Tuesday, June 18, 2024

ಸತ್ಯ | ನ್ಯಾಯ |ಧರ್ಮ

ಸಾಮೂಹಿಕ ವಜಾ: ಎಲಾನ್‌ ಮಸ್ಕ್‌ ವಿರುದ್ಧ ಕೋರ್ಟಿಗೆ ಹೋದ ಟ್ವಿಟರ್‌ ನೌಕರರು

ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ ಸಂಸ್ಥೆಯೊಳಗಿನ ಗೊಂದಲಗಳು ಬೀದಿಗೆ ಬಂದಿದ್ದು ಸಂಸ್ಥೆಯ ಮಾಲಿಕ ಇಲಾನ್‌ ಮಸ್ಕ್‌ ವಿರುದ್ಧ ಅದರ ಉದ್ಯೋಗಿಗಳು ಕೋರ್ಟಿನ ಮೆಟ್ಟಿಲೇರಿದ್ದಾರೆ. ಇಲಾನ್‌ ಮಸ್ಕ್‌ ಸಂಸ್ಥೆಯನ್ನು ಕೊಂಡಾಗಿನಿಂದ ವಿವಿಧ ಬದಲಾವಣೆಗಳನ್ನು ಮಾಡುತ್ತಿದ್ದರು, ಅದರಲ್ಲಿ ಇತ್ತೀಚಿನದ್ದೆಂದರೆ 3,700 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದು. ಹೀಗೆ ಸರಿಯಾದ ನೋಟೀಸ್‌ ನೀಡದೆ ಕೆಲಸದಿಂದ ವಜಾ ಮಾಡುವುದು ಕ್ಯಾಲಿಫೋರ್ನಿಯಾ ಮತ್ತು ಫೆಡರಲ್‌ ಕಾನೂನಿನ ವಿರುದ್ಧವಾದುದು ಎನ್ನುವುದು ಉದ್ಯೋಗಿಗಳ ವಾದ.

ಈ ಕುರಿತು ಈಗ ಸ್ಯಾನ್ ಫ್ರಾನ್ಸಿಸ್ಕೋ ಕೋರ್ಟಿನಲ್ಲಿ ಗುಂಪು ದಾವೆಯನ್ನು ಉದ್ಯೋಗಿಗಳು ಹೂಡಿದ್ದಾರೆ.

ಟ್ವಿಟರ್‌ ಸಂಸ್ಥೆಯು ತಾನು ಶುಕ್ರವಾರದಿಂದ ಸಿಬ್ಬಂದಿ ಕಡಿತ ಪ್ರಕ್ರಿಯೆ ಆರಂಭಿಸುವುದಾಗಿ ಉದ್ಯೋಗಿಗಳಿಗೆ ಇ-ಮೇಲ್‌ ಮೂಲಕ ತಿಳಿಸಿತ್ತು. ಕಳೆದ ತಿಂಗಳು 44 ಬಿಲಿಯನ್‌ ಡಾಲರ್‌ ಮೊತ್ತಕ್ಕೆ ಟ್ವಿಟರ್‌ ಸಂಸ್ಥೆಯನ್ನು ಖರೀದಿಸಿದ್ದ ಮಸ್ಕ್‌, ಸಂಸ್ಥೆಯಲ್ಲಿನ ಖರ್ಚು-ವೆಚ್ಚಗಳನ್ನು ಕಡಿಮೆಗೊಳಿಸುವ ಸಲುವಾಗಿ ಈ ಕ್ರಮ ಕೈಗೊಳ್ಳುತ್ತಿದ್ದಾರೆನ್ನುವುದು ಸಂಸ್ಥೆಯ ಒಳಗಿರುವವರ ಅಭಿಪ್ರಾಯ.

ಫೆಡರಲ್ ವರ್ಕರ್ ಅಡ್ಜಸ್ಟ್‌ಮೆಂಟ್ ಅಂಡ್ ರೀಟ್ರೀನಿಂಗ್ ನೋಟಿಫಿಕೇಶನ್ ಆಕ್ಟ್ ದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಕನಿಷ್ಠ 60 ದಿನಗಳ ಮುಂಚಿತ ಸೂಚನೆಯಿಲ್ಲದೆ ಸಾಮೂಹಿಕವಾಗಿ ಕೆಲಸದಿಂದ ತೆಗೆದುಹಾಕುವುದನ್ನು ನಿರ್ಬಂಧಿಸುತ್ತದೆ.

ವಾರ್ತಾ ಸಂಸ್ಥೆಯೊಂದು ಈ ಕುರಿತು ಪ್ರತಿಕ್ರಿಯೆಗಾಗಿ ಕಂಪನಿಯನ್ನು ಸಂಪರ್ಕಿಸಿತಾದರೂ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿಕೊಂಡಿದೆ.

ಈ ದೂರು ತನ್ನ ಮನವಿಯಲ್ಲಿ ಮುಖ್ಯವಾಗಿ ಟ್ವಿಟರ್‌ ಸಂಸ್ಥೆಯು WARN ಕಾಯ್ದೆಯನ್ನು ಪಾಲಿಸಲು ಹೇಳಬೇಕು ಎನ್ನುತ್ತದೆ. ಮತ್ತು ಮುಂದುವರೆದು ದಾವೆಯಲ್ಲಿ ಅದರ ಉದ್ಯೋಗಿಗಳು ಪಾತ್ರವಹಿಸಿದಂತೆ ತಡೆಯಬಲ್ಲ ದಾಖಲೆಗಳಿಗೆ ಸಂಸ್ಥೆಯು ಸಹಿ ಹಾಕಿಸಿಕೊಳ್ಳದಂತೆ ತಡೆಯಬೇಕೆಂದು ವಿನಂತಿಸುತ್ತದೆ.

“ನಾವು ಈ ಕೇಸನ್ನು ದಾಖಲಿಸಿರುವುದರ ಉದ್ದೇಶವೆಂದರೆ, ನೌಕರರು ಪತ್ರಗಳಿಗೆ ಸಹಿ ಹಾಕಿ ತಮ್ಮ ಹಕ್ಕುಗಳನ್ನು ಬಿಟ್ಟುಕೊಡದಂತೆ ಅವರನ್ನು ಎಚ್ಚರಿಸುವುದು ಮತ್ತು ಅವರಿಗೆ ಈ ವಿಷಯದಲ್ಲಿ ಇರುವ ಹಕ್ಕಿನ ಕುರಿತು ಅರಿವು ಮೂಡಿಸುವುದಾಗಿದೆ,” ಎಂದು ಗುರುವಾರದಂದು ದೂರನ್ನು ಸಲ್ಲಿಸಿದ ನಂತರ ವಕೀಲ ಶಾನನ್ ಲಿಸ್-ರಿಯೋರ್ಡಾನ್ ಸಂದರ್ಶನವೊಂದರಲ್ಲಿ ಹೇಳಿದರು.

ಲಿಸ್-ರಿಯೋರ್ಡಾನ್ ಜೂನ್‌ ತಿಂಗಳಿನಲ್ಲಿ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್-ಕಾರು ತಯಾರಕ ಕಂಪನಿ ಸುಮಾರು 10% ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ಸಂದರ್ಭದಲ್ಲಿಯೂ ಇದೇ ರೀತಿಯ ಹಕ್ಕುಗಳಿಗಾಗಿ ಟೆಸ್ಲಾ ಇಂಕ್ ವಿರುದ್ಧ ಮೊಕದ್ದಮೆ ಹೂಡಿದ್ದರು.

ಈ ಕೇಸಿನಲ್ಲಿ ಟೆಸ್ಲಾ ಈ ಪ್ರಕರಣವನ್ನು ಮಧ್ಯಸ್ಥಿಕೆಯ ಮೂಲಕ ಮುಚ್ಚಿದ ಬಾಗಿಲಿನ ಹಿಂದೆ ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿ ಕೇಸನ್ನು ತನ್ನತ್ತ ತಿರುಗಿಸಿಕೊಂಡಿದ್ದರು. ಮತ್ತು ಇನ್ನೊಂದು ಸಂದರ್ಶನದಲ್ಲಿ ಕಾರ್ಮಿಕ ಹಕ್ಕುಗಳ ಕುರಿತಾದ ಈ ಕೇಸಿನ ಕುರಿತು ಮಾತನಾಡುತ್ತಾ ಅದೊಂದು “ಕ್ಷುಲ್ಲಕ” ಪ್ರಕರಣವಾಗಿತ್ತು ಎಂದಿದ್ದರು.

“ನೌಕರರನ್ನು ರಕ್ಷಿಸುವ ಈ ದೇಶದ ಕಾನೂನುಗಳಲ್ಲಿ ಮೂಗು ತೂರಿಸುವುದನ್ನು ಮುಂದುವರಿಸುತ್ತಾರೆಯೇ ಎಂದು ನಾವು ಈಗ ನೋಡುತ್ತೇವೆ,” ಎಂದು ಮಸ್ಕ್ ಕುರಿತಾಗಿ ಲಿಸ್-ರಿಯೋರ್ಡನ್ ಹೇಳಿದರು. “ಬಹುಶಃ ಅವರು ಟೆಸ್ಲಾದಲ್ಲಿ ಪ್ರಯೋಗಿಸಿದ ತಂತ್ರವನ್ನೇ ಇಲ್ಲಿಯೂ ಪ್ರಯೋಗಿಸಬಹುದೆನ್ನಿಸುತ್ತದೆ.” ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು