Friday, June 14, 2024

ಸತ್ಯ | ನ್ಯಾಯ |ಧರ್ಮ

ನೆನಪು | ಶಿವರಾಮ ಕಾರಂತ ಎಂಬ ಬಹುಮುಖೀ ಬೆರಗು

ಸಾಹಿತ್ಯ ದಿಗ್ಗಜ ಶಿವರಾಮ ಕಾರಂತ ಅವರ ಜನ್ಮ ದಿನ ಇಂದು (ಅ. 10). ಅವರನ್ನು ಹತ್ತಿರದಿಂದ ಕಂಡು ಅವರ ನೆನಪಿನಲ್ಲಿ  ಶ್ರೀನಿವಾಸ ಕಾರ್ಕಳ ಹೀಗೆ ಬರೆಯುತ್ತಾರೆ-  ಇಂದು ಬೇರೆಯವರು ನಡೆದು ಸವೆದ ದಾರಿಯಲ್ಲಿ ಕಾರಂತರು ನಡೆಯಲಿಲ್ಲ. ತಮ್ಮದೇ ಹೊಸ ದಾರಿ ಹುಡುಕಿಕೊಂಡರು. ಇಡೀ ಬದುಕನ್ನು ಕೊನೆಯ ಉಸಿರಿನವರೆಗೂ ಕ್ರಿಯಾಶೀಲತೆಯ ಮೂಲಕ ಜೀವಂತವಾಗಿ ಬದುಕಿದರು. ಈ ಎಲ್ಲ ಕಾರಣಕ್ಕೇ  ಶಿವರಾಮ ಕಾರಂತರು ಇಪ್ಪತ್ತನೇ ಶತಮಾನದ ಒಂದು ಅಚ್ಚರಿ; ನಾವೆಲ್ಲರೂ ಹೆಮ್ಮೆ ಪಡಬೇಕಾದ ಒಂದು ಬಹುಮುಖೀ ಬೆರಗು.

ನನಗಾಗ ಸುಮಾರು ಹದಿನಾಲ್ಕರ ಹರೆಯವಿರಬಹುದು. ಮನೆಯಲ್ಲಿ ಒಂದು ದಿನಪತ್ರಿಕೆ ಹೊರತು ಪಡಿಸಿದರೆ ಓದಲು ಪುಸ್ತಕ ಸಿಗುತ್ತಿದ್ದುದು ಕಡಿಮೆ. ಆದರೆ ಸಿಕ್ಕ ಸಿಕ್ಕದ್ದನ್ನೆಲ್ಲ ಕುತೂಹಲದಿಂದ ಓದುವ ಹುಚ್ಚು ಆಗಲೇ ನನಗೆ ಹತ್ತಿತ್ತು.

ಇಂತಹ ಒಂದು ದಿನ ನನ್ನ ಕೈಗೆ ‘ಬೆಟ್ಟದ ಜೀವ’ ಎಂಬ ಪುಸ್ತಕ ಸಿಕ್ಕಿತು. ದೊಡ್ಡ ಅಣ್ಣ ಪದವಿ ಓದಲು ಆರಂಭಿಸಿದಾಗ ಅವರಿಗೆ ನಾನ್ ಡಿಟೇಲ್ಡ್ ಆಗಿ ಈ ಪುಸ್ತಕ ನಿಗದಿಯಾಗಿರಬೇಕು. ಸುಮ್ಮನೆ ಓದುತ್ತ ಹೋದೆ. ಕುತೂಹಲ ಕೆರಳುತ್ತ ಹೋಯಿತು.

ನಾವಿದ್ದುದೂ ಕುಂದಾಪುರ ತಾಲೂಕಿನ ಶಂಕರನಾರಾಯಣದ ಗದ್ದೆ, ಬೆಟ್ಟ ಆವೃತ ಹಳ್ಳಿ ಪರಿಸರವಾಗಿದ್ದುದರಿಂದ, ಕಾದಂಬರಿಯೊಳಗಿನ ಘಟನೆಗಳೆಲ್ಲ ನಮ್ಮ ಸುತ್ತಮುತ್ತಲೇ ನಡೆದಂತೆ ಅನಿಸಿ ಕಥಾನಕ ಆಪ್ತವಾಗುತ್ತಾ ಹೋಯಿತು. ಶಿವರಾಮ ಕಾರಂತರು ಯಾರೆಂಬುದು ನನಗೆ ಗೊತ್ತಿರಲಿಲ್ಲ. ಆದರೆ ನಾನು ಅವರ ಹೆಸರು ಮೊದಲಬಾರಿ ನೋಡಿದುದು ಆ ಕಾದಂಬರಿಯ ಮುಖಪುಟದಲ್ಲಿ.

ಆನಂತರ ಕೆಲ ವರ್ಷಗಳಲ್ಲಿ ಶಿವರಾಮ ಕಾರಂತರು ‘ಮಲೆಯ ಮಕ್ಕಳು’ ಎಂಬ ಸಿನಿಮಾ ಮಾಡ್ತಾರಂತೆ ಎಂದು ಪತ್ರಿಕೆಯಲ್ಲಿ ಓದಿದ್ದೆ. ಆ ಸಿನಿಮಾದಲ್ಲಿ ನಮ್ಮೂರಿನ ಒಬ್ಬರು ಪಾತ್ರ ವಹಿಸಿದ್ದ ಬಗ್ಗೆಯೂ ತಿಳಿದು ಬಂದು ಒಂದಷ್ಟು ಹೆಚ್ಚು ಕುತೂಹಲ ಕೆರಳಿತ್ತು.

ಜ್ಞಾನಪೀಠ

ಹನ್ನೊಂದು ವರ್ಷಗಳನ್ನು ಶಂಕರನಾರಾಯಣದಲ್ಲಿ ಕಳೆದು ಮುಂದಿನ ಓದಿಗೆ ಕಾರ್ಕಳಕ್ಕೆ ಬಂದೆ. ಅಲ್ಲಿನ ಭುವನೇಂದ್ರ ಕಾಲೇಜಿನಲ್ಲಿಯಾದರೋ ಸಾಹಿತ್ಯ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹವಿತ್ತು. 1977 ರಲ್ಲಿ ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಕಾರಂತರಿಗೆ ಸನ್ಮಾನ ಏರ್ಪಾಡಾಗಿತ್ತು. ಆ ದಿನ ಕಾರಂತರನ್ನು ಮೊದಲ ಬಾರಿಗೆ ಕಣ್ಣಾರೆ ಕಂಡೆ.

ಮುಂದೆ ನಾನು ಅಲ್ಲಿನ ಸಾಹಿತ್ಯ ಸಂಘದ ಕಾರ್ಯದರ್ಶಿಯಾದೆ. ಅದೇ ಸಂದರ್ಭದಲ್ಲಿ ಕಾರಂತರನ್ನು ಕರೆಸಿ ಒಂದು ಕಾರ್ಯಕ್ರಮ ಮಾಡಿದ್ದರು. ಹಾಗಾಗಿ ಕಾರಂತರೊಂದಿಗೇ ವೇದಿಕೆಯಲ್ಲಿ ಆಸೀನನಾಗುವ ಅವಕಾಶವೂ ನನಗೆ ದೊರೆಯಿತು.

ಹೀಗೆ ನಿಧಾನವಾಗಿ ಕಾರಂತರ ಬಗ್ಗೆ ಆಸಕ್ತಿ ಹೆಚ್ಚಲಾರಂಭಿಸಿತು. ಕಾರ್ಕಳದ ಗ್ರಂಥಾಲಯಕ್ಕೆ ಹೋಗಿ ಅವರ ಕಾದಂಬರಿಗಳನ್ನು ಓದಲಾರಂಭಿಸಿದೆ. ‘ಮೂಕಜ್ಜಿಯ ಕನಸುಗಳು’ ಓದಲು ಯತ್ನಿಸಿದೆನಾದರೂ ಅದರ ಕಥಾ ವಸ್ತು ಕೊಂಚ ಕ್ಲಿಷ್ಟ ಇದ್ದುದರಿಂದ ಅದು ನನ್ನ ಕುತೂಹಲವನ್ನು ಕೆರಳಿಸಲು ಶಕ್ತವಾಗಲಿಲ್ಲ.

ಆನಂತರ ನಾನು ಮಂಗಳೂರಿನ ನಿವಾಸಿಯಾದೆ. ಕಾರಂತರ ಸಾಹಿತ್ಯ ಕೃತಿಗಳಿಗಿಂತಲೂ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಅವರ ಯಕ್ಷಗಾನದ ಪ್ರಯೋಗಗಳು, ಪರಿಸರ ಹೋರಾಟದ ಚಟುವಟಿಕೆಗಳು. ಹಾಗಾಗಿ ಸುತ್ತ ಎಲ್ಲೇ ಅವರ ಕಾರ್ಯಕ್ರಮ ಇದ್ದರೂ ಅಲ್ಲಿ ಹೋಗಲಾರಂಭಿಸಿದೆ. ಕೈಗೆ ಕ್ಯಾಮರಾ ಬಂದ ಮೇಲಂತೂ ಅವರ ನಾನಾ ಭಂಗಿಗಳನ್ನು ಸೆರೆ ಹಿಡಿಯುವ ಹುಚ್ಚು ಹೆಚ್ಚುತ್ತಾ ಹೋಯಿತು.

ಪರಿಸರ ಹೋರಾಟ

ಆಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಬಳಿಸಲು ದೊಡ್ಡ ಸಂಖ್ಯೆಯಲ್ಲಿ ಮಾಲಿನ್ಯಕಾರಕ ಕಾರ್ಖಾನೆಗಳು ಕ್ಯೂನಲ್ಲಿ ನಿಂತಿದ್ದವು. ಅವುಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜನಹೋರಾಟಗಳೂ ನಡೆಯುತ್ತಿದ್ದವು. 

ಆಗ ಈ ಹೋರಾಟಗಳ ಮುಂದೆ ಕಾರಂತರು ಇದ್ದುದರಿಂದ ಎಲ್ಲರಲ್ಲೂ ವಿಶೇಷ ಹುಮ್ಮಸ್ಸು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರಂತರಿದ್ದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಸುಮಾ ಸೊರಬ ಈ ಹೋರಾಟದ ನೈತಿಕ ಶಕ್ತಿಯಾಗಿದ್ದರು. ಮಂಗಳೂರಿನಲ್ಲಿ 1993 ರಲ್ಲಿ ನಡೆದ ಅಂತಹ ಒಂದು ಪ್ರತಿಭಟನಾ ಸಭೆಯಲ್ಲಿ ಕಾರಂತ, ಅನಂತಮೂರ್ತಿ ಹೀಗೆ ಘಟಾನುಘಟಿಗಳು ಸೇರಿದ್ದರು. ಉಷ್ಣವಿದ್ಯುತ್ ಸ್ಥಾವರದ ಬೂದಿಯಿಂದ ಇಟ್ಟಿಗೆ ಮಾಡಲಾಗುವುದು ಎಂಬ ಸಮರ್ಥನೆಯನ್ನು ಕಟುವಾಗಿ ಟೀಕಿಸಿದ ಅವರು “ಬೂದಿಯಿಂದ ಇಟ್ಟಿಗೆ ಮಾಡಲು ಅಪಾರ ನೀರು ಬೇಕು, ಎಲ್ಲಿಂದ ತರುತ್ತೀರಿ ಅದನ್ನು, ಕೊನೆಗೆ ಅದನ್ನು ಹಣೆಗೆ ಹಚ್ಚಿಕೊಳ್ಳಬೇಕಷ್ಟೇ” ಎಂದುದು ಇದೇ ಸಭೆಯಲ್ಲಿ.

ಶಿವರಾಮ ಕಾರಂತರನ್ನು ಹತ್ತಿರದಿಂದ ಕಂಡು ಮಾತಾಡಿಸಿದ ಎರಡು ಘಟನೆ ಈಗಲೂ ನೆನಪಾಗುತ್ತಿದೆ. ಆಗ ಕೊಜಂಟ್ರಿಕ್ಸ್ ವಿದ್ಯುತ್ ಸ್ಥಾವರದ (ನಂದಿಕೂರು ಉಷ್ಣವಿದ್ಯುತ್ ಸ್ಥಾವರ) ವಿರುದ್ಧ ಪಡುಬಿದ್ರೆಯಲ್ಲಿ ದೊಡ್ಡದೊಂದು ಸಭೆ ಏರ್ಪಾಟಾಗಿತ್ತು (1994). ಕಾರಂತರು, ಕುಸುಮಾ ಸೊರಬ, ಮೇಧಾ ಪಾಟ್ಕರ್ ಎಲ್ಲರೂ ಬರುವವರಿದ್ದರು.

ಕಾರಂತರ ಒಂದು ವಿಶಿಷ್ಟ ಗುಣವೆಂದರೆ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕಿಂತ ಮೊದಲೇ ತಲಪಿ ಬಿಡುವುದು. ಅಂದು ಕೂಡಾ ಹಾಗೆಯೇ ಬಂದು ಅಂಬಾಸಿಡರ್ ಕಾರಿನಲ್ಲಿ ಕುಳಿತಿದ್ದರು. ನನಗೋ ಅವರನ್ನು ಮಾತನಾಡಿಸುವ ತುಡಿತ. ಆದರೆ ಅವರು ಮಹಾ ಕೋಪಿಷ್ಠ ಎಂಬುದು ನನಗೆ ಗೊತ್ತಿತ್ತು. ಆದರೂ ಧೈರ್ಯ ಮಾಡಿ, “ಸಾರ್, ನೀವು ಕುದುರೆಮುಖ ಶಿಖರದ ಎತ್ತರದ ಬಗ್ಗೆ ಒಂದೆಡೆ ಮಾಹಿತಿ ದಾಖಲಿಸಿದ್ದೀರಿ, ಆದರೆ ಅದು ಸರಿಯಲ್ಲವಂತೆ, ನೀವೇನಂತೀರಿ?” ಎಂದು ಕೇಳಿದೆ. ಅವರ ಮುಖ ಕೆಂಪಾಯಿತು. ನನಗೆ ಒಂದಿಷ್ಟು ಬೈಯ್ದರು. ಮರುಕ್ಷಣವೇ ತಣ್ಣಗಾದರು. ಅದು ಹಾಗಲ್ಲ, ಆಗ ಮಾಪಕ ಯಂತ್ರಗಳಿರಲಿಲ್ಲ. ಹಾಗಾಗಿ ಹಾಗೆ ಬರೆದುದು. ಆದರೆ ಈಗ ಬ್ಯಾರೋಮೀಟರ್ ಬಳಸಿ ನಿಖರವಾಗಿ ಅಳೆಯಬಹುದು ಅಂದರು. ಇನ್ನೂ ಏನೋ ವಿವರಣೆ ನೀಡುತ್ತಿರುವಾಗಲೇ ದೂರದಿಂದ ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬರುವುದು ಅವರಿಗೆ ಕಂಡಿತು. ಕಾರಂತರಿಗೆ ಆಗ ಅಂದಾಜು 90 ರ ಹರೆಯ. ಮೇಧಾ ಅವರಿಗೆ ಅರವತ್ತೂ ಆಗಿರಲಿಕ್ಕಿಲ್ಲ. ಆದರೂ ಗುಣವನ್ನು, ಪ್ರತಿಭೆಯನ್ನು ಗೌರವಿಸುವ ಒಂದು ದೊಡ್ಡ ಗುಣ ಕಾರಂತರಲ್ಲಿತ್ತು (ಪರಿಸರ ವಿಷಯದಲ್ಲಿ ಎಲ್ಲಪ್ಪ ರೆಡ್ಡಿಯವರ ಬಗ್ಗೆ, ಶಿಕ್ಷಣ ವಿಷಯದಲ್ಲಿ ಸುಕುಮಾರ ಗೌಡರ ಬಗ್ಗೆ ಅವರಲ್ಲಿ ವಿಶೇಷ ಗೌರವ ಇತ್ತು). ಅವರು ಲಗುಬಗನೆ ಕಾರಿನಿಂದ ಇಳಿದು ಮೇಧಾರಿಗೆ ತಾವೇ ಮೊದಲು ನಮಸ್ಕರಿಸಿದರು.

“ಏನದು ಕೆಂಪು ದೀಪ?”

ಸುಮಾರಾಗಿ 1995 ರ ಒಂದು ದಿನ ಇರಬೇಕು. ಸಾಕ್ಷ್ಯ ಚಿತ್ರ ನಿರ್ಮಾಪಕ ನಟೇಶ್ ಉಳ್ಳಾಲ್ ಫೋನ್ ಮಾಡಿ, “ನಾಳೆ ಕಾರಂತರನ್ನು ಸಂದರ್ಶನ ಮಾಡುವುದಿದೆ, ಬರುತ್ತಿರಾ?” ಎಂದು ಕೇಳಿದ. ಕಾರಂತರನ್ನು ಭೇಟಿಯಾಗುವ ಅವಕಾಶ ಕಳೆದುಕೊಳ್ಳುವುದುಂಟೇ? “ಸರಿ” ಎಂದೆ. ಮಾರನೇ ದಿನ ನಮ್ಮ ಜೀಪು ಸಾಲಿಗ್ರಾಮದೆಡೆಗೆ ಸಾಗಿತು. ಅವರ ಮನೆಗೆ ಹೋದೆವು. ನಮ್ಮ ಪರಿಚಯ ಹೇಳಿಕೊಂಡೆವು. “ನನಗೀಗ ದೇವಸ್ಥಾನಕ್ಕೆ ಹೋಗುವುದಿದೆ. ಒಂದೆರಡು ಗಂಟೆ ಬಿಟ್ಟು ಬನ್ನಿ” ಎಂದರು. ಏನಿದು ಕಾರಂತರು.. ದೇವರು.. ದೇವಸ್ಥಾನ.. ಎಂದು ತಪ್ಪು ತಿಳಿಯುತ್ತೇವೆ ಎಂದು ಅರಿತೋ ಏನೋ “ದೇವಸ್ಥಾನಕ್ಕೆ ಎಂದರೆ ನನಗಾಗಿ ಹೋಗುವುದಲ್ಲ, ನಾನು ಅಲ್ಲಿರಬೇಕು ಎಂದು ಅವರು ಹೇಳಿದ್ದಾರೆ, ಹಾಗಾಗಿ ಹೋಗುತ್ತಿದ್ದೇನೆ”, ಎಂದೂ ಸೇರಿಸಿದರು. ನಾವು ನಕ್ಕು ಕುಂದಾಪುರದೆಡೆಗೆ ಸರಿದೆವು. ಅಲ್ಲಿ ಅರಣ್ಯಾಧಿಕಾರಿ ಮೂರ್ತಿ ಎಂಬವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಕೋಟಕ್ಕೆ ಮರಳಿದೆವು. ಕಾರಂತರು ಮನೆಯಲ್ಲಿದ್ದರು.

ನಮ್ಮ ಬಳಿ ವೀಡಿಯೋ ಕ್ಯಾಮರಾ ಇತ್ತು (ಆಗಿನ ಕಾಲದಲ್ಲಿ ಮದುವೆ ಸಮಾರಂಭಗಳಲ್ಲಿ ಬಳಸುವಂಥದ್ದು, ಉನ್ನತ ಗುಣಮಟ್ಟದ್ದೇನೂ ಅಲ್ಲ). ಕ್ಯಾಮರಾ ಚಲಾಯಿಸುವುದು ನಟೇಶನ ತಮ್ಮ ಉದಯ. ಸರಿ, ನಿಧಾನಕ್ಕೆ ಮಾಲಿನ್ಯ ಕಾರಕ ಕೈಗಾರಿಕೆಗಳು, ನದಿ ನೀರಿನ ಮಾಲಿನ್ಯ… ಹೀಗೆ ಕಾರಂತರನ್ನು ಮಾತಿಗೆಳೆದೆವು.

ನಾವು ಅವರ ವೀಡಿಯೋ ಸಂದರ್ಶನ ಮಾಡಲು ಬಂದಿದ್ದು ಅದನ್ನು ಅವರ ಬಳಿ ಹೇಳಲು ಧೈರ್ಯವಿರಲಿಲ್ಲ. ಆದರೆ ಅವರ ಅನುಮತಿ ಪಡೆಯದೆ ಉದಯ ಕ್ಯಾಮರಾವನ್ನು ಚಾಲೂ ಮಾಡಿಬಿಟ್ಟಿದ್ದ.

ವಿಜ್ಞಾನದ ಮೇಲೆ ಅಪಾರ ನಂಬಿಕೆ

ಕಾರಂತರಿಗೆ ವಿಜ್ಞಾನದ ಮೇಲೆ ಅಪಾರ ನಂಬಿಕೆ. ನಮ್ಮ ಯಾವುದೇ ವಾದ ಬಲವಾದ ಪುರಾವೆಗಳನ್ನು ಆಧರಿಸಿರಬೇಕು ಎಂಬುದು ಅವರ ವಾದ. ಮಾಲಿನ್ಯದ ಬಗ್ಗೆ ಮಾತನಾಡುವಾಗ ನಮ್ಮ ಮಾತು ತುಂಡರಿಸಿ, “ನೀವು ನದಿ ನೀರು ಮಲಿನಗೊಂಡಿದೆ ಎಂದರೆ ಯಾರು ಅದನ್ನು ನಂಬುತ್ತಾರೆ? ಆ ನೀರನ್ನು ಮೊದಲು ಲ್ಯಾಬ್ ಗೆ ಒಯ್ದು ಅದರಲ್ಲಿ ಏನೇನು ಎಷ್ಟೆಷ್ಟಿದೆ ಎಂದು ಪತ್ತೆ ಹಚ್ಚಿ, ಆ ಅಂಕಿ ಅಂಶಗಳ ಮೇಲೆ ನಿಮ್ಮ ವಾದ ಮಂಡಿಸಬೇಕು” ಎಂದರು.

ನಮ್ಮ ಚರ್ಚೆಯನ್ನು ಅನುಮತಿಯಿಲ್ಲದೆ ಉದಯ ಚಿತ್ರೀಕರಿಸುತ್ತಿರುವುದು ಕಾರಂತರಿಗೆ ಗೊತ್ತಿಲ್ಲ ಎಂದು ನಾವು ಅಂದುಕೊಂಡಿದ್ದೆವು. ಕಾರಂತರಿಗೆ ಆಗ 90 ರ ಹರೆಯವಾಗಿದ್ದರೂ ಅವರ ದೃಷ್ಟಿ ತುಂಬಾ ಸೂಕ್ಷ್ಮ. “ಏನದು ಕೆಂಪು ದೀಪ?” ಎಂದರು. ಅದು ಕ್ಯಾಮರಾ ಚಾಲೂ ಇರುವ ಸಂಕೇತದ ದೀಪ. ನಮ್ಮ ಮೈಯೆಲ್ಲ ಒಂದು ಕ್ಷಣ ಬೆವತು ಹೋಯಿತು. ಆದರೆ ನಮ್ಮ ಊಹೆಯನ್ನು ಕಾರಂತರು ಸುಳ್ಳಾಗಿಸಿದರು. ಸಿಟ್ಟಿನ ಜಮದಗ್ನಿಯಾಗಲಿಲ್ಲ. ಗದರಲಿಲ್ಲ. ಆದರೆ ಗುಟ್ಟು ರಟ್ಟಾಯಿತಲ್ಲ ಎಂದು ಹೆದರಿ ಉದಯ ಕ್ಯಾಮರಾ ಆಫ್ ಮಾಡಿಬಿಟ್ಟ (ರೂಮಿನ ಬೆಳಕಿನಲ್ಲಿ ತೆಗೆದುದರಿಂದ ವೀಡಿಯೋ ಅಷ್ಟೊಂದು ಚೆನ್ನಾಗಿ ಬಂದಿರಲಿಲ್ಲ. ಆದರೂ ಸಾಕ್ಷ್ಯಚಿತ್ರಕ್ಕೆ ಉಪಯೋಗವಾಗುವಂತೆ ಒಂದಷ್ಟು ಭಾಗಗಳು ಸಿಕ್ಕವು). ಕಾರಂತರೊಂದಿಗಿನ ಮಾತು ಮುಗಿಸಿ ಅಲ್ಲಿಂದ ಹೊರಟೆವು.

“ಆಗಲೂ ಹುಬ್ಬಳ್ಳಿ ಧಾರವಾಡದ ಹತ್ತಿರವೇ ಇತ್ತು”

1997 ರ ಸುಮಾರಿಗೆ ಇರಬೇಕು. ಹಿರಿಯ ಗೆಳೆಯರಾದ ಸದಾಶಿವ ಮಾಸ್ತರರು ಆಗ ಹಳೆಯಂಗಡಿ ಜೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. “ನಾಳೆ ಕಾರಂತರು ಬರುತ್ತಾರೆ ನೀವು ಬರುತ್ತೀರಾ?” ಎಂದರು. ನಿಗದಿತ ಸಮಯಕ್ಕಿಂತ ಮೊದಲೇ ನಾನು ಅಲ್ಲಿ ತಲಪಿದೆ. ಆದರೆ ನನಗಿಂತಲೂ ಮೊದಲೇ ಕಾರಂತರು ಅಲ್ಲಿ ತಲಪಿಯಾಗಿತ್ತು! ಪ್ರಿನ್ಸಿಪಾಲರ ಕಚೇರಿಯಲ್ಲೇ ಅವರು ಕುಳಿತಿದ್ದುದರಿಂದ ಅವರನ್ನು ಹೆಚ್ಚು ಹತ್ತಿರದಿಂದ ನೋಡುವ ಮತ್ತು ಮಾತನಾಡಿಸುವ ಅವಕಾಶ ದೊರೆಯಿತು. ಆ ದಿನ ಅವರ ಎಷ್ಟು ಫೋಟೋ ತೆಗೆದೆ ಎಂಬುದು ನನಗೇ ಲೆಕ್ಕ ಇಲ್ಲ. ಕಾರಂತರು ತುಂಬಾ ಉಲ್ಲಾಸದಿಂದಿದ್ದರು. ಮಾತು ಮಾತಿಗೂ ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ನಮ್ಮ ಮನೆ ಹುಬ್ಬಳ್ಳಿಯಲ್ಲಿ, ಧಾರವಾಡದ ಹತ್ತಿರ ಎಂದು ಶಿಕ್ಷಕಿಯೊಬ್ಬರು ಹೇಳಿದಾಗ, “ನಾನು ಅನೇಕ ಬಾರಿ ಹುಬ್ಬಳ್ಳಿಗೆ ಹೋಗಿದ್ದೆ. ಆಗಲೂ ಅದು ಧಾರವಾಡದ ಹತ್ತಿರವೇ ಇತ್ತು” ಎಂದು ತಾವೂ ನಕ್ಕು ಎಲ್ಲರನ್ನೂ ನಗೆಗಡಲಲ್ಲಿ ಮುಳುಗಿಸಿದರು.

ಆನಂತರ ಶಾಲಾ ಮಕ್ಕಳ ಸಭೆಯಲ್ಲಿ ಭಾಗವಹಿಸಿ ಅವರ ಪ್ರಶ್ನೆಗಳನ್ನು ಉತ್ತರಿಸಿದರು. ಆಗ ಬೆಂಗಳೂರಿನಲ್ಲಿ ವಿಶ‍್ವ ಸುಂದರಿ ಸ್ಪರ್ಧೆ ಏರ್ಪಾಡಾಗಿದ್ದು ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ ಒಬ್ಬ ವಿದ್ಯಾರ್ಥಿ ಇದರ ಬಗ್ಗೆಯೇ ಪ್ರಶ್ನೆ ಕೇಳಿದ. “ಇವೆಲ್ಲ ದೊಡ್ಡವರ ವಿಷಯ, ನೀವು ನಿಮ್ಮದೇ ಅದ ಪ್ರಶ್ನೆ ಕೇಳಿ ಎಂದರು” ಕಾರಂತರು. ಹೀಗೆ ಬಹಳ ಸೊಗಸಾಗಿ ಕಾರ್ಯಕ್ರಮ ಮುಗಿಯಿತು. ಇದು ಅವರ ಬದುಕಿನಲ್ಲಿ ನಡೆದ ಕೊನೆಯ ಕಾರ್ಯಕ್ರಮಗಳಲ್ಲಿ ಒಂದು. ನಾನೂ ಅವರನ್ನು ನೋಡಿದ ಕೊನೆಯ ಕಾರ್ಯಕ್ರಮ.

ಕಾರಂತ ಯುಗಾಂತ

1997 ಡಿಸೆಂಬರ್ 2. ಕಾರಂತರಿಗೆ ಹುಷಾರಿಲ್ವಂತೆ, ಮಣಿಪಾಲ ಆಸ್ಪತ್ರೆಯಲ್ಲಿದ್ದಾರಂತೆ ಎಂಬ ಒಂದು ಸುದ್ದಿ ಕಾಳ್ಗಿಚ್ಚಿನಂತೆ ಹರಡಲಾರಂಭಿಸಿತು. ಅದಾದ ನಂತರ ಕೆಲವೇ ದಿನ. ಡಿಸೆಂಬರ್ 7 ರಂದು ಕಾರಂತರು ತೀರಿಕೊಂಡರಂತೆ ಎಂಬ ಸುದ್ದಿಯೂ ಅಪ್ಪಳಿಸಿತು. ಸುದ್ದಿಮಾಧ‍್ಯಮಗಳು, ಸಾರ್ವಜನಿಕ ಮಾತುಕತೆಗಳು ಎಲ್ಲೆಲ್ಲೂ ಕಾರಂತರದೇ ಸುದ್ದಿ.

ಡಿಸೆಂಬರ್ 8 ರ ಬೆಳಗಿನ ಹೊತ್ತು ಕ್ಯಾಮರಾ ಹಿಡಿದು ಸಾಲಿಗ್ರಾಮದತ್ತ ಧಾವಿಸಿದೆ. ಕಾರಂತರ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿತ್ತು. ಸಾವಿರ ಸಾವಿರ ಜನ ನಾಡಿನ ಮೂಲೆ ಮೂಲೆಯಿಂದ ಬಂದಿದ್ದರು. ಯು ಆರ್ ಅನಂತ ಮೂರ್ತಿ, ಕುಸುಮಾ ಸೊರಬ ಸಹಿತ ಸಾಹಿತ್ಯ ಮತ್ತು ಸಂಸ್ಕೃತಿ ವಲಯದ ಅನೇಕ ದಿಗ್ಗಜರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕಾರಂತರ ವಿಚಾರಗಳಿಗೆ ಅಪಚಾರವಾಗದ ರೀತಿಯಲ್ಲಿಯೇ ಎಲ್ಲವೂ ನಡೆದವು. ಸಾಹಿತಿ ಬೊಳುವಾರು ಮಹಮದ್ ಕುಂಞಿ ಚಿತೆಗೆ ಕಟ್ಟಿಗೆ ಇರಿಸಿದರು. ಶವಕ್ಕೆ ಹೆಗಲು ಕೊಟ್ಟರು ಕೂಡಾ. ಮಧ‍್ಯಾಹ್ನದ ಹೊತ್ತಿಗೆ ಕಾರಂತರ ದೇಹ ಪಂಚಭೂತಗಳಲ್ಲಿ ಲೀನವಾಯಿತು.

ಕಾರಂತರು ನಿಜವಾಗಿ ಏನು?

ಕಾರಂತರು ಬದುಕಿದ್ದ ಕಾಲದಲ್ಲಿ ನಾವು ಬದುಕಿದ್ದೆವು ಎನ್ನುವುದೇ ಒಂದು ನಂಬಲಾಗದಂತಹ ಹೆಮ್ಮೆ. ಕಾರಂತರು ಏನು? ಕಾದಂಬರಿಕಾರನೇ? ಪರಿಸರವಾದಿಯೇ? ವಿಜ್ಞಾನಿಯೇ? ಅವರು ಏನಲ್ಲ? ಅವರು ಕೆಲಸ ಮಾಡದ ಕ್ಷೇತ್ರ ಯಾವುದು? ಕಾದಂಬರಿ ಬರೆದರು, ವೈಚಾರಿಕ ಲೇಖನ ಬರೆದರು, ಸಿನಿಮಾ ಮಾಡಿದರು, ಗೀತನಾಟಕ ಬರೆದು ನಿರ್ದೇಶಿದರು, ನಟಿಸಿದರು, ಪರಿಸರದ ಪರ ಹೋರಾಡಿದರು, ಯಕ್ಷಗಾನದಲ್ಲಿ ಹೊಸ ಹೊಸ ಪ್ರಯೋಗ ಮಾಡಿದರು, ಯಕ್ಷಗಾನ ತಂಡ ಕಟ್ಟಿಕೊಂಡು ಜಗತ್ತು ಸುತ್ತಿದರು. ವಿಶ‍್ವವಿದ್ಯಾಲಯದಂತಹ ಒಂದು ಸಂಸ್ಥೆ ಮಾಡಬಹುದಾದುದನ್ನು ಏಕಾಂಗಿಯಾಗಿ ಮಾಡಿದರು.

ನೋಡಲು ಉಗ್ರ ಸ್ವರೂಪಿಯಾಗಿದ್ದ ಅವರೊಳಗೊಂದು ಮುಗ್ಧ ಮಗುವಿತ್ತು. ಕಾರಂತರು ಎಳೆಯರಿಗೆ ಕಾರಂತಜ್ಜ ಆಗಿದ್ದರು. ಅವರಿಗಾಗಿ ಬಾಲವನ ಕಟ್ಟಿದರು. ಅನೇಕ ಪುಸ್ತಕ ಬರೆದರು. ಅವರ ಪ್ರಶ್ನೆಗಳಿಗೆ ನಿಯತಕಾಲಿಕಗಳ ಮೂಲಕ ಮಾತ್ರವಲ್ಲ ವೈಯಕ್ತಿಕವಾಗಿಯೂ ಉತ್ತರಿಸಿದರು. ಮಕ್ಕಳಿಗೆ ಕನ್ನಡದಲ್ಲಿ ವಿಜ್ಞಾನ ಪುಸ್ತಕ ದೊರೆಯದ ಕಾಲದಲ್ಲಿ ತಾವೇ ಆ ಕೆಲಸ ಮಾಡಿದರು. ಪ್ರಾಣಿ ಪಕ್ಷಿಗಳ ಬಗ್ಗೆ ಸಚಿತ್ರ ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಹಿರಿಯರಿಗೆ ಗೆಳೆಯನಾಗಿ, ಗುರುವಾಗಿ, ಆಪತ್ಬಾಂಧವನಾಗಿ ಬದುಕಿದರು. ಅಸಹಾಯಕರಿಗೆ ಮನಿಯಾರ್ಡರ್ ಮೂಲಕ ಹಣ ಕಳುಹಿಸಿ ನೆರವಾದರು. ಪರಿಸರ ರಕ್ಷಣೆಯ ಪರ ಗಟ್ಟಿಯಾಗಿ ನಿಂತು ಸರಕಾರಿ ಅಕ್ರಮಗಳಿಗೆ ಅಡ್ಡಿಯಾದರು.

ಕಾರಂತರನ್ನು ಉಲ್ಲೇಖಿಸುವಾಗಲೆಲ್ಲ ಮುಖ್ಯವಾಗಿ ನೆನಪಾಗುವುದು ಅವರ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವ. ಅವರ ವೈಚಾರಿಕ ಆಲೋಚನೆಗಳು ಅವರ ‘ಬಾಳ್ವೆಯೇ ಬೆಳಕು’ ಕೃತಿಯಲ್ಲಿ ಘನೀಭೂತವಾಗಿವೆ. ಚೋಮನಿಗೆ ಒಂದು ತುಂಡು ಜಮೀನಿನ ಹಕ್ಕು ದೊರೆಯದೆ ಈ ದೇಶದ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲ ಎಂದು ಅರಿವಾಗಿ 1930 ರ ಕಾಲದಲ್ಲಿಯೇ ಅವರು ‘ಚೋಮನ ದುಡಿ’ ಬರೆದರು.

ಬೇರೆಯವರು ನಡೆದು ಸವೆದ ದಾರಿಯಲ್ಲಿ ಅವರು ನಡೆಯಲಿಲ್ಲ. ತಮ್ಮದೇ ಹೊಸ ದಾರಿ ಹುಡುಕಿಕೊಂಡರು. ಇಡೀ ಬದುಕನ್ನು ಕೊನೆಯ ಉಸಿರಿನವರೆಗೂ ಕ್ರಿಯಾಶೀಲತೆಯ ಮೂಲಕ ಜೀವಂತವಾಗಿ ಬದುಕಿದರು. ಈ ಎಲ್ಲ ಕಾರಣಕ್ಕೇ  ಶಿವರಾಮ ಕಾರಂತರು ಇಪ್ಪತ್ತನೇ ಶತಮಾನದ ಒಂದು ಅಚ್ಚರಿ; ನಾವೆಲ್ಲರೂ ಹೆಮ್ಮೆ ಪಡಬೇಕಾದ ಒಂದು ಬಹುಮುಖೀ ಬೆರಗು.

ಶ್ರೀನಿವಾಸ ಕಾರ್ಕಳ

ಮಂಗಳೂರು

ಇದನ್ನೂ ಓದಿ- ಗಾಂಧಿ ಮತ್ತು ಸನಾತನ ಧರ್ಮ:

Related Articles

ಇತ್ತೀಚಿನ ಸುದ್ದಿಗಳು