Home ದೇಶ ಮಧುರೈ ಎಲ್‌ಐಸಿ ಕಚೇರಿಯಲ್ಲಿ ಭೀಕರ ಅಗ್ನಿಪ್ರಮಾದ: ಮಹಿಳಾ ಅಧಿಕಾರಿ ಸಜೀವ ದಹನ

ಮಧುರೈ ಎಲ್‌ಐಸಿ ಕಚೇರಿಯಲ್ಲಿ ಭೀಕರ ಅಗ್ನಿಪ್ರಮಾದ: ಮಹಿಳಾ ಅಧಿಕಾರಿ ಸಜೀವ ದಹನ

0

ಮಧುರೈ: ತಮಿಳುನಾಡಿನ ಮಧುರೈನಲ್ಲಿರುವ ಎಲ್‌ಐಸಿ (LIC) ಪ್ರಾದೇಶಿಕ ಕಚೇರಿಯಲ್ಲಿ ಬುಧವಾರ ರಾತ್ರಿ ಭೀಕರ ಅಗ್ನಿಪ್ರಮಾದ ಸಂಭವಿಸಿದ್ದು, ದುರದೃಷ್ಟವಶಾತ್ ಓರ್ವ ಮಹಿಳಾ ಅಧಿಕಾರಿ ಬೆಂಕಿಗೆ ಆಹುತಿಯಾಗಿದ್ದಾರೆ.

ಬುಧವಾರ ರಾತ್ರಿ ಸುಮಾರು 8:45ರ ವೇಳೆಗೆ ಎಲ್‌ಐಸಿ ಕಟ್ಟಡದ ಮೇಲಿನ ಮಹಡಿಯಲ್ಲಿ ಹಠಾತ್ತಾಗಿ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕು ಅಗ್ನಿಶಾಮಕ ವಾಹನಗಳ ಸಹಾಯದೊಂದಿಗೆ ಸುದೀರ್ಘ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಈ ದುರಂತದಲ್ಲಿ ಕಟ್ಟಡದ ಒಳಗಿದ್ದ ಓರ್ವ ಮಹಿಳಾ ಅಧಿಕಾರಿ ಬೆಂಕಿಯ ಜ್ವಾಲೆಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಮತ್ತೊಬ್ಬ ಅಧಿಕಾರಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವೇಳೆ ಎಟಿಎಂನಿಂದ ಹಣ ಡ್ರಾ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರು ಕಟ್ಟಡದ ಮೇಲಿನ ಮಹಡಿಯಲ್ಲಿ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ಮೇಲಿನ ಮಹಡಿಗೆ ಧಾವಿಸಿ ಕಿಟಕಿ ಗಾಜುಗಳನ್ನು ಒಡೆದಾಗ, ಸುಟ್ಟ ಗಾಯಗಳಾಗಿದ್ದ ವ್ಯಕ್ತಿಯೊಬ್ಬರು ಹೊರಗೆ ಓಡಿ ಬಂದಿದ್ದಾರೆ. ಆದರೆ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಒಳಗಿದ್ದ ಮಹಿಳೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ಅಥವಾ ಇನ್ಯಾವುದೇ ಕಾರಣದಿಂದ ಈ ಪ್ರಮಾದ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You cannot copy content of this page

Exit mobile version