Saturday, June 15, 2024

ಸತ್ಯ | ನ್ಯಾಯ |ಧರ್ಮ

ಮರೆಯಲಾಗದ ಮಹಾನ್ ಸತ್ಯಾಗ್ರಹಿ‌ ಅಂಕೋಲೆಯ ದೇವು ಹೊನ್ನಪ್ಪ ನಾಯ್ಕ

ರಾಷ್ರ್ಟದ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕನ್ನಡ ಜಲ್ಲೆಯ ಅಂಕೋಲೆಗೆ ವಿಶಿಷ್ಟ ಸ್ಥಾನ. ಕರ್ನಾಟಕದ ಬಾರ್ಡೋಲಿ ಎಂಬ ಬಿರುದು. ಅಂದು ಜೀವದ ಹಂಗು ತೊರೆದು ಬ್ರಿಟಿಷ್ ಸತ್ತೆಯ ವಿರುದ್ಧ ಹೋರಾಡಿ ಕಷ್ಟ-ನಷ್ಟಗಳನ್ನು ಅನುಭವಿಸಿದ ಬಹಳಷ್ಟು ಜನ ಈ ಭಾಗದಲ್ಲಿ ಇನ್ನೂ ನೋಡಲು ಸಿಗುತ್ತಾರೆ. ಸರಕಾರ ಅವರಿಗೆ ಗೌರವ ಮಾಶಾಸನ ನೀಡುತ್ತಿದೆ. ಆದರೆ ಅಂಕೋಲೆಯ ದೇವು ಹೊನ್ನಪ್ಪ ನಾಯ್ಕ ಇವರ ಹೋರಾಟದ ಕಥೆ, ಪಟ್ಟ ಪಾಡಿನ ರೀತಿಯೇ ಬೇರೆ. ಪ್ರಾಯಶಃ ಅವರಷ್ಟು ದೀರ್ಘಕಾಲ ಸಶ್ರಮ ಶಿಕ್ಷೆಗೆ ಒಳಗಾದವರು, ತ್ಯಾಗ ಮಾಡಿದವರು ಹಾಗೂ ಅವರಂತೆ ಸರಕಾರದಿಂದ ಒಂದು ಪೈಸೆಯನ್ನೂ ರಾಜಕೀಯ ಸಂತ್ರಸ್ತರಿಗೆ ಸಿಗುತ್ತಿರುವ ನೆರವು ಪಡೆಯದೇ ತತ್ವನಿಷ್ಠರಾಗಿಯೇ ಬಾಳಿದವರು ‘ಬಾರ್ಡೋಲಿ’ಯಲ್ಲಿ ಇನ್ನೊಬ್ಬರು ಸಿಗಲಾರರೇನೊ!

ದೇವು ನಾಯ್ಕ ಅವರ ಮನೆ

ಉಪ್ಪಿನ ಸತ್ಯಾಗ್ರಹ, ಕರಬಂಧಿ ಚಳುವಳಿ, ವಿದೇಶಿ ವಸ್ತುಗಳ ಬಹಿಷ್ಕಾರ, ಚಲೆಜಾವ್ ಸಂಗ್ರಾಮಗಳಲೆಲ್ಲ ಆಗ ಅಂಕೋಲಾ ತಾಲೂಕಿನಲ್ಲಿ ನಾಡವರದೇ ಪ್ರಮುಖ ಪಾತ್ರ. ನಾಮಧಾರಿ ಸಮಾಜಕ್ಕೆ ಸೇರಿದ ದೇವು ಹೊನ್ನಪ್ಪ ನಾಯ್ಕರು ವೃತ್ತಿಯಲ್ಲಿ ಹೆಂಡದ ಗುತ್ತಿಗೆ ದಾರರಾಗಿದ್ದರು.1920 ರಲ್ಲಿ ಕಾಂಗ್ರೆಸ್ ತತ್ವಗಳಿಗೆ ಬದ್ಧರಾಗಿ ಆ ಪಕ್ಷ ಸೇರಿದ ಮೇಲೆ ಸರಾಯಿ-ಸೇಂದಿಗಳನ್ನು ಬಹಿಷ್ಕರಿಸುವ ಅಂದಿನ ಕಾಂಗ್ರೆಸ್ ಧ್ಯೇಯಕ್ಕೆ ಬದ್ಧರಾಗಿ ಲಾಭಗಳಿಕೆಯ ಆ ಕೆಲಸಕ್ಕೆ ತೀಲಾಂಜಲಿ ನೀಡಿ ಬಡತನವನ್ನು ಸ್ವಸಂತೋಷದಿಂದ ಹೆಗಲಿಗೆ ಕಟ್ಟಿಕೊಡವರು ಮಾತ್ರವಲ್ಲ, ಹೆಂಡದ ವಿರುದ್ಧ ಊರೂರು ಅಲೆದು ಪ್ರಚಾರ ಕೈಗೊಂಡರು.

ಡಾ. ಹರ್ಡಿಕರ, ರಂಗನಾಥ ದಿವಾಕರ, ದ. ಪ. ಕಮರಕರ ಮುಂತಾದವರ ಒಡನಾಟದ ಮೇಲಂತೂ ದೇವು ನಾಯ್ಕರು ಅಪ್ಪಟ ದೇಶ ಪ್ರೇಮಿಯಾಗಿ ಕರಬಂಧಿ ಚಳುವಳಿಯೇ ಮುಂತಾದ ಹೋರಾಟದಲ್ಲಿ ಪಾಲ್ಗೊಂಡು ಅಪಾರ ಕಷ್ಟವನ್ನು ಅನುಭವಿಸಿದರು. ಇವರಿಗೆ 1932 ರಲ್ಲಿ ಆರು ತಿಂಗಳು ಸಶ್ರಮ ಸಜೆಯಾದುದಲ್ಲದೆ ಪುಂಡುಗಂದಾಯವನ್ನು ವಿಧಿಸಲಾಯಿತು. ಆ ನಿಮಿತ್ತ ಊಟದ ತಾಟನ್ನೂ ಬಿಡದೆ ಮನೆಯಲ್ಲಿದ್ದ ಎಲ್ಲ ದವಸ-ಧಾನ್ಯಗಳನ್ನು ಸರಕಾರ ವಶಪಡಿಸಿಕೊಂಡಿತು. ಇದನ್ನು ಕಂಡು ಮರುಗಿದ ಕರಮರಕರರು ಇವರಿಗೊಂದು ಪತ್ರ ಬರೆದು, ತಾಲೂಕಿನಲ್ಲಿ ಜಪ್ತಾದ ಮೊದಲ ಮನೆ ನಿನ್ನದಾದ್ದರಿಂದ ಅದನ್ನು ಸರಕಾರದಿಂದ ಮರಳಿ ಪಡೆಯುವ ಯತ್ನ ಮಾಡುವುದು ಬೇಡವೆಂದು ತಿಳಿಸಿ, ಒಂದು ತಂಬಿಗೆ ಮತ್ತು ಎರಡು ಪಿಂಗಣಿ ಬಟ್ಟಲುಗಳನ್ನು ಕಳಿಸಿಕೊಟ್ಟರು. ತತ್ವಕ್ಕೆ ಕಟಿಬದ್ದರಾಗಿದ್ದ ದೇವು ನಾಯ್ಕರ ಪತ್ನಿ ಕರಮರಕರರು ಕಳಿಸಿದ ಪಾತ್ರೆಗಳನ್ನು ವಾಪಸ್ ಕೊಟ್ಟು ಕಳುಹಿಸಿದರು. ಆರು ತಿಂಗಳು ಸಶ್ರಮ ಶಿಕ್ಷೆ ಮುಗಿದು ಬಿಡುಗಡೆ ಹೊಂದಿದ ಕೆಲವೇ ದಿನಗಳಲ್ಲಿ, ಸೇಂದಿ ಗಿಡಗಳಿಗೆ ಔಷಧಿ ಹಾಕಿದರೆಂಬ ಕಾರಣ ಮುಂದೊಡ್ಡಿ ಪುನಃ ಇವರನ್ನು ಬಂದಿಸಿ ಒಂದು ವರ್ಷದ ಸಶ್ರಮ ಕಾರಾಗೃಹವಾಸ ಶಿಕ್ಷೆ ವಿಧಿಸಲಾಯಿತು. 1941 ರಲ್ಲಿ ಪುನಃ ಮಹಾತ್ಮಾ ಗಾಂಧೀಜಿಯವರ ಅಪ್ಪಣೆ ಪಡೆದು ಸತ್ಯಾಗ್ರಹ ಮಾಡಿ ಯರವಾಡ ಹಾಗೂ ಹಿಂಡಲಗಿ ಜೇಲಿನಲ್ಲಿ ನಾಲ್ಕು ತಿಂಗಳ ಸಶ್ರಮ ಶಿಕ್ಷೆ ಅನುಭವಿಸಿದರು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಉಮೇಶ ನಾಯ್ಕ
ಶಿರಸಿ ( ಉತ್ತರ ಕನ್ನಡ ಜಿಲ್ಲೆ)

Related Articles

ಇತ್ತೀಚಿನ ಸುದ್ದಿಗಳು