ಬಹುಭಾಷಾ ಗಾಯಕಿ ಮಂಗ್ಲಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಆಯೋಜಿಸಿದ್ದ ಬರ್ತ್ ಡೇ ಪಾರ್ಟಿಯಲ್ಲಿ ಗಾಂಜಾ ಸೇರಿದಂತೆ ವಿದೇಶಿ ಮದ್ಯಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಂಗ್ಲಿ ಅವರ ಮೇಲೂ ಪ್ರಕರಣ ದಾಖಲಿಸಿದ ಬಗ್ಗೆ ವರದಿಯಾಗಿದೆ.
ಮಂಗಳವಾರ ರಾತ್ರಿ ಹೈದರಾಬಾದ್ ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್ನಲ್ಲಿ ಗಾಯಕಿ ಮಂಗ್ಲಿಯ ಬರ್ತ್ಡೇ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಪಾರ್ಟಿಯಲ್ಲಿ ತೆಲುಗು ಚಿತ್ರರಂಗ ಮತ್ತು ಕಿರುತೆರೆಯ ಹಲವರು ಭಾಗಿಯಾಗಿದ್ದರು. ಹಾಡು ನೃತ್ಯ ಸೇರಿದಂತೆ ಮದ್ಯದ ಪಾರ್ಟಿಯೂ ಸಹ ಕಾರ್ಯಕ್ರಮದಲ್ಲಿ ಜೋರಾಗಿ ನಡೆದಿತ್ತು.
ಈ ವೇಳೆ ಖಚಿತ ಮಾಹಿತಿ ಮೇರೆಗೆ ಕಾರ್ಯಕ್ರಮಕ್ಕೆ ಬಂದ ಪೊಲೀಸರಿಗೆ ಹಲವರ ಟೇಬಲ್ ನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿವೆ. ಇದಲ್ಲದೆ ಸ್ಥಳದಲ್ಲಿ ಪರವಾನಗಿ ಇಲ್ಲದ ವಿದೇಶಿ ಮದ್ಯ ಕೂಡ ಪತ್ತೆಯಾಗಿದೆ. ವಿದೇಶಿ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವೇಳೆ ಗಾಯಕಿ ಮಂಗ್ಲಿ ಅವರು ಮಧ್ಯೆ ಪ್ರವೇಶಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಪಾರ್ಟಿಯಲ್ಲಿದ್ದವರ ರಕ್ತದ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಲಾಗಿದೆ. 9 ಮಂದಿ ಗಾಂಜಾ ಸೇವಿಸಿರುವುದು ದೃಢವಾಗಿದೆ ಎಂದು ವರದಿ ತಿಳಿಸಿದೆ. ಅವರ ವಿರುದ್ಧ NDPS ಮತ್ತು ಸೌಂಡ್ ಪೊಲ್ಯೂಷನ್ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.