Friday, June 14, 2024

ಸತ್ಯ | ನ್ಯಾಯ |ಧರ್ಮ

ಮಾಧ‍್ಯಮ, ಪರ್ಯಾಯ ಮಾಧ್ಯಮ, ಹಿಡಿಯಬೇಕಾದ ಹಾದಿ, ಕೊನೆಯ ಮಾತು…

ಪರ್ಯಾಯ ಮಾಧ್ಯಮಗಳ ದೊಡ್ಡ ಸವಾಲು ಎಂದರೆ ಆರ್ಥಿಕ ಸಂಪನ್ಮೂಲದ್ದು. ಆರಂಭ ಶೂರತ್ವದೊಂದಿಗೆ ಮತ್ತು ದೊಡ್ಡ ಅದರ್ಶಗಳೊಂದಿಗೆ ಅನೇಕ ಮಾಧ್ಯಮಗಳು ಹುಟ್ಟಿಕೊಂಡು ಆರ್ಥಿಕ ಸಮಸ್ಯೆಯ ಕಾರಣಕ್ಕೇ ಬಲು ಬೇಗ ಕಣ್ಣುಮುಚ್ಚಿದ ನಿದರ್ಶನ ನಮ್ಮ ಕಣ್ಣಮುಂದೆಯೇ ಇದೆ. ದೊಡ್ಡ ಗುರಿಯೊಂದನ್ನು ತಲಪುವ ಹಾದಿಯಲ್ಲಿ ಸಣ್ಣ ಸಣ್ಣ ವೈಯಕ್ತಿಕ ವಿಚಾರಗಳು, ಈಗೋಗಳು ಅಡ್ಡಬರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ನಮ್ಮನ್ನು ಸೋಲಿಸಲು ಹೊರಗಿನ ಶತ್ರುವಿನ ಅಗತ್ಯ ಬರುವುದಿಲ್ಲ – ಶ್ರೀನಿವಾಸ ಕಾರ್ಕಳ.

ಪತ್ರಕರ್ತೆ ಗೌರಿ ಲಂಕೇಶ್ ಹಿಂದುತ್ವವಾದಿ ಹಂತಕರ ಗುಂಡಿಗೆ ಬಲಿಯಾಗಿ ಆರು ವರ್ಷಗಳು ಸಂದವು. ಆಕೆ ಮಾಡಿದ ತಪ್ಪು ಏನು? ಸತ್ಯ ಹೇಳಿದ್ದು. ಹೋರಾಟಗಾರ್ತಿಯಾಗಿ, ಪತ್ರಕರ್ತೆಯಾಗಿ ಮತೀಯ ಶಕ್ತಿಗಳನ್ನು ಎದುರಿಸಿದ್ದು.

ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ 28 ತಿಂಗಳ ಕಾಲ ಜೈಲಿನಲ್ಲಿದ್ದ. ಕಾರಣ? ಮೊದಲನೆಯದಾಗಿ ಆತನ ಮತಧರ್ಮ. ಎರಡನೆಯದಾಗಿ, ಹಾಥರಸ್ ದಲಿತ ಹುಡುಗಿಯ ಅತ್ಯಾಚಾರ, ಹತ್ಯೆ ಹಾಗೂ ಇದನ್ನು ಪ್ರಭುತ್ವ ನಿಭಾಯಿಸಿದ ಅಮಾನವೀಯ ರೀತಿಯನ್ನು ವರದಿ ಮಾಡಲು ಹೋದುದು.

ಕಾಶ್ಮೀರದ ಪತ್ರಿಕಾ ಸಂಪಾದಕ  ಫಹಾದ್ ಶಾ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು ಮೊನ್ನೆ ಹೊರಬಂದ. ಇನ್ನೂ ಅನೇಕ ಕಾಶ್ಮೀರಿ ಪತ್ರಕರ್ತರು ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಕಾರಣ ಏನು? ಪತ್ರಿಕಾ ಧರ್ಮ ಪಾಲಿಸಿದ್ದು, ಪ್ರಭುತ್ವದ ದೌರ್ಜನ್ಯದ ಬಗ್ಗೆ ಸತ್ಯ ಹೇಳಿದ್ದು.

ಸಿದ್ದಿಖಿ ಕಪ್ಪನ್

ಅಲ್ ಜಜೀರಾದ ದಿಟ್ಟ ಪತ್ರಕರ್ತರು

ಗಾಜಾ ಪಟ್ಟಿಯಲ್ಲಿ ಪತ್ರಕರ್ತರ ಪಾಡಂತೂ ಭಯಾನಕ. ವಿಶ್ವಸಂಸ್ಥೆಯ ನಿಯಮಗಳು ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಪತ್ರಕರ್ತರಿಗೆ ವಿಶೇಷ ರಕ್ಷಣೆ ಇದೆ. ಆದರೆ ಗಾಜಾಪಟ್ಟಿಯಲ್ಲಿ ಆ ಯಾವುದೇ ನಿಯಮ ಅಥವಾ ಕಾನೂನುಗಳು ಲೆಕ್ಕಕ್ಕಿಲ್ಲದಂತಾಗಿದೆ.

ವರ್ಷದ ಹಿಂದೆ ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನಿಯನ್ ಪಶ್ಚಿಮ ದಂಡೆಯಲ್ಲಿ ಅಲ್ ಜಜೀರಾದ ಟಿವಿ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಳನ್ನು ಇಸ್ರೇಲ್ ಸೈನಿಕರು ಹತ್ತಿರದಿಂದ ಗುಂಡು ಹಾರಿಸಿ ಕೊಂದಿದ್ದರು. ಇಂದಿಗೂ ಆ ಸೈನಿಕರ ಮೇಲೆ ಇಸ್ರೇಲ್ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಇದೀಗ ಗಾಜಾ ಪಟ್ಟಿಯಲ್ಲಿ ಅದು ವಿಶೇಷವಾಗಿ ಅಲ್ ಜಜೀರಾ ಪತ್ರಕರ್ತರನ್ನು ಹುಡುಕಿ ಹುಡುಕಿ ಬೇಟೆಯಾಡುತ್ತಿದೆ. ಕೇವಲ ನಾಲ್ಕು ವಾರಗಳ ಬಾಂಬ್ ದಾಳಿಯಲ್ಲಿ ಅಲ್ಲಿನ 43 ಪತ್ರಕರ್ತರೂ ಸೇರಿದಂತೆ 65 ಮಾಧ್ಯಮ ಸಿಬ್ಬಂದಿಗಳು ಜೀವ ಕಳೆದು ಕೊಂಡಿದ್ದಾರೆ. ಇದಕ್ಕೆ ಉತ್ತರದಾಯಿಗಳೇ ಇಲ್ಲವಾಗಿದೆ. ಆದರೂ ಪತ್ರಕರ್ತರು ಎದೆಗುಂದಿಲ್ಲ. ಸುರಿವ ಬಾಂಬುಗಳ ನಡುವೆ ನಿಂತು ಅವರು ಅಲ್ಲಿ ಇಸ್ರೇಲ್ ನ ಅತಿರೇಕಗಳನ್ನು ಮತ್ತು ಪ್ಯಾಲೆಸ್ಟೀನಿಯನ್ನರ ನರಕ ಯಾತನೆಯನ್ನು ವರದಿ ಮಾಡುತ್ತಿದ್ದಾರೆ.

ಅಲ್ ಜಜಿರಾ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್

ಪಕ್ಷಪಾತಿ ಮಾಧ್ಯಮಗಳು

ಜಾಗತೀಕರಣದ ಕಾಲಘಟ್ಟದ ಬಳಿಕ ಜಗತ್ತಿನ ಬಹುತೇಕ ಮಾಧ್ಯಮಗಳು ತಮ್ಮ ಮಾಧ್ಯಮ ಧರ್ಮವನ್ನು ಗಾಳಿಗೆ ತೂರಿ ಪ್ರಭುತ್ವಪರ ದುಷ್ಪ್ರಚಾರದ ಮಾಧ್ಯಮಗಳಾಗಿವೆ. ಪರಿಣಾಮವಾಗಿ, ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ, ಇಸ್ರೇಲ್ ಗಾಜಾದಲ್ಲಿ ಮಾಡುತ್ತಿರುವ ಧಾಳಿಯನ್ನು ಅವು ವರದಿ ಮಾಡುತ್ತಿರುವ ರೀತಿ.

ನಾವು ಅತ್ಯಂತ ವಿಶ್ವಾಸಾರ್ಹ ಅಂದುಕೊಂಡಿದ್ದ ಬಿಬಿಸಿ ಯೂ ಸೇರಿದಂತೆ ಪಶ್ಚಿಮ ಮಾಧ್ಯಮಗಳು ಇಸ್ರೇಲ್ ಮಾತ್ರ ಬಲಿಪಶು ಎಂಬಂತೆ ನಿರಂತರ ವರದಿ ಮಾಡುತ್ತಿವೆ. ಅಕ್ಟೋಬರ್ 7 ರ ಘಟನೆ ಮುಖ್ಯವಾಗುವ ಅವಕ್ಕೆ 75 ವರ್ಷಗಳಿಂದ ಪ್ಯಾಲೆಸ್ತೀನಿಯನ್ನರ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯ ಮುಖ್ಯ ಅನಿಸಿಯೇ ಇಲ್ಲ. ಹಮಾಸ್ ಬಂಡುಕೋರರು 1200 ಇಸ್ರೇಲಿಗಳನ್ನು ಕೊಂದರೆ, ಇಸ್ರೇಲ್ 20,000 ಪ್ಯಾಲೆಸ್ತೀನಿಯನ್ನರನ್ನು ಕೊಂದಿದೆ; ಕೇವಲ ನಾಲ್ಕು ವಾರಗಳಲ್ಲಿ.

ಗಾಜಾ ಪಟ್ಟಿಯನ್ನು ಭೂಮಿಯ ಮೇಲಣ ತೆರೆದ ಬಂದೀಖಾನೆ ಮಾಡಿರುವ ಇಸ್ರೇಲ್, ಪಶ್ಚಿಮ ದಂಡೆಯನ್ನು ಈಗಲೂ ತನ್ನ ವಶದಲ್ಲಿರಿಸಿಕೊಂಡಿದೆ. ಸೈನಿಕರ ಬೆಂಬಲದೊಂದಿಗೆ ಇಸ್ರೇಲ್ ಸೆಟ್ಲರ್ ಗಳು ಅಲ್ಲಿ ಪ್ಯಾಲೆಸ್ತೀನಿಯನ್ನರ ಮೇಲೆ ಧಾಳಿ ಮಾಡುತ್ತಲೇ ಇದ್ದಾರೆ, ಅವರ ಆಸ್ತಿಪಾಸ್ತಿ ವಶಪಡಿಸಿಕೊಳ್ಳುತ್ತಿದ್ದಾರೆ. ಅಸಂಖ್ಯ ಪ್ಯಾಲೆಸ್ಟೀನಿಯನ್ ನಾಗರಿಕರು ಇಸ್ರೇಲ್ ನ ಜೈಲಿನಲ್ಲಿದ್ದಾರೆ. ಇಸ್ರೇಲ್ ಸರಕಾರ ಇಷ್ಟಬಂದಂತೆ ಅವರೊಂದಿಗೆ ನಡೆದುಕೊಳ್ಳುತ್ತಿದೆ. ಪಶ್ಚಿಮ ದಂಡೆಯಲ್ಲಿ ಹಮಾಸ್ ಇಲ್ಲವಾದರೂ ಕಳೆದ ಅಕ್ಟೋಬರ್ 7 ರಿಂದ ಅಲ್ಲಿ 200 ಕ್ಕೂ ಅಧಿಕ ಮಂದಿಯನ್ನು ಕೊಲ್ಲಲಾಗಿದೆ. ಗಾಜಾದಲ್ಲಿ ಕದನ ವಿರಾಮ ಇದ್ದರೂ ಪಶ್ಚಿಮ ದಂಡೆಯಲ್ಲಿ ಅದು ದೌರ್ಜನ್ಯ ನಡೆಸುತ್ತಲೇ ಇದೆ.

ಇವನ್ನೆಲ್ಲ ವಸ್ತುನಿಷ್ಠವಾಗಿ ವರದಿ ಮಾಡಬೇಕಾದ ಪಶ್ಚಿಮದ ಮಾಧ್ಯಮಗಳು ಇಸ್ರೇಲ್ ಅನ್ನು ಬೆಂಬಲಿಸುವ ಅಮೆರಿಕಾ, ಇಂಗ್ಲೆಂಡ್, ಕೆನಡಾ ಮೊದಲಾದ ದೇಶಗಳಿಗೆ ಅನುಕೂಲವಾಗುವ ಹಾಗೆ ಪಕ್ಷಪಾತಿ ವರದಿಯನ್ನು ಪ್ರಸಾರ ಮಾಡುತ್ತಿವೆ. ಇಂಥಲ್ಲಿ ಅಲ್ ಜಜೀರಾದಂತಹ ಮಾ‍ಧ್ಯಮಗಳು ಅಪಾರ ರಿಸ್ಕ್ ತೆಗೆದುಕೊಂಡು ಸತ್ಯವನ್ನು ಹೇಳುತ್ತಿವೆ. ಜಗತ್ತಿನ ಮೂಲೆ ಮೂಲೆಗೆ ಸುದ್ದಿ ತಲಪಿಸುತ್ತಿವೆ. ಪರಿಣಾಮವಾಗಿ, ಪಶ್ಚಿಮದ ಸರಕಾರಗಳು ಇಸ್ರೇಲ್ ಪರ ಇದ್ದರೂ ಜನರು ಪ್ಯಾಲೆಸ್ಟೈನ್ ಸಂತ್ರಸ್ತರ ಪರ ಇದ್ದಾರೆ. ಇದೇ ಕಾರಣಕ್ಕೆ ಅಲ್ ಜಜೀರಾದ ಪತ್ರಕರ್ತರು ಮತ್ತು ಅವರ ಮನೆಯವರು ಇಸ್ರೇಲ್ ಮತ್ತು ಇಸ್ರೇಲ್ ಪರ ಸರಕಾರಗಳ ಧಾಳಿಯ ಗುರಿಯಾಗುತ್ತಿದ್ದಾರೆ.

ಇಸ್ರೇಲ್ ಗಾಜಾದಲ್ಲಿ ಮಾಡುತ್ತಿರುವ ಧಾಳಿ

ಜಗತ್ತಿನ ಯಾವುದೇ ಪ್ರಭುತ್ವಗಳು ಸತ್ಯ ಹೇಳುವ ಸ್ವತಂತ್ರ ಮಾಧ್ಯಮಗಳನ್ನು ಸಹಿಸಿಕೊಂಡದ್ದು ಕಡಿಮೆ. ಜಗತ್ತು ಬಲಪಂಥೀಯ ರಾಜಕಾರಣದ ಕಪಿ ಮುಷ್ಟಿಗೆ ಸಿಲುಕಿದ ಮೇಲಂತೂ ಅವು ಪ್ರಭುತ್ವಗಳ ಕೆಂಗಣ್ಣಿಗೆ ಗುರಿಯಾಗಿವೆ. ಜಾಗತೀಕರಣದ ಬಳಿಕ ಮಾ‍ಧ್ಯಮಗಳು ಉದ್ಯಮವಾಗಿ ಬದಲಾಗಿವೆ. ಭಾರತದಲ್ಲಿಯೇ ದೊಡ್ಡ ದೊಡ್ಡ ಸುದ್ದಿ ಮಾಧ್ಯಮಗಳು ಪ್ರಭುತ್ವದ ಆಪ್ತರಾದ ಅಂಬಾನಿ, ಅದಾನಿ ಮೊದಲಾದ ಉದ್ಯಮಿಗಳ ತೆಕ್ಕೆಯನ್ನು ಸೇರಿದ ಬಳಿಕ ಯಾವ ನಿಷ್ಪಕ್ಷಪಾತಿ ಪತ್ರಕಾರಿಕೆಯನ್ನು ತಾನೇ ನಿರೀಕ್ಷಿಸಬಹುದು?! ಇದೇ ಪರಿಸ್ಥಿತಿ ಜಾಗತಿಕವಾಗಿಯೂ ಇದೆ. ಹಾಗಾಗಿ ಜನರು ಮಾಧ್ಯಮಗಳಿಂದ ಬಹಳ ಏನನ್ನೂ ನಿರೀಕ್ಷಿಸದಂತಾಗಿದೆ.

ಪರ್ಯಾಯ ಮಾಧ್ಯಮಗಳ ಅನಿವಾರ್ಯತೆ ಮತ್ತು ಸವಾಲುಗಳು

ಇಂತಹ ಹೊತ್ತಿನಲ್ಲಿ ಮುಖ್ಯವೆನಿಸುವುದು ಪರ್ಯಾಯ ಮಾಧ್ಯಮಗಳು. ಭಾರತದಲ್ಲಿ ರೈತ ಹೋರಾಟ ನಡೆದಾಗ, ಸಿಎಎ ವಿರೋಧಿ ಹೋರಾಟ ನಡೆದಾಗ, ನೋಟು ನಿಷೇಧದ ಘೋರ ಅನ್ಯಾಯ ನಡೆದಾಗ, ಅಮಾನವೀಯ ಲಾಕ್ ಡೌನ್ ಹೇರಿದಾಗ, ಪ್ರಧಾನ ಧಾರೆಯ ಮಾಧ್ಯಮಗಳು ಪ್ರಭುತ್ವದ ಚಿಯರ್ ಲೀಡರ್ ಗಳಾಗಿ ಕೆಲಸ ಮಾಡಿದರೆ, ವಸ್ತುನಿಷ್ಠ ವರದಿಗಳ ಮೂಲಕ ಜನರಿಗೆ ನಿಜ ಸುದ್ದಿಯನ್ನು ತಲಪಿಸಿದ್ದು ಪರ್ಯಾಯ ಮಾಧ್ಯಮಗಳು. ಈಗಂತೂ ದೇಶದಲ್ಲಿ ಇವೇ ಮುಖ್ಯವಾಹಿನಿ ಮಾಧ್ಯಮಗಳಂತಾಗಿವೆ. ಇದೇ ಕಾರಣದಿಂದ ಅವನ್ನು ಅಂಕೆಯಲ್ಲಿಡಲು ಪ್ರಭುತ್ವವು ದಿನಕ್ಕೊಂದು ನಿಯಮ ತರುತ್ತಿದೆ. ಟ್ವಿಟರ್, ಫೇಸ್ ಬುಕ್, ಯೂಟ್ಯೂಬ್ ಗಳಿಗೆ ಆದೇಶ ನೀಡಿ ಪ್ರಭುತ್ವದ ಟೀಕಾಕಾರರ ಖಾತೆ ಸ್ತಂಭನಗೊಳಿಸುತ್ತಿದೆ. ಜಾಗತಿಕವಾಗಿಯೂ ಈ ಪರ್ಯಾಯ ಮಾ‍ಧ್ಯಮಗಳು ಅನೇಕ ಸರಕಾರವನ್ನೇ ಉರುಳಿಸಿದ್ದು ಅಲ್ಲೂ ಅವು ಪ್ರಭುತ್ವದ ಧಾಳಿಗೆ ಈಡಾಗುತ್ತಿವೆ.

ಆದರೆ ಪರ್ಯಾಯ ಮಾಧ್ಯಮಗಳ ದೊಡ್ಡ ಸವಾಲು ಎಂದರೆ ಆರ್ಥಿಕ ಸಂಪನ್ಮೂಲದ್ದು. ಆರಂಭ ಶೂರತ್ವದೊಂದಿಗೆ ಮತ್ತು ದೊಡ್ಡ ಅದರ್ಶಗಳೊಂದಿಗೆ ಅನೇಕ ಮಾಧ್ಯಮಗಳು ಹುಟ್ಟಿಕೊಂಡು ಆರ್ಥಿಕ ಸಮಸ್ಯೆಯ ಕಾರಣಕ್ಕೇ ಬಲು ಬೇಗ ಕಣ್ಣುಮುಚ್ಚಿದ ನಿದರ್ಶನ ನಮ್ಮ ಕಣ್ಣಮುಂದೆಯೇ ಇದೆ. ಹಾಗಾಗಿಯೇ ಕೋಡಿಹಳ್ಳಿ ಸಂತೋಷ್ ಅವರು ಫೇಸ್ ಬುಕ್ ನಲ್ಲಿ ಬರೆದ, “ವಸ್ತುನಿಷ್ಠ ಪತ್ರಿಕೋದ್ಯಮ- ವೃತ್ತಿಪರತೆ- ಪ್ರಾಮಾಣಿಕತೆ- ಆತ್ಮಸಾಕ್ಷಿಯ ಬದುಕು ಇಂಥದೆಲ್ಲದನ್ನ ಸಲೀಸಾದ ಡಿವೈಸ್ ಗಳ ಮೂಲಕ ಅಳೆದು-ತೂಗಿಬಿಡುವ ಕಾಲ ಇದಲ್ಲವೆನ್ನುವುದು ಎಲ್ಲರಿಗೂ ಗೊತ್ತಿದೆ…..

ನಮ್ಮ ದೇಶ ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಜನಪರ ಮಾಧ್ಯಮವು ಉತ್ತರದಾಯಿಯಾಗಿದ್ದುಕೊಂಡೇ ಉದ್ಯಮ ಸ್ವರೂಪದ ತಾಂತ್ರಿಕತೆ- ಲೆಕ್ಕಾಚಾರ- ವ್ಯವಹಾರಿಕತೆಯನ್ನ ಮೈಗೂಡಿಸಿಕೊಳ್ಳದೇ ಹೋದಾಗ, ಅವು ಎಷ್ಟೇ ಸಶಕ್ತ ಆಶಯಗಳ ಗರ್ಭಗಳಿಂದ ಉದಯಿಸಿದರೂ ಕೊನೆಗೆ ಅಲ್ಲಿಯೇ ಅಸ್ತಂಗತವಾಗಿಬಿಡುತ್ತವೆ ಎಂಬ ಸತ್ಯ ನಮಗೆ ಇನ್ನೂ ಅರಿವಾದಂತಿಲ್ಲ.……

ನಮ್ಮ ನಾಡಿನ ಕಮ್ಯುನಿಷ್ಟರನ್ನೂ ಒಳಗೊಂಡಂತೆ ಯಾವುದೇ ಜನಪರ ಚಳುವಳಿಗೆ ತೆತ್ತುಕೊಂಡವರ ಪೈಕಿ ಶೇ.95 ರಷ್ಟು ಜನರು ಮಿನಿಮಮ್ ಲಕ್ಷುರಿ ಇಲ್ಲದ ಬಾಳನ್ನ ಬಾಳುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ತಾವು ನೋಡಿದ ವ್ಯಕ್ತಿ, ನಂಬಿದ ಸಿದ್ಧಾಂತ, ಯಾರೋ ಯಾವ ಕಾಲದಲ್ಲೋ ಬದುಕಿದ ಕ್ರಮಕ್ಕೆ ಟ್ಯೂನ್ ಆಗಿಬಿಟ್ಟು, ಅತ್ಯಂತ ಆಧುನಿಕ ಕಾಲಘಟ್ಟದಲ್ಲೂ ಅಬ್ಬೇಪಾರಿ ಲೆಕ್ಕಾಚಾರಗಳಲ್ಲಿ ಮುಳುಗಿ ಆರಕ್ಕೇರದೆ, ಮೂರಕ್ಕಿಳಿಯದೆ ನವೆಯುತ್ತಲೇ ಬದುಕು ಸವೆಸಿ ಮಣ್ಣಾಗುತ್ತಾರೆ.……

ಸದ್ಯದ ಪರಿಸ್ಥಿತಿಯಲ್ಲಿ ದಿ ಫೈಲ್, ಈ ದಿನ, ನಾನೂ ಗೌರಿ, ಪೀಪಲ್ ನಂತಹ  ಪರ್ಯಾಯ  ಮಾಧ್ಯಮಗಳು ಅದರ ಪೋಷಕ ಸಂಸ್ಥೆಗಳು ಹಾಗೂ ಹೋರಾಟಗಾರರು, ಪತ್ರಕರ್ತರು ಮತ್ತಷ್ಟು ಗಟ್ಟಿಯಾಗಿ ಈ ಕಾಲಘಟ್ಟದಲ್ಲಿ ಬೇರೂರಬೇಕು, ಸೈದ್ಧಾಂತಿಕ ರಾಜಿಗೆ ಮುಂದಾಗದೆ, ವ್ಯವಹಾರಿಕ ಚೌಕಾಶಿಗಳನ್ನ ಕಡ್ಡಾಯವಾಗಿ ಮಾಡುತ್ತಲೇ ಮುಂದುವರೆಯಬೇಕು ಇದು ಅನಿವಾರ್ಯ  ಕೂಡ” ಎಂಬ  ಮಾತುಗಳು ಬಹಳ ಮುಖ್ಯವೆನಿಸುತ್ತವೆ.

ಇಂತಹ ಹೊತ್ತಿನಲ್ಲಿ, ನಮ್ಮ ಗುರಿಯ ಬಗ್ಗೆ ನಮಗೆ ಸದಾ ಎಚ್ಚರ ಇರಬೇಕು. ಶತ್ರು ನಮ್ಮ ಮುಂದೆಯೇ ಕತ್ತಿ ಹಿರಿದು ನಿಂತಿರುವಾಗ ನಮ್ಮ ಶತ್ರು ಯಾರು ಎಂಬ ಸ್ಪಷ್ಟತೆಯಿರಬೇಕು. ಶೀತ ನೆಗಡಿ ಮತ್ತು ಕ್ಯಾನ್ಸರ್ ನಡುವೆ ನಾವು ಮೊದಲು ಎದುರಿಸ ಬೇಕಾದುದು ಯಾರನ್ನು ಎಂಬ ಖಚಿತತೆ ಇರಬೇಕು. ದೊಡ್ಡ ಗುರಿಯೊಂದನ್ನು ತಲಪುವ ಹಾದಿಯಲ್ಲಿ ಸಣ್ಣ ಸಣ್ಣ ವೈಯಕ್ತಿಕ ವಿಚಾರಗಳು, ಈಗೋಗಳು ಅಡ್ಡಬರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ನಮ್ಮನ್ನು ಸೋಲಿಸಲು ಹೊರಗಿನ ಶತ್ರುವಿನ ಅಗತ್ಯ ಬರುವುದಿಲ್ಲ.

ಈ ಎಚ್ಚರ ಇರಿಸಿಕೊಂಡೇ ನಮ್ಮ ಕೈ ಎಟುಕಿನ ಅಂತರ್ಜಾಲ, ಸೋಶಿಯಲ್ ಮೀಡಿಯಾದಂತ ಸಣ್ಣ ಸಾಧನಗಳನ್ನು ಬಳಸಿಕೊಂಡು ಸಮ ಸಮಾಜದ ನಿರ್ಮಾಣದತ್ತ, ಮತೀಯ ರಾಜಕಾರಣಕ್ಕೆ ಅವಕಾಶ ಇಲ್ಲದೆ, ದೇಶವನ್ನು ‘ಸರ್ವಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವತ್ತ ನಾವೆಲ್ಲರೂ ನಮ್ಮ ನಮ್ಮದೇ ಮಿತಿಯಲ್ಲಿ, ನಮ್ಮದೇ ಆದ ರೀತಿಯಲ್ಲಿ ತುಡಿಯೋಣ, ದುಡಿಯೋಣ.

ಕೊನೆಯ ಮಾತು

ವರ್ಷದ ಹಿಂದೆ ಪೀಪಲ್ ಮೀಡಿಯಾದವರು ‘ನಮಗಾಗಿ ನೀವು ಅಂಕಣ ಲೇಖನ ಬರೆಯುತ್ತೀರಾ?’ ಎಂದು ನನ್ನಲ್ಲಿ ಕೇಳಿದಾಗ ನಾನು, ‘ಆದೀತು’ ಎಂದು ಸ್ಪಷ್ಟವಾಗಿ ಹೇಳಿರಲಿಲ್ಲ. ಆದರೆ, ಅಷ್ಟರಲ್ಲಾಗಲೇ ಪೀಪಲ್ ಮೀಡಿಯಾದ ಗೆಳೆಯರು ನಾನು ಸಮಕಾಲೀನ ವಿದ್ಯಮಾನಗಳ ಕುರಿತು ಅಂಕಣ ಬರೆಯುತ್ತೇನೆಂದು ಫೇಸ್ ಬುಕ್ ನಲ್ಲಿ ಘೋಷಿಸಿಬಿಟ್ಟಾಗ ಒಮ್ಮೆ ಮುಜುಗರವಾಯಿತು, ಜತೆಗೆ ಭಯವೂ ಆಯಿತು.

ಅಂತೂ ಇಂತೂ ಅನಿವಾರ್ಯವಾಗಿ ಕಳೆದ ವರ್ಷ ಇದೇ ಸಮಯ ಬರೆಯಲು ಶುರು ಮಾಡಿದೆ. ಬರೆಯಲು ಶುರುಮಾಡಿದಾಗ ಅಂಕಣ ಲೇಖನಕಾರರ ನಿಜ ಸಮಸ್ಯೆಯ ಅರಿವಾಯಿತು. ನಾನು 1980 ರಿಂದ ಬರೆವಣಿಗೆಯ ಕೆಲಸ ಶುರು ಮಾಡಿ ಕವಿತೆ, ವೈಚಾರಿಕ ಲೇಖನಗಳನ್ನು, ಚಾರಣ ವರದಿಗಳನ್ನು ನಾಡಿನ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರೂ ಎಂದೂ ಅಂಕಣ ಬರೆಯುವ ಸಾಹಸಕ್ಕೆ ಕೈಹಾಕಿರಲಿಲ್ಲ. ತೀರಾ ಅಶಿಸ್ತಿನ ದಿನಚರಿಯ ಮನುಷ್ಯನಾದ ನಾನು ವಾರಕ್ಕೊಮ್ಮೆ ಬರೆಯುವ ಒತ್ತಡವನ್ನಂತೂ, ವಿಶೇಷವಾಗಿ ನನ್ನ ಅನಾರೋಗ್ಯದ ಕಾರಣ ಎದುರಿಸುವ ಸ್ಥಿತಿಯಲ್ಲಿಯೂ ಇರಲಿಲ್ಲ.

ಈಗ ತಿರುಗಿ ನೋಡಿದಾಗ ವರ್ಷದ 52 ವಾರವೂ ‘ಶ್ರೀನಿ ಕಾಲಂ’ ಗಾಗಿ ತಪ್ಪದೆ ಅಂಕಣ ಲೇಖನ ರಚಿಸಿದೆ ಎಂಬುದನ್ನು ನಂಬಲೇ ಆಗುತ್ತಿಲ್ಲ. ಸಮಕಾಲೀನವಾಗಿ ಪ್ರಸ್ತುತ ಅನಿಸಿದ ವಿಷಯಗಳ ಮೇಲೆ ಬರೆಯುತ್ತಲೇ ಹೋದೆ. ಏನು ಬರೆದಿದ್ದೇನೆ, ಅದರ ಗುಣಮಟ್ಟ ಹೇಗಿತ್ತು ಎನ್ನುವುದನ್ನು ಓದಿದ ನೀವು ಹೇಳಬೇಕು ಅಷ್ಟೇ.

‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ’ ಎಂಬ ಜಿಎಸ್ ಎಸ್ ಕವಿವಾಣಿಯಂತೆ ನನಗೆ ಬರೆಯಬೇಕು ಅನಿಸಿದ್ದನ್ನು, ನನ್ನ ಆತ್ಮತೃಪ್ತಿಗಾಗಿ, ನನ್ನ ಇತಿಮಿತಿಯಲ್ಲಿ ಬರೆಯುತ್ತ ಹೋದೆ. ನಿಮ್ಮಲ್ಲಿ ಅನೇಕರು ಅದರಲ್ಲಿ ಕೆಲವನ್ನು ಇಷ್ಟಪಟ್ಟು ಹಂಚಿಕೊಂಡಿರಿ.

ಬೇರೆಡೆಯಲ್ಲಿ ನಾವು ಬರೆದುದನ್ನೆಲ್ಲ ಪ್ರಕಟಿಸುವುದಿಲ್ಲ. ಆದರೆ, ಹೀಗೆ ಅಂಕಣ ಬರೆಯುವಲ್ಲಿ ನಿರ್ಭಿಢೆಯಿಂದ ನಮ್ಮ ಮನದ ಮಾತು ಆಡುವ ವಿಶೇಷ ಅವಕಾಶವೊಂದಿರುತ್ತದೆ. ಆ ಅವಕಾಶವನ್ನು ಪೀಪಲ್ ಮಿಡಿಯಾದವರು ಒದಗಿಸಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಈಗ ವಿರಾಮದ ಸಮಯ. ಇದೊಂದು ಅಲ್ಪವಿರಾಮವೂ ಆಗಿರಬಹುದು. ಸಾಧ್ಯವಾದರೆ ಮತ್ತೆ ಭೇಟಿಯಾಗೋಣ. ವಂದನೆಗಳು.

ಒಂದು ವರ್ಷಗಳ ಕಾಲ ನಿಯತವಾಗಿ ಪೀಪಲ್‌ ಮೀಡಿಯಾಕ್ಕೆ ಅಂಕಣ ಲೇಖನಗಳನ್ನು ಬರೆದು ಸಮಾಜಕ್ಕೆ ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಟ್ಟು  ಈ ಕಾಲದ ಅಗತ್ಯವನ್ನು ತುಂಬುವಲ್ಲಿ ಸಹಕಾರ ನೀಡಿದ ಶ್ರೀನಿವಾಸ ಕಾರ್ಕಳ ಅವರಿಗೆ ಪೀಪಲ್‌ ಮೀಡಿಯಾ ತಂಡವು ಆಭಾರಿಯಾಗಿದೆ.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ-ಸುಳ್ಳು ಸುದ್ದಿಗಳ ಮಹಾಸಾಗರ

Related Articles

ಇತ್ತೀಚಿನ ಸುದ್ದಿಗಳು