Monday, July 28, 2025

ಸತ್ಯ | ನ್ಯಾಯ |ಧರ್ಮ

ʼಮೈಂಡ್‌ ಬ್ಲಾಕ್ʼ ಎಂಬ ಪರದೆಯನ್ನು ಸರಿಸಬೇಕಿದೆ

ತಟಸ್ಥವಾದ ಹೃದಯಗಳನ್ನು, ಅಲ್ಲೇ ಸ್ತಂಭೀಭೂತವಾದ ಮನಸ್ಸುಗಳನ್ನು, ಆಕಾರ ಗುರುತಿಸಲಾಗದ ಕತ್ತಲೆಯನ್ನು ಸೀಳಿ, ಈ ಮಣ್ಣಿನ ಪ್ರೇಮವನ್ನು ಎಲ್ಲರ ಎದೆಎದೆಗಳಲ್ಲೂ, ಕಣಕಣಗಳಲ್ಲೂ ಬಿತ್ತಿ ಬೆಳೆಸಬೇಕಾಗಿದೆ. ಎಂದೇ ʼಮೈಂಡ್‌ ಬ್ಲಾಕ್‌ʼ ಎಂಬ ಪರದೆಯನ್ನು ಕಿತ್ತೆಸೆಯಬೇಕಿದೆ. ಇದು ಉದಯೋನ್ಮುಖ ಲೇಖಕಿ ಸಿಹಾನ ಬಿ ಎಂ ಬರೆಯುವ  ʼಮೈಂಡ್‌ ಬ್ಲಾಕ್ʼ ಅಂಕಣದ ಮೊದಲ ಕಂತು

ಮನಸ್ಸು ಮನಸ್ಸುಗಳನ್ನು ಒಡೆದು ನಿಗಿನಿಗಿ ಕೆಂಡದಂತಹ ದ್ವೇಷ ಕಾರಿ ಕಿಡಿಮಾತು ಸಿಡಿಸಿ ಮನೆಮನಗಳು ದಹಿಸುತ್ತಿವೆ.. ಪ್ರೀತಿಸುತ್ತಿದ್ದ ಮನಸ್ಸುಗಳ ನಡುವೆ, ಜೊತೆಯಾಗಿದ್ದವರ ಮಧ್ಯೆ ಬಿರುಕುಗಳು ಹುಟ್ಟುತ್ತಿವೆ. ಹರೆಯದ ಮೆದುಳೊಳಗೆ ಹೊಕ್ಕು ಬೆಂಕಿಯ ಉಂಡೆ ಕಟ್ಟಿ ಜ್ವಾಲೆಯನ್ನು ಹರಡುತ್ತಿದೆ. ಸಂತೆ, ಮಾರುಕಟ್ಟೆಗಳಲ್ಲೂ ಅಂತೆಕಂತೆಗಳನ್ನು ಎಸೆದು ಹೊಟ್ಟೆಗೆ, ಎದೆಗೆ ಕಲ್ಲು ಹೊಡೆಯುತ್ತಿದೆ. ಸ್ವಸ್ಥವಾಗಿದ್ದ ಸಮಾಜದೊಳಗೆ ಬಿರುಗಾಳಿಯೆಬ್ಬಿಸಿ, ಧೂಳುಕಣಗಳನ್ನು ಹರಡಿ ಉಸಿರುಗಟ್ಟಿಸುತ್ತಿದೆ. ಸುತ್ತ ಸಂಶಯದ ನೋಟಗಳು. ಮುಖವಾಡ ಹೊತ್ತ ಮುಖಗಳು. ಸುಣ್ಣ, ಬಣ್ಣದ ತೇಪೆಗಳು. ವಿಷದ ಅಗುಳನ್ನು ನುಂಗುತ್ತಾ ಅಂಗಳದಲ್ಲಿ, ಹರೆಯದ ಹೃದಯಗಳಲ್ಲಿ, ಆಟದ ಬಯಲಿನಲ್ಲಿ, ಅಂಗಡಿ ಮುಂಗಟ್ಟುಗಳ ಬಾಗಿಲುಗಳಲ್ಲಿ, ಅಡುಗೆ ಮನೆಯ ಡಬ್ಬಗಳ ಮೇಲೆಲ್ಲಾ ವಿಷದುಂಡೆಗಳು ನೃತ್ಯವಾಡುತ್ತಿವೆ.

 ಇಲ್ಲದ ಕಾರಣಗಳನ್ನು ಸೃಷ್ಟಿಸಿ ಆರೋಪ, ಪ್ರತ್ಯಾರೋಪಗಳ ಆಟಗಳು ನಡೆಯುತ್ತಿವೆ. ಸುಳ್ಳುಗಳ ಜರಡಿಯನ್ನು ಗಿರಗಿರ ಆಡಿಸುತ್ತಾ ಸತ್ಯಗಳು ಮರೆಯಾಗುತ್ತಿವೆ. ಎದ್ದರೂ ಬಿದ್ದರೂ ಎದ್ದೆದ್ದು ಓಡಿದರೂ ಮತ್ತೊಮ್ಮೆ ಆ ಜರಡಿಯೊಳಗೆ ನೂಕಿ ಬಿಗಿಹಿಡಿತದಲ್ಲಿ ಬಂಧಿಯಾಗಿಸುತ್ತಿದ್ದಾರೆ. ಅವರವರ ಸ್ವಾರ್ಥಕ್ಕಾಗಿ ಮನಮನಗಳ ನಡುವೆ ವಿಷ ಬೀಜವನ್ನು ಬಿತ್ತುತ್ತಲೇ ಇದ್ದಾರೆ. ಒಂದೇ ಬೆಂಚಿನಲ್ಲಿ ಕೂತವರ ನಡುವೆ, ಒಂದೇ ಬಯಲಿನಲ್ಲಿ ಆಡಿದವರ ಮಧ್ಯೆ, ಇಕ್ಕೆಲಗಳ ಮನೆಗಳ ಸುತ್ತ ಅವರದೇ ಮಾತುಗಳನ್ನು ಗಾಳಿಯಲ್ಲಿ ಹಾರಾಡಿಸುತ್ತಿದ್ದಾರೆ. ಬೆಂಕಿ ಬೆಂಕಿಯಾಗಿಯೇ ಹೊತ್ತಿ ಉರಿಯುತ್ತಿದೆ. ಮಂಜುಗಡ್ಡೆ ಕಲ್ಲಾಗಿಯೇ ನಿಂತಿದೆ. ಸುತ್ತಲು ಕರಿಮೋಡದ ಛಾಯೆ. ಸೇತುವೆ ಕಟ್ಟುವ ಬದಲು ಗೋಡೆಗಳನ್ನು ಕಟ್ಟುತ್ತಿದ್ದಾರೆ. ಗೋಡೆ ಆಳೆತ್ತರಕ್ಕೆ ಬೆಳೆದು ನಿಂತಿದೆ. ಇಂಟರ್ನೆಟ್, ಯೂಟ್ಯೂಬ್, ಫೇಸ್ಬುಕ್, ವಾಟ್ಸಾಪ್, ಪುಸ್ತಕ, ಸೀರೆ, ಪಂಚೆಯ ಮೇಲೆಲ್ಲಾ ಊಹಾಪೋಹಾ, ಸುಳ್ಳುಗಳದೇ ಸಾಮ್ರಾಜ್ಯ. ಸಣ್ಣಗೆ ನೋವೊಂದು ಹುಟ್ಟಿ, ಹೋದ ಕಡೆಯೆಲ್ಲ ಕಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.

 ಬಣ್ಣಬಣ್ಣದ ಮಾತುಗಳಿಗೆ, ಸುಳ್ಳು ಪೊಳ್ಳಾದ ಮರುಳು ವಾಗ್ದಾನಗಳಿಗೆ, ಸ್ವಾಭಿಮಾನ ಸೋಕಿಲ್ಲದ ಗದ್ದುಗೆಗೆ ಸಿಕ್ಕ ಸಿಕ್ಕವರನ್ನೆಲ್ಲ ಕಚ್ಚಿ ಎಳೆಯುತ್ತಿದ್ದಾರೆ. ಎಳೆ ಪಾದಗಳನ್ನು, ಹರೆಯದ ನಡಿಗೆಗಳನ್ನು ಇವರತ್ತ ಬೀಸಿ ಕರೆಯುತ್ತಿದ್ದಾರೆ. ಇವರೇ ಮುಸುಕೆಳೆದ ಚಿತ್ರಕ್ಕೆ ಇವರದ್ದೇ ಕ್ಲೈಮ್ಯಾಕ್ಸ್ ರಚಿಸಿ ಮೆಂಟಲ್ ಬ್ಲಾಕಿನ ಪರದೆಯ ಮೇಲೆ ಬಲವಂತದಿಂದ ಬಣ್ಣ ಹಚ್ಚುತ್ತಿದ್ದಾರೆ.  ಇನ್ನು ಈ ಮೈಂಡ್‌ ಬ್ಲಾಕ್ ಅರಿವನ್ನು ಸ್ಪರ್ಶಿಸಿದಾಗಲೆಲ್ಲ ಮನಃಶಾಸ್ತ್ರದ ಪಾಠ ನೆನಪಾಗುತ್ತಿದೆ.

ಬಲು ದೊಡ್ಡದಾದ ಬೃಹತ್ತಾದ ಅಕ್ವೇರಿಯಮ್. ಅದರ ತುಂಬಾ ಬಣ್ಣಬಣ್ಣದ ಮೀನುಗಳು. ತುಸುಕಪ್ಪು ಅರೋವನಾ, ಬ್ಲ್ಯಾಕ್ಮೋರ್, ಪ್ಲವರ್ ಹಾರ್ನ್, ಏಂಜೆಲ್ ಫಿಶ್, ಟೆಟ್ರಾಸ್ ಮೀನುಗಳೆಲ್ಲ ತುಂಬಿದ್ದ ಅಕ್ವೇರಿಯಮಿನಲ್ಲಿ ದೊಡ್ಡ ಗಾತ್ರದ ಮೀನುಗಳಿವೆ. ಗೋಲ್ಡನ್ ಫಿಶ್ ಗಳಂತಹ ಸಣ್ಣ ಮೀನುಗಳಿವೆ. ದೊಡ್ಡ ಮತ್ತು ಸಣ್ಣ ಮೀನುಗಳು ಜೊತೆಯಾಗದಂತೆ, ದೊಡ್ಡ ಮೀನುಗಳು ಸಣ್ಣ ಸಣ್ಣ ಮೀನುಗಳನ್ನು ನುಂಗದಂತೆ ತಡೆಯಾಗಿಸಲು ಅಕ್ವೇರಿಯಮಿನ ಮಧ್ಯಭಾಗದಲ್ಲಿ ದಪ್ಪ ಮತ್ತು ಅಗಲವಾದ ಗಾಜಿನ ಹಲಗೆಯನ್ನು ಅಳವಡಿಸಲಾಗಿದೆ. ನೀರೊಳಗಿನ ಗಾಜು ಕಣ್ಣಿಗೆ ಗೋಚರಿಸದೆ ಅತ್ತಿಂದಿತ್ತ ಓಡಾಡುತ್ತಿದ್ದ ಮೀನುಗಳು ಆ ಗಾಜಿಗೆ ತಾಗಿ ಅಲ್ಲೊಂದು ತಡೆಗೋಡೆಯ ಅರಿವನ್ನು ತಮ್ಮೊಳಗೆ ತುಂಬುತ್ತಾ ಅದರದೇ ಸೀಮಿತ ವಲಯದಲ್ಲಿ ಈಜಾಡುತ್ತಾ ಕಾಲ ಕಳೆಯುತ್ತಿದ್ದವು. ಕ್ರಮೇಣ ಅಕ್ವೇರಿಯಮಿನ ಒಳಗಿರುವ ಎಲ್ಲಾ ಮೀನುಗಳು ಆ ತಂತ್ರಕ್ಕೆ ಬಲಿಯಾಗಿ ಅದಕ್ಕಿಂತ ಆಚೆಗೆ ಚಿಂತಿಸಲಾರದಷ್ಟು ಮೈಂಡ್ ಬ್ಲಾಕಿಗೆ ಬದ್ಧರಾಗಿ ಬದುಕ ತೊಡಗಿದುವು. ಹಲವಾರು ತಿಂಗಳುಗಳ ಬಳಿಕ ಆ ಗಾಜಿನ ಹಲಗೆಯನ್ನು ಅಲ್ಲಿಂದ ಹೊರ ತೆಗೆದು ಯಾವುದೇ ಅಡ್ಡ ಪರದೆಗಳನ್ನು ಇಡದಿದ್ದರೂ ಈ ಮೀನುಗಳು ಮೊದಲಿನ ಅದೇ ಮೈಂಡ್ ಬ್ಲಾಕಿನಿಂದ ಹೊರ ಬರಲೇ ಇಲ್ಲ. ದೊಡ್ಡ ಮೀನುಗಳು ಮತ್ತು ಸಣ್ಣ ಮೀನುಗಳು ಜೊತೆಯಾಗಲೂ ಇಲ್ಲ.

ಅದೇ ರೀತಿ ಇಂದು ಕುತಂತ್ರ, ಷಡ್ಯಂತ್ರಗಳ ಅರಿವೇ ಇಲ್ಲದ ಜೀವಗಳು ಒಣಗಿದ ಮಾತುಗಳಿಗೆ, ಶುಷ್ಕ ಹೃದಯಗಳಿಗೆ, ಸ್ವಾರ್ಥದಾಳ್ವಿಕೆಗೆ ಬಲಿಯಾಗಿ ತಮ್ಮನ್ನು ತಾವೇ ಮೈಂಡ್ ಬ್ಲಾಕಿನಲ್ಲಿ ಮುಳುಗಿಸಿ ಜಗತ್ತನ್ನು ಕತ್ತಲಾಗಿಸಲು ಹೊರಟಿದ್ದಾರೆ. ಸೋಲುಂಡರೂ, ನೋವಾದರೂ, ಗಲಭೆಗಳು ಎದ್ದರೂ, ಮುಷ್ಕರಗಳು ಮುಗಿಲು ಮುಟ್ಟಿದರೂ, ಬಡ ಅಮಾಯಕ ಹೆಣಗಳು ಬಿದ್ದರೂ ಇವರಿನ್ನೂ ಅದರಿಂದ ಹೊರ ಬಂದಿಲ್ಲ.

ವಿಚಿತ್ರವೆಂದರೆ ಸತ್ಯವೆಂದು ತಿಳಿದಿದ್ದರೂ ಒಪ್ಪದವರು ಸುತ್ತಲಿದ್ದಾರೆ. ಅವರಾಡುವ ಮಾತುಗಳು ಅವರಿಗೇ ಅರ್ಥವಾಗುವುದಿಲ್ಲ. ಹಾಸ್ಯಾಸ್ಪದ, ಬಲಹೀನ ಮಾತುಗಳು ಹೆಚ್ಚು ಕಾಲ ನಿಲ್ಲಲಾರದೆಂದು ಗೊತ್ತಿದ್ದರೂ ಹಿಡಿದ ಹಟ ಬಿಡುತ್ತಲೂ ಇಲ್ಲ. ಇನ್ನು ಅರ್ಥವಾದರೂ ಮಾತಿನಲ್ಲಿ ಸೋಲಬಾರದೆಂದೋ ವಾಸ್ತವದ ಅರಿವಿನ ಕೊರತೆಯಿಂದಲೋ ಅಹಮ್ಮಿನಲ್ಲಿ ಮುಳುಗಿ ಪದಗಳನ್ನು ಸೀಳುತ್ತಿದ್ದಾರೆ. ಹಿಂದೆಂದೂ ಎದ್ದಿಲ್ಲದ ಗೋಡೆಯೊಂದು ಹಠಾತ್ತನೆ ಎದ್ದಿದೆ. ದ್ವೇಷವನ್ನು ಹೊದ್ದು ಎದ್ದ ಆ ಗೋಡೆಯನ್ನು ತುರ್ತಾಗಿ ಉರುಳಿಸಬೇಕಾಗಿದೆ. ಹೊತ್ತಿಕೊಂಡ ಬೆಂಕಿಯನ್ನು ನಂದಿಸಬೇಕಾಗಿದೆ. ಯಾವುದನ್ನು ನಂದಿಸಬೇಕು? ಎದ್ದ ಬೆಂಕಿಯ ಜ್ವಾಲೆಯನ್ನೇ? ಸಾವು ನೋವುಗಳಿಗೆ ದೂಡಿದ ಬರೆಗಳನ್ನೇ? ಒಡೆದ ಹೃದಯಗಳಲ್ಲಿ ಇನ್ನೂ ಬಾಕಿಯಾಗಿ ಉಳಿದಿದ್ದ ಧೂಳಿನ ಕಣಗಳನ್ನೇ? ನಂದಿಸಬೇಕಾಗಿರುವುದು ಬುಡವಿಲ್ಲದ ಹತ್ತು ಹಲವು ವಿಚಾರಗಳನ್ನೇ ? 

 ನೋವಿನ ಬೆಂಕಿಯಲ್ಲಿ ಬೇಯುತ್ತಲಿದ್ದು ನಿದಿರೆ ಮರೆಯಾದ ರಾತ್ರಿ ಪಾಳಿಯ ಕೆಲಸಗಳನ್ನು, ಕನಸು ಕಂಡ ಹಗಲುಗಳಲ್ಲಿ ಹಸಿವು, ಸಂಕಟ, ನಿರುದ್ಯೋಗದ ಬದುಕುಗಳನ್ನು, ಬಾಯಿ ತೆರೆದರೆ ಭಯಕ್ಕೆ ದೂಡುವರೆಂಬ ನಂಬುಗೆಗಳನ್ನು, ದನಿಯ ಕತ್ತರಿಸಿದ ನಾಲಗೆಗಳನ್ನು ಈಗ ಬಟಾಬಯಲಿಗೆಳೆದು ಮತ್ತೊಮ್ಮೆ ಮರುಜೀವ ನೀಡಬೇಕಾಗಿದೆ.

ಪ್ರೀತಿಗೆ ಪ್ರೀತಿ ಕೊಟ್ಟು, ದ್ವೇಷವನ್ನು ಕಿತ್ತೆಸೆದು, ನಿರ್ಲಕ್ಷ್ಯವನ್ನು ಅವಗಣಿಸಿ, ಸೌಹಾರ್ದತೆಯ ಬಣ್ಣಗಳಿಂದ ಸುಂದರ ಚಿತ್ರಕ್ಕೆ ಮಾನವತ್ವ ತುಂಬಬೇಕಾಗಿದೆ. ಭೂಮಿ ಸೃಷ್ಟಿಸಿದ ಅದ್ಭುತ ಪ್ರೀತಿಗೆ ಅಪ್ಪುಗೆಯ ತುಪ್ಪವನ್ನು ಸುರಿಯುತ್ತಾ ಕಳೆದು ಹೋದ ಸವಿನೆನಪುಗಳನ್ನು ಪಾಕ ಮಾಡಿ ಸವಿಯಬೇಕಾಗಿದೆ. ತಟಸ್ಥವಾದ ಹೃದಯಗಳನ್ನು, ಅಲ್ಲೇ ಸ್ತಂಭೀಭೂತವಾದ ಮನಸ್ಸುಗಳನ್ನು, ಆಕಾರ ಗುರುತಿಸಲಾಗದ ಕತ್ತಲೆಯನ್ನು ಸೀಳಿ, ಈ ಮಣ್ಣಿನ ಪ್ರೇಮವನ್ನು ಎದೆಎದೆಗಳಲ್ಲೂ, ಕಣಕಣಗಳಲ್ಲೂ ಬಿತ್ತಿ ಬೆಳೆಸಬೇಕಾಗಿದೆ. ನಿರೀಕ್ಷೆಯೆಂಬುದು ಬಹುಕಾಲ ನಿಲ್ಲದು. ಹತಾಶೆಯೆಂಬುದು ಕೊನೆಯವರೆಗೂ ಉಳಿಯದು. ಪ್ರೀತಿಸಬೇಕಾಗಿದ್ದ ಸಮಯದಲ್ಲಿ ಪ್ರೀತಿಸಬೇಕಾಗಿದೆ. ಜೊತೆಯಾಗ ಬೇಕಾಗಿದ್ದ ಗಳಿಗೆಯಲ್ಲಿ ಒಂದಾಗ ಬೇಕಾಗಿದೆ. ಬೇಕು ಅನಿಸಿದಾಗ ಸಿಗದಿದ್ದ ಸುಖ, ಸಂತೋಷ ಬೇಡವೆಂದಾಗ ಸಿಕ್ಕಿದರೆ ಪ್ರೇಮದ ಪರಾಕಾಷ್ಠೆಗೆ ತಲುಪಲು ಸಾಧ್ಯವಾಗದು. ಇನ್ನೂ ಕಾಲ ಮಿಂಚಿಲ್ಲ. ನಿರೀಕ್ಷೆ ಸತ್ತಿಲ್ಲ. ಆಸೆಗಳು ಕೊನೆಯಾಗಿಲ್ಲ.

ಹೃದಯ ಹೃದಯಗಳನ್ನು ಒಡೆಯಲೆತ್ನಿಸುತ್ತಿರುವ, ಈಗಲೂ ಮರೆಯಲ್ಲಿ ಅವಿತಿರುವ ಈ ‌ʼಮೈಂಡ್‌ ಬ್ಲಾಕ್‌ʼ ಎಂಬ ಪದವನ್ನು ಹಳೆ ನಿಘಂಟಿನಿಂದ ಬಹುಬೇಗನೆ ಕಿತ್ತೆಸೆದು ದೂರಕ್ಕೆಸೆಯಬೇಕಾಗಿದೆ.

ಸಿಹಾನ ಬಿಎಂ 

ಉದಯೋನ್ಮುಖ ಲೇಖಕಿ, ಕವಯಿತ್ರಿ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page