಿ ಬಂದಿತು. ಮಾರಯ್ಯನನ್ನು ಎದುರುಗೊಳ್ಳಲಾರದೆ,  ದಡ ದಡನೆ ಅಟ್ಟದಿಂದ ಕೆಳಗಿಳಿದು ಬಂದಳು. ಹಜಾರದ ಮೂಲೆಯಲ್ಲಿ ಹಾಕಿದ್ದ ಮಂಚದ ಮೇಲೆ ಬಿದ್ದುಕೊಂಡು  ಒಂದೇ ಸಮನೆ ಅಳತೊಡಗಿದಳು. 

ತುಂಗೆ  ಓಡಿ ಹೋದ ರಭಸಕ್ಕೆ ನಡುಗಿಹೋದ ಮಾರಯ್ಯ ಇನ್ನೆಲ್ಲಿ ಬೀದಿಗೆ ಹೋಗಿ ಬಿಡುವಳೋ ಎಂದು ಅಂಜಿ  ಹಿಂದೆಯೇ ಓಡಿ ಬಂದ. ಅವಳು ಮಂಚದಲ್ಲಿ ಬಿದ್ದುಕೊಂಡದ್ದನ್ನು ಕಂಡು ತುಸು ಸಮಾಧಾನಗೊಂಡ. ಅವಳಿಂದ ಮಾರು ದೂರವೇ ನಿಂತು “ತಪ್ಪಾಯ್ತು ತುಂಗವ್ವ ನಾನು ಹಂಗ್ ಮಾತಾಡಬಾರ್ದಿತ್ತೇನೋ. ನಿನ್ ಕಣ್ಣೀರು ನೋಡ್ಲಾರ್ದೆ ಹಂಗ್ ಕೇಳ್ಬುಟ್ಟೆ. ನೀನು ಹಿಂಗೆ ಬೇಜಾರ್ ಮಾಡ್ಕೊತಿಯ ಅಂತ ನಂಗೊತ್ತಾಗ್ಲಿಲ್ಲ‌. ಹೋಗ್ಲಿ ಬುಡು ನಿನ್ಗೆ ಯಾವತ್ತು ನನ್ಜೊತೆ ಸಂಸಾರ ಮಾಡ್ಬೇಕು ಅನ್ನುಸ್ತದೊ ಅವತ್ತೆ ನಾನು ನಿನ್ನ ಅತ್ರುಕ್ಕೆ ಬತ್ತಿನಿ. ನಿನ್ ದಮ್ಮಯ್ಯ ನಾಕ್ ಜನುದ ಎದ್ರಿಗೆ ಮಾತ್ರ ರಂಪ ರಾಮಾಯಣ ಮಾಡಿ ನಮ್ಮಾನ ಹರಾಜಾಕ್ಬ್ಯಾಡ  ತುಂಗವ್ವ” ಎಂದು ನೀಡಿದ್ದ ಅವಳ ಕಾಲಿನ ಮೇಲೆ ತನ್ನ ಹಣೆಯಿಟ್ಟು ಬಿಕ್ಕಿದ.

ಅಪ್ಪನ ದುರಾಸೆಗೆ ಬಲಿಯಾಗಿ ಹಗಲು ರಾತ್ರಿ ಎನ್ನದೆ ಮನೆ ಹೊಲದ ಚಾಕರಿ ಮಾಡುತ್ತಾ, ಮನೆಯವರು ಕಾಲಿನಲ್ಲಿ ತೋರಿದ್ದನ್ನು ತಲೆ ಮೇಲೆ ಹೊತ್ತು, ತನ್ನದೇ ಕೆಲಸ ಎನ್ನುವಂತೆ ಜೀವ ಕೊಟ್ಟು ಪೂರೈಸುತ್ತಿದ್ದ ಮಾರಯ್ಯನ ಗುಣ ನೆನೆದು ತುಂಗೆಯ ಜೀವ ಕರಗಿತು. ತನ್ನ ಪಾದಕ್ಕೆ ತಾಗಿದ್ದ ಅವನ ತಲೆ ಎತ್ತಿ ಎದೆಯ ಮೇಲೆ ಇರಿಸಿ ಕೊಂಡಳು. ಅವಳಿಗೆ ಕ್ಷಮೆ ಕೇಳಬೇಕೆನಿಸಿತು. ಮಾತು ಹೊರಡಲಿಲ್ಲ. ಕಣ್ಣು ಮುಚ್ಚಿಯೇ ಹಣೆಯ ತುಂಬಾ ಮುತ್ತನಿಕ್ಕಿದಳು.  ಈ ಆರು ತಿಂಗಳಿನಿಂದ ತನ್ನೊಳಗೆ ಧಗಧಗಿಸುತ್ತಿದ್ದ ಮೈಯ ಹಸಿವನ್ನು  ಅದುಮಿ ಅದುಮಿ ನಿಗ್ರಹಿಸಿಕೊಂಡೇ ಬಂದಿದ್ದ ಮಾರಯ್ಯನಿಗೆ, ಒಮ್ಮೆಲೇ ಅದುಮಿಟ್ಟ ಬಯಕೆಯ ಮಹಾ ಜ್ವಾಲೆ ಪುಟಿದು ನಿಂತಿತು. ಆದರೂ ಅವನು ಎಚ್ಚರ ತಪ್ಪಲಿಲ್ಲ. ಎಲ್ಲಿ ಎಡವಟ್ಟು ಮಾಡಿಬಿಡುವೆನೋ ಎನ್ನುವ ಅಂಜಿಕೆಯಲ್ಲಿಯೇ ಅವನ ಒರಟು ತನವನ್ನು ಬದಿಗಿಟ್ಟು, ತುಂಗೆಯ ಸುಕೋಮಲ ದೇಹವನ್ನು ಇಂಚೆಂಚೆ ಆವರಿಸ ತೊಡಗಿದ. ಉನ್ಮತ್ತಳಾದ ತುಂಗೆ ಕೆಲವೇ ನಿಮಿಷಗಳಲ್ಲಿ  ಕರಗಿ ನೀರಾಗಿ ಅವನೊಳಗೆ ಭೋರ್ಗರೆದು ದುಮ್ಮಿಕ್ಕಿದಳು.‌

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ಇದನ್ನು ಓದಿದ್ದೀರಾಪ್ರಸ್ತ ನೋಡಲು ರಚ್ಚೆ ಹಿಡಿದ ಚಿಳ್ಳೆ ಪಿಳ್ಳೆಗಳು

Related Articles

ಇತ್ತೀಚಿನ ಸುದ್ದಿಗಳು