Sunday, June 16, 2024

ಸತ್ಯ | ನ್ಯಾಯ |ಧರ್ಮ

ನೆನಪು | ಸೌಜನ್ಯ ನ್ಯಾಯ

ಧರ್ಮಸ್ಥಳದ ಸೌಜನ್ಯಾಳ ಅತ್ಯಾಚಾರ ಕೊಲೆಗೆ 11 ವರ್ಷಗಳು ಸಂದವು. ನಿಜವಾದ ಆರೋಪಿಗಳು ಯಾರೆಂಬುದು ಇನ್ನು ಕೂಡಾ ನಿಗೂಢವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ, ಇದೀಗ ಆರೋಪಿಗಳ ಪತ್ತೆಗೆ ಮತ್ತೆ ಹೋರಾಟ ಬಿರುಸುಗೊಂಡಿದೆ. ಸೌಜನ್ಯಾ ಪರ ಹೋರಾಟಗಾರರು ಒಂದು ಕಡೆ ಅಪರಾಧಿಗಳನ್ನು ಪತ್ತೆ ಹಚ್ಚಿ ಎನ್ನುತ್ತಲೇ ಇಂಥವರೇ ಅಪರಾಧಿಗಳು ಎಂದು ತೀರ್ಮಾನಿಸಿ ಬಹಿರಂಗವಾಗಿ ಹೇಳುತ್ತಿರುವುದೂ ಸರಿಯಲ್ಲ. ಹಾಗಿದ್ದರೆ ಮತ್ತೆ ತನಿಖೆ ಯಾಕೆ? ಮತ್ತೊಂದು ಕಡೆ ಈ ಹೋರಾಟ ಧರ್ಮ ರಕ್ಷಣೆಗೆ ಎಂಬ ಅನಪೇಕ್ಷಿತ ಮಾತುಗಳನ್ನೂ ಆಡಲಾಗುತ್ತಿದೆ. ಇದೆಲ್ಲ ಹೋರಾಟದ ತೀವ್ರತೆಯನ್ನು ತಗ್ಗಿಸಲು, ನಿಜವಾದ ಅಪರಾಧಿಗಳು ಬಚಾವಾಗಲು ಕಾರಣವಾಗುತ್ತವೆಶ್ಯಾಮರಾಜ್‌ ಪಟ್ರಮೆ, ಹೋರಾಟಗಾರರು

ಕರ್ನಾಟಕದ ಮಟ್ಟಿಗೆ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಇಷ್ಟೊಂದು ಸದಾ ಸುದ್ದಿಯಾಗಿ ಜೀವಂತ ಇರುವುದು ಬಹುಶಃ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವೇ ಆಗಿದೆ.

ಧರ್ಮಸ್ಥಳ ಗ್ರಾಮದ ಚಂದಪ್ಪ, ಕುಸುಮಾವತಿಯವರ ಎರಡನೆಯ ಮಗಳು, 17 ವರ್ಷ ವಯಸ್ಸಿನ ಸೌಜನ್ಯ ಉಜಿರೆ SDM ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿ, ಕಳೆದ 2012 ಅಕ್ಟೋಬರ್ 9 ರ ಸಂಜೆಗೆ ಕಾಣೆಯಾಗಿ, ಮರುದಿನ ಶವವಾಗಿ ಸಿಕ್ಕಿದ್ದಳು. ಘಟನೆಗೆ 11 ವರ್ಷಗಳಾದರೂ, ಪೊಲೀಸ್ ತನಿಖೆ, ಸಿಐಡಿ ತನಿಖೆ, ಸಿಬಿಐ ತನಿಖೆಗಳಾದರೂ ಅಪರಾಧಿಗಳ ಪತ್ತೆ ಇನ್ನೂ ಆಗಿರುವುದಿಲ್ಲ. ಪೊಲೀಸರಿಂದ ಆರೋಪಿ ಎಂದು ಬಂಧಿಸಲ್ಪಟ್ಟಿದ್ದ ಸಂತೋಷ್ ರಾವ್ ನಿರಪರಾಧಿ ಅಂತಾನೂ ಅಲ್ಲ, ಆರೋಪಿ ಆಗಲೂ ಸಾಧ್ಯವಿಲ್ಲ ಎಂದು ಸಿಬಿಐ ನ್ಯಾಯಾಲಯ ಆತನನ್ನು ಬಿಡುಗಡೆ ಮಾಡಿದೆ. ಇದಕ್ಕೆ ತನಿಖಾಧಿಕಾರಿಗಳ ವೈಫಲ್ಯ ಕಾರಣ ಎಂದು ಒಂದು ಕಡೆಯಿಂದ, ಪ್ರಾಸಿಕ್ಯೂಶನ್ ವೈಫಲ್ಯ ಎಂದು ಇನ್ನೊಂದು ಕಡೆಯಿಂದ ವಾದ ಸಂಘರ್ಷ ಸುರುವಾಗಿದೆ.  ಹಾಗಾದರೆ ನಿಜವಾದ ಅಪರಾಧಿಗಳು ಯಾರು ಎಂಬ ಬಗ್ಗೆ ಸರಿಯಾದ ತನಿಖೆ ನಡೆಸಿ ಪತ್ತೆ ಹಚ್ಚಬೇಕಾದುದು ಸರಕಾರಗಳ ಕರ್ತವ್ಯವಾಗಿದೆ.

2012 ರಲ್ಲಿ ಸೌಜನ್ಯ ಕೊಲೆಯಾದ ಮರುದಿನದಿಂದಲೇ ಯುವಜನ ಸಂಘಟನೆ ಡಿವೈಎಫ್ಐ, ಮಹಿಳಾ ಸಂಘಟನೆ ಜೆಎಮ್ಎಸ್, ವಿದ್ಯಾರ್ಥಿ ಸಂಘಟನೆ ಎಸ್ ಎಫ್ ಐ ಪ್ರಕರಣದ ಸೂಕ್ತ ತನಿಖೆಗಾಗಿ ಹೋರಾಟ ಪ್ರಾರಂಭಿಸಿತ್ತು. ಒಂದು ವರ್ಷದ ನಿರಂತರ ಹೋರಾಟದ ಪರಿಣಾಮವಾಗಿ, ಆಗಿನ ಶಾಸಕರೂ ಈ ಬಗ್ಗೆ ಸಹಮತ, ಕಾಳಜಿ ವ್ಯಕ್ತಪಡಿಸಿ, ವಿಧಾನ ಸಭೆಯಲ್ಲಿ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸಲು ಒತ್ತಾಯಿಸಿ, ಒಪ್ಪಿಸುವಲ್ಲಿ ಸಫಲರಾಗಿದ್ದರು. ಹಸ್ತಾಂತರಿಸಲು ಸರಕಾರವನ್ನು ಒಪ್ಪಿಸಲು ವಿಫಲನಾದಲ್ಲಿ ಬೆಳ್ತಂಗಡಿಗೆ ಮರಳುವುದಿಲ್ಲ ಎಂಬ ಮಾತು ಹೇಳಿಯೇ ಬೆಂಗಳೂರಿಗೆ ಅಧಿವೇಶನಕ್ಕೆ ಬಂಗೇರರು ಹೋಗಿದ್ದಾಗಿತ್ತು. ವಸಂತ ಬಂಗೇರರ ಹಠಬಿಡದ ಒತ್ತಡಕ್ಕೆ ಮಣಿದಿದ್ದ ಆಗಿನ ಸರಕಾರ ಪ್ರಕರಣವನ್ನು 2013, ನವೆಂಬರ್ 6 ರಂದು ಸಿಬಿಐ ಗೆ ಹಸ್ತಾಂತರಿಸುವ ತೀರ್ಮಾನವನ್ನು  ಕೈಗೊಂಡಿತ್ತು. ಆದರೂ ಫಲಿತಾಂಶದಲ್ಲಿ ನ್ಯಾಯ ಸಿಗಲೇ ಇಲ್ಲ. ಇದಕ್ಕೂ ಕಾರಣಗಳನ್ನು ಜನರೇ ಆಡಿಕೊಳ್ಳುತ್ತಿದ್ದಾರೆ. ಯುಪಿಎ ಸರಕಾರ ನೇಮಿಸಿದ್ದ CBI ಅಧಿಕಾರಿಗಳು ಉತ್ತಮ ರೀತಿಯಲ್ಲಿ ತನಿಖೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಚುನಾವಣೆ ನಡೆದು ಕೇಂದ್ರ ಸರಕಾರ ಬದಲಾಗಿತ್ತು. ಹೊಸ ಸರಕಾರ ಈ ಅಧಿಕಾರಿಗಳನ್ನು ವರ್ಗಾಯಿಸಿ ಬೇರೆ ಅಧಿಕಾರಿಗಳನ್ನು ನೇಮಿಸಿತ್ತು. ಇದು ನ್ಯಾಯ ಸಿಗದಿರಲು ಒಂದು ಕಾರಣ ಎಂದೂ  ಜನರಲ್ಲಿ ಅನುಮಾನದ ಕಿಡಿ ಮೂಡಿದೆ.

ಹಾಗಾದರೆ ಇದು ಅಷ್ಟೊಂದು ಜಟಿಲವೇ ? ಅಥವಾ ನಮ್ಮ ಪೊಲೀಸ್ ವ್ಯವಸ್ಥೆ ಅಷ್ಟೊಂದು ದುರ್ಬಲವೇ ? ಅಥವಾ ಅಪರಾಧಿಗಳು ಅಷ್ಟೊಂದು ಪ್ರಬಲರೇ, ಬುದ್ಧಿವಂತರೇ ? ಈ ಪ್ರಶ್ನೆಗಳು ಸಹಜವಾಗಿ ಜನಮಾನಸದಲ್ಲಿ ಮೂಡುತ್ತಿದೆ. ಕೆಲವರಂತೂ ನಮ್ಮ ಸಂವಿಧಾನ, ಕಾನೂನುಗಳನ್ನೇ ಅನುಮಾನಿಸುವ ಹಂತಕ್ಕೂ ಹೋಗಿದ್ದಾರೆ.  ಈ ತನಿಖಾ ವೈಫಲ್ಯದ ಪರಿಣಾಮವಾಗಿ ಜನರ ಮನಸಿನಲ್ಲಿ ಯಾರ ಮೇಲೆಲ್ಲಾ ಅನುಮಾನಗಳಿದ್ದವೋ ಆ ಅನುಮಾನಗಳು ಮತ್ತಷ್ಟು ಗಟ್ಟಿಯಾಗುವಂತಾಗಿದೆ. ಆ ಅನುಮಾನಿತರು ಧರ್ಮಸ್ಥಳ ಕ್ಷೇತ್ರದಲ್ಲಿ ದುಡಿಯುವವರಾಗಿರುವುದರಿಂದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ತಮ್ಮ ಪ್ರಭಾವ ಬೀರಿ ಇದನ್ನು ಸರಿಯಾಗಿ ತನಿಖೆ ಆಗದಂತೆ ಮಾಡಿದ್ದಾರೆ, ಬೇರೆ ಯಾರಿಗೂ ಇಂಥಹಾ ಪ್ರಕರಣಗಳಲ್ಲಿ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವಿಲ್ಲ ಎಂಬ ಸಂಶಯಗಳು ಸಹಜವಾಗಿ ಜನರಲ್ಲಿ ಮೂಡಿದೆ. ಈ ಅನುಮಾನಗಳು ನಿಜವೋ ಸುಳ್ಳೋ ತನಿಖೆಯಿಂದಲೇ ಗೊತ್ತಾಗಬೇಕಿದೆ. ಆದರೆ ಸರಕಾರ ಮರು ತನಿಖೆಗೂ ಮುಂದಾಗುತ್ತಿಲ್ಲ. ಇದು ಅನುಮಾನವನ್ನು ಮತ್ತೂ ಗಟ್ಟಿಗೊಳಿಸಲು ಕಾರಣವಾಗಿದೆ.  ಯಾವುದೇ ಪಕ್ಷದ ಸರಕಾರವಿದ್ದರೂ ಆ ಸರಕಾರದ ಮೇಲೆ ಪ್ರಭಾವ ಬೀರಲು ವೀರೇಂದ್ರ ಹೆಗ್ಗಡೆಯವರಿಗೆ ಸಾಮರ್ಥ್ಯವಿದೆ ಎಂಬುದೂ ನಿಜವೆ. ಆದರೆ ಪ್ರಭಾವ ಬೀರಲಾಗಿದೆಯೇ ಎಂಬುದು ಜನರಲ್ಲಿ ಮೂಡಿರುವ ಸಂಶಯ, ಸತ್ಯವು ತನಿಖೆಯಿಂದಲೇ ಗೊತ್ತಾಗಬೇಕಷ್ಟೆ.

ರಾಜ್ಯದ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಈ ಕುರಿತಾಗಿ ಮರುತನಿಖೆಗೆ ಆಗ್ರಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಸಹಿತ ವಿವಿಧ ಜಿಲ್ಲೆಗಳಲ್ಲಿ ಮರುತನಿಖೆಗೆ ಒತ್ತಾಯಿಸಿ ಧರಣಿ ನಡೆಸಿದ್ದವು. ಸೌಜನ್ಯಳ ತಾಲೂಕಾದ ಬೆಳ್ತಂಗಡಿಯಲ್ಲಿ ಚಲೋ ಬೆಳ್ತಂಗಡಿ ಧರಣಿ ಕಾರ್ಯಕ್ರಮ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮುಂದಿನ ಕಾರ್ಯತಂತ್ರಕ್ಕಾಗಿ ಸರಕಾರದ ತೀರ್ಮಾನಕ್ಕಾಗಿ ಕಾಯುತ್ತಿವೆ. ಮೈಸೂರಿನ ಒಡನಾಡಿ ಸಂಸ್ಥೆ ಕೂಡಾ ತನ್ನದೇ ಆದ ರೀತಿಯಲ್ಲಿ ಹೋರಾಟ ಮಾಡುತ್ತಿದೆ. ಮತ್ತೊಂದು ಕಡೆ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಾದ್ಯಂತ ಪ್ರಕರಣದ ಬಗ್ಗೆ ನ್ಯಾಯ ಒದಗಿಸುವ ಕುರಿತಾಗಿ ಹೋರಾಟದ ಸಭೆಗಳನ್ನು ನಡೆಸಲಾಗುತ್ತಿದೆ. ಈ ಸಭೆಗಳಲ್ಲಿ ನೇರವಾಗಿ ಅನುಮಾನಿತರ ಹೆಸರುಗಳನ್ನು, ಅವರನ್ನು ರಕ್ಷಿಸುತ್ತಿರುವವರೆಂಬ ಅನುಮಾನಿತರ ಹೆಸರುಗಳನ್ನೂ ಒತ್ತಿ ಒತ್ತಿ ಹೇಳಲಾಗುತ್ತಿದೆ. ಕೆಲವು ಪ್ರಗತಿಪರ ಚಿಂತಕರು ಪ್ರತ್ಯೇಕವಾಗಿ ತಮ್ಮದೇ ರೀತಿಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.  ಇತ್ತ ಹೋರಾಟದ ಕಣದಲ್ಲಿ ತಾವಿಲ್ಲ ಎಂಬ ಆರೋಪಕ್ಕೆ ಗುರಿಯಾಗುತ್ತೇವೆ ಎಂಬ ಆತಂಕದಲ್ಲಿ ಸಂಘಪರಿವಾರದ ಕೆಲವು ಸಂಘಟನೆಗಳು ದೈವಸ್ಥಾನ, ದೇವಸ್ಥಾನಗಳಲ್ಲಿ ಪ್ರಾರ್ಥನೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಆದರೆ ಅದು ಸೌಜನ್ಯ ನ್ಯಾಯಕ್ಕಾಗಿ ಎನ್ನುವುದಕ್ಕಿಂತ ಧರ್ಮಸ್ಥಳ ಕ್ಷೇತ್ರದ ಮಾನ ರಕ್ಷಿಸಲು ಹೊರಟಂತೆ ಕಂಡುಬಂದಿತ್ತು ಅಷ್ಟೆ.

ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಬೆಂಬಲಿಗರು, ಹೆಗ್ಗಡೆಯವರ ಮೇಲಿನ ಆರೋಪಗಳನ್ನು ನಿರಾಕರಿಸಲು ಮತ್ತು ಅವರ ಪರವಾಗಿ ಜನಾಭಿಪ್ರಾಯ ಕ್ರೋಢೀಕರಿಸಲು ಸಭೆಗಳನ್ನು ಆಯೋಜಿಸಲು ಪ್ರಾರಂಭಿಸಿದ್ದರೂ, ಉಜಿರೆಯಲ್ಲಿ ನಡೆದ ಪ್ರಥಮ ಸಭೆಯಲ್ಲಿಯೇ ಎದ್ದ ಗೊಂದಲದಿಂದಾಗಿ ಸಭೆಯ ಆಯೋಜನೆಯನ್ನು ನಿಲ್ಲಿಸಿದ್ದರು. ಮತ್ತೊಂದು ಕಡೆಯಿಂದ ನ್ಯಾಯಾಲಯದ ಮೊರೆ ಹೋಗಿ ಧರ್ಮಸ್ಥಳದ ಬಗ್ಗೆ , ಹೆಗ್ಗಡೆ  ಕುಟುಂಬದ ಬಗ್ಗೆ ಆರೋಪ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದಾರೆ.

ಇನ್ನು ಕನ್ನಡದ ಸ್ಯಾಟ್ ಲೈಟ್ ಚಾನಲ್ ಪವರ್ ಟೀವಿ, ಕೆಲವು ಯೂಟ್ಯೂಬರ್ಸ್ ಧರ್ಮಸ್ಥಳದ ಮೇಲಿನ ಆರೋಪ ಅನುಮಾನಗಳನ್ನು ತಿಳಿಗೊಳಿಸುವ ಕೆಲಸದಲ್ಲಿ ಮುಳುಗಿದ್ದಾರೆ. ಬಹಳಷ್ಟು ಯೂಟ್ಯೂಬರ್ಸ್ ಸೌಜನ್ಯ ಪರ ಹೋರಾಟಗಳ ಪರವಾಗಿ ವರದಿ ಮಾಡುತ್ತಿದ್ದಾರೆ. ಎಡಪಕ್ಷಗಳನ್ನು ಮತ್ತು ಕೆ ಆರ್ ಎಸ್ ಪಕ್ಷವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಪಕ್ಷಗಳು ಇಂದು ಸೌಜನ್ಯ ನ್ಯಾಯ ಪರ ಧ್ವನಿ ಎತ್ತದಿರುವುದೂ ಕೂಡ (ಸೌಜನ್ಯ ನ್ಯಾಯದ ಹೆಸರಿನಲ್ಲಿ ಬಿಜೆಪಿ ಒಮ್ಮೆ ಧರ್ಮಸ್ಥಳದ ಹೆಸರು ರಕ್ಷಣೆಗೆ ಇಳಿದಿತ್ತು, ಅದು ಬೇರೆ ವಿಷಯ) ಧರ್ಮಸ್ಥಳದ  ಅನುಮಾನಗಳನ್ನು ಹೆಚ್ಚಿಸಲು ಕಾರಣವಾಗಿದೆ. ಒಟ್ಟಿನಲ್ಲಿ ಈ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವು ಕರ್ನಾಟಕದಲ್ಲಿ ಇದೇ ಪ್ರಥಮಬಾರಿಗೆ ಇಷ್ಟೊಂದು ಗುಲ್ಲೆಬ್ಬಿಸಿರುವ ಪ್ರಕರಣವಾಗಿದೆ.

ಹಾಗಾದರೆ ಜನರ ಅನುಮಾನಗಳು ಸುಳ್ಳೇ ? ಸತ್ಯವೇ ? ಧರ್ಮಸ್ಥಳದ ಪರವಾದ ಹೇಳಿಕೆಗಳು ಸುಳ್ಳೇ ? ಸತ್ಯವೇ ? ಉತ್ತರ ಸಿಗುವುದು ಸರಿಯಾದ ಮರುತನಿಖೆ ಆದಾಗ ಮಾತ್ರ. ಆದ್ದರಿಂದ ಸರಕಾರದ ವಿಳಂಬ ನೀತಿಯೂ ಈ ಆರೋಪ ಪ್ರತ್ಯಾರೋಪ ಸಮರ್ಥನೆಗಳ ಮೇಲಾಟಕ್ಕೆ ಕಾರಣವಾಗಿದೆ ಎಂದೇ ಹೇಳಬೇಕು.

ಹಾಗಾದರೆ  ಸರಿಯಾದ ತನಿಖೆ ಎಂದರೆ ಹೇಗೇ ? ಜನರು ಅನುಮಾನಿಸಿದವರ ತನಿಖೆ ಮಾಡುವುದೇ, ಸಂತೋಷ್ ರಾವ್ ನನ್ನೇ ಮತ್ತೆ ಮರುತನಿಖೆ ಮಾಡುವುದೇ ? ಧರ್ಮಸ್ಥಳ ಕ್ಷೇತ್ರಾಧಿಕಾರಿಗಳಿಗೆ ಕ್ಲೀನ್ ಚಿಟ್ ಕೊಡುವುದೇ ? ಅವರು ಆರೋಪಿಸುವ ಹೋರಾಟಗಾರರನ್ನು ತನಿಖೆ ಮಾಡುವುದೇ ? ಯಾವುದೂ ಅಲ್ಲ. ಸೌಜನ್ಯ ಕಾಣೆ ಆದಾಗಿನಿಂದಲೂ ಯಾವುದರ ತನಿಖೆ ಮಾಡಿಲ್ಲ, ತ‌ನಿಖೆ ಸರಿಯಾಗಿಲ್ಲ ಎಂದೆಲ್ಲ ಜನರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೋ ಆ ಅನುಮಾನಗಳಿಗೆ ಸಮರ್ಪಕವಾಗಿ ವೈಜ್ಞಾನಿಕವಾಗಿ ಆಧಾರ ಸಹಿತ ಉತ್ತರ ಸಿಗುವ ರೀತಿಯ ತನಿಖೆ ಆಗಬೇಕಿದೆ. ನೂರಾರು ಅನುಮಾನಗಳ ಪ್ರಶ್ನೆಗಳನ್ನು ಇಡೀ ಪ್ರಕ್ರಿಯೆಯ ಬಗ್ಗೆ ಜನರು ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಸಿಕ್ಕಿದಾಗ ಮತ್ತು ಆ ಉತ್ತರಗಳು ತನಿಖಾ ಪ್ರಕ್ರಿಯೆಯ ಅಗತ್ಯಗಳಿಗೆ ಪೂರಕವಾಗಿ ಬಳಕೆಯಾದಾಗ ನಿಜವಾದ ಅಪರಾಧಿಗಳು ಸಿಕ್ಕಿಯೇ ಸಿಕ್ಕುತ್ತಾರೆ. ಸಾಕ್ಷ್ಯಗಳ ನಾಶ ಆಗಿರಲೂ ಬಹುದು. ಆದರೆ ಸಾಕ್ಷ್ಯ ನಾಶ ಮಾಡಿದ್ದರ ಸಾಕ್ಷ್ಯಗಳು ಸಿಗುತ್ತವೆ. ಇವುಗಳೂ ತನಿಖೆಗೆ ಪೂರಕವೇ ಆಗಿವೆ.

ಜನರ ಹೋರಾಟಗಳು ನ್ಯಾಯ ಕೊಡಿಸುವ ಹೊಣೆಗಾರಿಕೆ ಇರುವ ಸರಕಾರಗಳ ವಿರುದ್ದ ನಡೆದರೆ ಮಾತ್ರ ಇಲ್ಲಿ ನ್ಯಾಯ ನಿರೀಕ್ಷಿಸಬಹುದು. 11 ವರ್ಷಗಳಲ್ಲ, 22 ವರ್ಷ ಕಳೆದರೂ ಅಪರಾಧಿಗಳ ಪತ್ತೆ ಹಚ್ಚುವಷ್ಟು ಸಮರ್ಥರಿದ್ದಾರೆ ನಮ್ಮ ಪೋಲೀಸ್ ಅಧಿಕಾರಿಗಳು, ತನಿಖಾಧಿಕಾರಿಗಳು. ಆದರೆ ಆ ಸಾಮರ್ಥ್ಯದ ಬಳಕೆ ಆಗಿಲ್ಲ ಎಂಬುದು ಸ್ಪಷ್ಟ. ಇದು ಕೂಡಾ ಜನರ ಆಕ್ರೋಶಕ್ಕೆ, ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹಾಗಿರುವಾಗ ಈ ಸಾಮರ್ಥ್ಯ ಬಳಕೆ ಆಗದಿರುವುದು ಉದ್ದೇಶಪೂರ್ವಕವೇ, ಬೇಜವಾಬ್ದಾರಿಯೇ ಎಂಬಿತ್ಯಾದಿ ಅಂಶಗಳ ತನಿಖೆಯೂ ನೈಜ ಅಪರಾಧಿಗಳ ಪತ್ತೆಗೆ ನೆರವಾಗುತ್ತವೆ.  ನಮ್ಮ ಸಂವಿಧಾನವಾಗಲಿ, ಕಾನೂನಾಗಲಿ ವೈಫಲ್ಯಕ್ಕೆ ಕಾರಣವಲ್ಲ, ಕಾನೂನು ಜಾರಿಯಲ್ಲಿನ ಲೋಪವೇ ವೈಫಲ್ಯಕ್ಕೆ ಕಾರಣವಾಗಿದೆ.

ಹೋರಾಟಗಾರರಲ್ಲಿ ಕೆಲವರು ಆರೋಪಿಸುವಂತೆ ಧರ್ಮಸ್ಥಳದ ಆಡಳಿತಕ್ಕೆ ಸಂಬಂಧಿಸಿದವರ ಕೃತ್ಯ ಹೌದೋ ಅಲ್ಲವೋ ತನಿಖೆಯಿಂದಲೇ ಗೊತ್ತಾಗಬೇಕಷ್ಟೆ. ಆದರೆ ಈಗ ಸರಕಾರದ ವಿಳಂಬ ನೀತಿಯನ್ನು ನೋಡಿದರೆ ಹೋರಾಟಗಾರರಿಂದ ಹೆಚ್ಚು ಅನುಮಾನ ಅವರ ಮೇಲೆ ಸರಕಾರಕ್ಕೇ ಇದೆಯೇ, ಅದಕ್ಕಾಗಿ ಹಿಂದೇಟು ಹಾಕುತ್ತಿರುವುದೇ ಎಂಬ ಪ್ರಶ್ನೆಯೂ ಮೂಡುತ್ತಿದೆ.

ಸದ್ಯ ಪ್ರಕರಣ ಕೇಂದ್ರ ಸರಕಾರದ ಕೈಯಲ್ಲಿದೆ. ಒಂದು ಹಂತ ಮುಗಿದಿದೆ. ನ್ಯಾಯ ಸಿಗದಿರುವ ಕಾರಣ ಮರುತನಿಖೆ ಮಾಡಲು ಅವಕಾಶವಿದೆ. ಸಿಬಿಐ ನ್ಯಾಯಾಲಯ ಗುರುತಿಸಿರುವ ತನಿಖಾ ಲೋಪಗಳ ಬಗ್ಗೆಯೇ ತನಿಖೆ ಮಾಡಬಹುದು. ಆದರೆ ಕೇಂದ್ರ ಸರಕಾರ ಈ ಬಗ್ಗೆ ಈವರೆಗೂ ಚಕಾರ ಎತ್ತಿಲ್ಲ. ಅವರ ಪಕ್ಷದ ರಾಜ್ಯದ ನಾಯಕರೇ ಇತ್ತ ಸಿದ್ದರಾಮಯ್ಯ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ – ಕೇಂದ್ರದಿಂದ ಮರಳಿ ಪಡೆದು ಪ್ರತ್ಯೇಕ ವಿಶೇಷ ತನಿಖಾ ದಳ ರಚಿಸಿ ಹೊಸ ತನಿಖೆ ಮಾಡಿಸಿ ಎಂದು. ಸೌಜನ್ಯ ನ್ಯಾಯ ಪರ ಹೋರಾಟದ ಕಣದಲ್ಲಿರುವ ಎಲ್ಲರೂ ಒತ್ತಾಯಿಸುತ್ತಿರುವುದು ರಾಜ್ಯ ಸರಕಾರವನ್ನೇ ಆಗಿದೆ. ಇದರಿಂದ ಒಂದಂತೂ ಸ್ಪಷ್ಟವಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆಯ ಮೇಲೆ ಜನ ವಿಶ್ವಾಸ ಕಳಕೊಳ್ಳುವಂತಾಗಿದೆ ಎಂಬುದು. ಇದು ಆಗಬಾರದಿತ್ತು, ಆಗಿದೆ. ಮತ್ತೆ ತನ್ನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸುವ ಜವಾಬ್ದಾರಿ ಸಿಬಿಐ ಮೇಲೆ, ಕೇಂದ್ರ ಸರಕಾರದ ಮೇಲೆ ಇದೆ.

ಈ ತನಕದ ಪ್ರಕ್ರಿಯೆಗಳನ್ನು ಗಮನಿಸುತ್ತಲೇ ಬಂದ ಜನತೆ ಈಗ ಆಗ್ರಹಿಸುತ್ತಿರುವುದು ಕೇವಲ SIT ತನಿಖೆ ಅಲ್ಲ,  ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಈ SIT ತನಿಖೆ ಆಗಬೇಕು ಎಂಬುದು. ಇದು ಕೂಡಾ ಜನರಿಗೆ ಶಾಸಕಾಂಗದ ಮೇಲೆ, ಕಾರ್ಯಾಂಗದ ಮೇಲೆ ವಿಶ್ವಾಸ ಹೋಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಹೋರಾಟಗಾರರೂ ಒಂದು ಕಡೆ ಅಪರಾಧಿಗಳನ್ನು ಪತ್ತೆ ಹಚ್ಚಿ ಎನ್ನುತ್ತಲೇ ಇಂಥವರೇ ಅಪರಾಧಿಗಳು ಎಂದು ತೀರ್ಮಾನಿಸಿ ಬಹಿರಂಗವಾಗಿ ಹೇಳುತ್ತಿರುವುದೂ ಸರಿಯಲ್ಲ. ಹಾಗಿದ್ದರೆ ಮತ್ತೆ ತನಿಖೆ ಯಾಕೆ ? ಮತ್ತೊಂದು ಕಡೆ ಈ ಹೋರಾಟ ಧರ್ಮ ರಕ್ಷಣೆಗೆ ಎಂಬ ಅನಪೇಕ್ಷಿತ ಮಾತುಗಳನ್ನೂ ಆಡಲಾಗುತ್ತಿದೆ. ಇದೆಲ್ಲ ಹೋರಾಟದ ತೀವ್ರತೆಯನ್ನು ತಗ್ಗಿಸಲು, ನಿಜವಾದ ಅಪರಾಧಿಗಳು ಬಚಾವಾಗಲು ಕಾರಣವಾಗುತ್ತವೆ.

ಒಟ್ಟಿ‌ನಲ್ಲಿ, ಜನ ನಿರೀಕ್ಷೆ ಇಟ್ಟಿರುವ ರಾಜ್ಯ ಸರಕಾರ ತನ್ನ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕಿದೆ. ತನಿಖಾ ಸಂಸ್ಥೆಗಳೂ ತಮ್ಮ ಕಾರ್ಯದಕ್ಷತೆಯನ್ನು ಮರುಸ್ಥಾಪಿಸಬೇಕಿದೆ. ಒಬ್ಬಳು ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಕೊಲೆ ಆಗಿರುವ ಕಾರಣ ವಿದ್ಯಾರ್ಥಿ ಸಮೂಹವೇ ಎಚ್ಚೆತ್ತುಕೊಂಡು ನ್ಯಾಯಕ್ಕಾಗಿ ಸ್ವರ ಎತ್ತಬೇಕಿದೆ. ವಿಶೇಷ ತನಿಖಾದಳ ರಚಿಸಿ, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರ ಸುಪರ್ಧಿಯಲ್ಲಿ ಈ ಪ್ರಕರಣವನ್ನು ಹೊಸದಾಗಿ ತನಿಖೆ ಮಾಡಿಸಲು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ರಾಜ್ಯ ಸರಕಾರ ಮುಂದಾಗಬೇಕಿದೆ. ಕೇಂದ್ರ ಸರಕಾರ ಒಂದೋ ತಾನೇ ಸಿಬಿಐ ನ ಪರಿಣತ ಅಧಿಕಾರಿಗಳ ವಿಶೇಷ ತಂಡದ ಮೂಲಕ ಮರು ತನಿಖೆ ಮಾಡಿಸಲಿ. ಇಲ್ಲವೇ ತಕ್ಷಣ ತಮ್ಮ ಜವಾಬ್ದಾರಿ ಆಯಿತು ಎಂದು ರಾಜ್ಯ ಸರಕಾರಕ್ಕೆ ಕೇಸನ್ನು ಮರಳಿಸಲಿ.

ಈ ಪ್ರಕರಣದ ತನಿಖೆಯ ಜೊತೆಗೆ ಜನತೆ 2012 ಕ್ಕೂ ಹಿಂದಿನ 10 ವರ್ಷಗಳ 462 ಅಸಹಜ ಸಾವುಗಳ ಪ್ರಕರಣಗಳನ್ನೂ ತನಿಖೆಗಾಗಿ ಆಗ್ರಹಿಸುತ್ತಿದೆ. ಸೌಜನ್ಯ ಕೊಲೆಯ 20 ದಿನಗಳ ಹಿಂದೆ ಆನೆ ಮಾವುತ ನಾರಾಯಣ ಮತ್ತವರ ತಂಗಿಯ ಅನುಮಾನಾಸ್ಪದ ಸಾವು ಸಂಭವಿಸಿದೆ. ಇಬ್ಬರನ್ನೂ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದಂತೆ ಕಂಡುಬಂದರೂ ಅದನ್ನು ಪತ್ತೆಯಾಗದ ಪ್ರಕರಣ ಎಂದು ಪೋಲೀಸರು ದಾಖಲಿಸಿ ಕೈ ತೊಳೆದುಕೊಂಡಿರುವುದಕ್ಕೆ ಕಾರಣ ಪತ್ತೆಯಾಗಬೇಕಿದೆ.  ಕಳೆದ ಸೆಪ್ಟೆಂಬರ್ 3 ರಂದು ಮತ್ತೊಂದು ಅನುಮಾನಾಸ್ಪದ ಸಾವು ಸಂಭವಿಸಿದೆ. ಯಾರೇ ನೋಡಿದರೂ ಕೊಲೆ ಎಂದೇ ಭಾಸವಾಗುವ ರೀತಿಯಲ್ಲಿ ಶವ ಸಿಕ್ಕಿದ್ದರೂ ಆತ್ಮಹತ್ಯೆ ಎಂದು ದಾಖಲಿಸಿ ಪ್ರಕರಣ ಮುಕ್ತಾಯ ಗೊಳಿಸಲಾಗಿದೆ. ಈ ಎಲ್ಲಾ ಪ್ರಕರಣಗಳ ತನಿಖೆಯೂ ಅತೀ ಅಗತ್ಯವಾಗಿ ಆಗಬೇಕಿದೆ. ಸರಿಯಾದ ತನಿಖೆ ಆದರೆ, ಆಗ ಇಡೀ ಸಮಸ್ಯೆಯ ಸವಾಲಿನ ಮೂಲ ಪತ್ತೆಯಾಗಲಿದೆ.

ಸರಕಾರಗಳ ನ್ಯಾಯ ಪ್ರಕ್ರಿಯೆಯ ನಿರೀಕ್ಷೆಯಲ್ಲಿ….

ಶ್ಯಾಮರಾಜ್‌ ಪಟ್ರಮೆ

ಹೋರಾಟಗಾರರು

ಇದನ್ನೂ ಓದಿ- ನೆನಪು | ಶಿವರಾಮ ಕಾರಂತ ಎಂಬ ಬಹುಮುಖೀ ಬೆರಗು

                          

Related Articles

ಇತ್ತೀಚಿನ ಸುದ್ದಿಗಳು