ನವದೆಹಲಿ: ಸಫ್ದರ್ಜಂಗ್ ಆಸ್ಪತ್ರೆಯ ಎಂಬಿಬಿಎಸ್ ಬಾಲಕಿಯರ ಹಾಸ್ಟೆಲ್ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಡೆದಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಬೆಳಗಿನ ಜಾವ 3.30ಕ್ಕೆ ನಮಗೆ ಕರೆ ಬಂದಿದ್ದು, ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿ ನೇಣುಬಿಗಿದು ಕೊಂಡಿರುವುದಾಗಿ ಹೇಳಿದರು. ತಕ್ಷಣವೇ ನಾವು ಸ್ಥಳಕ್ಕೆ ಧಾವಿಸಿದ್ದು, ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ್ದು , ಮೃತಳ ಡೈರಿಯಲ್ಲಿ ಕೈ ಬರಹದ ಸೂಸೈಡ್ ನೋಟ್ ಪತ್ತೆಯಾಗಿದೆ. ಜೊತೆಗೆ ಎರಡು ಖಾಲಿ ಆ್ಯಂಟಿಡಿಪ್ರೆಸೆಂಟ್ ಔಷಧದ ಪ್ಯಾಕೆಟ್ಗಳು ಕೊಠಡಿಯೊಳಗೆ ಪತ್ತೆಯಾಗಿವೆ. ಈ ಕಾರಣ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.