Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಾಧ್ಯಮ ಭ್ರಷ್ಟಾಚಾರ: ಪತ್ರಕರ್ತ ಸಮುದಾಯಕ್ಕೇ ಕೆಟ್ಟ ಹೆಸರು ಬರುವಂತಾಗಬಾರದು

ಇತ್ತೀಚೆಗೆ ಸಿಎಂ ಕಚೇರಿಯಿಂದ ಆಯ್ದ ಪತ್ರಕರ್ತರಿಗೆ ಹಣ ಹಂಚಲಾಗಿರುವ ವಿಷಯವನ್ನು ʼಪೀಪಲ್‌ ಮೀಡಿಯಾʼ ಬಯಲು ಮಾಡಿದ ನಂತರ ಮಾಧ್ಯಮ ಭ್ರಷ್ಟಾಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಡಿನ ಹಿರಿಯ ಪತ್ರಕರ್ತರ ಅಭಿಪ್ರಾಯಗಳನ್ನು ಓದುಗರ ಮುಂದಿಡುವ ಪ್ರಯತ್ನವನ್ನು ಪೀಪಲ್‌ ಮೀಡಿಯಾ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮೊದಲ ಓದಿಗೆ ಹಿರಿಯ ಪತ್ರಕರ್ತ ಅನಂತ ಚಿನಿವಾರ್‌ ಅವರ ಅಭಿಪ್ರಾಯ ಇಲ್ಲಿದೆ. ಅನಂತ ಚಿನಿವಾರ್‌ ಅವರು ತಮ್ಮ ಸೃಜನಶೀಲತೆ ಮತ್ತು ಬದ್ಧತೆಗಳಿಂದಾಗಿ ಕನ್ನಡ ಪತ್ರಿಕೋದ್ಯಮಕ್ಕೇ ಒಂದು ಮೆರಗು ತಂದವರು. ಪತ್ರಿಕೋದ್ಯಮದ ಕುರಿತು ಅವರ ಅಪಾರ ಪ್ರೀತಿ, ಕಾಳಜಿ ಮತ್ತು ಆತಂಕಗಳನ್ನು ಈ ಮಾತುಗಳಲ್ಲಿ ಕಾಣಬಹುದು.

ದೀಪಾವಳಿ ಹಬ್ಬದ ನೆಪದಲ್ಲಿ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದಲೇ ನಗದು ಹಣ ಹೋಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಒಟ್ಟಾರೆ ಬೆಳವಣಿಗೆ ನೋಡಿದಾಗ ಅನಿಸುವುದೇನೆಂದರೆ ಮೀಡಿಯಾ ಒಂದು ಗಮ್ಯಕ್ಕೆ ಬಂದು ತಲುಪಿದೆ.  ಮಾಧ್ಯಮ ಭ್ರಷ್ಟಾಚಾರ ಎಂಬುದು ಹೊಸದೇನಲ್ಲ. ಇದುವರೆಗೆ ವೈಯಕ್ತಿಕ ಮಟ್ಟದಲ್ಲಿ ಭ್ರಷ್ಟಾಚಾರ ಇದ್ದಿರಬಹುದು. ಆದರೆ ಅದನ್ನು ಸಾಂಸ್ಥಿಕ ಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದು ಇತ್ತೀಚೆಗೆ. ಎಂತಹ ಭಂಡತನಕ್ಕೆ ಬಂದು ನಿಂತಿದ್ದಾರೆ ಎಂಬುದನ್ನು ಈಗ ನೋಡುತ್ತಿದ್ದೇವೆ.

ವೈಯಕ್ತಿಕ ಮಟ್ಟದಲ್ಲಿ ಭ್ರಷ್ಟಾಚಾರ ಎಂಬುದು ಮಾಧ್ಯಮದಲ್ಲಿ ಇದ್ದೇ ಇದೆ. ಆದರೆ ಸರ್ಕಾರ ಸಾರ್ವಜನಿಕವಾಗಿ ದುಡ್ಡು ಕೊಡಲು ಹೊರಟಿತು. ತುಂಬ ಜನ ಪತ್ರಕರ್ತರು, ಮೀಡಿಯಾ ಸಂಸ್ಥೆಗಳು ಆ ದುಡ್ಡನ್ನು ವಾಪಾಸು ಕೊಟ್ಟೆವು ಎಂದು ಘೋಷಿಸಿದ ಮಾತ್ರಕ್ಕೆ ಆ ಪತ್ರಕರ್ತರು, ಮಾದ್ಯಮ ಸಂಸ್ಥೆಗಳೆಲ್ಲವೂ ಈ ಮಾಧ್ಯಮ ಕ್ಷೇತ್ರದ ಭ್ರಷ್ಟಾಚಾರವನ್ನು ವಿರೋಧಿಸುತ್ತಿದ್ದಾರೆ ಎಂದು ನಾವು ಕಲ್ಪಿಸಿಕೊಳ್ಳುವುದು ತಪ್ಪಾಗುತ್ತದೆ. ಅದು ಈಗ ಸಾರ್ವಜನಿಕವಾಗಿ ಬಹಿರಂಗವಾಗಿರುವುದರಿಂದ ಅವರು ನಿರಾಕರಿಸಿರಬಹುದು. ಅದೇ ವೈಯಕ್ತಿಕ ಮಟ್ಟದಲ್ಲಾಗಿದ್ದರೆ ನಿರಾಕರಿಸುತ್ತಿದ್ದರಾ? ಇದು ಬಹಳ ಸಂಕೀರ್ಣ ಪ್ರಶ್ನೆ. ಬೇಸಿಕಲಿ ಇಂದು ಮೀಡಿಯಾಗಳ ಕ್ರೆಡಿಬಿಲಿಟಿಯೇ ಪ್ರಶ್ನೆಗೊಳಗಾಗಿರುವುದನ್ನು ಕಾಣಬಹುದು. ರಾಜಕಾರಣಿಗಳು ತಮಗೆ ಬೇಕಾದಾಗ ಬಳಸಿಕೊಳ್ಳುತ್ತಾರೆ. ಬಳಸಿಕೊಳ್ಳುವುದರ ಒಂದು ದಾರಿ ಇದು. ಹಾಗೆ ಮಾಡಲು ಹೋಗಿ ಸಿಕ್ಕಾಕಿಕೊಂಡಿದ್ದಾರೆ. ಹಿಂದೆ ಕಾಂಗ್ರೆಸ್‌ ಕಡೆಯಿಂದ ಡಿಕೆಶಿವಕುಮಾರ್ ಪತ್ರಕರ್ತರಿಗೆ ಐಫೋನ್‌ ಕೊಟ್ಟರು ಎಂದು ಸುದ್ದಿಯಾಯ್ತಲ್ಲ. ಏನಾದವು ಆ ಐಫೋನ್‌ಗಳು? ವಾಪಾಸು ಹೋದವಾ? ಯಾರು ವಾಪಾಸು ಕೊಟ್ಟಿದ್ದಾರೆ? ಈ ಬಗ್ಗೆ ಆವಾಗಲೇ ಯಾಕೆ ಒಂದು ಆಂದೋಲನ ಶುರುವಾಗಲಿಲ್ಲ?

ಇಂದು ಜರ್ನಲಿಸಂನಲ್ಲಿ ಅದರಲ್ಲೂ ವಿಶೇಷವಾಗಿ ಮೀಡಿಯಾ ಕ್ಷೇತ್ರಕ್ಕೆ ಬರುತ್ತಿರುವ ಹೊಸಬರಿಗೆ ದಿಕ್ಕು ತೋರಿಸಿ ಮಾರ್ಗದರ್ಶನ ನೀಡುವ ವ್ಯವಧಾನವಾಗಲೀ ಸಮಯವಾಗಲೀ ಮಾಧ್ಯಮದೊಳಗಿನ ಹಿರಿಯರಿಗೆ ಇಲ್ಲ. ಹೀಗಾಗಿ ಬರುತ್ತಿರುವ ಹೊಸಬರು ಕಣ್ಣೆದುರು ಕಾಣುತ್ತಿರುವ ವ್ಯವಸ್ಥೆಯೇ ಸಹಜವಾದುದು ಎಂದುಕೊಳ್ಳುತ್ತಿದ್ದಾರೆ. ಅದು ಅಸಹಜ ವ್ಯವಸ್ಥೆ ಎಂದು ಅವರಿಗೆ ತಿಳಿಯುವುದೇ ಇಲ್ಲ.

 ಅಧಿಕಾರದ ಕೇಂದ್ರಕ್ಕೆ ಹತ್ತಿರವಾಗಿರುವುದು ಹೊಸ ತಲೆಮಾರಿನ ಹುಡುಗ ಹುಡುಗಿಯರನ್ನು ಒಂದು ರೀತಿ ಅಮಲೇರಿಸಿಬಿಡುತ್ತದೆ. ಅದರಿಂದ ಅವರ ತಲೆ ತಿರುಗಿಬಿಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನಿಜವಾದ ಬದಲಾವಣೆ ಆಗಬೇಕಿರುವುದು ಜರ್ನಲಿಸಂ ಕಲಿಸುವ ಪಠ್ಯಕ್ರಮದಲ್ಲಿ. ತರುಣ ಪತ್ರಕರ್ತರಿಗೆ ಜರ್ನಲಿಸಂ ವೃತ್ತಿಯ ಎಥಿಕ್ಸ್‌ ಕಲಿಸಬೇಕಿದೆ. ನಮಗೆಲ್ಲಾ ಜರ್ನಲಿಸಂ ಅನ್ನೋದು ಒಂದು ಕಾಲಿಂಗ್‌ ಎಂದು ಹೇಳಿಕೊಡಲಾಗಿತ್ತು; ಅದು ಒಳಗಿನಿಂದ ಬರುವುದು, ಯಾರೋ ಹೇಳಿಕೊಡುವುದಲ್ಲ ಎಂದು ಅರಿವು ಮೂಡಿಸಲಾಗಿತ್ತು. ಇಂದು ಹಾಗಿಲ್ಲ. ಅದೂ ಇತರ ಉದ್ಯೋಗಗಳಂತೆ ಒಂದು ಉದ್ಯೋಗವಾಗಿಬಿಟ್ಟಿದೆ. ಮತ್ತೊಂದು ಹೊಟ್ಟೆಪಾಡಿನ ಕೆಲಸವಾಗಿದೆ. ಹೀಗಂದಾಕ್ಷಣ ಹೊಟ್ಟೆಪಾಡಿಗಾಗಿ ಏನು ಬೇಕಾದರೂ ಮಾಡಬಹುದು ಎಂಬ ಸ್ವಾತಂತ್ರ್ಯ ಸಿಕ್ಕಿಬಿಡುತ್ತದೆ. ಹೀಗಾಗಿ ಪ್ರಾಯಶಃ ಈ ಯುವಜನರ ಮಟ್ಟದಲ್ಲಿ ಕೆಲಸ ಮಾಡಬೇಕೇ ಹೊರತು ಇಡೀ ವ್ಯವಸ್ಥೆಯನ್ನು ರಾತ್ರೋರಾತ್ರಿ ಸರಿಪಡಿಸುವ ಸ್ಥಿತಿಯಿಲ್ಲ.

ನಮ್ಮಲ್ಲಿ ಮಾಧ್ಯಮ ಕ್ಷೇತ್ರದ ಸಂಘ ಸಂಸ್ಥೆಗಳು ಪತ್ರಕರ್ತರ ವೆಲ್ಫೇರ್‌ ಸಂಸ್ಥೆಗಳಾಗಿವೆಯೇ ಹೊರತು ಪತ್ರಕರ್ತರಾದವರಿಗೆ ಶಿಕ್ಷಣ ಕೊಡುವ, ಓರಿಯೆಂಟೇಶನ್‌ ಕೊಡುವ ಸಂಸ್ಥೆಗಳಲ್ಲ. ಆಗಬಾರದು ಎಂದಿಲ್ಲ. ಆದರೆ ಆಗಿಲ್ಲ. ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅವು ಯೋಚಿಸಬೇಕು. ನಿಜವಾಗಿಯೂ ಬದಲಾವಣೆಯಾಗಬೇಕು ಎಂದರೆ ಈ ಸಂಸ್ಥೆಗಳು ಪ್ರತಿವರ್ಷ ಮಾಧ್ಯಮ ಕ್ಷೇತ್ರಕ್ಕೆ ಬರುವ ಹೊಸ ಪತ್ರಕರ್ತರನ್ನು ಗುರುತಿಸಿ ಅವರು ಕಡ್ಡಾಯವಾಗಿ ಒಂದಿಷ್ಟು ಓರಿಯೆಂಟೇಶನ್‌ ತೆಗೆದುಕೊಳ್ಳಬೇಕು ಎಂದು ಮಾಡಬೇಕು. ಅಂತಹ ಶಿಬಿರಗಳನ್ನು ಈ ಸಂಸ್ಥೆಗಳು ಆಯೋಜಿಸಬೇಕು. ಯಾವುದು ಕಾನೂನುಬದ್ಧ ಯಾವದು ಕಾನೂನು ಬಾಹಿರ, ಯಾವುದು ನೀತಿಬದ್ಧ (ಎಥಿಕಲ್) ಯಾವುದು ನೀತಿಬಾಹಿರ (ಅನೆಥಿಕಲ್) ಎಂಬ ವಿಷಯಗಳ ಬಗ್ಗೆ ತಿಳುವಳಿಕೆ ನೀಡಬೇಕು. ನಾವು ಅನೆಥಿಕಲ್‌ ಆಗುವುದರ ಪರಿಣಾಮ ಏನಾಗುತ್ತದೆ ಎಂಬುದು ಅವರಿಗೆ ಅರ್ಥವಾಗಬೇಕು.

ಭ್ರಷ್ಟಾಚಾರ ಎಂಬುದು ಸರ್ವೇಸಾಮಾನ್ಯ ಎಂಬಂತಾಗಿದೆ. ಆದರೆ ಹೀಗೆ ಆಗಬಾರದು ಎಂಬ ಒಂದು ಮನೋಧರ್ಮ ಬೆಳೆಯಬೇಕು. ಈಗ 40% ಕಮಿಶನ್‌ ಎಂದು ಸುಲಭವಾಗಿ ಜೋಕ್‌ ರೀತಿಯಲ್ಲಿ ಮಾತಾಡುತ್ತಿದ್ದೇವೆ. ಹೀಗೆ ಆದ ಕೂಡಲೇ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅದು ಯಾವಾಗ ಗಂಭೀರವಾಗುತ್ತದೆ ಎಂದರೆ ಆ 40% ಹಣ ‘ನನ್ನ ಹಣ’ ಎಂದು ಎಲ್ಲರಿಗೂ ಅನಿಸುವಂತಾಗಬೇಕು.  ನೂರರಲ್ಲಿ 40 ರೂಪಾಯಿ ನನ್ನ ದುಡ್ಡಲ್ಲ ಎಂದು ಒಬ್ಬ ವ್ಯಕ್ತಿ ಯೋಚಿಸುತ್ತಾನೆ. ಆದರೆ ಅದು ಅವನದೇ ದುಡ್ಡು. ಯಾಕೆ ಹೀಗಾಗಿದೆ ಎಂದರೆ ಆದಾಯ ತೆರಿಗೆ ಕಟ್ಟುವವರು ಮಾತ್ರ ತೆರಿಗೆದಾರರು ಎಂದು ಜನ ಯೋಚಿಸುತ್ತಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ತೆರಿಗೆದಾರನೇ ಅಲ್ಲವೇ? ಒಂದು ಬೆಂಕಿಪೊಟ್ಟಣ ತೆಗೆದುಕೊಂಡರೂ, ಒಂದು ಬಸ್‌ನಲ್ಲಿ ಪ್ರಯಾಣಿಸಿದರೂ ನಾನು ತೆರಿಗೆ ಕಟ್ಟಿರುತ್ತೇನೆ. ಪ್ರತಿಯೊಂದು ಸರಕು ಸೇವೆಗೂ ತೆರಿಗೆ ಕಟ್ಟಿರುತ್ತೇವೆ. ಹೀಗೆ ನಾವು ಕಟ್ಟಿದ ತೆರಿಗೆ ಹಣದಲ್ಲಿ ನೂರಕ್ಕೆ 40 ರೂಪಾಯಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂದರೆ ನನ್ನ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಅರ್ಥ. ಈ ಪ್ರಜ್ಞೆ ಜನರಿಗೆ ಬರಬೇಕಿರುವುದು ಪತ್ರಕರ್ತರ ಮೂಲಕ. ಮಾಧ್ಯಮಗಳ ಮೂಲಕ. ಆದರೆ ಪತ್ರಕರ್ತರಿಗೆ ಮೊದಲು ಈ ಪ್ರಜ್ಞೆ ಬರಬೇಕು. ಸಮಾಜದ ನೆಲೆಯಲ್ಲಿ ಇದು ಮನವರಿಕೆಯಾಗುವುದಿಲ್ಲ. ವೈಯಕ್ತಿಕ ಮಟ್ಟದಲ್ಲಿಯೇ ಮನವರಿಕೆಯಾಗಬೇಕು.

ಜರ್ನಲಿಸಂನಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆಯಲ್ಲಾ ಅದಕ್ಕೆ ಕಾರಣ ಕೂಡಾ ಯಾರೋ ಒಬ್ಬ ರಾಜಕಾರಣಿ ತೆರಿಗೆದಾರರ ಹಣದಲ್ಲಿ ಒಂದಿನ್ನೂರು ಕೋಟಿ ಮಾಡಿಕೊಂಡಿದ್ದಾನೆ ಎಂದರೆ ಆ ದುಡ್ಡಿನಲ್ಲಿ ನಾನೊಂದು ಇಪ್ಪತ್ತು ಕೋಟಿ ತೆಗೆದುಕೊಳ್ಳಲು ಏನು ಎಂಬ ಮನೋಭಾವನೆ ಬರುವುದು. ಅದರಲ್ಲೇನೂ ತಪ್ಪಿಲ್ಲ ಅನಿಸುವುದು. ಆದರೆ ಆ ಇನ್ನೂರು ಕೋಟಿಯ ಆತ ಮಾಡಿಕೊಂಡಿರುವುದೇ ಅಪರಾಧ, ಅದು ಜನರಿಗೆ ವಾಪಾಸು ಬರಬೇಕು ಎಂಬ ಪ್ರಜ್ಞೆ ಪತ್ರಕರ್ತರಿಗೆ ಬಂದದ್ದೇ ಆದರೆ ಈಗ ತೋರುತ್ತಿರುವ ಭಂಡತನವನ್ನು ಸರ್ಕಾರಗಳು ತೋರಿಸಲು ಸಾಧ್ಯವಿಲ್ಲ.

ಮಾಧ್ಯಮಗಳೆಲ್ಲಾ ಸೇರಿಕೊಂಡು ಯಾವುದಾದರೊಂದು ಬಗೆಯಲ್ಲಿ ಸ್ವಯಂ ನಿಯಂತ್ರಣ ಮಾಡಿಕೊಂಡು ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದರೆ ಒಂದು ಮಟ್ಟಕ್ಕೆ ಸುಧಾರಿಸಬಹುದು. ಆಯಾ ಸಂಸ್ಥೆಗಳು ತಮ್ಮೊಳಗಿರುವ ಕಪ್ಪುಕುರಿಗಳು ಯಾರು ಎಂದು ಗುರುತಿಸಿ ಅಂತಹವರನ್ನು ಹತೋಟಿಯಲ್ಲಿಟ್ಟುಕೊಂಡರೆ ಸಂಸ್ಥೆ ಸರಿ ಹೋಗುತ್ತದೆ. ನನ್ನ ಸಂಸ್ಥೆ ಸರಿ ಇಟ್ಕೊಬೇಕು ಎಂದು ಎಲ್ಲಾ ಸಂಸ್ಥೆಗಳಿಗೂ ಅನಿಸಬೇಕು.

ಈಗ ಬಯಲಾಗಿರುವ ʼದೀಪಾವಳಿ ಭಕ್ಷೀಸು ಹಗರಣʼ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸುದ್ದಿಯಾಗಬೇಕಿತ್ತು. ಆದರೆ ಆಗಲಿಲ್ಲ. ಯಾವುದೋ ಒಂದು ಇಂಗ್ಲಿಷ್‌ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ʼನಾವು ನಮ್ಮ ಸಂಸ್ಥೆಗೆ ಹೀಗೆ ಬಂದಿದ್ದ ಉಡುಗೊರೆಯನ್ನು ನಿರಾಕರಿಸಿದ್ದೇವೆ, ಸಿಎಂ ಅವರಿಗೆ ಹೀಗೆ ಮಾಡಿದ್ದು ಸರಿಯಲ್ಲ ಎಂದು ಖಂಡತುಂಡವಾಗಿ ಹೇಳಿದ್ದೇವೆʼ ಎಂಬ ವರದಿಯನ್ನಾದರೂ ಪ್ರಕಟಿಸಬೇಕಿತ್ತು. ಯಾಕೆ ಹಾಕಲಿಲ್ಲ ಎಂಬುದು ನನಗೆ ಆಶ್ಚರ್ಯದ ವಿಚಾರ. ನಾವು ಜಗತ್ತಿನ ಎಲ್ಲಾ ಹುಳುಕುಗಳನ್ನು ಬಯಲು ಮಾಡುತ್ತೇವೆ, ಬರೆಯುತ್ತೇವೆ. ನಮ್ಮ ಮನೆಯನ್ನೇ ಕೊಳಕು ಮಾಡಲು ಯಾರೋ ಬಂದಿದ್ದಾರೆ ಎಂದಾಗ ಅದರ ಬಗ್ಗೆ ಬರೆಯದಿರುವುದು ಆಶ್ಚರ್ಯ. ಸಿಎಂ ಕಚೇರಿಯಿಂದ ಎಷ್ಟು ಜನಕ್ಕೆ ಹೋಗಿದೆ, ಎಷ್ಟು ಜನ ವಾಪಾಸು ಕಳಿಸಿದ್ದಾರೆ ಎಂಬುದು ಗೊತ್ತಿಲ್ಲ. ವಾಪಾಸು ಕೊಟ್ಟಿದ್ದೀವಿ ಎಂದು ಹೇಳಿಕೊಂಡಿರುದಕ್ಕಿಂತಲೂ ಬಹುಪಾಲು ಹೆಚ್ಚು ಪ್ರಮಾಣ ವಾಪಾಸು ಮಾಡದೇ ಸ್ವೀಕರಿಸಿರುವವರೇ ಇರಬಹುದು. ಹಾಗಾಗಿಯೇ ಯಾವುದೇ ಮೀಡಿಯಾಗಳಲ್ಲಿ ಇದು ವರದಿಯಾಗದೇ ಹೋಗಿರಬಹುದು.

ಇಂದು ಈ ವಿಷಯ ಎಲ್ಲಾ ಹಂತಗಳಲ್ಲಿ ಚರ್ಚೆಯಾಗಬೇಕು. ಮುಖ್ಯವಾಗಿ ಪತ್ರಕರ್ತರ ಸಂಘಸಂಸ್ಥೆಗಳ ಮಟ್ಟದಲ್ಲಿ. ಹಾಗೆಯೇ ಸಂಪಾದಕರ ಹಂತದಲ್ಲಿ, ಉಪಸಂಪಾದಕರ ಹಂತದಲ್ಲಿ, ವರದಿಗಾರರ ಹಂತದಲ್ಲಿ, ನ್ಯೂಸ್‌ ಎಡಿಟರ್ಸ್‌ ಮತ್ತು ಮಾಲೀಕರ ಮಟ್ಟಗಳಲ್ಲೆಲ್ಲಾ ಇದು ಚರ್ಚೆಯಾಗಬೇಕು. ಯಾಕೆಂದರೆ ಒಂದೊಂದು ಹಂತದಲ್ಲಿ ಒಂದೊಂದು ದೃಷ್ಟಿಕೋನ ಇರುತ್ತದೆ. ನಾವೊಂದು ನಾಲ್ಕು ಜನ ಸಂಪಾದಕರು ಕುಳಿತು ಮಾತಾಡಿಬಿಡುತ್ತೇವೆಂದರೆ ಅಲ್ಲಿ ಉಳಿದ ಹಂತಗಳ ದೃಷ್ಟಿ ಏನು ಎಂಬುದು ತಿಳಿಯುವುದಿಲ್ಲ. ನಮ್ಮ ದೃಷ್ಟಿಕೋನ ಇಟ್ಟುಕೊಂಡು ಅವರ ದೃಷ್ಟಿಕೋನವನ್ನೂ ನೋಡುವಂತಾಗಬೇಕು. ಪ್ರತಿ ಹಂತದ ಚರ್ಚೆ ಆಯಾ ಹಂತದ ಪತ್ರಕರ್ತರಿಗೆ ಮಾತ್ರ ಸೀಮಿತವಾಗಬೇಕು. ವರದಿಗಾರರ ಹಂತದ ಚರ್ಚೆಯಲ್ಲಿ ಸಂಪಾದಕರು ಕುಳಿತುಕೊಳ್ಳಬಾರದು. ಉಪಸಂಪಾದಕರು ಈ ಬಗ್ಗೆ ಅನಾಮಿಕವಾಗಿಯೇ ಮಾತಾಡುವಂತಾಗಬೇಕು. ಹೀಗೆಲ್ಲಾ ಚರ್ಚೆ ಸಂವಾದ ನಡೆದಾಗ ನಾವು ಸಮಸ್ಯೆಯನ್ನು ಡಯಗ್ನೋಸ್‌ ಮಾಡಲು ಸಾದ್ಯವಾಗುತ್ತದೆ. ಆಗ ನಮಗೆ ಸಮಸ್ಯೆಯ ಮೂಲ ತಿಳಿಯಲು ಸಾಧ್ಯ.

ನಾನು ಈ ಕ್ಷಣಕ್ಕೂ ಮೀಡಿಯಾ ವಿರುದ್ಧ ಎಲ್ಲೂ ಮಾತಾಡುವುದಿಲ್ಲ. ಯಾಕೆಂದರೆ ಮೀಡಿಯಾದಿಂದಲೇ ನಾನು ಬದುಕು ಕಟ್ಟಿಕೊಂಡಿದ್ದೇನೆ. ಮೀಡಿಯಾ ನನಗೆ ಕೊಟ್ಟಿರುವುದು ಅಪಾರ. ಅನಂತ ಚಿನಿವಾರನ ಐಡೆಂಟಿಡಿಯೇ ಮೀಡಿಯಾದಿಂದ ಬಂದಿರುವಂತದ್ದು. ಹೀಗಾಗಿ ನಾನು ಯಾವುದೇ ಚರ್ಚೆಯಲ್ಲಿ ಮೀಡಿಯಾ ಬಗ್ಗೆ ಬೇಡವಾದದ್ದನ್ನು ಹೇಳಲಾರೆ. ಮೀಡಿಯಾ ಕ್ಷೇತ್ರಕ್ಕೆ ತನ್ನದೇ ಆದ ಒತ್ತಡಗಳಿವೆ. ಒಂದು ಟೀವಿ ಚಾನಲ್‌ ನಡೆಸುವಾಗ ನಡೆಸುವವರಿಗೂ ಅಲ್ಲಿ ಕೆಲಸ ಮಾಡುವವರಿಗೂ ವಿಪರೀತ ಒತ್ತಡಗಳಿರುತ್ತವೆ. ಹಣಕಾಸಿನ ಒತ್ತಡಗಳೇ ತೀವ್ರವಾಗಿರುತ್ತವೆ. ಒಂದು ಟೀವಿ ಚಾನಲ್‌ ನಡೆಸುವುದು ಸುಲಭದ ಕೆಲಸ ಅಲ್ಲ. ನಿಮಗೆ ರೆವಿನ್ಯೂ ಬರಲಿ ಬಿಡಲಿ ಆಫೀಸ್‌ ತೆರೆದು ಕುಳಿತುಕೊಂಡರೆ ನಿಮಗೆ ಒಂದಷ್ಟು ಖರ್ಚು ಬಂದೇ ಬರುತ್ತದೆ. ಹೀಗಾಗಿ ಮಾರ್ಕೆಟ್‌ ರಿಯಾಲಿಟಿ ತಿಳಿದುಕೊಳ್ಳಬೇಕು. ನಿರ್ದಿಷ್ಟ ಮಾರುಕಟ್ಟೆಗೆ ಎಷ್ಟು ಚಾನಲ್‌ಗಳನ್ನು ತೂಗಿಸುವ ಶಕ್ತಿ ಇದೆ ಎಂದು ನೋಡಬೇಕು. ಅದರ ಆಧಾರದ ಮೇಲೆ ಒಂದು ಅರ್ಹತೆ ನಿಗದಿ ಮಾಡಿ ಚಾಲನ್‌ಗಳು ನಡೆಯುವಂತಾಗಬೇಕು. ಅವುಗಳನ್ನು ಹೇಗೆ ಸರಿಪಡಿಸಿಕೊಂಡು ಹೋಗಬೇಕು ಎನ್ನುವುದೇ ಕಾಳಜಿಯಾಗಬೇಕು. ಇಡೀ ಪತ್ರಕರ್ತ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತಾಗಬಾರದು. ಸಮಸ್ಯೆಯನ್ನು ಗುರುತಿಸಬೇಕು. ಹಾಗಂತ ಮತ್ತೆ ಅಲ್ಲಿ ಯಾರದೋ ಮೇಲೆ ಗೂಬೆ ಕೂರಿಸು ಬಲಿಪಶುವಾಗಿಸುವ ಕೆಲಸವೂ ಆಗಬಾರದು. ಸಾಂಸ್ಥಿಕ ತಿದ್ದುಪಡಿ ಎಂಬುದು ಸಾಧ್ಯವಾಗಬೇಕು. ಮಾಧ್ಯಮದಲ್ಲಿ ಹೊಸ ಚೈತನ್ಯ ಬರುವಂತಾಗಬೇಕು.

ಅನಂತ ಚಿನಿವಾರ್, ಹಿರಿಯ ಪತ್ರಕರ್ತರು

ಇದನ್ನೂ ಓದಿ: ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

Related Articles

ಇತ್ತೀಚಿನ ಸುದ್ದಿಗಳು