Wednesday, September 11, 2024

ಸತ್ಯ | ನ್ಯಾಯ |ಧರ್ಮ

ವೈದ್ಯರ ‘ಕನ್ನಡ ಔಷಧಿ ಚೀಟಿ’ ; ತರಾತುರಿ ನಿರ್ಧಾರಗಳಿಗೆ ಮೈಲೇಜ್ ಕಮ್ಮಿ!

ವೈದ್ಯರ ‘ಕನ್ನಡ ಔಷಧಿ ಚೀಟಿ’ ಆದೇಶ ಭಾಷಾಭಿಮಾನ ಸಂಕೇತ ಎನ್ನುವುದರ ನಡುವೆಯೇ, ಅದರಿಂದಾಗಬಹುದಾದ ಅನಾಹುತಗಳ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಗಮನ ಹರಿಸಿದ್ದಾರೆಯೇ?

ರಾಜ್ಯದ ಸರ್ಕಾರಿ ಆಸ್ಪತ್ರೆಯ ವೈದ್ಯರು ಕನ್ನಡದಲ್ಲೇ ರೋಗಿಗಳಿಗೆ ಔಷಧಿ ಚೀಟಿಯನ್ನು ಬರೆಯುವಂತೆ ಆದೇಶಿಸಿ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈಗಾಗಲೇ ಇದನ್ನು ಪ್ರಾಯೋಗಿಕವಾಗಿ ರಾಯಚೂರಿನಲ್ಲಿ ಜಾರಿಗೆ ತರಲಾಗಿದ್ದರೂ ಈ ಆದೇಶದ ಸಾಧಕ ಬಾಧಕಗಳ ಬಗ್ಗೆ ಹಲವು ಕಡೆಗಳಿಂದ ಟೀಕೆಗಳೂ ಕೇಳಿ ಬಂದಿವೆ.

“ಆಧುನಿಕ ಕಾಲಘಟ್ಟದಲ್ಲಿ ಭಾಷಾಭಿಮಾನ ಎನ್ನುವುದು ನೇಪಥ್ಯಕ್ಕೆ ಸರಿಯುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಠಿಯಿಂದ ಆರೋಗ್ಯಕರ ಬೆಳವಣಿಗೆ ಆಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಾಂಸ್ಥಿಕ ಪ್ರಯತ್ನಗಳು ಮಾತ್ರ ನಿರೀಕ್ಷಿತ ಪರಿಣಾಮವನ್ನು ದೊರಕಿಸಿ ಕೊಡುವುದಲ್ಲದೇ ರಾಜ್ಯಭಾಷೆಯ ಉಳಿವಿಗೆ ಮಹತ್ವದ ಕೊಡುಗೆಯನ್ನು ನೀಡುತ್ತವೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ರಾಜ್ಯದ ಹಲವು ಕಡೆಗಳಲ್ಲಿ ವೈದ್ಯರು ಸ್ವಯಂಪ್ರೇರಿತರಾಗಿ ತಾವು ಕನ್ನಡ ಭಾಷೆಯನ್ನು ಉಳಿಸಲು ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯುವ ಕೆಲಸವನ್ನು ಆರಂಭಿಸುತ್ತೇವೆ ಎಂದು ತಮ್ಮ ಭಾಷಾಭಿಮಾನವನ್ನು ನನ್ನಲ್ಲಿ ವ್ಯಕ್ತಪಡಿಸಿದ್ದಾರೆ. ಹಲವಾರು ಜನ ತಾವು ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ನನ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಪ್ರಾಧಿಕಾರದ ಅಧ್ಯಕ್ಷನಾಗಿ ನನಗೆ ರೋಮಾಂಚನಗೊಳುಸುವ ಸಂಗತಿಯಾಗಿದೆ” ಎಂದು ಆರೋಗ್ಯ ಸಚಿವರಿಗೆ ಬರೆದ ಪತ್ರದಲ್ಲಿ ಪುರುಷೋತ್ತಮ ಬಿಳಿಮಲೆಯವರು ಹೇಳಿದ್ದಾರೆ.

ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಪ್ರಾಧಿಕಾರದ ಅಧ್ಯಕ್ಷರು ತಗೆದುಕೊಂಡ ನಿರ್ಣಯದ ಬಗ್ಗೆ ಹಲವು ಕಡೆಗಳಿಂದ ಪ್ರಶಂಸೆಯ ಮಾತುಗಳು ಕೇಳಿ ಬಂದರೂ ಈ ನಿರ್ಧಾರ ಎಷ್ಟು ಕಾಲ ಜಾರಿಯಲ್ಲಿರುತ್ತೆ ಎಂಬುದೂ ಗಣನೆಗೆ ತಗೆದುಕೊಳ್ಳಬೇಕಾದ ಅಂಶವಾಗಿದೆ. ಇದಕ್ಕೆ ಕಾರಣವಾಗುವ ಅಂಶಗಳು ಹಲವು ಇವೆ.

ಪ್ರಮುಖವಾಗಿ ವೈದ್ಯಕೀಯ ಹುದ್ದೆಯ ಕಡೆಗೆ ಮುಖ ಮಾಡಿದ ವಿದ್ಯಾರ್ಥಿಗಳಿಗೆ 12 ನೇ ತರಗತಿ ನಂತರದಿಂದಲೇ ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲೇ ಪಠ್ಯಗಳು ಇರುವುದರಿಂದ ಅವುಗಳಲ್ಲಿ ನೂರಕ್ಕೆ ನೂರರಷ್ಟು ವೈಜ್ಞಾನಿಕ ಹೆಸರುಗಳು ಆಂಗ್ಲಭಾಷೆಯಲ್ಲೇ ಇರುವುದು ಗಮನಿಸಬೇಕಾದ ವಿಚಾರ. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಪ್ರತೀ ವೈಜ್ಞಾನಿಕ ಹೆಸರುಗಳು ಅತ್ಯಂತ ಕ್ಲಿಷ್ಟ ಮತ್ತು ಉಚ್ಚಾರಣೆಗೂ ಕಷ್ಟವಾಗುವಂತವು.

ಪ್ರಾಧಿಕಾರದ ಅಧ್ಯಕ್ಷರು ವೈದ್ಯರಿಗೆ ಕನ್ನಡ ಕಲಿಕೆಗೆ ಉತ್ತೇಜಿಸುವುದರ ಜೊತೆಗೆ ಮುಂದಾಗುವ ಸವಾಲು ಮತ್ತು ಯಡವಟ್ಟುಗಳ ಬಗ್ಗೆ ಮುಂದಾಲೋಚನೆ ನಡೆಸಿಲ್ಲ ಎಂಬುದು ಇಲ್ಲಿ ಎದುರಾಗುವ ಪ್ರಮುಖ ವಿಚಾರವಾಗಿದೆ. ವಿಶೇಷವಾಗಿ ಅಲೋಪತಿ ವೈದ್ಯರು ಸೂಚಿಸುವ ಶೇ.99% ಔಷಧಿಗಳು ರಾಸಾಯನಿಕ ಮತ್ತು ಲವಣಗಳಿಂದ ಮಾಡಲ್ಪಟ್ಟವೇ ಆಗಿವೆ. ಅವೆಲ್ಲಕ್ಕೂ ವೈದ್ಯಕೀಯ ಜಗತ್ತು ನಿರ್ದಿಷ್ಟವಾದ ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರದ ಹೆಸರುಗಳನ್ನೇ ಕೊಟ್ಟಿದೆ. ಅಲ್ಲದೇ ಪ್ರತೀ ಖಾಯಿಲೆಗಳಿಗೂ ಬೇಕಾದ ರಾಸಾಯನ ಶಾಸ್ತ್ರದ ಹೆಸರುಗಳಿಂದ (Chemical composition names) ಔಷಧಿಗಳನ್ನು ಗುರುತಿಸಲಾಗುತ್ತಿದೆ. ಕೆಲವೊಮ್ಮೆ ಉಚ್ಛಾರಣೆಗೂ ಕಷ್ಟವಾಗುವ ಔಷಧಿಗಳನ್ನು ವೈದ್ಯರು ತಮ್ಮ ಕನ್ನಡ ಔಷಧಿ ಚೀಟಿಯಲ್ಲಿ ಬರೆದರೆ ಸಾಧಿಸುವ ಸಾಧನೆಯಾದರೂ ಏನು ಎಂಬುದು ಯಕ್ಷಪ್ರಶ್ನೆಯಾಗಿದೆ.

ಇನ್ನು ರೋಗಿಯ ತಿಳುವಳಿಕೆ ದೃಷ್ಟಿಯಿಂದ ಈ ನಿರ್ಧಾರ ಎಂದರೂ ಅದರಿಂದಾಗುವ ಯಡವಟ್ಟೂ ಸಹ ದೊಡ್ಡ ಮತ್ತು ಕೆಟ್ಟ ಪರಿಣಾಮ ಬೀರಬಲ್ಲವು. ಯಾಕೆಂದರೆ ಔಷಧದ ಉಚ್ಛಾರಣೆ ಒಂದೇ ಆಗಿದ್ದರೂ ಇಂಗ್ಲೀಷ್ ನಲ್ಲಿ ನಾನಾ ರೀತಿಯ ಸ್ಪೆಲ್ಲಿಂಗ್ ನಿಂದ ಕೂಡಿರುತ್ತವೆ. ಆದರೆ ಇವು ಕನ್ನಡದ ವಿಚಾರಕ್ಕೆ ಬಂದರೆ ಹೆಚ್ಚು ಕಡಿಮೆ ಐದು ರೀತಿಯ ಪದಗಳು ಒಂದೇ ಮಾದರಿಯ ಉಚ್ಛಾರಣೆ ಹೊಂದಿರುವಂತದ್ದಾಗಿವೆ.

ಉದಾಹರಣೆಗೆ ಭಾರತದಲ್ಲಿ ಮಲ್ಟಿಪಲ್ ಮೈಲೋಮಾ(multiple K helona)ಗೆ ಚಿಕಿತ್ಸೆ ನೀಡಲು ಬಳಸಲಾಗುವ ಒಂದು ಔಷಧಿಯನ್ನು ಹೈಲೈಟ್ ಮಾಡುವುದಾದರೆ ಅದರ ಔಷಧಿಗಳು ಲೈನಮ್ಯಾಕ್ 5(Linamac 5). ಇದು ಮಧುಮೇಹ ಔಷಧಿಗೆ ಬಹುತೇಕ ಒಂದೇ ರೀತಿಯ ಹೆಸರು – ಲೈನಾಮ್ಯಾಕ್ (Linamac)

ಮತ್ತೊಂದು ಔಷಧದ ಹೆಸರು, ಮೆಡ್ಜೋಲ್ (Medzole), ನಾಲ್ಕು ವಿಭಿನ್ನ ಕಂಪನಿಗಳು ವಿವಿಧ ವೈದ್ಯಕೀಯ ಉದ್ದೇಶಗಳಿಗಾಗಿ ನಾಲ್ಕು ವಿಭಿನ್ನ ಔಷಧೀಯ ಪದಾರ್ಥಗಳನ್ನು ಮಾರಾಟ ಮಾಡಲು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಒಂದು ನಿದ್ರಾಜನಕವಿದೆ. ಮೆಡ್ಜೋಲ್; ಮೆಡ್ಜೋಲ್-ಡಿಎಸ್ಆರ್(Medzole-DSR), ಇದು ಆಸಿಡ್ ರಿಫ್ಲಕ್ಸ್ಗೆ ಚಿಕಿತ್ಸೆ ನೀಡುತ್ತದೆ; ಮೆಡ್ಜೋಲ್ 400(Medzole 400), ಜಂತುಹುಳು ನಿವಾರಕ ಚಿಕಿತ್ಸೆ; ಮತ್ತು ಮೆಡ್ಜೋಲ್ 200, ಆಂಟಿಫಂಗಲ್ ಚಿಕಿತ್ಸೆಗೆ ಸಹಕಾರಿ ಆಗುವಂತದ್ದು. ಹುಡುಕಿದರೆ ಇಂತಹ ನೂರಾರು ಔಷಧಿಗಳು ಒಂದೇ ಉಚ್ಛಾರಣೆಯಿಂದ ಕೂಡಿದ ವಿಭಿನ್ನ ಔಷಧಿಗಳು ಕಾಣ ಸಿಗುತ್ತವೆ.

ಒಂದು ಔಷಧದ ಹೆಸರು ಮತ್ತೊಂದು ಔಷಧಿಗೆ ಹೋಲುವಂತಿದ್ದರೆ, ತರಬೇತಿ ಪಡೆದ ಔಷಧಿಕಾರರು ಸಹ ತಪ್ಪು ಮಾಡುವ ಸಂಭವ ಹೆಚ್ಚಿರುತ್ತದೆ. ಭಾರತದಲ್ಲಿ, ಹೆಚ್ಚಿನ ಡ್ರಗ್ ಡಿಸ್ಪೆನ್ಸರಿಗಳು ಸರಿಯಾಗಿ ತರಬೇತಿ ಪಡೆದ ಔಷಧಿಕಾರರನ್ನು ಹೊಂದಿಲ್ಲ, ಆದ್ದರಿಂದ ಇಂಗ್ಲೀಷ್ ಔಷಧಿ ಚೀಟಿಯ ಹೊರತಾಗಿ ಬೇರಾವುದೇ ಭಾಷೆಯ ಔಷಧಿ ಚೀಟಿಯಿಂದ ಅನಾಹುತ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಉದಾಹರಣೆಗೆ, ಸೋಂಕಿನಿಂದ ಬಳಲುತ್ತಿರುವ ಯಾರಿಗಾದರೂ ನಿದ್ರೆ ಮಾತ್ರೆ ಕೊಟ್ಟರೆ ಏನಾಗಬಹುದು.. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಇದಕ್ಕೆ ನೀಡುವ ಸ್ಪಷ್ಟೀಕರಣ ಏನು?

ಅಂದಹಾಗೆ ಯಾವುದೇ ನಿಯಮಗಳನ್ನು ಅನುಷ್ಠಾನಕ್ಕೆ ತರುವಾಗ ಒಂದಷ್ಟು ಅಗತ್ಯ ಕೆಲಸಗಳನ್ನು ಮಾಡುವುದಿದೆ. ಕನ್ನಡ ಔಷಧಿ ಚೀಟಿ ಬರೆಯುವ ಯೋಜನೆ/ನಿಯಮ ಜಾರಿಗೆ ತರುವ ಮುನ್ನ ಅದರ ಪ್ರಾಯೋಗಿಕ ಯೋಜನೆ ಎಲ್ಲಿ ನಡೆದಿದೆ. ಅದರ ರಿಪೋರ್ಟ್ ಏನು ಬಂದಿದೆ ಎಂಬ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕಿದೆ. ಯಾಕೆಂದರೆ ಇದು ಕೆಲವಷ್ಟು ಸಂದರ್ಭಗಳಲ್ಲಿ ಜನರ ಜೀವದ ಪ್ರಶ್ನೆಯಾಗಿದೆ.

ಹಾಗೆಯೇ ಇಂತಹ ಒಂದು ನಿಯಮ ಜಾರಿಗೆ ಆದೇಶ ಮಾಡುವ ಮುನ್ನ ಯಾವುದಾದರೂ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರ, ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗಿದೆಯೇ? ಇದರ ಸಾಧಕ ಬಾಧಕಗಳ ಬಗೆಗಿನ ಚರ್ಚೆ ಮತ್ತು ಚರ್ಚೆಯಿಂದ ಬಂದಂತಹ ಅಭಿಪ್ರಾಯ ಸಂಗ್ರಹದ ಒಟ್ಟಾರೆ ಫಲಿತಾಂಶ ಏನು ಎಂಬ ಬಗ್ಗೆಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಆರೋಗ್ಯ ಇಲಾಖೆ ಅಗತ್ಯವಾಗಿ ಸಾರ್ವಜನಿಕ ಮಾಹಿತಿ ತಿಳಿಸಬೇಕಿದೆ.

ಈಗಾಗಲೇ ಹೇಳಿದಂತೆ ಒಂದು ಔಷಧಿಯನ್ನು ಆಂಗ್ಲಭಾಷೆ / ಇಂಗ್ಲೀಷ್ ನಲ್ಲಿ ನಿರ್ದಿಷ್ಟವಾಗಿ ಒಂದೇ ರೀತಿ ಬರೆಯಲಾಗುತ್ತಿದೆ. ಅದನ್ನು ಕನ್ನಡದಲ್ಲಿ ಬೇರೆ ಬೇರೆ ರೀತಿಯಲ್ಲಿ ಬರೆಯುವ ಸಾಧ್ಯತೆ ಇದೆಯೇ? ಹೀಗೆ Generic ಔಷಧಿಗಳ ಹೆಸರುಗಳನ್ನು ಕನ್ನಡದಲ್ಲಿ ಹೀಗೆಯೇ ಬರೆಯಬೇಕು ಎಂಬ ಕೈಪಿಡಿ ಮಾಡಲಾಗಿದೆಯೆ? ಈ ಬಗ್ಗೆಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಆರೋಗ್ಯ ಇಲಾಖೆ ಸ್ಪಷ್ಟತೆ ಕೊಡುತ್ತದೆಯೇ?

ಹೀಗೆ ತಾಂತ್ರಿಕ ತೊಡಕುಗಳೇ ಹಲವು ಇರುವಾಗ ನಡುವೆ ಭಾಷಾಭಿಮಾನವನ್ನು ಒತ್ತಾಯಪೂರ್ವಕವಾಗಿ ತುರುಕುವಂತಾಗಬಾರದು. ಒಂದೇ ಪದ ಉಚ್ಛಾರಣೆಯ ಹತ್ತಾರು ಔಷಧಿಗಳು ಚಾಲ್ತಿಯಲ್ಲಿರುವಾಗ, ಭಾಷೆಯ ಮೇಲಿನ ಅಭಿಮಾನಕ್ಕಾಗಿ ಮುಂದೆ ಆಗುವ ಅನಾಹುತಗಳನ್ನು ತಲೆಗೆ ತಗೆದುಕೊಳ್ಳುವುದು ಅಂಧಾಭಿಮಾನ ಎನ್ನಿಸಿಕೊಳ್ಳಬಾರದು. ಹಾಗೊಂದು ವೇಳೆ ಇಂತಹ ತೊಡಕುಗಳ ನಿವಾರಣೆ ಮಾಡಿ, ಅಗತ್ಯ ಕೈಪಿಡಿ ಮೂಲಕ ಇಂತಹ ನಿಯಮಗಳನ್ನು ಜಾರಿಗೆ ತಂದರೆ ಅದು ಸ್ವಾಗತಾರ್ಹ‌.

Related Articles

ಇತ್ತೀಚಿನ ಸುದ್ದಿಗಳು

You cannot copy content of this page