ನವದೆಹಲಿ: ವಸಾಹತುಶಾಹಿ ಕಾಲಘಟ್ಟದ ಭಾರತೀಯ ದಂಡ ಸಂಹಿತೆಯನ್ನು ಬದಲಿಸಿ ಭಾರತೀಯ ನ್ಯಾಯ ಸಂಹಿತಾ ಮಸೂದೆಯನ್ನು ತರಲಾಗುತ್ತಿದ್ದು, ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸುವ ಮರಣ ಅಪರಾಧವಲ್ಲವೆಂದು ಘೋಷಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ.
“ವೈದ್ಯರನ್ನು ಈ ಕ್ರಿಮಿನಲ್ ನಿರ್ಲಕ್ಷ್ಯದಿಂದ ಮುಕ್ತಗೊಳಿಸಲು ನಾನು ಈಗ ತಿದ್ದುಪಡಿಯನ್ನು ತರುತ್ತೇನೆ” ಎಂದು ಶಾ ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಘವು ಗೃಹ ಸಚಿವಾಲಯಕ್ಕೆ ಈ ಅಪರಾಧವನ್ನು ಪರಿಶೀಲಿಸುವಂತೆ ಕೇಳಿಕೊಂಡ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304A ಅಡಿಯಲ್ಲಿ ಮರಣಕ್ಕೆ ಕಾರಣವಾಗುವ ವೈದ್ಯಕೀಯ ನಿರ್ಲಕ್ಷ್ಯದ ಅಪರಾಧವೆಂದು ಪರಿಗಣಿಸಲ್ಪಡುತ್ತದೆ.. ಸೆಕ್ಷನ್ ಅಡಿಯಲ್ಲಿ ಆರೋಪಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಚರ್ಚೆಯ ನಂತರ, ಲೋಕಸಭೆಯಲ್ಲಿ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸದನದಿಂದ ಅಮಾನತುಗೊಂಡಿರುವ ಕಾರಣ ಹೆಚ್ಚಿನ ಸಂಖ್ಯೆಯ ವಿರೋಧ ಪಕ್ಷದ ಸಂಸದರ ಗೈರುಹಾಜರಿಯ ನಡುವೆ ಮೂರು ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ..
ಭಾರತೀಯ ನ್ಯಾಯ ಸಂಹಿತೆಯ ಹೊರತಾಗಿ, ಅಪರಾಧ ಪ್ರಕ್ರಿಯಾ ಸಂಹಿತೆಯನ್ನು (Criminal Procedure Code) ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಎಂದೂ, ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ಮಸೂದೆ ಎಂದು ಬದಲಿಸಲಾಗಿದೆ.
ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಶಾ ಈ ಮಸೂದೆಗಳನ್ನು ಮಂಡಿಸಿದ್ದಾರೆ.
ಬುಧವಾರ, 543 ಬಲವನ್ನು ಹೊಂದಿರುವ ಲೋಕಸಭೆಯಿಂದ 97 ವಿರೋಧ ಪಕ್ಷದ ಸಂಸದರು ಗೈರು ಹಾಜರಾಗಿದ್ದರು. ಇವರಲ್ಲಿ 199 ವಿರೋಧ ಪಕ್ಷದ ಸಂಸದರು ಮತ್ತು 323 ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸೇರಿದವರು.
ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಚರ್ಚೆಗೆ ಒತ್ತಾಯಿಸಿ ಆಪ್ ಸಂಸದರೂ ಸೇರಿದಂತೆ, ರಾಜ್ಯಸಭೆಯ 46 ಸದಸ್ಯರು ಡಿಸೆಂಬರ್ 14 ರಿಂದ ಅಮಾನತುಗೊಂಡಿದ್ದಾರೆ. ಡಿಸೆಂಬರ್ 13 ರಂದು ಇಬ್ಬರು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಹಳದಿ ಹೊಗೆ ಹಾರಿಸಿದ್ದರು. ಸಂಸತ್ತಿನ ಹೊರಗೆ ಒಬ್ಬ ಪುರುಷ ಮತ್ತು ಮಹಿಳೆ ಹೊಗೆ ಹಾರಿಸಿ ʼಸರ್ವಾಧಿಕಾರದʼ ವಿರುದ್ಧ ಘೋಷಣೆ ಕೂಗಿದ್ದರು.
ಬುಧವಾರ ಲೋಕಸಭೆಯಲ್ಲಿ ವಿಧೇಯಕಗಳ ಮೇಲಿನ ಚರ್ಚೆಯಲ್ಲಿ, ಅಸ್ತಿತ್ವದಲ್ಲಿರುವ ಕ್ರಿಮಿನಲ್ ಕಾನೂನುಗಳು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಸರಿಯಾಗಿ ನ್ಯಾಯ ನೀಡದೆ ಶಿಕ್ಷೆಗೆ ಗುರಿಪಡಿಸುತ್ತವೆ ಎಂದು ಶಾ ಹೇಳಿದ್ದರು.
“ಮೂರು ಹೊಸ ಮಸೂದೆಗಳು ಭಾರತೀಯ ಚಿಂತನೆಯ ಆಧಾರದ ಮೇಲೆ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತವೆ” ಎಂದು ಶಾ ಹೇಳಿದ್ದಾರೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯಲ್ಲಿ 484 ಸೆಕ್ಷನ್‌ಗಳಿವೆ, ಇನ್ನು 531 ಇರುತ್ತವೆ ಎಂದು ಗೃಹ ಸಚಿವರು ಹೇಳಿದ್ದಾರೆ.
“177 ಸೆಕ್ಷನ್‌ಗಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಒಂಬತ್ತು ಹೊಸ ಸೆಕ್ಷನ್‌ಳನ್ನು ಸೇರಿಸಲಾಗಿದೆ.ಮೂವತ್ತೊಂಬತ್ತು ಹೊಸ ಉಪವಿಭಾಗಗಳನ್ನು ಸೇರಿಸಲಾಗಿದೆ. ನಲವತ್ನಾಲ್ಕು ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ,” ಎಂದು ಅವರು ಹೇಳಿದ್ದಾರೆ.