ಕಲಬುರಗಿ: ಇಂದು ಬೆಳಗ್ಗೆ ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ನಡೆದಿದ್ದು, ನಿಂತಿದ್ದ ಲಾರಿಗೆ ಮ್ಯಾಕ್ಸಿಕ್ಯಾಬ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಸಮೀಪ ನಿಂತಿದ್ದ ಲಾರಿಗೆ ಮ್ಯಾಕ್ಸಿಕ್ಯಾಬ್ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ.
ಮೃತರು ವಾಜೀದ್, ಮೆಹಬೂಬಿ, ಪ್ರಿಯಾಂಕಾ, ಮೆಹಬೂಬ್ ಎಂದು ಗುರುತಿಸಲಾಗಿದ್ದು, ಇವರು ಬಾಗಲಕೋಟೆಯವರು ಎಂದು ತಿಳಿದುಬಂದಿದೆ.
ಮ್ಯಾಕ್ಸಿಕ್ಯಾಬ್‌ನಲ್ಲಿ ಸುಮಾರು 31 ಪ್ರಯಾಣಿಕರಿದ್ದರು. ವೇಗವಾಗಿ ಚಲಿಸುತ್ತಿದ್ದ ವಾಹನವು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಚಾಲಕನ ಅಗೌರವದಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನೆಲೋಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.