Thursday, August 22, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 32 : ಉಳ್ಳಾಲದ ಬದಲಾವಣೆಯ ಜನಸಾಮಾನ್ಯ ಹರಿಕಾರರು!

“ಪುಸ್ತಕದಲ್ಲಿ ಗುರುತಿಸಲಾದ ಒಟ್ಟು 23 ಜನಸಾಮಾನ್ಯ ಸಾಧಕರಲ್ಲಿ 10 ಮಂದಿಯ ಪರಿಚಯ ಮತ್ತವರ ಸಾಧನೆಗಳ ವಿವರ ನೀಡಲಾಗಿದೆ. ಅದನ್ನು ನೋಡುವ ಮೊದಲು, ಈ ಪರಿಕಲ್ಪನೆ ಏನು ಎಂಬುದನ್ನು ನೋಡೋಣ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಉಳ್ಳಾಲ ಎಂಬುದು ಮಂಗಳೂರಿನ ದಕ್ಷಿಣದಲ್ಲಿರುವ ಒಂದು ಉಪನಗರವಾಗುತ್ತಿರುವ ಪಟ್ಟಣ. ಇಲ್ಲಿನ ಬದಲಾವಣೆಯ ವಿಷಯದಲ್ಲಿ ನಾವು ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ದಯವಿಟ್ಟು ಮೊದಲೇ ದೂರಸರಿಯಬೇಡಿ. ಉಳ್ಳಾಲದಲ್ಲಿ ಸ್ವಚ್ಛತೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ವಿನೂತನ ಪ್ರಯೋಗಗಳು ರಾಜ್ಯದ ಸಾವಿರಾರು, ಪಟ್ಟಣಗಳು ಮತ್ತು ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿರುವುದರಿಂದಲೇ ಈ ವಿಷಯವನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ.

ಉಳ್ಳಾಲ ಎಂದರೆ, ನಮಗೆ ಮೊದಲಿಗೆ ನೆನಪಿಗೆ ಬರುವುದು ಪೋರ್ಚುಗೀಸರ ನೌಕಾಪಡೆಯೊಂದಿಗೆ ಕೆಚ್ಚಿನಿಂದ ಕಾದಿದ ಮತ್ತು ಇಲ್ಲಿ ಹಿಂದಿನಿಂದಲೂ ಇದ್ದ ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಇನ್ನಷ್ಟೂ ಬೆಸೆದ ರಾಣಿ ಅಬ್ಬಕ್ಕ. ಪ್ರಸ್ತುತ ನೆನಪಿಗೆ ಬರುವುದು ಧರ್ಮ ಸಾಮರಸ್ಯಕ್ಕೆ ಹೆಸರಾಗಿರುವ, ಧರ್ಮ ಭೇದವಿಲ್ಲದೆ ರಾಜ್ಯಾದ್ಯಂತದಿಂದ ಜನರನ್ನು ಆಕರ್ಷಿಸುವ ಸೈಯದ್ ಮದನಿ ದರ್ಗಾ. ಇಲ್ಲಿ ಬೂತನೇಮ ನಡೆದರೆ, ಬೂತವು ದರ್ಗಾಕ್ಕೆ ಭೇಟಿ ನೀಡುತ್ತದೆ. ದರ್ಗಾದ ಮುಖಂಡರು ನೇಮದಲ್ಲಿ ಭಾಗವಹಿಸುತ್ತಾರೆ. ಈ ಸಂಪ್ರದಾಯ ಈಗಲೂ ಮುಂದುವರಿದಿದೆಯೋ ಸದ್ಯ ನನಗೆ ಗೊತ್ತಿಲ್ಲ. ಜೊತೆಗೆ ಸಾಮರಸ್ಯದ ಸಂಕೇತವಾಗಿ ಪ್ರಸಿದ್ಧ ಸೋಮನಾಥ ದೇವಾಲಯ (ಇಲ್ಲಿನ ಬೀಚ್ ಕೂಡಾ ಜನಪ್ರಿಯವಾಗಿದೆ) ಮತ್ತು ಸೈಂಟ್ ಸೆಬಾಸ್ಟಿಯನ್ ಚರ್ಚ್ ಕೂಡಾ ಜೊತೆಗೇ ನಿಂತಿವೆ.

ಇನ್ನು ಆಧುನಿಕ ಯುಗದಲ್ಲಿ- ಶಾಸಕರಾಗಿದ್ದ ಬಿ.ಎಂ. ಇದ್ದಿನಬ್ಬ, ಯು. ಟಿ. ಫರೀದ್ ಮತ್ತು ಈಗಿನ ಸ್ಪೀಕರ್ ಯು.ಟಿ. ಖಾದರ್ ಮುಂತಾದವರು ನೆನಪಿಗೆ ಬರುತ್ತಾರೆ. ಆದರೆ, ಪ್ರಸ್ತುತದಲ್ಲಿ ಕೋಮು ಸೌಹಾರ್ದತೆಯು ಉಳ್ಳಾಲದ ಜನರ ರಕ್ತಗುಣವಾಗಿದ್ದರೂ, ಕೋಮುವಾದಿ ರಾಜಕಾರಣದ ಪಿತೂರಿಯಿಂದಾಗಿ ಈ ಗುಣವನ್ನು ಕಳೆದುಕೊಳ್ಳುತ್ತಾ ಬರುತ್ತಿರುವುದು ಬೇಸರ ಮತ್ತು ಆತಂಕದ ವಿಷಯ.

ಅಭಿವೃದ್ಧಿ ಎಂದರೆ, ಕೇವಲ ಸುಸಜ್ಜಿತ ಆಸ್ಪತ್ರೆ, ಶಾಲೆಗಳು, ಕಾಂಕ್ರೀಟ್ ರಸ್ತೆಗಳು, ಹೆಚ್ಚುತ್ತಿರುವ ತಲಾದಾಯ ಎಂಬೆಲ್ಲಾ ಹಳೆಯ ಚಿಂತನೆಗಳ ಜಾಗದಲ್ಲಿ “ಸುಸ್ಥಿರ ಅಭಿವೃದ್ಧಿ” ಎಂಬ ಪರಿಕಲ್ಪನೆ ಬಂದಿದೆ. ಹಿಂದಿನ ಅಭಿವೃದ್ಧಿಯ ಕಲ್ಪನೆಯಲ್ಲಿ ಉಳ್ಳಾಲ ಸಹಿತ ಇಡೀ ಕರಾವಳಿ ಪ್ರದೇಶವು ಬಹಳಷ್ಟು ಮುಂದುವರಿದಿದೆ. ಆದರೆ, ಸುಸ್ಥಿರ ಅಭಿವೃದ್ಧಿಯ ವಿಷಯದಲ್ಲಿ?

ಇಂದು ಈ ಸುಸ್ಥಿರ ಅಭಿವೃದ್ಧಿಯ ವಿಷಯದಲ್ಲಿ ಒಂದು ಪ್ರಮುಖ ಅಂಶವೆಂದರೆ, ಆರೋಗ್ಯದೊಂದಿಗೆ ನೇರ ಸಂಬಂಧ ಹೊಂದಿರುವ ಸ್ವಚ್ಛತೆ. ನಗರ, ಪಟ್ಟಣಗಳು ಬೆಳೆಯುತ್ತಿರುವಂತೆ ಇದೊಂದು ಬಹಳ ದೊಡ್ಡ ಸವಾಲಾಗಿದೆ. ತ್ಯಾಜ್ಯ ವಿಲೇವಾರಿ ಅಥವಾ ಕಸ ವಿಲೇವಾರಿ ಎಲ್ಲಾ ಆಯಾಮಗಳಿಂದಲೂ ದೊಡ್ಡ ಕೆಲಸವಾಗಿದೆ. ಪ್ರತೀಯೊಂದೂ- ಅಗತ್ಯಕ್ಕಿಂತ ದೊಡ್ಡದಾದ ಪ್ಲ್ಯಾಸ್ಟಿಕ್ ಚೀಲಗಳು, ರ್ಯಾಪರ್‌ಗಳಲ್ಲಿ ಬರುತ್ತಿವೆ. “ಸ್ವಚ್ಛ ಭಾರತ ಅಭಿಯಾನ” ಎಂಬ ಮೋದಿಯ ಪ್ರಚಾರಾಭಿಯಾನದಲ್ಲಿ ಫೊಟೋ ಶೂಟ್‌ಗಳು, ಜಾಹೀರಾತುಗಳಿಗೆ ಕೋಟ್ಯಂತರ ರೂ. ಪೋಲು ಮಾಡಿ, ತಳಮಟ್ಟದಲ್ಲಿ ಏನೂ ಮಾಡದಿರುವ ಕಾರಣ, ಜನರಲ್ಲಿ ಅರಿವಿನ ಕೊರತೆಯಿಂದ ನಗರ, ಹಳ್ಳಿ, ಪೇಟೆಗಳಲ್ಲಿ ಪ್ಲಾಸ್ಟಿಕ್ ಸಹಿತ ಕಸದ ರಾಶಿಗಳು, ಹಾದಿ ಬೀದಿಗಳಲ್ಲಿ ಎಸೆದ ಗುಟ್ಕಾ, ಚಾಕ್ಲೇಟ್, ಬಿಸ್ಕಿಟ್ ರ್ಯಾಪರ್‌ಗಳು, ಪ್ಲಾಸ್ಟಿಕ್ ಬಾಟಲಿಗಳನ್ನು ಕಾಣಬಹುದು. ಇದು ಭೂಮಿಯ ಪರಿಸರದ ಮೇಲೆ ಮಾಡುವ ಪರಿಣಾಮಗಳು, ಮಾಲಿನ್ಯ ಇತ್ಯಾದಿಗಳ ಬಗ್ಗೆ ಪ್ರಜ್ಞಾವಂತರಿಗೆ ಮತ್ತೆ ವಿವರಿಸಿ ಹೇಳಬೇಕಾಗಿಲ್ಲ. ಇಂತಹಾ ಪರಿಸ್ಥಿತಿಯಲ್ಲಿ ಉಳ್ಳಾಲವು ಕೆಲವರ್ಷಗಳ ಹಿಂದಿಗೆ ಹೋಲಿಸಿದಾಗ ಬಹಳಷ್ಟು ಸುಧಾರಣೆ ಕಂಡು, ಬಹಳಷ್ಟು ಜನರ ಗಮನ ಸೆಳೆದಿದೆ. ಯಾಕೆಂದರೆ, ಸರಕಾರದ ಪ್ರಯತ್ನಗಳನ್ನು ಮೀರಿ, ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಜದ ಗಣ್ಯರು, ಶಿಕ್ಷಣ ಸಂಸ್ಥೆಗಳು, ಪೂಜಾ ಸ್ಥಳಗಳು, ಧಾರ್ಮಿಕ ಕೇಂದ್ರಗಳು ಮತ್ತು ಮುಖಂಡರು ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ಸಾಮಾನ್ಯ ಜನರ ಸಹಭಾಗಿತ್ವದ ಸರಕಾರೇತರ ಪ್ರಯತ್ನ ಇಲ್ಲಿ ಕೆಲವರ್ಷಗಳಿಂದ ನಡೆಯುತ್ತಿರುವುದು.

ಇದನ್ನು ಬರೆಯಲು ಪ್ರೇರಣೆ ಎಂದರೆ, ಸಮಾಜ ಸೇವಾ ಶಿಕ್ಷಣದ ಮುಂಚೂಣಿಯಲ್ಲಿರುವ ಮಂಗಳೂರಿನ ಪ್ರಸಿದ್ಧ ಸ್ವಾಯತ್ತ ವಿಶ್ವವಿದ್ಯಾಲಯವಾಗಿರುವ, ಕ್ರೈಸ್ತರು ಕಟ್ಟಿಬೆಳೆಸಿದ, ಆದರೆ ಜಾತ್ಯತೀತ ಸೇವೆಗೆ ಹೆಸರಾಗಿರುವ ರೋಷನಿ ನಿಲಯದ ಎಂಎಸ್‌ಡಬ್ಲ್ಯೂ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ ತನುಜಾ ಅವರು ಬರೆದಿರುವ “ಉಳ್ಳಾಲದ ಬದಲಾವಣೆಯ ಹರಿಕಾರರು” ಎಂಬ ಒಂದು ಪುಸ್ತಕ ಕೈಸೇರಿದ್ದು. ಇದನ್ನು ರೋಷನಿ ನಿಲಯದ ಇವಲಿನ್ ಬೆನಿಸ್ ಮತ್ತು ಮಂಗಳೂರಿನ ಸೋಷಿಯಲ್ ಸಾಯನ್ಸ್ ರಿಸರ್ಚ್ ಕನ್ಸಲ್ಟೆಂಟ್ಸ್ ಮತ್ತು ಉಳ್ಳಾಲದ ಸುಸ್ಥಿರ ಉಳ್ಳಾಲದ ಕನಸುಗಾರರ ಬಳಗದ ಸಂಚಾಲಕರಾದ ಕಿಶೋರ್ ಅತ್ತಾವರ್ ಅವರು ಜಂಟಿಯಾಗಿ ಪ್ರಕಟಿಸಿದ್ದಾರೆ. ಇವರೇ ಈ ವಿಶಿಷ್ಟ ಯೋಜನೆಯ ಮುಖ್ಯ ರೂವಾರಿಗಳು ಮತ್ತು ಪಾಲುಗೊಳ್ಳುವ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಪ್ರೇರಕರು, ಮಾರ್ಗದರ್ಶಕರು; ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮಾರ್ಗದರ್ಶಕರು.

ಈ ಪುಸ್ತಕದಲ್ಲಿ ಗುರುತಿಸಲಾದ ಒಟ್ಟು 23 ಜನಸಾಮಾನ್ಯ ಸಾಧಕರಲ್ಲಿ 10 ಮಂದಿಯ ಪರಿಚಯ ಮತ್ತವರ ಸಾಧನೆಗಳ ವಿವರ ನೀಡಲಾಗಿದೆ. ಅದನ್ನು ನೋಡುವ ಮೊದಲು, ಈ ಪರಿಕಲ್ಪನೆ ಏನು ಎಂಬುದನ್ನು ನೋಡೋಣ.

ಸುಸ್ಥಿರ ಅಭಿವೃದ್ಧಿಯು ಎಲ್ಲರ ಪಾಲುದಾರಿಕೆ ಇಲ್ಲದೇ ಸಾಧ್ಯವಿಲ್ಲ. ಹಾಗಾಗಿ, ತ್ಯಾಜ್ಯ ವಿಲೇವಾರಿಗಿಂತ (waste disposal) ತ್ಯಾಜ್ಯ ನಿರ್ವಹಣೆ (waste management) ಮುಖ್ಯ. ಹಸಿ ಕಸ ಮತ್ತು ಒಣಕಸ ಹಾಗೂ ವೈದ್ಯಕೀಯ ತ್ಯಾಜ್ಯಗಳನ್ನು ವಿಂಗಡಿಸಬೇಕು ಎಂಬ ಆಶಯ ಎಲ್ಲಾ ಕಡೆ ಇದೆಯಾದರೂ, ತಿಳುವಳಿಕೆ ಇಲ್ಲದೆಯೋ, ಉದಾಸೀನದಿಂದಲೋ ಹೆಚ್ಚಿನವರು ಮಾಡುತ್ತಿಲ್ಲ. ಹಾಗಾಗಿ ಈ ತಿಳುವಳಿಕೆ ಮೂಡಿಸುವುದು ಮೊದಲ ಅಗತ್ಯ. ಅಲ್ಲದೇ ನಗರಾಡಳಿತದ ಅಧಿಕಾರಿಗಳು, ಜನಪ್ರತಿನಿಧಿಗಳು, ಪೌರಕಾರ್ಮಿಕರು, ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳವರು, ಎಲ್ಲಕ್ಕಿಂತಲೂ ಹೆಚ್ಚಾಗಿ ಜನರನ್ನು ಜೊತೆಗೆ ತಂದು, ತಮ್ಮದೇ ಸಮಾನ ಒಳಿತಿಗಾಗಿ ಕೆಲಸ ಮಾಡುವಂತೆ ಮಾಡಬೇಕು. ಈ ಕೆಲಸವನ್ನು ರೋಷನಿ ನಿಲಯದ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಭಾಗವಾಗಿ ಅತ್ಯಂತ ನಿಷ್ಟೆಯಿಂದ ಮಾಡಿದರು; ಮಾಡುತ್ತಲೇ ಇದ್ದಾರೆ. ಉಳಿದ ಕಾಲೇಜುಗಳ ವಿದ್ಯಾರ್ಥಿಗಳೂ ಭಾಗವಹಿಸುವಂತೆ ಪ್ರೇರೇಪಿಸಲಾಗಿದೆ. ಅವರು ಮನೆಮನೆಗಳಿಗೆ, ಎಲ್ಲಾ ಸಂಘಸಂಸ್ಥೆಗಳಿಗೆ ಭೇಟಿ ನೀಡಿ ಈ ಪರಿಕಲ್ಪನೆಯ ಮಹತ್ವವನ್ನು ಮನಗಾಣಿಸಿದರು. ಅದರ ಪರಿಣಾಮ ಗಮನಾರ್ಹವಾಗಿ ಕಂಡುಬರುತ್ತಿದೆ.

ಈ ಯೋಜನೆ ಮುಖ್ಯವಾಗಿ ಹಸಿಕಸಕ್ಕೆ ಸಂಬಂಧಿಸಿದ್ದು, ಎಲ್ಲಾ ಕಡೆಗಳ ಕಸವನ್ನು ಎತ್ತಿಕೊಂಡು ಮಂಗಳೂರಿನ ವಾಮಂಜೂರು ಎಂಬಲ್ಲಿನ ಡಂಪಿಂಗ್ ಗ್ರೌಂಡಿಗೆ ಹಾಕಲಾಗುತ್ತದೆ. ಇದರಿಂದ ಅಲ್ಲಿನ ಆಸುಪಾಸಿನ ಜನರಿಗೆ ಅಸಾಧ್ಯ ತೊಂದರೆಯಾಗುತ್ತದೆ. ಒಂದೂರಿನ ಕಸವನ್ನು ಎತ್ತಿ ಇನ್ನೊಂದೂರಿಗೆ ಹಾಕುವುದರ ಹಿಂದಿನ ನೈತಿಕತೆಯೂ ಪ್ರಶ್ನಾರ್ಹ. ಉಳ್ಳಾಲದಿಂದಲೇ 2022ರ ಹೊತ್ತಿಗೆ ಪ್ರತಿನಿತ್ಯ 12 ಟನ್ ಹಸಿ ಕಸವನ್ನು ವಾಮಂಜೂರಿಗೆ ಸಾಗಿಸಲಾಗುತ್ತಿತ್ತು ಎಂದು ಈ ಪುಸ್ತಕದಲ್ಲಿ ಬರೆಯಲಾಗಿದೆ. ಒಂದು ರೀತಿಯಲ್ಲಿ ಇದು ಬೆಲೆಬಾಳುವ ಗೊಬ್ಬರ. ಹಾಗಾಗಿ, ಜನರು, ಸಂಘಸಂಸ್ಥೆಗಳು ತಮ್ಮ ಹಿತ್ತಿಲಲ್ಲೋ, ತಾರಸಿಯಲ್ಲೊ ಸಾವಯವ ಕೃಷಿ ಮಾಡಿದರೆ, ಈ ಗೊಬ್ಬರದ ಬಳಕೆ ಮಾಡುವುದಲ್ಲದೇ, ತ್ಯಾಜ್ಯ ನಿರ್ವಹಣೆಯ ಅರ್ಧದಷ್ಟು ಸಮಸ್ಯೆ ನಿವಾರಿಸಿದಂತೆ ಎಂಬುದು ಈ ಪರಿಕಲ್ಪನೆಯ ಎರಡನೇ ಅಂಶ.

ಮೂರನೇ ಅಂಶವೆಂದರೆ, ಪರಂಪರಾಗತ ಸಾಮರಸ್ಯವನ್ನು ಮತ್ತೆ ಗಟ್ಟಿಗೊಳಿಸುವುದು. ಉಳ್ಳಾಲದ ಚೆಂಬುಗುಡ್ಡೆ ಮತ್ತು ಕಡಲ ತೀರದಲ್ಲಿ (ಮೊಗವೀರರು) ಹಿಂದೂಗಳ ಬಾಹುಳ್ಯದ ಇದ್ದರೆ, ಉಳಿದ ಬಹುತೇಕ ಭಾಗಗಳಲ್ಲಿ ಮುಸ್ಲಿಂ ಬಾಹುಳ್ಯ ಇದೆ. ಎಲ್ಲರ ಅಗತ್ಯವಾದ ಒಂದು ಸಮಾನ ಸಮಸ್ಯೆಯ ಕುರಿತು ಎಲ್ಲಾ ಸಮುದಾಯಗಳನ್ನು ಹತ್ತಿರ ತಂದರೆ, ಪರಸ್ಪರ ಒಡನಾಟದಿಂದ ಒಬ್ಬರು ಇನ್ನೊಬ್ಬರನ್ನು ಚೆನ್ನಾಗಿ ತಿಳಿದು ಸಾಮರಸ್ಯ ತಾನಾಗಿ ಮೂಡುತ್ತದೆ ಎಂಬುದು ಈ ಪರಿಕಲ್ಪನೆಯ ಆಶಯ. ಯಾಕೆಂದರೆ, ಕೋಮು ಉದ್ವಿಗ್ನತೆಗೆ ಪರಸ್ಪರರ ಕುರಿತು ಹೆಚ್ಚು ತಿಳಿಯದಿರವುದು, ಭಯ ಮತ್ತು ಅಕಾರಣ ಸಂಶಯಗಳು ಕಾರಣ ಮತ್ತು ಇದು ಕೋಮುವಾದಿ ಪಕ್ಷಗಳಿಗೆ ಮತಗಳ ಬೆಳೆ ತೆಗೆಯಲು ಹುಲುಸಾದ ನೆಲ ಒದಗಿಸುತ್ತದೆ.

ಈಗ ಉಳ್ಳಾಲದ ಬಹುತೇಕ ಶಿಕ್ಷಣ, ಧಾರ್ಮಿಕ, ಕೇಂದ್ರಗಳು, ಸಂಘಸಂಸ್ಥೆಗಳು ಈ ಪರಿಹಾರವನ್ನು ಹೆಚ್ಚುಹೆಚ್ಚಾಗಿ ಬಳಸಿ, ಹಸಿ ಕಸದ ಮೂಲಕ ಚಿಕ್ಕ, ದೊಡ್ಡ ಕೈತೋಟಗಳನ್ನು ಮಾಡಿಕೊಳ್ಳುತ್ತಿವೆ. ಇದಕ್ಕಾಗಿ ತರಬೇತಿ, ಪೌರಕಾರ್ಮಿಕರಿಗೆ ನಾಗರಿಕ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳೂ ನಡೆಯುತ್ತಿವೆ. ನಗರಾಡಳಿತವೂ ಇದನ್ನು ಅನುಸರಿಸುವುದರ ಜೊತೆಗೆ, ಕಾಂಪೋಸ್ಟ್ ಡಬ್ಬಗಳ ಪೂರೈಕೆ ಮುಂತಾಗಿ ಹಲವು ನೆರವು ನೀಡುತ್ತಿದೆ.

ಇನ್ನೀಗ ಈ ಹತ್ತು ಸಾಧಕರು ಮತ್ತು ಅವರ ಸಾಧನೆಗಳ ವಿವರ ನೀಡುವುದು ಈ ಸ್ಥಳ ಮಿತಿಯಲ್ಲಿ ಸಾಧ್ಯವಿಲ್ಲವಾದರೂ, ಅವರನ್ನು ಹೆಸರಿಸುವುದು ಅಗತ್ಯ.

ಅವರೆಂದರೆ, 1. ಪುಸ್ತಕ ಬರೆಯುವ ಹೊತ್ತಿಗೆ ಸೈಯ್ಯದ್ ಮದನಿ ದರ್ಗಾದ ಅಧ್ಯಕ್ಷರಾಗಿದ್ದ (ಈಗ ಅಧ್ಯಕ್ಷತೆ ಬದಲಾಗಿದೆ) ಉದ್ಯಮಿ, ಯು.ಎ. ಮೊಹಮ್ಮದ್, 2. ವಿವಿಧ ಶಾಲೆಗಳಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ, ಉಳ್ಳಾಲದ ಮೀನುಗಾರಿಕಾ ಮಹಿಳೆಯರ ಸಹಕಾರಿ ಸಂಘದ ಮೂರು ಬಾರಿಯ ಅಧ್ಯಕ್ಷೆ ಜಾನಕಿ ಪುತ್ರನ್, 3. ಬದ್ರಿಯಾ ಶಾಲೆಯ ಮೊತ್ತಮೊದಲ ಶಿಕ್ಷಕ, ಸೈಯ್ಯದ್ ಮದನಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಎಂ.ಕೆ. ಮಂಜನಾಡಿ, 4. ಸದಾ ಸಕ್ರಿಯರಾಗಿರುವ ಯುವ ಪರಿಸರ ಪ್ರೇಮಿ ಮಂಗಳೂರು ರಿಯಾಝ್, 5. ರೋಷನಿ ನಿಲಯದ ಪದವೀಧರೆ, ತೋಟಗಾರಿಕಾ ಆಸಕ್ತೆ ಮತ್ತು ಬಿ.ಎಂ. ಶಾಲೆಯ ಚಿತ್ರಕಲಾ ಶಿಕ್ಷಕಿಯಾಗಿದ್ದು, ಇದನ್ನು ಬರೆಯುವ ಹೊತ್ತಿಗೆ ದಿವಂಗತರಾಗಿರುವ ಪೋಸ್ಟಿನ್ ಒಲಿವಿಯಾ, 6. ಉಳ್ಳಾಲದ ಮಾಸ್ತಿಕಟ್ಟೆಯ ಭಾರತ್ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರೀತಂ ಕುಮಾರ್, 7. ಹೊನ್ನಾಳಿಯವರಾದ, ಕರ್ನಾಟಕ ಮುನಿಸಿಪಲ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಅಧಿಕಾರಿ ರಾಯಪ್ಪ. ಉಲ್ಲಾಳ ನಗರಸಭೆಯ ಆಡಳಿತಾಧಿಕಾರಿಯಾಗಿ ಇವರು ಈ ಯೋಜನೆಗೆ ನೀಡಿದ ಬೆಂಬಲ ಎಲ್ಲರಿಗೂ ಮಾದರಿ, 8. ಪದವೀಧರ, ಪ್ರಗತಿಪರ ಸಾವಯವ ಕೃಷಿಕ, ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಸುಂದರ ಉಳಿಯ, 9. ತುಮಕೂರಿನ ಶಿರಾ ತಾಲೂಕಿನವರಾದ ಕನ್ನಡ ಎಂ.ಎ.,ಎಂ.ಎಡ್ ಪದವೀಧರ, ನಿವೃತ್ತ ಶಿಕ್ಷಕ, ಸಮಾಜ ಸೇವಕ ವಾಸುದೇವ ರಾವ್ ಮತ್ತು 10. ವಿದೇಶದಲ್ಲಿ ಉದ್ಯೋಗದಲ್ಲಿದ್ದು ಮರಳಿ ಬಂದ ಮೇಲೆ ಸಾವಯವ ಕೃಷಿ ಕ್ಷೇತ್ರಕ್ಕೆ ಇಳಿದು, ವಿಜಯ ಕರ್ನಾಟಕ ಪತ್ರಿಕೆಯ ‘ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪಡೆದ ವಿಜಯ ಕುಂದರ್ ಉಳಿಯ.

ಇವರೆಲ್ಲರೂ ತಮ್ಮ ಮನೆಗಳು, ಜಮೀನು, ತಾರಸಿ, ಬಾಲ್ಕನಿ, ಶಿಕ್ಷಣ-ಧಾರ್ಮಿಕ ಕೇಂದ್ರಗಳಲ್ಲಿ ಮಾಡಿರುವ ಸಾವಯವ ಕೃಷಿಯ ಚಂದ ನೋಡಬೇಕೆಂದರೆ, ಪುಸ್ತಕದಲ್ಲಿ ಪ್ರಕಟವಾಗಿರುವ ಚಿತ್ರಗಳನ್ನು ನೋಡಬೇಕು.

ಇಲ್ಲಿ ನಮೂದಿಸಿದ ಸಾಧಕರ ಪಟ್ಟಿಗೆ ಮೂವರನ್ನು ಸೇರಿಸಬೇಕು. ರೋಷನಿ ನಿಲಯದ ಹಳೆ ವಿದ್ಯಾರ್ಥಿಯೂ ಆದ ಕಿಶೋರ್ ಅತ್ತಾವರ್ ಮತ್ತು ಇವಲಿನ್ ಬೆನಿಸ್. ಇವರಿಬ್ಬರು ನಿರಂತರವಾಗಿ ಈ ಅಭಿಯಾನಕ್ಕೆ ನಿರಂತರವಾಗಿ ಪ್ರೇರಣೆ ನೀಡುತ್ತಾ ಎಲ್ಲವನ್ನೂ ಸಂಘಟಿಸಿದವರು. ಇನ್ನೊಬ್ಬರು ಈ ಪುಸ್ತಕದ ಲೇಖಕಿ ತನುಜಾ.

ನಾನು 25 ವರ್ಷಗಳ ಹಿಂದೆ ಉಳ್ಳಾಲದ ಸಹೋದ್ಯೋಗಿಯೊಬ್ಬರ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದೆ. ಬೆಳಿಗ್ಗೆ ಶೌಚಕ್ಕೆ ಸಮುದ್ರ ತೀರಕ್ಕೆ ಹೋಗಬೇಕಾದಾಗ ನಾಚಿಕೆ ಪಟ್ಟಿದ್ದೆ. ಅಲ್ಲಿನ ಯಾವ ಮನೆಗಳಲ್ಲೂ ಶೌಚಾಲಯ ಇರಲಿಲ್ಲ. ನಂತರ ಎರಡು ಮೂರು ವರ್ಷಗಳ ಹಿಂದೆ ಇದೇ ವಿದ್ಯಾರ್ಥಿಗಳಿಗೆ ಪತ್ರಕರ್ತರ ರೀತಿಯಲ್ಲಿ ಹೇಗೆ ಎಲ್ಲವನ್ನೂ ಗಮನಿಸಬೇಕು, ಜನರನ್ನು ಹೇಗೆ ಮಾತನಾಡಿಸಬೇಕು, ವರದಿ ಹೇಗೆ ಬರೆಯಬೇಕು ಎಂದು ತರಬೇತಿ ನೀಡಲು ಎರಡು ವರ್ಷ ಹೋಗಿದ್ದೆ, ಊರು ತಿರುಗಿ ಜನರನ್ನು ಮಾತನಾಡಿಸಿದ್ದೆ. ಎಲ್ಲಾ ಮನೆಗಳಲ್ಲೂ ಈಗ ಶೌಚಾಲಯಗಳಿವೆ. ರಸ್ತೆಗಳೂ ಸ್ವಚ್ಛವಾಗಿದ್ದವು. ಎಲ್ಲಾ ಅಂಗಡಿಗಳ ಮುಂದೆ ಕಸದ ಬುಟ್ಟಿ ಇಡಲಾಗಿತ್ತು. ಯಾರಾದರೂ ಹೊರಗೆ ಎಸೆದರೆ, ಅಂಗಡಿಯವರೇ ಹೇಳಿ ಬುಟ್ಟಿಗೆ ಹಾಕಿಸುತ್ತಿದ್ದರು. ಇನ್ನೊಂದು ವಿಷಯ ಎಂದರೆ, ಆ ಸಂದರ್ಭದಲ್ಲಿ ನಾನು- ಮೇಲೆ ಉಲ್ಲೇಖಿಸಿರುವ ವಾಸುದೇವ ರಾವ್ ಅವರ ಮನೆಗೆ ವಿದ್ಯಾರ್ಥಿಗಳ ಜೊತೆ ಹೋಗಿದ್ದೆ. ಅಲ್ಲಿ ಎಲ್ಲೆಲ್ಲೂ ಈ ಹಸಿಕಸವನ್ನೇ ಬಳಸಿ ಬೆಳೆದ ತರಕಾರಿ, ಹಣ್ಣುಗಳನ್ನು ನೋಡಿ ದಂಗುಬಡಿದುಹೋಗಿದ್ದೆ. ಹಾಗಾಗಿ, ಉಳ್ಳಾಲದ ಬದಲಾವಣೆ ಗಮನಾರ್ಹವಾದುದು ಎಂದೆನಿಸಿತ್ತು.

ರಾಜ್ಯ ಎಲ್ಲಾ ನಗರ, ಪಟ್ಟಣಗಳ ಆಡಳಿತಗಳು, ಗ್ರಾಮ ಪಂಚಾಯತ್‌ಗಳು, ಧಾರ್ಮಿಕ-ಶೈಕ್ಷಣಿಕ ಸಂಸ್ಥೆಗಳು, ಶಿಕ್ಷಕರು, ಸುಶಿಕ್ಷಿತರು, ಸ್ವಯಂಸೇವಾ ಸಂಸ್ಥೆಗಳು ಈ ಮಾದರಿಯನ್ನು ಅನುಸರಿಸಿದರೆ, ಸ್ವಚ್ಛ ಭಾರತದ ಕಲ್ಪನೆ ನಿಜವಾಗಬಹುದು; ಬರೇ ಪ್ರಚಾರಪ್ರಿಯ, ಪೋಸುಕೊಡುವ ಫೊಟೋಶೂಟ್ ಕೆಲಸಗಳಿಂದ ಅಲ್ಲ! ಆದರೆ, ಇದು ಒಂದು ದಿನ, ತಿಂಗಳು, ವರ್ಷದಲ್ಲಿ ಸಾಧಿಸಬಹುದಾದ ಕೆಲಸವಲ್ಲ. ಹತ್ತು ವರ್ಷಗಳ ಈ ಅಭಿಯಾನ 2016ರಲ್ಲಿ ಆರಂಭವಾಗಿದೆ. ಇಷ್ಟು ವರ್ಷಗಳ ನಿರಂತರ ಪ್ರಯತ್ನ, ಪರಿಶ್ರಮದಿಂದ ಮಾತ್ರವೇ ಉಳ್ಳಾಲದಲ್ಲಿ ಈ ಮಟ್ಟದ ಸಾಧನೆಯಾಗಿದೆ ಎಂಬುದನ್ನು ಮರೆಯಲಾಗದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page