Friday, June 14, 2024

ಸತ್ಯ | ನ್ಯಾಯ |ಧರ್ಮ

ಮಾದ್ಯಮ ಭ್ರಷ್ಟಾಚಾರ: ಮಾಧ್ಯಮ ಮಾಲೀಕರೇ ಪತ್ರಕರ್ತರಿಗೆ ಹೇಳುವ ನೈತಿಕತೆ ಕಳೆದುಕೊಂಡಿದ್ದಾರೆ

ಎಂತಹ ಸ್ಥಿತಿ ಬಂದೊದಗಿದೆ ಎಂದರೆ ಆನೆ ಮರೆತು ಅಡಿಕೆ ಕಡೆ ನೋಡುವಂತಾಗಿದೆ. ಚಾನಲ್‌ಗಳಿರಲಿ ಪತ್ರಿಕೆಗಳಿರಲಿ ಅವುಗಳಿಗೆ ಮಂತ್ರಿಗಳಿಂದ, ಮಂತ್ರಿಗಳ ಕಚೇರಿಗಳಿಂದ ಪ್ರತಿ ತಿಂಗಳೂ, ವರ್ಷಪೂರ್ತಿ ಹೋಗುವುದರ ಬಗ್ಗೆ ನಮ್ಮ ಗಮನ ಇಲ್ಲದೇ ಈಗ ಒಂದು ಪ್ರಕರಣ ಮಾತ್ರ ಎಲ್ಲರಿಗೆ ಕಣ್ಣು ಕೋರೈಸುತ್ತಿದೆ. ಈ ಮಾತಿನ ಅರ್ಥ ನಾವು ಇಂತಹ ವಿಷಯಗಳನ್ನು ಚರ್ಚೆ ಮಾಡಬಾರದು ಎಂದಲ್ಲ. ಆದರೆ ಆ ಚರ್ಚೆ ಅಲ್ಲೇ ಗಿರಕಿ ಹೊಡೆಯದೇ ಆಳಗೊಳ್ಳಬೇಕು. ನಾವು ಸಮಸ್ಯೆಯ ಬೇರುಗಳನ್ನು ನೋಡುವ ಪ್ರಯತ್ನ ಮಾಡಬೇಕು.

ಪತ್ರಿಕೋದ್ಯಮದ ಕಾರ್ಪೊರೇಟೀಕರಣವಾದಾಗಿನಿಂದ ಆದರ್ಶಗಳು ಕಿತ್ಕೊಂಡು ಹೋಗಿವೆ. ಹಿಂದೆಲ್ಲಾ ಪತ್ರಕರ್ತರು ಪ್ರೆಸ್‌ಕ್ಲಬ್‌ನಲ್ಲಿ ಸಿಗುತ್ತಿದ್ದರು. ಈಗ ಅಲ್ಲಿ ಬರುವವರು ಉದ್ಯಮಪತಿಗಳು. ಪತ್ರಕರ್ತರು ಮತ್ತೆಲ್ಲೋ ಸೇರುತ್ತಾರೆ. ವರದಿಗಾರರ ಕೂಟಗಳಂತವು ಹಿಂದೆ ಸಕ್ರಿಯವಾಗಿದ್ದವು. ಇಂದು ಮಾಲೀಕರೇ ತಮ್ಮ ನೌಕರರನ್ನು ನಿಯಂತ್ರಿಸುವ ನೈತಿಕತೆ ಕಳೆದುಕೊಂಡಿದ್ದಾರೆ. ಮಾರುಕಟ್ಟೆ ಹಾಗೂ ರಾಜಕೀಯ ಶಕ್ತಿಗಳಿಗೆ ಮಾಲೀಕರೇ ಬಲಿಬಿದ್ದಿದ್ದಾರೆ. ಅದರಲ್ಲೂ ಇಂದಿನ ಸಿಇಒ ಕಲ್ಚರ್‌ ಬಂದ ಮೇಲಂತೂ ಬಹಳ ಬದಲಾವಣೆಯಾಗಿದೆ. ಹಿಂದೆ ಸಂಪಾದಕರಿದ್ದು ಮ್ಯಾನೇಜರುಗಳನ್ನು ಇಟ್ಟುಕೊಳ್ಳುತ್ತಿದ್ದರು. ಮ್ಯಾನೇಜರ್‌ ಆದವರು ಸಂಪಾದಕರ ಕೋಣೆಗೆ ಹೋಗಿ ಮಾತಾಡಬೇಕಿತ್ತು. ಈಗ ಪರಿಸ್ಥಿತಿ ತಿರುಗಾಮುರುಗಾ ಆಗಿದೆ. ಈಗ ಸಂಪಾದಕರೇ ಸಿಇಓ ಬಳಿ ಹೋಗಬೇಕು, ಆತ ಕುಳಿತುಕೋ ಎಂದರೆ ಕುಳಿತುಕೊಳ್ಳಬೇಕು. ಸಂಪಾದಕರಿಗೆ ಇದ್ದ ಅಂತಹ ನೈತಿಕ ಆಧಿಕಾರವೂ ಇಂದು ಉಳಿದಿಲ್ಲ. ಆತ ಎಷ್ಟು ದಿನ ಸಂಪಾದಕ ಆಗಿರಬೇಕು ಎಂಬುದು ಸಹ ಸಿಇಓ ಮರ್ಜಿಗೆ ಒಳಪಟ್ಟಿರುತ್ತದೆ.

ಮೊದಲೆಲ್ಲಾ ಸುದ್ದಿಗಳ ನಡುವೆ ಜಾಹೀರಾತುಗಳಿರುತ್ತಿವು. ಇಂದು ಹಾಗಿಲ್ಲ. ಜಾಹೀರಾತುಗಳ ನಡುವೆಯೇ ಸುದ್ದಿಗಳನ್ನು ಹುಡುಕುವ ಸ್ಥಿತಿ ಬಂದಿದೆ. ಕೆಲವೊಮ್ಮೆ ಸುದ್ದಿ ಯಾವುದು ಜಾಹೀರಾತು ಯಾವುದು ಎಂದು ಗುರುತಿಸುವುದೂ ಸಾಧ್ಯವಾಗದ ಸ್ಥಿತಿ. ಇಂದು ಪತ್ರಿಕೋದ್ಯಮವನ್ನು ಈ ಸ್ಪೇಸ್‌ ಮಾರ್ಕೆಟಿಂಗ್‌ ಆವರಿಸಿಕೊಂಡುಬಿಟ್ಟಿದೆ. ಪರಿಣಾಮವಾಗಿ ನೋಮ್‌ ಚಾಮ್‌ಸ್ಕಿ ಹೇಳಿದ ʼಮ್ಯಾನ್ಯುಫ್ಯಾಕ್ಚರಿಂಗ್‌ ಕನ್ಸೆಂಟ್‌ʼ ಅಥವಾ ಸಮ್ಮತಿಯ ಉತ್ಪಾದನೆಯನ್ನು ಮಾತ್ರವೇ ನೋಡುವಂತ ಸ್ಥಿತಿ ತಲುಪಿದ್ದೇವೆ. ಇಂತದ್ದರ ನಡುವೆಯೇ ಕೆಲವು ಪತ್ರಿಕೆಯ ಮ್ಯಾನೇಜ್‌ಮೆಂಟ್‌ಗಳು ಬಹಳ ಇಕ್ಕಟ್ಟು ಬಿಕ್ಕಟ್ಟುಗಳ ನಡುವೆಯೇ ಪತ್ರಿಕೋದ್ಯಮದ ಘನತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿವೆ. ಮಾಡುತ್ತಿವೆ. ಅಂತಹ ಸಮಯದಲ್ಲಿ ಅವು ಎದುರಿಸುವ ಒತ್ತಡಗಳು ನಾನಾ ರೀತಿಯವು.

ಇಂದು ಮಾಧ್ಯಮದ ಭ್ರಷ್ಟಾಚಾರದ ಕುರಿತ ಚರ್ಚೆ ಮತ್ತಷ್ಟು ವಿಸ್ತಾರಗೊಳ್ಳುವ ಅಗತ್ಯವಿದೆ. ಇದು ಎಲ್ಲಾ ಸ್ತರಗಳಲ್ಲಿ ನಡೆಯಲಿ. ಪತ್ರಿಕೋದ್ಯಮದ ಉದಾತ್ತ ಪರಂಪರೆ ನಶಿಸಿ ಹೋಗದಂತೆ ಕಾಪಾಡಿಕೊಳ್ಳುವ ಹೊಣೆ ನಮ್ಮೆಲ್ಲರದಾಗಲಿ.

(ಡಿ ಉಮಾಪತಿಯವರು ಹಿರಿಯ ಪತ್ರಕರ್ತರು, ಕನ್ನಡದ ಪ್ರಮುಖ ಚಿಂತಕರಲ್ಲೊಬ್ಬರು)  

ಇದನ್ನೂ ಓದಿ- ಮಾಧ್ಯಮ ಭ್ರಷ್ಟಾಚಾರ: ಉಡುಗೊರೆ ತಿರಸ್ಕರಿಸಿದ್ದೂ ʼಪ್ರಾಮಾಣಿಕತೆʼಯ ನಾಟಕವೇ?

Related Articles

ಇತ್ತೀಚಿನ ಸುದ್ದಿಗಳು