ಬಿಎಂಆರ್ಸಿಎಲ್ ಹಳದಿ ಲೈನ್ ಆರಂಭಿಸಲು ಮತ್ತಷ್ಟು ವಿಳಂಬವಾಗಲಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಈಗ ಬೆಂಗಳೂರಿನಲ್ಲಿ ಬಿಎಂಆರ್ಸಿಎಲ್ ಶಾಂತಿನಗರ ಪ್ರಧಾನ ಕಛೇರಿ ಎದುರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಅನೇಕ ನಾಗರೀಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ತಮ್ಮ ಜಾಲತಾಣದ ಖಾತೆಯ ಮೂಲಕ ಪ್ರತಿಭಟನೆಗೆ ಕರೆ ನೀಡಿದ್ದ ತೇಜಸ್ವಿ ಸೂರ್ಯ ಇಂದು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆಗೆ ಇಳಿದಿದ್ದಾರೆ.
ಲಾಲ್ ಬಾಗ್ ಪೂರ್ವದ್ವಾರದ ಬಳಿ ಬಿಜೆಪಿ ಶಾಸಕರು, ಸಂಸದರು ಮತ್ತು ಬೆಂಬಲಿಗರಿಂದ ಜಮಾಯಿಸಿ ಪ್ರತಿಭಟಿಸಿದ್ದು, ಇದೇ ವೇಳೆ ಮಾತನಾಡಿದ ಸಂಸದ ತೇಜಸ್ವಿಸೂರ್ಯ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.
ಮೆಟ್ರೋ ಹಳದಿ ಲೈನ್ ಆರಂಭವಾದರೆ ಟ್ರಾಫಿಕ್ ಸಮಸ್ಯೆ ತಗ್ಗಲಿದೆ. ಹಲವು ಭಾರೀ ಡೆಡ್ ಲೈನ್ ಕೊಟ್ಟರೂ ಕೆಲಸ ಆಗಿಲ್ಲ. ಯಾವಾಗ ಓಪನ್ ಆಗುತ್ತೆ ಎಂದೂ ಗೊತ್ತಿಲ್ಲ. ಜನ ನಂಬಿಕೆ ಇಡುವ ಹಾಗೇ, ಓಪನ್ ಆಗುವ ತರ ಮಾಡೋಣ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮೆಟ್ರೋ ಫೇಸ್ 3 ವೆಗಾಸಿಟಿ ಮಾಲ್ನಿಂದ ಆರಂಭವಾಗುತ್ತೆ. ಅದು ಆರಂಭವಾದರೆ 8 ರಿಂದ 10 ಲಕ್ಷ ಜನ ಓಡಾಡಬಹುದು. ನಾವೆಲ್ಲ ಪ್ರಯತ್ನ ಪಟ್ಟು ಅದಕ್ಕೆ ಪರ್ಮಿಷನ್ ಕೊಡಿಸಿದ್ದೇವೆ. ಆದರೆ ಇನ್ನೂ ಕೂಡ ನೀವು ಟೆಂಡರ್ ಕರೆದಿಲ್ಲ. ಅದನ್ನ ಯಾವಾಗ ಪ್ರಾರಂಭ ಮಾಡುತ್ತೀರಾ. ಕೇಂದ್ರ ಅನುಮತಿ ಕೊಟ್ಟು ವರ್ಷವಾದರೂ ಕೆಲಸ ಏಕೆ ಶುರುವಾಗಿಲ್ಲ. ಡಬಲ್ ಡೆಕ್ಕರ್ ಮಾಡುವುದಕ್ಕೆ ಹೊರಟಿರುವ ಡಿಸಿಎಂ ಡಿಕೆ ಶಿವಕುಮಾರ್ ಕೆಲಸ ಇದಕ್ಕೆ ಅಡ್ಡಿ ಆಗುತ್ತಿದ್ದೀಯಾ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೆಟ್ರೋ ಲೇನ್ ಬಳಿಯೇ ಟನಲ್ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಮೆಟ್ರೋ ಬಂದರೆ ಏನಾಗುತ್ತೆ ಅನ್ನೋ ಬಗ್ಗೆ ಅಧ್ಯಯನ ನಡಿದಿದೆಯಾ? ಏನೇನು ಸಮಸ್ಯೆಯಾಗುತ್ತೆ ಅಂತಾ ಚಿಂತನೆ ಆಗಿದೆಯಾ ಅನ್ನೋ ಮಾಹಿತಿ ಕೊಡಿ ಎಂದು ಕೇಳಿದ್ದಾರೆ.
ಬೆಂಗಳೂರಿಗೆ ಮೆಟ್ರೋ ಮಾಡಿ ಅಂದರೆ ತುಮಕೂರಿಗೆ ಮಾಡುವುದಕ್ಕೆ ಹೊರಟಿದ್ದಾರೆ. ವೈಟ್ ಫೀಲ್ಡ್ ಕಡೆ ಮೆಟ್ರೋ ಮಾಡಿದರೆ ಟ್ರಾಫಿಕ್ ಬಗೆಹರಿಯುತ್ತೆ. ಸಾರ್ವಜನಿಕರ ದುಡ್ಡಲ್ಲಿ ಓಡಾಡುತ್ತಿರುವ ಮೆಟ್ರೋಗೆ ದರ ಹೆಚ್ಚಿಸಿದ್ದೀರಿ. ಈ ಎಲ್ಲಾ ಪ್ರಶ್ನೆಗಳಿಗೆ BMRCL ಉತ್ತರ ಕೊಡಬೇಕು ಎಂದಿದ್ದಾರೆ.