Friday, June 14, 2024

ಸತ್ಯ | ನ್ಯಾಯ |ಧರ್ಮ

ನಟನೆ ಕಳಚಿದ ಮೋಹನ..

(ಈ ವರೆಗೆ…)

ಪೂನಾಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಬಂದ ಮೋಹನ ಗಂಗೆಯನ್ನು ಕರೆದುಕೊಂಡು ಒಂದು ವೇಶ್ಯಾವಾಟಿಕೆ  ನಡೆಯುವ ಮನೆಗೆ ತಲಪುತ್ತಾನೆ. ಅಲ್ಲಿಯ ವ್ಯವಹಾರಗಳಲ್ಲಿ ಪಳಗಿದ ಆತ ಗಂಗೆಯ ವಿಚಾರದಲ್ಲಿ ಮೃದುವಾಗಿ ಆಕೆಯನ್ನು ಅಲ್ಲಿಂದ ತಪ್ಪಿಸಿ ಕರೆದುಕೊಂಡು ಹೋಗುವ ಯೋಚನೆ ಮಾಡುತ್ತಾನೆ. ಮುಂದೇನಾಯ್ತು? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತ ಮೂರನೆಯ ಕಂತು.

ಮುಂಜಾನೆ ಆ ಮನೆ ಕಣ್ಣು ತೆರೆಯುವುದಕ್ಕೂ ಮೊದಲೇ ಗಂಗೆಯನೆಬ್ಬಿಸಿಕೊಂಡು ರೈಲ್ವೆ ಸ್ಟೇಷನ್ ತಲುಪಿದ ಮೋಹನ ಮೈಕಿನಲ್ಲಿ ಕೇಳಿ ಬರುತ್ತಿದ್ದ ಅನೌನ್ಸ್‌ಮೆಂಟಿಗೆ ಕಿವಿ ಗೊಟ್ಟವನಂತೆ  ಮಾಡಿ “ಓ…ಟ್ರೈನು ಇನ್ನೂ ಎರಡು ಗಂಟೆ ತಡ ಅಂತೆ ಗಂಗೂ” ಎಂದು ಹೇಳಿ, ಜನಸಂದಣಿ ವಿರಳವಾಗಿದ್ದ ಕಲ್ಲು ಬೆಂಚಿನತ್ತ ಅವಳನ್ನು ಕರೆದುಕೊಂಡು ಹೋಗಿ ಕುಳಿತ. ರಾತ್ರಿಯಿಂದ ಹನಿ ನೀರು ಇಲ್ಲದಂತೆ ಕಾಲಿಯಾಗಿದ್ದ ಗಂಗೆಯ ಹೊಟ್ಟೆ ಹಸಿವಿನಿಂದ ಚುರುಗುಟ್ಟತೊಡಗಿತ್ತು. ಅವಳ ಗಮನ ಅಷ್ಟು ದೂರದಲ್ಲಿ ಹೊಗೆಯಾಡುತ್ತಿದ್ದ  ಕಾಫಿ ಶಾಪಿನತ್ತ ಹರಿಯಿತು. “ಏನೀ ಹೊಟ್ಟೆ ಬಾಳ ಹಸಿತೈತೆ ಅಲ್ಲೋಗಿ ಒಂದಿಷ್ಟು ಕಾಪಿ ಕುಡ್ದು ಬರನ” ಎಂದು ಮೋಹನನಲ್ಲಿ ಬೇಡಿಕೆ ಇಟ್ಟಳು. ಕಾಫಿ ಟೀ ಯಾವುದು ಅಭ್ಯಾಸವಿಲ್ಲದ ಮೋಹನ ” ಇಲ್ಲಿಗೇ ತಂದು ಕೊಡ್ತೀನಿ ಕೂತಿರು” ಎಂದು ಬಿಸ್ಕೆಟ್ ಪೊಟ್ಟಣದೊಂದಿಗೆ ಒಂದು ಕಪ್ ಕಾಫಿ ತಂದು ಕುಡಿಸಿದ.  ಬಿಸಿ ಕಾಫಿ ಹೊಟ್ಟೆಗೆ ಇಳಿಯುತ್ತಿದ್ದಂತೆ ಗಡಗುಟ್ಟಿಸುತ್ತಿದ್ದ ಚಳಿ ಮತ್ತು ಭುಗಿಲೆದ್ದಿದ್ದ ಹಸಿವುಗಳೆರಡು ಸ್ಥಿಮಿತಕ್ಕೆ ಬಂದಂತಾಗಿ ಗಂಗೆ ಮೋಹನನ ರಟ್ಟಿಯೊಳಗೆ ಕೈ ತೂರಿಸಿ ಬೆಚ್ಚಗೆ ಅವನ ಹೆಗಲಿಗೆ ತಲೆ ಆನಿಸಿ ನಿದ್ದೆಗೆ ಜಾರಿದಳು. ಹೀಗೆ ಕೆಲವು ಗಂಟೆಗಳು ಸರಿದು ಎಳೆ ಬಿಸಿಲು ಆವರಿಸತೊಡಗಿತ್ತು. ಮೃದುವಾಗಿ ಗಂಗೆಯನ್ನು ತಟ್ಟಿ ಎಬ್ಬಿಸಿದ ಮೋಹನ ” ತಿಂಡಿ ಕಟ್ಟಿಸಿಕೊಂಡು ಬರ್ತೀನಿ ಇಲ್ಲೇ ಕೂತಿರು ಗಂಗೂ” ಎಂದು ಹೇಳಿ ಹೊರಟ.

ಎಂದೂ ರೈಲನ್ನೇ ನೋಡದ ಗಂಗೆ, ಬಂದು ಹೋಗುತ್ತಿದ್ದ  ರೈಲುಗಳನ್ನೆಲ್ಲ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ, ಸಣ್ಣ ಮಕ್ಕಳಂತೆ ಬೋಗಿಗಳ ಲೆಕ್ಕಾಚಾರದ ಆಟದಲ್ಲಿ ತೊಡಗಿದ್ದಳು. ಹೀಗೆ ಒಂದಾದ ಮೇಲೆ ಒಂದು ರೈಲು ಬಂದು ಹೋಗುತ್ತಲೇ ಇತ್ತು. ಎಷ್ಟೊತ್ತಾದರು ಮೋಹನ ಮಾತ್ರ ಕಾಣಿಸಲೇ ಇಲ್ಲ.  ಕಾದು ಸಾಕಾದ ಗಂಗೆ ಕಣ್ಣು ಕಿರಿದು ಮಾಡಿಕೊಂಡು ಅವನು ಹೋದ ದಾರಿಯನ್ನೇ ನೋಡುತ್ತಾ “ಥೂ.. ಇವ್ರೇನು ಈಟೊತ್ತಾದ್ರು ಬರ್ಲಿಲ್ವಲ್ಲ” ಎಂದು ಗೊಣಗಿ ಕೊಂಡಳು.  

ಸ್ವಲ್ಪ ಹೊತ್ತಿನಲ್ಲೆ ಜೋಲು ಮೋರೆಯೊಂದಿಗೆ ಪ್ರತ್ಯಕ್ಷನಾದ  ಮೋಹನ, ತಂದ ತಿಂಡಿ ಪೊಟ್ಟಣವನ್ನು ಗಂಗೆಯ ಮುಂದೆ ಹಿಡಿದ. ಮಸಾಲೆ ದೋಸೆಯ ಘಮಲು ಅವಳ ಮೂಗಿಗೆ ಬಡಿಯುತ್ತಿದ್ದಂತೆ  ಶಾಂತವಾಗಿದ್ದ ಅವಳ ಹೊಟ್ಟೆಹಸಿವು ಭುಗ್ಗನೆ ಕೆರಳಿ ನಿಂತಿತ್ತು. ಸರಕ್ಕನೆ ಅವನಿಂದ ತಿಂಡಿ ಪೊಟ್ಟಣ ಕಸಿದು  ” ಹಾಯ್… ಮಸಾಲ್ ದ್ವೋಸೆ ನಾನ್ ಚಿಕ್ಕೊಳಿದ್ದಾಗ ನಮ್ಮ ಮಾವಯ್ಯ ಚುಂಚುನ್ಕಟ್ಟೆ ಜಾತ್ರೆಲಿ ತಿನ್ಸಿತ್ತು. ಅದ್ಬುಟ್ರೆ ಇವತ್ತೆ ನೋಡಿ ತಿಂತಿರದು” ಎಂದು ತನ್ನ ಸೀರೆ ಸೆರಗಿನಿಂದ  ಕೈವರೆಸಿಕೊಂಡು ಒಂದೇ ಉಸಿರಿಗೆ ದೋಸೆ ಮುಕ್ಕುತ್ತಾ “ಯಾಕಿ ಒಂತರ ಇದ್ದೀರಲ್ಲ  ಏನಾಯ್ತು” ಎಂದು ಕೇಳಿದಳು. 

ಅವಳು ಕೇಳುವುದನ್ನೇ ಕಾದು ಕುಳಿತಿದ್ದ ಮೋಹನ ಎದೆ ಒಡೆದು ಕೊಂಡವನಂತೆ “ಏನ್ ಹೇಳ್ಳಿ ಗಂಗು. ಆ ಮನೆ ಹಾಳ್ರು ನನ್ನ ಕನಸುನ್ನೇ ನುಚ್ಚುನೂರು ಮಾಡ್ಹಾಕ್ಬುಟ್ರು. ನಾನು ಕೆಲ್ಸಕ್ಕೋಗಿ ಸೆರ್ಕೊಳ್ಳೊದು ತಡ ಆಯ್ತು ಅಂತ ನನ್ನ ಕೆಲಸದಿಂದನೇ ತೆಗೆದು ಹಾಕ್ಬುಟ್ಟಿದ್ದಾರೆ. ನೋಡಿಲ್ಲಿ ಈಗಷ್ಟೇ ಪೂನದಿಂದ ಈ ಟೆಲಿಗ್ರಾಂ ಬಂದಿದೆ. ಏನ್ ಮಾಡ್ಬೇಕು ಅಂತ್ಲೇ ಗೊತ್ತಾಗ್ತಿಲ್ಲ” ಎಂದು ಗೋಳಾಡಿದ.  “ಅಯ್ಯೋ..ಹಂಗಾಗೋಯ್ತಾ.. ಹೋಗ್ಲಿ ಬುಡಿ ಅದುಕ್ಯಾಕೆ ಬೇಜಾರ್ ಮಾಡ್ಕೊತಿರಿ, ಇನ್ಯಾವ್ದಾದ್ರು ಕೆಲ್ಸ ನೋಡಿದ್ರಾಯ್ತಪ” ಎಂದಳು ಬೆರಳಿಗಂಟಿದ್ದ ಚಟ್ನಿ ನೆಕ್ಕುತ್ತಾ. “ಕೆಲ್ಸ ಸಿಗೋದು ನೀನು ಹೇಳಿದಷ್ಟು ಸುಲಭ ಅಲ್ಲ ಗಂಗು. ನನ್ನ್ ಕೆಲ್ಸ ನೋಡೆ ನಿಮ್ಮನೆಯವ್ರು ನಿನ್ನ ನಂಗೆ ಮದುವೆ ಮಾಡಿ ಕೊಟ್ಟಿರೋದು. ಅವರಿಗೆ ಈಗ ಏನು ಅಂತ ಉತ್ರ ಹೇಳ್ಳಿ” ಎ‌ಂದು ತನ್ನೆರಡು ಕೈಗಳಿಂದ ಮುಖ ಮುಚ್ಚಿಕೊಂಡ.

ದೋಸೆ ಹೊಟ್ಟೆ ಸೇರಿದ್ದೆ ಗಂಗೆಯ ತಲೆ ತುಸು ಚುರುಕಾಯಿತು. ” ಆಹಾ…ಅಪ್ಪಣ್ಣಿ ನನ್ನೇ ಮಂಗುನ್ಮಾಡ್ತಿರಲೀ… ನಾವು ಇಲ್ಲಿದ್ದೀವಿ ಅಂತ ಆ ಟೆಲಿಗ್ರಾಂ ಕೊಡೋರ್ಗೆ ಹೆಂಗಪ್ಪ ಗೊತ್ತಾಯ್ತು.” ಎಂದು ಅಣಕಿಸುತ್ತಾ ಕೇಳಿದಳು. ಬೆಂಗಳೂರಿಗೆ ಬಸ್ಸ್ ಹತ್ತಿದ ಗಳಿಗೆಯಿಂದಲೇ ಆರಂಭವಾದ ಮೋಹನನ ತೊಳಲಾಟ ಒಳಗೇ ಹೆಪ್ಪುಗಟ್ಟಿ ಈಗ ಸ್ಪೋಟ ಗೊಂಡಿತ್ತು. ಗಂಟಲು ಉಬ್ಬಿ ಕಣ್ಣಿನ ತುಂಬಾ ನೀರು ತುಂಬಿತು. ಅವಳ ಕೈಯನ್ನು ಬಿಗಿಯಾಗಿ ಹಿಡಿದು “ನನ್ನ ಕ್ಷಮಿಸ್ಬಿಡು ಗಂಗು. ನಾನಿಲ್ಲಿವರ್ಗೂ ಆಡಿದ್ದೆಲ್ಲ ನಾಟ್ಕ. ನಿನ್ಜೊತೆ ಸಂಸಾರ ಮಾಡ್ಬೇಕು ಅಂತ ನಾನ್ ನಿನ್ನ ಮದುವೆ ಆಗ್ಲಿಲ್ಲ. ನಿನ್ನ ಇಟ್ಕೊಂಡು ಬಿಸ್ನೆಸ್ ಮಾಡಿ ಚೆನ್ನಾಗಿ ದುಡಿಬೇಕು  ಅಂತ ನಿನ್ ಕುತ್ಗೆಗೆ ತಾಳಿ ಕಟ್ಟಿ ಆ ಮನೆಗೆ ಕರ್ಕೊಂಡು ಹೋಗಿದ್ದು. ನಿಜ್ವಾಗ್ಲೂ ಮದುವೆ ಅಂದ್ರೆ ಕೆಲ್ಸ ಇಲ್ದಿರೋರು ಮಾಡ್ಕೊಂಡಿರೊ ಸಂಪ್ರದಾಯ, ಕಂದಾಚಾರ ಅಂತ ಏನೇನೋ ಅಂದ್ಕೊಂಡಿದ್ದೆ. ಆದ್ರೆ ಈಗ್ಲೆ ಗೊತ್ತಾಗಿದ್ದು ಈ ಮದುವೆ ಅನ್ನೋ ಬಾಂಡಿಂಗ್ ಇಷ್ಟು ಸ್ಟ್ರಾಂಗ್ ಆಗಿರುತ್ತೆ ಅಂತ. ನಿನ್ನ ತಾಳಿ ಮೇಲೆ ಆಣೆ ಇಟ್ಟು ಹೇಳ್ತಿದ್ದೀನಿ ಗಂಗೂ ನಿನ್ ವಿಷ್ಯದಲ್ಲಿ ಇನ್ಯಾವತ್ತೂ ಇಂತ ತಪ್ಪು ಯೋಚ್ನೆ ಮಾಡೋದಿಲ್ಲ” ಎಂದು ಅವಳನ್ನು ಗಟ್ಟಿಯಾಗಿ ತಬ್ಬಿ ಬಿಕ್ಕಿದ.

“ಅಯ್ಯೋ ಶಿವ್ನೇ ಬುಡಿ ಜನವೆಲ್ಲ ನಮ್ನೆ ನೋಡ್ತಾವ್ರೆ, ಅದೇನ್ ಬಿಜಿನೆಸ್ಸೊ ಏನೋ ನಂಗೆ ಒಂದು ಅರ್ಥ  ಆಗ್ಲಿಲ್ಲ. ಒಟ್ನಲ್ಲಿ ಒಂದು ದೊಡ್ಡ ಗಂಡಾಂತ್ರುದಿಂದ ತಪ್ಪುಸ್ಕೊಂಡಿದ್ದೀವಿ ಅಂತ ಗೊತ್ತಾಯ್ತೈತೆ. ಹೋಗ್ಲಿ ಬುಡಿ ಗಂಡ್ಸಾಗಿ ಹಿಂಗೆ ಅಳ್ಬೇಡಿ. ನಮ್ಮಿಬ್ರು ರಟ್ಟೆಲು ಬೇಕಾದಂಗೆ ಬಲ ಐತೆ, ದುಡ್ಕೊಂಡು ತಿನ್ನನ ನಡಿರಿ. ನಮ್ಮೂರ್ ತುಂಬಾ ಕಾಪಿ ಕಂಪ್ನಿಗಳವೆ. ಹೆಂಗೂ ನೀವು ಚನ್ನಾಗಿ ಓದ್ಕೊಂಡಿದ್ದೀರಿ ಅಲ್ಲೇ ರೈಟ್ರು ಕೆಲ್ಸುಕ್ಕೆ ಸೇರ್ಕೊಬುಡಿ, ನಾನು ಯಾವ್ದಾದ್ರು ಒಂದು ಕಂಪ್ನಗೆ ಸೇರ್ಕೊತಿನಿ.  ನಮ್ಮಿಬ್ರು ಹೊಟ್ಟೆ ತುಂಬಕೆ ಇನ್ನೆಷ್ಟು ಬೇಕು ಅಲ್ವ” ಎಂದು ಮೋಹನನನ್ನು ಸಂತೈಸಿದಳು. ಸತ್ಯ ತಿಳಿದು ಗಂಗೆ ಇನ್ನೆಲ್ಲಿ ರಣರಂಗ ಮಾಡಿಬಿಡುವಳೋ ಎಂದು ಹೆದರಿದ್ದ ಮೋಹನನಿಗೆ ಅವಳ ಸಂತೈಕೆಯ ಮಾತು ಕೇಳಿ ಪ್ರೀತಿ ಉಕ್ಕಿತು. “ಎಷ್ಟು ಮುಗ್ಧೆ ಗಂಗೂ ನೀನು… ಯಾರ್ ಬೇಕಿದ್ರು ನಿನ್ನ ಯಾಮಾರುಸ್ಬಹುದಲ್ಲೆ. ಈ ಕೆಟ್ಟ ಪ್ರಪಂಚುದಲ್ಲಿ ಇಷ್ಟು ಇನೋಸೆಂಟಾಗಿದ್ರೆ ಆಗೋದಿಲ್ಲ. ಸ್ವಲ್ಪ ಜಾಣೆಯಾಗು” ಎಂದು ಅವಳ ತಲೆ ಮೇಲೆ ಕೈಯಾಡಿಸಿದ.

ಯಾರ ಕೈ ಕೆಳಗೂ ಕೆಲಸ ಮಾಡಲಿಚ್ಚಿಸದ ಮೋಹನನಿಗೆ ನಾರಿ ಪುರದ ಹಾದಿ ಅಷ್ಟು ಸುಸೂತ್ರವೆನಿಸಲಿಲ್ಲ. ಅಲ್ಲದೆ ಇಂತಹ ಪರಿಸ್ಥಿತಿಯಲ್ಲಿ ಗಂಗೆಯ ಮನೆಯವರನ್ನು ಎದುರಿಸಿ ನಿಲ್ಲುವ ಧೈರ್ಯವೂ ಅವನಲ್ಲಿರಲಿಲ್ಲ. ಹಾಗಾಗಿ ತನ್ನೂರಿಗೆ ಹೋಗಿ ಹೇಗಾದರೂ ಅವ್ವನ ಮನವೊಲಿಸಿ ಮನೆಸೇರಿಕೊಳ್ಳುವುದೆಂದು ನಿರ್ಧರಿಸಿ ಗಂಗೆಯೊಂದಿಗೆ ಭೋಗನೂರಿನ ಕಡೆ ಹೊರಟ.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಹಿಂದಿನ ಸಂಚಿಕೆ-ಗಂಗೆ ಬಂದಳೆಲ್ಲಿಗೆ?

Related Articles

ಇತ್ತೀಚಿನ ಸುದ್ದಿಗಳು