Saturday, February 28, 2026

ಸತ್ಯ | ನ್ಯಾಯ |ಧರ್ಮ

ಬಾಳೆಹೊನ್ನೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂವಾದ: ಆನೆ ದಾಳಿ, ಅರಣ್ಯ ಕಾನೂನುಗಳ ಬಗ್ಗೆ ನೆಲವಾಸಿಗಳ ಕಿಡಿ

ಚಿಕ್ಕಮಗಳೂರು, ಫೆ.28: ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಮಾನವ–ಕಾಡುಪ್ರಾಣಿ ಸಂಘರ್ಷ, ವಿಶೇಷವಾಗಿ ಆನೆ ದಾಳಿಗಳ ಹಿನ್ನೆಲೆಯಲ್ಲಿ ರೈತರು ಮತ್ತು ನೆಲವಾಸಿಗಳೊಂದಿಗೆ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶನಿವಾರ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಸಾರ್ವಜನಿಕ ಸಂವಾದ ನಡೆಸಿದರು.

ಮಲೆನಾಡು ಭಾಗದ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಆಯೋಜಿಸಿದ್ದ ಈ ಸಭೆಯಲ್ಲಿ ರೈತರು, ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟವು ಸಚಿವರಿಗೆ ಸಮಗ್ರ ಮನವಿ ಸಲ್ಲಿಸಿ, ಹಲವು ಪ್ರಮುಖ ಹಕ್ಕೊತ್ತಾಯಗಳನ್ನು ಮುಂದಿಟ್ಟಿತು.

ಪರಿಹಾರ ಮೊತ್ತ ಹೆಚ್ಚಿಸಲು ಆಗ್ರಹ
ಮಾನವ–ಕಾಡುಪ್ರಾಣಿ ಸಂಘರ್ಷದಿಂದ ಸಾವಿಗೀಡಾದವರ ಕುಟುಂಬಗಳಿಗೆ ನೀಡುವ ಪರಿಹಾರ ಮೊತ್ತವನ್ನು ಪ್ರಸ್ತುತ ರೂ. 20 ಲಕ್ಷದಿಂದ ಕನಿಷ್ಠ ರೂ. 30 ಲಕ್ಷಕ್ಕೆ ಏರಿಸಬೇಕು. ವಿಶೇಷ ಸಂದರ್ಭಗಳಲ್ಲಿ ರೂ. 50 ಲಕ್ಷವರೆಗೆ ನೀಡುವಂತೆ ತೀರ್ಮಾನ ಕೈಗೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸಿದೆ. ಮೃತರ ಕುಟುಂಬಕ್ಕೆ ನೀಡುವ ಮಾಸಿಕ ಪಿಂಚಣಿಯನ್ನು ರೂ. 20,000ಕ್ಕೆ ಹೆಚ್ಚಿಸಬೇಕು ಹಾಗೂ ಹಾವು ಕಡಿತದಿಂದ ಉಂಟಾಗುವ ಸಾವು-ನೋವಿಗೂ ಸಮಾನ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಗಾಯಾಳುಗಳಿಗೆ ಶಾಶ್ವತ ವೈದ್ಯಕೀಯ ನಿಧಿ
ಕಾಡುಪ್ರಾಣಿ ದಾಳಿಯಿಂದ ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚವನ್ನು ಇಲಾಖೆ ಭರಿಸುತ್ತಿದ್ದರೂ ತುರ್ತು ಸ್ಪಂದನೆ ಕೊರತೆಯಿದೆ ಎಂದು ಒಕ್ಕೂಟ ಆರೋಪಿಸಿದೆ. ಆಯ್ದ ಆಸ್ಪತ್ರೆಗಳಲ್ಲಿ ಅರಣ್ಯ ಅಥವಾ ವನ್ಯಜೀವಿ ಇಲಾಖೆಯಿಂದ ಶಾಶ್ವತ ನಿಧಿ ಸ್ಥಾಪಿಸಿ ತಕ್ಷಣ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಅಂಗವೈಕಲ್ಯ ಮತ್ತು ಉದ್ಯೋಗ ಭದ್ರತೆ
ಕಾಡುಪ್ರಾಣಿ ದಾಳಿಯಿಂದ ಅಂಗವೈಕಲ್ಯ ಉಂಟಾದವರಿಗೆ ವೈಕಲ್ಯದ ಪ್ರಮಾಣದ ಆಧಾರದ ಮೇಲೆ ಪರಿಹಾರ ಹೆಚ್ಚಿಸಬೇಕು. ಶಾಶ್ವತ ವೈಕಲ್ಯ ಕಂಡುಬಂದಲ್ಲಿ ಜೀವನಪರ್ಯಂತ ಮಾಸಿಕ ಪಿಂಚಣಿ ನೀಡಬೇಕು. ಜೊತೆಗೆ, ಮೃತರ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರ ಕುಟುಂಬದ ಸದಸ್ಯರಿಗೆ ಕನಿಷ್ಠ ಪ್ರಥಮ ದರ್ಜೆ ಗುಮಾಸ್ಥನ ಹುದ್ದೆಗೆ ಸಮಾನ ಉದ್ಯೋಗ ನೀಡುವಂತೆ ಮನವಿ ಮಾಡಲಾಗಿದೆ.

ಜಂಟಿ ಸರ್ವೆ, ಭೂ ಮೌಲ್ಯಮಾಪನಕ್ಕೆ ಹೊಸ ಮಾನದಂಡ
ಪ್ರಸ್ತುತ ನಡೆಯುತ್ತಿರುವ ಜಂಟಿ ಸರ್ವೆಯನ್ನು ಗ್ರಾಮ ಸಭೆಗಳ ಸಮ್ಮುಖದಲ್ಲಿ ನಡೆಸಬೇಕು. ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯೊಳಗಿನ ಭೂಮಿಗಳಿಗೆ ತ್ವರಿತ ಪರಿಹಾರ ವಿಲೇವಾರಿ ಮಾಡಿ, ಮಾರ್ಗಸೂಚಿ ಬೆಲೆಯನ್ನು ನಾಲ್ಕು ಪಟ್ಟು ಹೆಚ್ಚಿಸಿ ಮೌಲ್ಯಮಾಪನ ಮಾಡಬೇಕು. ಮೌಲ್ಯಮಾಪನ ಮಾಡಿದ ಒಂದು ವರ್ಷದೊಳಗೆ ಪರಿಹಾರ ನೀಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಮಲೆನಾಡಿಗೆ ವಿಶೇಷ ಕೃಷಿ ವಲಯದ ಸ್ಥಾನಮಾನ
ಮಲೆನಾಡಿನಲ್ಲಿ ಕಾಡುಪ್ರಾಣಿ ಹಾವಳಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಹೆಚ್ಚುವರಿ ಪರಿಹಾರ ನೀಡಬೇಕು. ಪಶ್ಚಿಮ ಘಟ್ಟ ತಪ್ಪಲಿನ ಮಲೆನಾಡು ಪ್ರದೇಶವನ್ನು ವಿಶೇಷ ಕೃಷಿ ವಲಯವಾಗಿ ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ಪ್ರತೀ ಗ್ರಾಮ ಪಂಚಾಯ್ತಿಯಲ್ಲಿ ನಿವೇಶನರಹಿತರಿಗೆ ಕನಿಷ್ಠ 15 ಎಕರೆ ಸರ್ಕಾರಿ ಜಮೀನು ಮೀಸಲಿಟ್ಟು ಬಡಾವಣೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆ ಮುಂದಿಡಲಾಗಿದೆ.

ಪರಿಸರ ಸೂಕ್ಷ್ಮ ವಲಯ, ಕಸ್ತೂರಿ ರಂಗನ್ ವರದಿ ವಿರುದ್ಧ ಆತಂಕ
ಮಲೆನಾಡನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸುವುದು ಅಥವಾ ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವುದರಿಂದ ಸ್ಥಳೀಯರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಒಕ್ಕೂಟ ಎಚ್ಚರಿಸಿದೆ. ಹುಲಿ ಯೋಜನೆ ಅಥವಾ ಇತರೆ ಅಭಯಾರಣ್ಯ ವಿಸ್ತರಣೆ ಕ್ರಮಗಳನ್ನು ಮರುಪರಿಶೀಲಿಸಿ, ನೆಲವಾಸಿಗಳ ಹಿತಾಸಕ್ತಿಗೆ ಧಕ್ಕೆ ಉಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಅರಣ್ಯ ಕಾಯ್ದೆ ತಿದ್ದುಪಡಿ, ಭೂ ಮಂಜೂರಾತಿಗೆ ಒತ್ತಾಯ
ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಾನೂನು ನಿರ್ಬಂಧಗಳನ್ನು ಸಡಿಲಿಸಿ ಭೂ ಮಂಜೂರಾತಿ ನೀಡಬೇಕು. ವಿವಿಧ ನಮೂನೆಗಳಡಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಪಾರಂಪರಿಕ ಅರಣ್ಯ ಹಕ್ಕುಗಳಡಿ ಭೂ ಮಂಜೂರಾತಿಗೆ ಅಗತ್ಯ ದಾಖಲೆ ಅವಧಿಯನ್ನು 75 ವರ್ಷದಿಂದ 25 ವರ್ಷಕ್ಕೆ ಇಳಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಭೆಯಲ್ಲಿ ರೈತರು ಆನೆ ದಾಳಿಗಳಿಂದ ಆಗುತ್ತಿರುವ ಬೆಳೆ ಹಾನಿ, ಜೀವಹಾನಿ ಮತ್ತು ಭಯಭೀತ ಜೀವನದ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗಳಿಗೆ ತ್ವರಿತ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು. ವಿಶೇಷವಾಗಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಮುಖ ವಿಚಾರಗಳ ಬಗ್ಗೆ ಸಚಿವರ ಗಮನ ಸೆಳೆದರು.

ಸಚಿವರೊಂದಿಗೆ ಶೃಂಗೇರಿ ಶಾಸಕ ಟಿಡಿ ರಾಜೇಗೌಡ, ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷರಾದ ಅನಿಲ್ ಹೊಸಕೊಪ್ಪ, ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಕುಮಾರ್ ಮುರೋಳ್ಳಿ ಮತ್ತು ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಸಂವಾದದಲ್ಲಿ ಸಚಿವ ಈಶ್ವರ ಖಂಡ್ರೆ ಜನರ ಮನವಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page