Thursday, June 20, 2024

ಸತ್ಯ | ನ್ಯಾಯ |ಧರ್ಮ

ಮತ್ತೆ ಟ್ರೆಂಡ್‌ ಆದ #StopHindiImpostion

ಚೆನ್ನೈ: ಉನ್ನತ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿ, ಇಂಗ್ಲಿಷ್‌ ಭಾಷೆಯನ್ನು ತೆಗೆದುಹಾಕಲು ಶಿಫಾರಸು ಮಾಡುವ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಸಂಸದೀಯ ಸಮಿತಿ ರಾಷ್ಟ್ರಪತಿಗಳಿಗೆ ನೀಡಿರುವ ಹಿನ್ನೆಲೆಯಲ್ಲಿ ಹಿಂದಿಯೇತರ ರಾಜ್ಯಗಳ ಪ್ರತಿಭಟನೆ ತೀವ್ರವಾಗತೊಡಗಿದ್ದು, ಇಂದು ಟ್ವಿಟರ್‌ ನಲ್ಲಿ #StopHindiImpostion ರಾಷ್ಟ್ರಮಟ್ಟದಲ್ಲಿ ನಂ.೧ ಸ್ಥಾನದಲ್ಲಿ ಟ್ರೆಂಡ್‌ ಆಯಿತು.

ತಮಿಳುನಾಡಿನ ಆಡಳಿತಾರೂಢ ಡಿ,ಎಂ.ಕೆ ಪಕ್ಷ ರಾಜ್ಯಾದ್ಯಂತ ಇಂದು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಅದರ ಭಾಗವಾಗಿ ಟ್ವಿಟರ್‌ ನಲ್ಲೂ ಕೂಡ ಹಿಂದಿಹೇರಿಕೆ ವಿರುದ್ಧ ಪ್ರತಿರೋಧದ ಧ್ವನಿ ತೀವ್ರವಾಗಿ ಕೇಳಿಸಿತು.

ಸಾವಿರಾರು ಮಂದಿ ಟ್ವಿಟರ್‌ ಬಳಕೆದಾರರು, ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಭಾಷಾ ಹೋರಾಟಗಾರರು ಟ್ವಿಟರ್‌ ನಲ್ಲಿ ಇಂದು ಕೇಂದ್ರ ಸರ್ಕಾರದ ಹಿಂದಿಹೇರಿಕೆಯ ನೀತಿಯನ್ನು ಖಂಡಿಸಿದರು. ನಮಗೆ ತಮಿಳು, ಇಂಗ್ಲಿಷ್‌ ಸಾಕು, ಹಿಂದಿ ಬೇಕಾಗಿಲ್ಲ ಎಂದು ನೂರಾರು ಮಂದಿ ಟ್ವೀಟ್‌ ಮಾಡಿ ಕೇಂದ್ರ ಸರ್ಕಾರದ ಕಿವಿ ಹಿಂಡಿದರು.

ಕೇಂದ್ರ ಸರ್ಕಾರ ಸರ್ವಾಧಿಕಾರಿ ಮನಸ್ಥಿತಿಯಿಂದ ತನ್ನ ಫ್ಯಾಸಿಸ್ಟ್‌ ನೀತಿಯನ್ನು ದೇಶದ ಜನತೆಯ ಮೇಲೆ ಹೇರುತ್ತಿದೆ. ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂಬ ನೀತಿಯಿಂದ ಶ್ರೀಲಂಕ ಯಾವ ಸ್ಥಿತಿ ತಲುಪಿತು ಎಂಬುದನ್ನು ನಾವು ನೋಡಿದ್ದೇವೆ. ಭಾರತ ಮತ್ತೆ ಇದೇ ತಪ್ಪನ್ನು ಮಾಡುತ್ತಿದೆ ಎಂದು ಅರುಣ್‌ ಕುಮಾರ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ 72,000ಕ್ಕೂ ಹೆಚ್ಚು ಟ್ವೀಟ್‌ ಗಳನ್ನು ಮಾಡಲಾಗಿದ್ದು, ತಮಿಳುನಾಡು ಮಾತ್ರವಲ್ಲದೆ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಟ್ವಿಟರ್‌ ಬಳಕೆದಾರರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಅಮಿತ್‌ ಶಾ ನೇತೃತ್ವದ ಸಮಿತಿಯ ವರದಿಯನ್ನು ಈಗಾಗಲೇ ದೇಶದ ಹಲವು ಹಿಂದಿಯೇತರ ರಾಜ್ಯಗಳ ರಾಜಕಾರಣಿಗಳು ಖಂಡಿಸಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಕೇಂದ್ರ ಸರ್ಕಾರ ತಮಿಳರ ವಿರುದ್ಧ ಯುದ್ಧ ಹೂಡಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು