Thursday, June 20, 2024

ಸತ್ಯ | ನ್ಯಾಯ |ಧರ್ಮ

ಮೇ ಸಾಹಿತ್ಯ ಮೇಳ |  ಲಿಂಗಾಂತರಿ ಸಮುದಾಯದ ಹೊಸ ಬೆಳಗು – ವಿಹಾನ್

ಮೇ 27, 28 ರಂದು ನಡೆಯಲಿರುವ ಒಂಭತ್ತನೇ ಮೇ ಸಾಹಿತ್ಯ ಮೇಳದ ಉದ್ಘಾಟಕರಲ್ಲಿ ಒಬ್ಬರಾಗಿರುವ ವಿಹಾನ್‌ ಲಿಂಗಾಂತರಿ ಸಮುದಾಯದ ಹೊಸ ದನಿ. ವಿಹಾನ್ ನಡೆದುಬಂದ ದಾರಿಯನ್ನು ಅವಲೋಕಿಸಿದ್ದಾರೆ ಡಾ. ಎಚ್‌ ಎಸ್‌ ಅನುಪಮಾ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡೆಂದು ಗುರುತಿಸಲ್ಪಟ್ಟ ಜೀವಕ್ಕೆ ತಂತಾನೇ ಒಂದಷ್ಟು ಸ್ವಾತಂತ್ರ್ಯ, ಆಯ್ಕೆ, ಅವಕಾಶಗಳು ಸಿಗುತ್ತವೆ. ಎಂದೇ ಗಂಡಾಗಿ ಹುಟ್ಟಿ ತಾನು ಹೆಣ್ಣೆಂದು ಗುರುತಿಸಿಕೊಂಡ ಲಿಂಗಾಂತರಿ ಹೆಣ್ಣುಗಳು ಕೊಂಡ ಹಾಯ್ದು ಬದುಕು ಕಟ್ಟಿಕೊಂಡರೂ ವಿಪುಲ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಪುರಾಣದಲ್ಲೂ ಶಿಖಂಡಿಯಂತಹ ಪಾತ್ರಗಳು ಕಂಡುಬರುತ್ತವೆ. ಆದರೆ ಹುಟ್ಟಿನಿಂದ ಹೆಣ್ಣೆಂದು ಗುರುತಿಸಲ್ಪಟ್ಟ ಜೀವಕ್ಕೆ ಮೊದಲು ಸಿಗುವ ಅನುಭವಗಳು ತಾರತಮ್ಯ, ದಮನ, ಸ್ವಾತಂತ್ರ್ಯದ ನಿರ್ಬಂಧ. ಹಾಗಾಗಿ ಹೆಣ್ಣು ಎಂದು ಕರೆದ ಜೀವಕ್ಕೆ ತಾನು ಗಂಡು ಎಂದೆನಿಸಿದರೂ ಹೇಳುವುದು ಸುಲಭವಿಲ್ಲ. ಹೇಳಿದರೂ ಬದುಕುವುದು ಸುಲಭವಿಲ್ಲ. ಎಂದೇ ಪುರಾಣ-ಕತೆಗಳಲ್ಲಿ ಹೇಗೋ ಹಾಗೆ ನಿಜಜೀವನದಲ್ಲೂ ಹೆಣ್ಣಾಗಿ ಗಂಡಾದ ಲಿಂಗಾಂತರಿ ಪುರುಷರು ಅದೃಶ್ಯರಾಗಿಯೇ ಇರುವಂತಾಗಿದೆ. ಮೊದಲೇ ಅಂಚಿಗೆ ದೂಡಲ್ಪಟ್ಟ ಹೆಣ್ಣುಲೋಕದಲ್ಲೂ ಅದರ ಅಂಚಿಗೆ ತಳ್ಳಲ್ಪಟ್ಟ ಟ್ರಾನ್ಸ್‌ಮ್ಯಾನ್‌ಗಳ ನೋವಿಗೂ ಹೆಣ್ಣು ಕಿವಿಯಾಗಬೇಕಿದೆ.


ಮಹಾರಾಷ್ಟ್ರದ ಪುಣೆಯ ಬಳಿಯ ಮರಾಠಿ ಮನೆಮಾತಿನ  26  ವರ್ಷದ ವಿಹಾನ್, ‘ಬಹುಜನ ಲಿಂಗಾಂತರಿ ಸ್ತ್ರೀವಾದಿ ಪುರುಷ’ ಎಂದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ವಿಹಾನ್ ಎಂಬ ಪದದ ಅರ್ಥ ‘ಮುಂಬೆಳಗು’. ತನ್ನ ದೇಹ, ಬದುಕಿನ ಹೊಸದಾರಿ ದಿಕ್ಕನ್ನು ತಾನೇ ರೂಪಿಸಿಕೊಂಡ ವಿಹಾನ್, ವಿರಳ ಸಂಖ್ಯೆಯ ಲಿಂಗಾಂತರಿ ಪುರುಷ ಸಮುದಾಯದ ಹೊಸ ದನಿಯಾಗಿ ಹೊರಹೊಮ್ಮುತ್ತಿದ್ದಾರೆ. ತನ್ನ ಆಯ್ಕೆಯ ಅವಕಾಶಕ್ಕೆ ನಿರಂತರ ಹೋರಾಡುತ್ತಲೇ ಇರಬೇಕಾದ ಮಹಿಳಾ ಸಮುದಾಯಕ್ಕೆ ಇದುವರೆಗೆ ವಿಹಾನ್ ನಡೆದುಬಂದ ದಾರಿಯನ್ನೊಮ್ಮೆ ಅವಲೋಕಿಸುವುದು ಸೂಕ್ತವಾಗಿದೆ.


‘ನೀನು ಹೆಣ್ಣು, ಅದಕ್ಕೇ..’

ಹುಟ್ಟುವಾಗ ಹೆಣ್ಣೆಂದು ಗುರುತಿಸಲ್ಪಟ್ಟು ಅದರಂತೆ ಬೆಳೆಯಬೇಕೆಂಬ ಸಾಮಾಜೀಕರಣಕ್ಕೆ ವಿಹಾನ್ ಒಳಗಾದರು. ಕುಟುಂಬ, ಶಾಲೆ, ಬೀದಿ, ಸಂಘಸಂಸ್ಥೆಗಳೆಲ್ಲ ಅವರನ್ನು ಹೆಣ್ಣೆಂದೇ ಗುರುತಿಸಿ ಗೆರೆಯೆಳೆಯುತ್ತ ಹೋದವು. ಎಳೆಯ ವಯಸ್ಸಿನಲ್ಲಿಯೇ ತನ್ನ ಹುಡುಗಿತನ ಎಲ್ಲರಂತಿಲ್ಲ ಎಂದು ತಿಳಿಯಿತು. ಆದರೆ ಕುಟುಂಬ ವಹಿಸುತ್ತಿದ್ದ ಹೆಣ್ಣು ಪಾತ್ರಕ್ಕೆ ತಕ್ಕಂತೆ ಅಭಿನಯಿಸಲೇಬೇಕಾಗುತ್ತಿತ್ತು. ಹೆಣ್ಣುಮಕ್ಕಳು ಕಲಿಯಬೇಕಾದ ಕೆಲಸ ಮಾಡಬೇಕಿತ್ತು. ತನಗದು ಬರುವುದಿಲ್ಲ, ಮಾಡಲು ಇಷ್ಟವಿಲ್ಲ, ಸೋದರರೂ ಮಾಡಲಿ ಎಂದರೆ, ‘ಸೋಂಬೇರಿ, ಕೆಲ್ಸಾ ಮಾಡಕ್ಕಾಗದೆ ಅವರಿವರು ಮಾಡ್ಲಿ ಅಂತಿಯಾ? ನೀನು ಹೆಣ್ಣು, ಮೊದ್ಲು ಅಚ್ಚುಕಟ್ಟಾಗಿ ಕೆಲ್ಸ ಮಾಡದ್ ಕಲಿ’ ಎಂದು ಮನೆಯವರು ಜೋರು ಮಾಡುತ್ತಿದ್ದರು.


ಬೆಳೆಯುತ್ತ ಹೋದಂತೆ ಬಳೆ, ಟಿಕ್ಲಿ, ಮೆಹೆಂದಿ, ಗೆಜ್ಜೆ, ಜಡೆ, ಹೂವು, ಸರ, ಓಲೆ, ಒಡವೆಗಳಲ್ಲಿ ಮನೆಯ ಹೆಂಗಸರು, ಸಹಪಾಠಿ ಗೆಳತಿಯರು ಮುಳುಗಿಹೋದರೆ, ವಿಹಾನ್‌ಗೆ ಅದ್ಯಾವುದೂ ಇಷ್ಟವಾಗುತ್ತಿರಲಿಲ್ಲ. ಬೋಳು ಕೈ, ಬೋಳು ಹಣೆ, ಬೋಳುಕಿವಿಯಲ್ಲಿರುವುದೇ ಇಷ್ಟ. ಹುಡುಗರ ಜೊತೆಗೇ ಆಟ, ಗುದ್ದಾಟ. ಆತ್ಮೀಯ ಸ್ನೇಹಬಳಗವೆಲ್ಲ ಹುಡುಗರದೇ. ಶಾಲೆಯ ಪ್ರವಾಸವಿರಲಿ, ನೆಂಟರ ಮನೆಯ ಜಾತ್ರೆಯಿರಲಿ, ಅಂಬೇಡ್ಕರ್ ಜಯಂತಿಯ ಕುಣಿತ, ಸಂಭ್ರಮಗಳಿರಲಿ, ಸದಾ ಹುಡುಗರ ತಂಡದಲ್ಲೇ ಇರುವುದು. ಹುಡುಗರ ಜೊತೆಗೆ ತನ್ನ ಅಸ್ಮಿತೆಯಿದೆ; ಅವರೊಡನೆ ತಾನು ಸಲೀಸಾಗಿರಬಲ್ಲೆ, ತಾನು ಹೆಣ್ಣಲ್ಲ ಎಂಬ ಅರಿವು ಬೆಳೆಯತೊಡಗಿತು. ಗಂಡಿನೊಡನೆ ಹೆಚ್ಚೆಚ್ಚು ಸ್ನೇಹ ಬೆಳೆಸಿದ್ದಕ್ಕೆ ಬಜಾರಿ, ಗಂಡುಬೀರಿ, ದಿಂಡೆ, ಮುಂತಾದ ಕುಹಕದ ವಿಶೇಷಣಗಳನ್ನು ಕೇಳಬೇಕಾಯಿತು.


ಪ್ರಾಯ ಬರುವಾಗ ಮೊಲೆ ಮೂಡತೊಡಗಿದವು. ಕತ್ತರಿಸಿ ಬಿಸಾಡುವಷ್ಟು ತನ್ನ ದೇಹದ ಮೇಲೆ ಕೋಪ ಬರುತ್ತಿತ್ತು. ಅದನ್ನು ಮುಚ್ಚಲು ಎರಡೆರೆಡು ಬಿಗಿಯಾದ ಅಂಗಿ ತೊಟ್ಟು ಚಪ್ಪಟೆ ಮಾಡಲೆತ್ನಿಸಿದರು. ಮುಟ್ಟು ಆರಂಭವಾದಾಗ ವಿಪರೀತ ಹಿಂಸೆ ಅನುಭವಿಸಿದರು. ತಾನು ಹುಡುಗ; ಈ ಮೊಲೆ, ಗರ್ಭಕೋಶಗಳನ್ನು ಕತ್ತರಿಸಿ ತೆಗೆಸಿಬಿಡಬೇಕು ಎಂದು ಪದೇಪದೇ ಅನಿಸುತ್ತಿತ್ತು. ಅದೇ ವೇಳೆ ಮನೆಯ, ಕೇರಿ-ಊರಿನ ಗಂಡಸರ ಕುಡಿತ, ಜಗಳ, ಹಿಂಸಾವತಾರಗಳು ಎಳ್ಳಷ್ಟೂ ಇಷ್ಟವಾಗುತ್ತಿರಲಿಲ್ಲ. ಥೋ, ತಾನು ಇಂತಹ ಗಂಡಸಲ್ಲ ಎಂದೂ ಬಲವಾಗಿ ಅನಿಸುತ್ತಿತ್ತು. ‘ತಾನು ಯಾರು? ಅಂತಹ ಗಂಡಸೇ? ಇಂತಹ ಹೆಂಗಸೇ?’ ಎಂಬ ದ್ವಂದ್ವ ಬೆಳೆಯುತ್ತ ಹೋಯಿತು. ಅಂತೂ ವಯಸ್ಕ ಗಂಡಸರಿಗಿಂತ ಸಮವಯಸ್ಕ ಹುಡುಗರ ಒಡನಾಟ ಹೆಚ್ಚುತ್ತ ಹೋಯಿತು.


ಆದರೆ ಹೆಣ್ಣೆಂದು ಗುರುತಿಸಲ್ಪಟ್ಟ ವ್ಯಕ್ತಿಯು ತನ್ನ ಲಿಂಗತ್ವವನ್ನು ಭಿನ್ನವೆಂದು ನಿರೂಪಿಸುವುದು ಸುಲಭವಲ್ಲ. ಅವರ ಬಿಡುಗಡೆಯ ಹಾದಿ ದುರ್ಗಮವೂ, ಮೌನಕಣಿವೆಯೊಳಗಿಂದ ಸ್ಫೋಟಿಸಬೇಕಾದ ಜ್ವಾಲಾಮುಖಿಯಂತಹುದೂ ಆಗಿದೆ. ವಿಹಾನ್‌ಗೆ ಆದದ್ದು ಅದೇ. ಬೇಲಿಗಳು ಬಿಗಿಯಾದವು. ಗಡಿ ಮೀರುವ ಹಂಬಲ ಹೆಚ್ಚಾದಷ್ಟೂ ಹಿಂಸೆಯೂ ಹೆಚ್ಚುತ್ತ ಹೋಯಿತು. ತನ್ನನ್ನು ಗುರುತಿಸಿಕೊಳ್ಳಬಹುದು ಎನಿಸುವಂತಹ ಸಮಾನ ಸಮುದಾಯ ಸಿಗಲಿಲ್ಲ. ಕಣ್ಣೆದುರು ಹುಡುಗನಾಗಿ ಹುಟ್ಟಿ ಹುಡುಗಿಯಾದವರು ಕಾಣುತ್ತಿದ್ದರೇ ಹೊರತು ಹುಡುಗಿಯಾಗಿ ಹುಟ್ಟಿ ಹುಡುಗನಾದ ವ್ಯಕ್ತಿಗಳು ಕಾಣಲಿಲ್ಲ. ಗಂಡಾಗಿ ಹುಟ್ಟಿ ಹೆಣ್ಣೆಂದುಕೊಂಡ ಜೀವಗಳನ್ನು ಹೆಣ್ಣುಕುಲವು ಸ್ವೀಕರಿಸಿದ ಹಾಗೆ ಹೆಣ್ಣೆನಿಸಿಕೊಂಡು ಹುಟ್ಟಿ ಗಂಡಾದವರನ್ನು ಪುರುಷ-ಸಮಾಜ ಸ್ವೀಕರಿಸುವುದಿಲ್ಲ ಎಂಬ ಅರಿವಾಯಿತು. ಇಲ್ಲೂ ಅಲ್ಲೂ ಎಲ್ಲೂ ಸಲ್ಲದಂತಾಗುವ ನಿರಂತರ ಭಯ, ಅಭದ್ರತೆಯಲ್ಲಿ ಬೆಳೆದರು.


ಲಿಂಗತ್ವ ಕುರಿತ ಗೊಂದಲ, ತಾರತಮ್ಯದ ಅನುಭವಗಳು ಒಂದುಕಡೆಯಾದರೆ, ಬಹುಜನ ಸಮುದಾಯದ ವಿಹಾನ್ ಜಾತಿ ತಾರತಮ್ಯ, ಬಡತನದ ಅವಮಾನಗಳನ್ನೂ ಜೊತೆಗೇ ಅನುಭವಿಸತೊಡಗಿದರು. ಜಾತಿ, ವರ್ಗ, ಲಿಂಗತ್ವವೆಂಬ ಮೂರಲಗಿನ ಕೂರಂಬು ಎತ್ತೆತ್ತಲಿಂದಲೂ ಚುಚ್ಚಿ ಚುಚ್ಚಿ ತಿವಿಯತೊಡಗಿತು.


ಈ ವೇಳೆಗೆ ಪುಣೆಯ ಬಿ. ಜಿ. ಢೇರೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನೂ, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಫರ್ಗ್ಯೂಸನ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪದವಿಯನ್ನೂ ಪಡೆದರು. ಕುಟುಂಬ ಮುಂಬಯಿಗೆ ಸ್ಥಳಾಂತರಗೊಂಡಿತು. ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (ಟಿಸ್)ನಿಂದ ಸಮಾಜಸೇವೆಯ ಬಗೆಗೆ ಸ್ನಾತಕೋತ್ತರ ಪದವಿ ಪಡೆದರು. ಮನೆಯ ವಾತಾವರಣ ಉಸಿರುಗಟ್ಟಿಸತೊಡಗಿದ್ದರೂ ಗಂಭೀರ ಓದಿಗೆ ತೆತ್ತುಕೊಂಡು ಜಾತಿ ಮತ್ತು ಲಿಂಗತ್ವ ಕುರಿತು ಆಳ ಅಧ್ಯಯನ ನಡೆಸಿದರು. ‘ಮಹಿಳಾ ಕೇಂದ್ರಿತ ಆಚರಣೆ’ಗಳ ಬಗೆಗೆ ಪ್ರಬಂಧ ಮಂಡಿಸಿದರು. ಹಾರ್ವರ್ಡ್‌ನ ಕೆನೆಡಿ ಸ್ಕೂಲಿನಲ್ಲಿ ಐದು ತಿಂಗಳ ಲೀಡರ್‌ಶಿಪ್ ಆರ್ಗನೈಸಿಂಗ್ ಆಕ್ಷನ್ ವಿಷಯದಲ್ಲಿ ತರಬೇತಿ ಪಡೆದರು. ಆಳದ ಓದು, ಶಿಕ್ಷಣ ನೀಡಿದ ಧೈರ್ಯ, ಭರವಸೆಗಳು ವಿಹಾನ್‌ಗೆ ತನ್ನನ್ನು ತಾನು ‘ಅಂಬೇಡ್ಕರೈಟ್ ಕ್ವೀರ್ ಫೆಮಿನಿಸ್ಟ್’ ಎಂದು ಸ್ನೇಹಬಳಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಉನ್ನತ ಶಿಕ್ಷಣವು ಸ್ವಾಯತ್ತತೆಯ ಬದುಕಿನ ಕಡೆಗೆ ಚಲಿಸಲು ರಹದಾರಿಯಾಯಿತು.


ಮದುವೆಯ ಒತ್ತಡ

ಮದುವೆ ಮಾಡಿದರೆ ‘ದಾರಿ ತಪ್ಪಿದ ಮಗಳು’ ಸರಿ ಹೋದಾಳು ಎಂದು ಮನೆಯವರು  ಗಂಡು ಹುಡುಕತೊಡಗಿದರು. ಈಗ ನಿಜವಾದ ಪರೀಕ್ಷೆ ಎದುರಾಯಿತು. ಸ್ನೇಹಬಳಗಕ್ಕಷ್ಟೇ ಅಲ್ಲ, ಮನೆಯವರಿಗೂ ತನ್ನ ಲಿಂಗತ್ವ ಅಸ್ಮಿತೆ ಬೇರೆ ಎಂದು ತಿಳಿಸಬೇಕಿತ್ತು. ಅದು ತಿಳಿಸಿದ ಬಳಿಕ ಮನೆಯಲ್ಲುಂಟಾದ ಕ್ಷೋಭೆ, ಗಲಾಟೆ, ಹಿಂಸೆಯ ವಾತಾವರಣದಲ್ಲಿ ಮನೆಯಲ್ಲಿರಲು ಸಾಧ್ಯವಿರಲಿಲ್ಲ. ಮನೆಬಿಟ್ಟು ಹೋಗಿಬಿಡಬೇಕು ಎಂಬ ಹಂಬಲ ಬಲವಾಯಿತು. ಆದರೆ ಎಲ್ಲಿ ಹೋಗುವುದು? ಏನು ಮಾಡುವುದು? ಮನೆ ಎಂದರೆ ಬರಿಯ ನಾಲ್ಕು ಗೋಡೆಯೊಳಗಿನ ಅವಕಾಶ ಮಾತ್ರವೇ? ಗೋಡೆಯೊಳಗಿನ ಜನರೂ ಮುಖ್ಯ ಎಂದಾದರೆ ಇದು ನನ್ನ ಮನೆಯೇ? ಇವರಲ್ಲ ಎಂದಾದರೆ ನನ್ನವರಾರು? ಈ ನಂಟುಗಳನ್ನು ಬಿಡುವುದು ಹೇಗೆ? ಆಮೇಲಿನ ಬದುಕು ಸುರಕ್ಷಿತವೇ? ತನ್ನ ಪತ್ತೆ ಹಚ್ಚಿ ಮತ್ತಷ್ಟು ಹಿಂಸೆ ಎದುರಾದರೆ? ಇವರನ್ನೆಲ್ಲ ಬಿಟ್ಟು ಬದುಕಲು ಸಾಧ್ಯವೇ? ಮುಂತಾದ ನೂರೆಂಟು ಪ್ರಶ್ನೆಗಳು ಮನದಲ್ಲಿ ಭೋರ್ಗರೆಯತೊಡಗಿದವು.

ಒಂದು ಅಂಬೇಡ್ಕರ್ ಜಯಂತಿಯ ದಿನ. ಸಭೆ, ಸಮಾರಂಭಗಳ ಬಳಿಕ ತನ್ನ ವಿಷಯ ತಿಳಿದಿದ್ದ ಅಂಬೇಡ್ಕರೈಟ್ ಗೆಳೆಯನೊಟ್ಟಿಗೆ ಮನದ ಗೊಂದಲ ಚರ್ಚಿಸಿದರು. ಅವನು ವಿಹಾನ್‌ನ ಎಲ್ಲ ಹಂತಗಳ ಬೆಳವಣಿಗೆ ಕಂಡಿದ್ದವನು. ವಿಹಾನ್‌ಗೆ ದೆಹಲಿಯಲ್ಲಿ ‘ಮಾ’ ಸಿಕ್ಕಿರುವುದು, ಒಬ್ಬಳು ಪ್ರೇಮಿಯೂ ಇರುವುದು, ಅವಳೀಗ ದೆಹಲಿಗೇ ಹೋಗಿರುವುದು ಗೊತ್ತಿತ್ತು. ಹೇಗಿದ್ದರೂ ಉನ್ನತ ಶಿಕ್ಷಣದ ಬೆಂಬಲವಿರುವುದರಿಂದ ಉದ್ಯೋಗವೂ ದೊರೆತೀತು ಎಂಬ ಭರವಸೆಯಿತ್ತು, ‘ಹೊರಟು ಹೋಗು’ ಎಂದು ಧೈರ್ಯ ತುಂಬಿ ಕೆಲವು ಲಗೇಜುಗಳೊಡನೆ ರೈಲ್ವೇ ಸ್ಟೇಶನ್ನಿಗೆ ಕರೆತಂದು ಬಿಟ್ಟ. ರೈಲು ಬರಲು ೧೫ ನಿಮಿಷ ಇದೆ ಎನ್ನುವಾಗಲೂ ದ್ವಂದ್ವ, ದುಃಖ.

ಬಹುಜನ ಕುಟುಂಬಗಳಲ್ಲಿ ಶಿಕ್ಷಣ ಕೊಡಿಸಿದ ಮಕ್ಕಳ ಮೇಲೆ ಇಡಿಯ ಕುಟುಂಬವೇ ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತದೆ. ಮಕ್ಕಳ ಕಾಲದಲ್ಲಾದರೂ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸೀತು ಎಂಬ ಆಶಾಭಾವನೆಯಿರುತ್ತದೆ. ಹಾಗಿರುವಾಗ ಅವರ ಬೆವರ ಫಲದಲ್ಲಿ ಶಿಕ್ಷಣ ಪಡೆದು, ‘ನಾನು ಗಂಡು’ ಎಂದು ಘೋಷಿಸಿಕೊಂಡು ಮನೆಯವರಿಗೆ ಊರುಗೋಲಾಗಬೇಕಾದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವೆನೇ ಎಂಬ ಪಾಪಪ್ರಜ್ಞೆ ಕಾಡತೊಡಗಿತು. ಗೊತ್ತಿಲ್ಲದ ಊರಿಗೆ, ಹೊಸದಾಗಿ ಏರ್ಪಟ್ಟ ನಂಟು ನೆಚ್ಚಿ ಹೋಗುವುದು ಸರಿಯೇ? ಸಂಕಟಕಾಲದಲ್ಲೂ ಅವರು ನನ್ನ ಕೈಬಿಡಲಾರರೇ? ಮುಂತಾದ ಅಭದ್ರತೆಯ ಭಯ ಒತ್ತರಿಸಿ ಬಂತು.

ಅಂತೂ ರೈಲು ಬಂದೇ ಬಿಟ್ಟಾಗ ಮನೆಯ ದೃಶ್ಯ, ಅದೃಶ್ಯ, ದೈಹಿಕ-ಮಾನಸಿಕ ಹಿಂಸೆಗಳ ಚಿತ್ರಣ ಕಣ್ಣೆದುರು ತಂದುಕೊಂಡು, ಉಸಿರುಗಟ್ಟಿಸುವ ಅಲ್ಲಿರಲು ಸಾಧ್ಯವೇ ಇಲ್ಲ ಎನಿಸಿ ದೆಹಲಿಯ ರೈಲು ಹತ್ತೇಬಿಟ್ಟರು.ಅಷ್ಟೇ. ಅಲ್ಲಿಂದೀಚಿನದು ‘ವಿಹಾನ್’, ಅಂದರೆ ಹೊಸಬೆಳಗು.

ರೈಲು ಮುಂಬಯಿಯ ಗಡಿ ದಾಟುವಾಗ, ಗುಜರಾತಿನಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಹೊಸಬದುಕಿಗಾಗಿ ತನ್ನ ಸಮುದಾಯವನ್ನು ಸೇರಿಕೊಳ್ಳಲು ಹೋಗುವಾಗ ಎಲ್ಲ ಕಳಚಿಕೊಂಡ ಅನುಭವ. ‘ಕೋಶ ಕಟ್ಟಿಕೊಂಡ ಮರಿಹುಳ ತನ್ನ ಸುತ್ತಣ ಬಲೆಯ ತಾನೇ ಹರಿದು ಹೊರಬರುವಂತೆ ಎಲ್ಲವನ್ನು ಕಳಚಿಕೊಳ್ಳಲೇಬೇಕು. ಇಲ್ಲದಿದ್ದರೆ ಚಿಟ್ಟೆ ಹೊರಬರಲಾರದು. ಮರಿಹುಳ ಉಸಿರುಗಟ್ಟಿ ಒಳಗೇ ಸಾಯಬೇಕಾದೀತು. ಹಳೆಯ ಹೆಸರು, ಕುಟುಂಬ, ಹಳೆಯ ಸಹಪಾಠಿಗಳು, ಗೆಳೆತನದ ಬಳಗ, ಗುರುಗಳು, ನೆಂಟರು, ಉದ್ಯೋಗ, ನೆರೆಹೊರೆ ಎಲ್ಲ ಅಂದರೆ ಎಲ್ಲವನ್ನು ಕಳಚಿಕೊಳ್ಳಬೇಕು. ತನ್ನ ನಿಜಗುರುತು ತಿಳಿಯದ, ನಿಜಗುರುತನ್ನೊಪ್ಪದ ಎಲ್ಲರಿಂದ ಬಿಡಿಸಿಕೊಳ್ಳಬೇಕು. ನನ್ನ ಹೊಸ ಹುಟ್ಟನ್ನು ನಾನೇ ರೂಪಿಸಿಕೊಳ್ಳಬೇಕು.’


ಇದರ ಮೊದಲ ಮೆಟ್ಟಿಲಾಗಿ ಜನ್ಮನಾಮವನ್ನು ಮೃತನಾಮ ಎಂದು ಘೋಷಿಸಿಕೊಂಡು ಹಳೆಯ ಹೆಸರು ಅಳಿಸಿಕೊಂಡರು. ವಿಹಾನ್ ಆದರು. ಕಲಿತು ಬಂದ ಕಾಲೇಜಿಗೆ ಪದವಿಪ್ರದಾನ ಮಾಡುವಾಗ ತಾಯ್ತಂದೆಯರಿಗೆ ಹಳೆಯ ಹೆಸರಿನ ಡಿಗ್ರಿ ಸರ್ಟಿಫಿಕೇಟ್ ಕಳಿಸಬೇಡಿ ಎಂದು ಪತ್ರ ಬರೆದರು. ಮನೆಯವರಿಗೆ ಗುರುತು ಹತ್ತದಿರಲೆಂದು ಹಳೆಯ ಅಕೌಂಟ್, ಫೋನ್, ಸಂಪರ್ಕ, ಹೆಸರು ಎಲ್ಲವನ್ನೂ ಅಳಿಸಿ ಹಾಕಿದರು.


ದೆಹಲಿ ತಲುಪಿ ಸಾಕು ಅಮ್ಮನ ಮಡಿಲು ಸೇರಿದ್ದಾಯ್ತು. ಒಂದು ಉದ್ಯೋಗವೂ ದೊರೆಯಿತು. ಒಂದು ಬಾಡಿಗೆ ಮನೆಯೂ ಸಿಕ್ಕೇಬಿಟ್ಟಿತು. ಪ್ರೇಮಿಯ ಸಖ್ಯ ಬೆಚ್ಚನೆಯ ಅನುಭವ ನೀಡಿತು. ಇನ್ನು ತನಗೆ ತಾನೇ ಆಗಿ ಬದುಕುವ ದಿನಗಳು ಬಂದವು ಎಂದುಕೊಳ್ಳುವಾಗ ಒಂದು ಬ್ಯಾಂಕ್ ಖಾತೆ ತೆರೆಯಬೇಕಾದ ಅನಿವಾರ್ಯತೆ ಎದುರಾಯಿತು. ಅದೊಂದು ತಿಂಗಳುಗಟ್ಟಲೆಯ ಹೋರಾಟ. ಹೊಸಹೆಸರು ಮಾತ್ರ ಸಾಕೆಂದರೆ ಹಳೆಯ ದಾಖಲೆ ಪತ್ರಗಳೆಲ್ಲ ನಿರುಪಯೋಗಿಯಾಗುತ್ತಿದ್ದವು. ಮತ್ತೊಂದೆಡೆ ದಾಖಲೆಗಳಿಲ್ಲದೆ ಅಸ್ತಿತ್ವವೇ ಇಲ್ಲ ಎಂಬಂತಹ ಸಾಮಾಜಿಕ ಪರಿಸ್ಥಿತಿ. ಹಳೆಯದು ಇರಲಿ ಎಂದರೆ ಮತ್ತದಕ್ಕೇ ಮರಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ತನ್ನ ಲಿಂಗತ್ವವನ್ನೂ, ಅದಕ್ಕೊಪ್ಪುವ ಹೆಸರನ್ನೂ ತಾನೇ ಇಟ್ಟುಕೊಂಡ ಜೀವಂತ ವ್ಯಕ್ತಿಯ ಬಗೆಗೆ ಸಮಾಜ ತೋರಿಸುವ ಅಸಡ್ಡೆ, ಕೋಪ, ಸಾಮಾಜಿಕ ರಚನೆಯಲ್ಲೇ ಹುದುಗಿಹೋಗಿರುವ ರಾಚನಿಕ ಹಿಂಸೆಗಳು ತುದಿಬೆರಳಿನ ಅನುಭವವೆಂಬಂತೆ ನಿಲುಕಿದವು.


ಓಹ್! ಒಂದೇ, ಎರಡೇ. ನೂರೆಂಟು ದ್ವಂದ್ವಗಳ, ಸವಾಲುಗಳ ಬದುಕು. ಏರುಪೇರಾಗುವ ಮಾನಸಿಕ ಸ್ವಾಸ್ಥ್ಯ, ನಿದ್ರಾಹೀನತೆ, ಅದಕ್ಕೆ ಚಿಕಿತ್ಸೆ. ಜೊತೆಗೆ ಬಿಟ್ಟುಬಂದದ್ದರ ಕಡೆಗೆ ಸೆಳೆತ. ಮನೆಗೆ ಹೋಗಿ, ನೋಡಿ, ಹೇಳಿ, ಅವರನ್ನೂ ಒಪ್ಪಿಸುವ ತುಡಿತ. ಬಂದ ಒಂದೇ ತಿಂಗಳಿಗೆ ಮತ್ತೆ ಮುಂಬಯಿಗೆ ಹೋದರು. ಕೊಂಚ ಸಮಾಧಾನ ಪಡೆದು ಮತ್ತೆ ಕೆಲಸದಲ್ಲಿ ತೊಡಗಿದರು. ವಿರಹ, ವಿರಸ, ಒಡಕುಗಳ ಫಲವಾಗಿ ದೆಹಲಿ ಬಿಟ್ಟು ಈಗ ಒಂದೂವರೆ ವರ್ಷದಿಂದ ಬೆಂಗಳೂರು ವಾಸಿಯಾಗಿದ್ದಾರೆ. ಲಿಂಗತ್ವ, ಜಾತಿ, ಅಭಿವೃದ್ಧಿ ಅಧ್ಯಯನ ಕೆಲಸದಲ್ಲಿ ತೊಡಗಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಯ ಬಗೆಗೆ ಅಪಾರ ಕಾಳಜಿಯಿರುವ ವಿಹಾನ್ ಅದನ್ನೂ ಸೇರಿಸಿದಂತೆ ಅಂತರ್‌ಶಿಸ್ತೀಯ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಲಿಂಗಾಂತರಿ ಪುರುಷ ಸಮುದಾಯದ ಕಷ್ಟಗಳ ಬಗೆಗೆ ಬರೆದು ಗಮನ ಸೆಳೆದಿದ್ದಾರೆ. ಕೋವಿಡ್ ಕಾಲದಲ್ಲಿ ಆ ಸಮುದಾಯ ಎದುರಿಸಿದ ಸಂಕಷ್ಟಗಳ ಬಗೆಗೆ ಸಂಶೋಧನೆ ನಡೆಸಿದ್ದಾರೆ. ಕ್ವೀರ್ ಗುಂಪಿನ ಆಪ್ತಸಹಾಯಕರಾಗಿ, ಮಹಿಳೆ-ಕ್ವೀರ್-ಯುವಜನತೆಯ ಬೆಂಬಲ ಗುಂಪು ‘ಹಂಸಫರ್’ನ ಭಾಗವಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಯುವಜನತೆಯ ದನಿಯನ್ನು ಮುನ್ನೆಲೆಗೆ ತರುವ ‘ಹೈಯ್ಯಾ’ ಸಂಸ್ಥೆಯ ಪ್ರಚಾರ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಏಷಿಯಾ ಪೆಸಿಫಿಕ್ ಲಿಂಗಾಂತರಿ ಸಮುದಾಯದ ಸಂಪರ್ಕ ಜಾಲವಾಗಿ ಕೆಲಸ ಮಾಡುತ್ತಾರೆ. MasculiniTea: Kuch Mardani Gupshup ಎಂಬ ಪಾಡ್‌ಕಾಸ್ಟ್ ನಡೆಸುತ್ತ ಲಿಂಗಾಂತರಿ ಪುರುಷರ ಅನುಭವಗಳನ್ನು ದಾಖಲಿಸುತ್ತಿದ್ದಾರೆ. ಸೂಕ್ಷ್ಮ ಬರಹಗಾರರಾದ ವಿಹಾನ್, ಸರಳವಾದ ಆಪ್ತಶೈಲಿಯಲ್ಲಿ ಬದುಕಿನ ಅನುಭವಗಳನ್ನು ಹಲವು ಅಂತರ್ಜಾಲ ನಿಯತಕಾಲಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದಾರೆ.


***
ಹಲವು ಅಡೆತಡೆ, ಬೇಲಿ, ಕಂದಕ, ಕೊಂಡಗಳ ಹಾಯ್ದು ಬಂದ 26 ವರ್ಷದ ವಿಹಾನ್ ಈಗ ತನ್ನ ಅನ್ನ ತಾನೇ ಗಳಿಸಿಕೊಳ್ಳುತ್ತ, ತನ್ನಿಷ್ಟದಂತೆ ಬದುಕುವ ಮಾರ್ಗ ಕಂಡುಕೊಳ್ಳುತ್ತ ಬೆಂಗಳೂರಿನಲ್ಲಿದ್ದಾರೆ. ಅವರ ಸಮುದಾಯ ಬೆನ್ನಿಗಿದೆ. ಆದರೂ ತನಗೆ ಬೇಕಾದ, ತಾನು ಮಾಡಲೇಬೇಕಾದ ಇನ್ನೂ ಏನೋ ‘ಆ’ ಅದು ಇದೆಯೆಂದು ಹುಡುಕಾಟ ನಡೆಸುತ್ತಲೇ ಇದ್ದಾರೆ. ಅವರು ಒಲ್ಲೆನೆಂದು ಬಂದು ಈಗ ಪಡೆದಿರುವ ಹೊಸ ಪುರುಷ ಅಸ್ಮಿತೆಯು ಹಳೆಯ ಪಾರಂಪರಿಕ ಚೌಕಟ್ಟನ್ನು ಮೀರಿ ಮಾನವ ಅಸ್ಮಿತೆಯೆಡೆಗೆ ತಮ್ಮನ್ನು ಒಯ್ಯುತ್ತಿದೆಯೆ ಎಂದವರು ಪರಿಶೀಲಿಸಿಕೊಳ್ಳಬೇಕಿದೆ. ಕ್ರಮಿಸಬೇಕಾದ ದಾರಿ ದೂರವಿದೆ.



‘ನೊಂದೆ’ ಎಂದವರನ್ನೆಲ್ಲ ಮಹಿಳಾ ಚಳವಳಿ, ಬಹುಜನರ ಚಳವಳಿಗಳು ಒಳಗೊಳ್ಳುತ್ತವೆ. ತಮ್ಮ ಲಿಂಗತ್ವ-ಹೆಸರು-ಬದುಕುಗಳನ್ನು ತಾವೇ ಕಟ್ಟಿಕೊಳ್ಳಲಿಚ್ಛಿಸಿ ನೋವು, ಅವಮಾನ, ಅಭದ್ರತೆ ಎದುರಿಸುವ ಎಲ್ಲ ಜೀವಗಳ ಜೊತೆಗೂ ಜೀವಪರ ಚಿಂತನೆ, ಚಳವಳಿ, ಸೈದ್ಧಾಂತಿಕ ವಾದಗಳು ಹೆಜ್ಜೆಯಿಡುತ್ತವೆ. ನಮ್ಮ ಸುತ್ತಲ ಲೋಕದ ಬಿಡುಗಡೆಯೇ ನಮ್ಮ ಬಿಡುಗಡೆ. ಸಮಾನತೆ, ಸ್ವಾಯತ್ತತೆ, ಘನತೆಯ ಬದುಕುಗಳು ಒಬ್ಬೊಬ್ಬರಿಗಷ್ಟೇ ಸಿಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಸಿಕ್ಕಾಗಲಷ್ಟೇ ಅವಕ್ಕೆ ಬೆಲೆ, ಅರ್ಥ ಸಿಗುವುದು.



ಆಪ್ತ ಬೆಂಬಲ, ಒಪ್ಪಿಕೊಳ್ಳುವಿಕೆ, ಪ್ರೇಮ ಇಲ್ಲದೇ ಲೋಕವಿರುವುದೇ? ಇದನ್ನೆಲ್ಲ ತುಂತುಂಬಿ ಕೊಟ್ಟು ನಮ್ಮೊಳಗನ್ನು ತುಂಬಿಕೊಂಡರೆ ದುಃಖವೇ ಇರಲಾರದು, ಅಲ್ಲವೇ? ಅದಕ್ಕೇ ಎಲ್ಲ ಒಗ್ಗೂಡಿ ವಿಹಾನರುಗಳ ಕೈಕೈ ಹಿಡಿದು ಹೆಜ್ಜೆ ಹಾಕಬೇಕಿದೆ. ಬನ್ನಿ, ವಿಹಾನ್ ತನ್ನ ಸಮಾನ ಮನಸ್ಕರೊಡಗೂಡಿ ಉದ್ಘಾಟಿಸಲಿರುವ ಮೇ 27,28 ರಂದು ನಡೆಯಲಿರುವ ಒಂಭತ್ತನೇ ಮೇ ಸಾಹಿತ್ಯ ಮೇಳಕ್ಕೆ, ವಿಜಯಪುರಕ್ಕೆ.  

(ವಿಹಾನ್‌ ಕುರಿತ ಲೇಖನವನ್ನು ಈ ಹಿಂದೊಮ್ಮೆ ಪ್ರಕಟಿಸಲಾಗಿತ್ತು. ಅವರು ಮೇ ಮೇಳದಲ್ಲಿ ಉದ್ಘಾಟಕರಲ್ಲೊಬ್ಬರಾಗಿ ಭಾಗವಹಿಸುವುದರಿಂದ ಪುನ: ಪ್ರಕಟಿಸಿದ್ದೇವೆ- ಸಂ.)


ಡಾ. ಎಚ್. ಎಸ್. ಅನುಪಮಾ

ವೈದ್ಯೆ, ಲೇಖಕಿ.

ಇದನ್ನೂ ಓದಿ-

ದಲಿತ ಲೋಕದ ಅನರ್ಘ್ಯ ರತ್ನ : ಕುಮಾರ ಕಕ್ಕಯ್ಯ ಪೋಳ

ಮೇ ಸಾಹಿತ್ಯ ಮೇಳವೆಂಬ ಅರಿವಿನ ಪ್ರವಾಹದಲ್ಲಿ…

Related Articles

ಇತ್ತೀಚಿನ ಸುದ್ದಿಗಳು