Saturday, September 6, 2025

ಸತ್ಯ | ನ್ಯಾಯ |ಧರ್ಮ

ಸುಳ್ಳು ಭರವಸೆ ನೀಡಿ ಜನರನ್ನ ಕಛೇರಿಗೆ ಅಲೆಸಬೇಡಿ, ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳಿಗೆ ಸೂಚನೆ

ಹಾಸನ : ಸುಳ್ಳು ಭರವಸೆ ನೀಡಿ ಜನರನ್ನು ತಿಂಗಳಾನುಗಟ್ಟಲೆ ಕಚೇರಿಗಳಲ್ಲಿ ಅಲೆಸಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

  ಸಾರ್ವಜನಿಕರ ಸಮಸ್ಯೆ ಆಲಿಸಲು ಈ ಸಭೆಯನ್ನು ಆಯೋಜಿಸಲಾಗಿದೆ. ಜನರಿಗೆ ಅನುಕೂಲವಾಗುವುದೇ ಮುಖ್ಯ. ಕೇವಲ ಕಾಟಾಚಾರಕ್ಕೆ ಸಭೆ ನಡೆಸುವುದರಿಂದ ಪ್ರಯೋಜನವಿಲ್ಲ” ಎಂದು ಸ್ಪಷ್ಟಪಡಿಸಿದರು. ಅಧಿಕಾರಿಗಳತ್ತ ತೀವ್ರ ಶಬ್ಧ ಚಿಮ್ಮಿದ ಅವರು, ಕಾನೂನು ಬಾಹಿರ ಕೆಲಸಗಳಿಗೆ ಒತ್ತಡ ಹಾಕಿದರೆ ತಕ್ಷಣವೇ ‘ಅದು ಸಾಧ್ಯವಿಲ್ಲ ಎಂದು ಬರೆದುಕೊಡಿ. ಆಗದ ಕೆಲಸಕ್ಕೆ ಸುಳ್ಳು ಭರವಸೆ ನೀಡಿ ಜನರನ್ನು ತಿಂಗಳಾನುಗಟ್ಟಲೆ ಕಚೇರಿಗಳಲ್ಲಿ ಅಲೆಸಬೇಡಿ. ಜನರ ಸಮಯವನ್ನು ವ್ಯರ್ಥಗೊಳಿಸುವಂತಿಲ್ಲ ಎಂದು ಎಚ್ಚರಿಸಿದರು. ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಫಲಿತಾಂಶ ಬರಬೇಕು. ಇಲ್ಲದಿದ್ದರೆ ಸರ್ಕಾರದ ಯೋಜನೆಗಳು ವ್ಯರ್ಥವಾಗುತ್ತವೆ. ಜನರ ಹಿತಕ್ಕಾಗಿ ಕಾನೂನು ಬದ್ಧ ಕೆಲಸಗಳನ್ನೇ ಆದ್ಯತೆ ನೀಡಿ. ಕಾನೂನು ಬಾಹಿರ ಕೆಲಸಗಳನ್ನು ಮಾಡಿಕೊಡಲು ನಾವು ಸಿದ್ಧರಿಲ್ಲ. ಆದ್ದರಿಂದ ಜನರೂ ಸಹ ಕಾನೂನು ಬದ್ಧ ಬೇಡಿಕೆಗಳನ್ನು ಮಾತ್ರ ಮುಂದುವರೆಸ ಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಚಿವರ ಮುಂದೆ ಮಂಡಿಸಿದರು. ಅನೇಕರು ಭೂಮಿ, ಮನೆ, ಪಿಂಚಣಿ, ರಸ್ತೆ, ಆರೋಗ್ಯ, ವಿದ್ಯುತ್ ಇಲಾಖೆ, ಕುಡಿಯುವ ನೀರು ಹಾಗೂ ಸಾರ್ವಜನಿಕ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದ ಅಡಚಣೆಗಳ ಕುರಿತು ಮನವಿ ಸಲ್ಲಿಸಿದರು. ಸಚಿವರು ಪ್ರತಿಯೊಂದು ಸಮಸ್ಯೆಗೂ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ತಕ್ಷಣದ ಪರಿಹಾರ ಕಲ್ಪಿಸುವಂತೆ ಸೂಚನೆ ನೀಡಿದರು. ಸಭೆಯ ಅಂತ್ಯದಲ್ಲಿ ಸಚಿವ ಕೃಷ್ಣಭೈರೇಗೌಡ ಅವರು, “ಜನರ ವಿಶ್ವಾಸ ಕಳೆದುಕೊಳ್ಳಬಾರದು. ಸರ್ಕಾರದ ಕಾರ್ಯಕ್ರಮಗಳು ನೆಲಮಟ್ಟದಲ್ಲಿ ಯಶಸ್ವಿಯಾಗಬೇಕಾದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಹಾಸನ ಜಿಲ್ಲೆಯ ಜನತೆಗೆ ನಾವು ನೀಡುವ ಪ್ರತಿಯೊಂದು ನಿರ್ಧಾರವೂ ಅನುಭವಿಸಲು ಸಾಧ್ಯವಾಗಬೇಕು” ಎಂದು ಪುನರುಚ್ಚರಿಸಿದರು. ಈ ಸಭೆಯ ಮೂಲಕ ಹಾಸನ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸರ್ಕಾರದಿಂದ ತ್ವರಿತ ಸ್ಪಂದನೆ ದೊರೆಯುವ ನಿರೀಕ್ಷೆ ಮೂಡಿದೆ.

 ಸಾರ್ವಜನಿಕರ ಕುಂದುಕೊರತೆಗಳ ಜನಸ್ಪಂದನಾ ಸಭೆಯಲ್ಲಿ ಸಮಸ್ಯೆಗಳನೊತ್ತಿಕೊಂಡು ನೂರಾರು ೬೦೦ಕ್ಕೂ ಹೆಚ್ಚು ಜನರು ಬಂದಿದ್ದು, ಅವರಿಗೆ ಯಾವ ಸಮಸ್ಯೆ ಆಗದಂತೆ ಅಚ್ಚುಕಟ್ಟಾಗಿ ಶಾಮಿಯಾನ ಹಾಕಿ ಕುಳಿತುಕೊಳ್ಳಲು ಚೇರಿನ ವ್ಯವಸ್ಥೆ ಮಾಡಲಾಗಿತ್ತು. ಮೊದಲೇ ನೀಡಿದ ಟೋಕನ್ ಪ್ರಕಾರ ಹೆಸರು ಕೂಗಿ ಯಾವ ಗೊಂದಲ ಆಗದಂತೆ ನಿಗಾವಹಿಸಿದರು.

ಸಭೆಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಶಾಸಕ ಸಿ.ಎನ್. ಬಾಲಕೃಷ್ಣ, ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಜಿ.ಪಂ. ಸಿಇಒ ಬಿ.ಆರ್. ಪೂರ್ಣಿಮಾ, ಡಿಎಫ್‌ಇ ಸೌರಭ್ ಕುಮಾರ್ ತಿವಾರಿ, ಎಸಿ ಮಾರುತಿ ವಿವಿಧ ತಾಲೂಕಿನ ತಹಸೀಲ್ದಾರ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಇತರರು ಪಾಲ್ಗೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page