ಮಂಗಳೂರು: ಬೈಕ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರಣ, ಅಪಘಾತ ಸಂಭವಿಸಿ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ಕುತ್ತೂರಿನ ಮಡಕ ಕ್ವಾಟ್ರಗುತ್ತು ಬಳಿ ನಡೆದಿದೆ.
ಪೊಲೀಸ್ ಮಾಹಿತಿ ಪ್ರಕಾರ, ಮೃತನು ಯಶವಂತಪುರ ಬೆಂಗಳೂರು ನಿವಾಸಿ ನಿವೃತ್ತ ಶಿಕ್ಷಕ ಸಿದ್ದರಾಜು ಅವರ ಪುತ್ರ ನಿಶಾಂತ್ (22) ಎಂದು ತಿಳಿದುಬಂದಿದ್ದು, ಹಿಂಬದಿ ಸವಾರ ಬೀದರ್ ನಿವಾಸಿ ಶಕೀಬ್ ಎಂದು ತಿಳಿದು ಬಂದಿದೆ. ಇಬ್ಬರೂ ಎಂಬಿಬಿಎಸ್ ಮುಗಿಸಿದ್ದು,ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎರಡನೇ ವರ್ಷದ ಇಂಟರ್ನ್ಶಿಪ್ ಮಾಡುತ್ತಿದ್ದರು ಎನ್ನಲಾಗಿದೆ.
ನಿಶಾಂತ್ ಮತ್ತು ಶಕೀಬ್ ತಮ್ಮ ಬೈಕಿನಲ್ಲಿ ವೇಗವಾಗಿ ಹೋಗುವಾಗ ರಸ್ತೆ ಹಂಪ್ ಅನ್ನು ಗಮನಿಸಲಿಲ್ಲದ ಕಾರಣ, ಬೈಕ್ ಸವಾರರು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದಕಾರಣ, ಬಲವಾಗಿ ಪೆಟ್ಟು ಬಿದ್ದಿದ್ದರಿಂದ ನಿಶಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಶಕೀಬ್ ಗಾಯಗೊಂಡಿದ್ದಾರೆ. ಈ ಘಟನೆಯು ಮಧ್ಯರಾತ್ರಿ 12:15 ರವೇಳೆಗೆ ಸಂಭವಿಸಿದ್ದು, ರಸ್ತೆಯಲ್ಲಿ ನಿರ್ಜನವಾಗಿತ್ತು. ನಂತರ ಅಲ್ಲಿನ ಸ್ಥಳೀಯರು ಅದೇ ದಾರಿಯಲ್ಲಿ ಪ್ರಯಾಣ ನಡೆಸುತ್ತಿರುವಾಗ ಅಪಘಾತವಾಗಿರುವುದನ್ನು ನೋಡಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.