Tuesday, October 29, 2024

ಸತ್ಯ | ನ್ಯಾಯ |ಧರ್ಮ

ತೆರಿಗೆಯಲ್ಲಿ ನ್ಯಾಯಯುತ ಪಾಲು ಕೇಳುವವರನ್ನು ಆತಂಕವಾದಿಗಳಂತೆ ಬಿಂಬಿಸಲಾಗುತ್ತಿದೆ – ಸಚಿವ ಕೃಷ್ಣ ಬೈರೇಗೌಡ

ತೆರಿಗೆ ಹಾಕುವ ಹಕ್ಕು ಮತ್ತು ತೆರಿಗೆ ಹಂಚಿಕೆಗಳೇ ಪ್ರಜಾಪ್ರಭುತ್ವ ಉಗಮಕ್ಕೆ ಕಾರಣ. ಆದರೆ, ಅನ್ಯಾಯವಾಗುತ್ತಿದೆ ಎಂದು ನ್ಯಾಯ ಕೇಳಿದವರನ್ನು ಆತಂಕವಾದಿಗಳನ್ನಾಗಿ ಪ್ರತಿಬಿಂಬಿಸುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ. ಬ್ರಿಟಿಷರು ಇದೇ ಕೆಲಸ ಮಾಡುತ್ತಿದ್ದರು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿ ನಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನವು ಹೊರ ತಂದಿರುವ ದಕ್ಷಿಣ ವರ್ಸಸ್‌ ಉತ್ತರ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಾವು ಸ್ವಾತಂತ್ರ್ಯ ಹೋರಾಟಗಾರರು ಎಂದು ಅನುಸರಣೆ ಮಾಡುವವರನ್ನೆಲ್ಲ ಬ್ರಿಟಿಷರು ಭಯೋತ್ಪಾದಕರು, ರಾಜಪ್ರಭುತ್ವ ವಿರೋಧಿ ಗಳು ಎಂದು ಕರೆದಿದ್ದರು. ಅದೇ ಮಾದರಿಯಲ್ಲಿ ಇವತ್ತು ನ್ಯಾಯ ಕೇಳುವುದೇ ಒಂದು ಅಪರಾಧ ಆಗುವಂತಹ ಕಾಲ ಬಂದಿರುವುದು ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ ಎಂಬುದನ್ನು ನಾವೆಲ್ಲರೂ ಗಮನಿಸಬೇಕು ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ತಿಕ್ಕಾಟ ಇವತ್ತಿನದ್ದಲ್ಲ, ಆರಂಭದಿಂದಲೂ ಇದೆ. ಆದರೆ ತಿಕ್ಕಾಟದ ನಡುವೆಯೂ ಆವತ್ತಿನ ಸರಕಾರಗಳು ಸಮಸ್ಯೆಗಳನ್ನು ಒಪ್ಪಿಕೊಳ್ಳುತ್ತಿದ್ದವು. ಅದನ್ನು ಪರಿಹರಿಸುವ ವ್ಯವಧಾನವಿತ್ತು. ಆದರೆ ಈಗ ನಾವು ನಮಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರೆ ದೇಶದ್ರೋಹಿಗಳಾಗುತ್ತೇವೆ.

ದೇಶದಲ್ಲಿ ಕಳೆದ 40 ವರ್ಷಗಳಿಂದ ವಿಕೇಂದ್ರೀಕರಣದ ಕಡೆಗೆ ಹೆಜ್ಜೆಯಿಟ್ಟುಕೊಂಡು ಬಂದಿದ್ದೇವೆ. ಒಕ್ಕೂಟ ವ್ಯವಸ್ಥೆ ಸುಭದ್ರವಾಗಿರಬೇಕಾದರೆ ಯಾವುದೇ ಸಮಸ್ಯೆ ಬಂದಾಗ ಕುಳಿತು ಮಾತ ನಾಡಿ ಬಗೆಹರಿಸಕೊಳ್ಳಬೇಕು. ತೆರಿಗೆ ಹಾಕುವ ಹಕ್ಕು ಮತ್ತು ತೆರಿಗೆ ಹಂಚಿಕೆಗಳೇ ಪ್ರಜಾ ಪ್ರಭುತ್ವ ಉಗಮ ಆಗಲು ಕಾರಣ. ನಮಗೆ ಬರುತ್ತಿದ್ದ ಶೇ. 23 ಅನುದಾನವನ್ನು ಕಡಿತ ಗೊಳಿಸಿ ಬೇರೆ ರಾಜ್ಯಗಳಿಗೆ ಕೊಟ್ಟಿದ್ದಾರೆ. ದೇಶದ ಆರ್ಥಿಕತೆಯಲ್ಲಿ ಶೇ. 35ರಷ್ಟು ನಮ್ಮ ರಾಜ್ಯದ ಕೊಡುಗೆ ಇದೆ. ಆದರೆ, ಇವತ್ತು ಪಾರ್ಲಿಮೆಂಟ್‌ನಲ್ಲಿ ನಮ್ಮ ಪಾಲಿರುವುದು ಶೇ. 20 ಮಾತ್ರ ಎಂದು ತಿಳಿಸಿದರು.

ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು
ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರ ಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಮಾತ ನಾಡಿ, ಕೇಂದ್ರ ಸರಕಾರದಲ್ಲಿ ಲೋಕಸಭಾ ಸೀಟು ಗಳನ್ನು ಹೆಚ್ಚಿಸಬೇಕು ಎಂದು ಪ್ರಧಾನಿಗಳು ಹೇಳಿಕೆ ನೀಡಿದ್ದರು. ಜನಸಂಖ್ಯೆ ಆಧಾರದ ಮೇಲೆ ಆದರೂ ಸಹಜವಾಗಿ ರಾಜಕೀಯ, ಸಾಮಾ ಜಿಕ, ಆರ್ಥಿಕವಾಗಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ವಾಗುತ್ತದೆ. ಇದರ ವಿರುದ್ಧ ಧ್ವನಿ ಎತ್ತಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತರ ಭಾರತೀಯರಿಗೆ ಕೊಡುವುದರಲ್ಲಿ ನಮಗೇನೂ ತಕರಾರಿಲ್ಲ. ಆದರೆ ನ್ಯಾಯಯುತವಾಗಿ, ಸಮಾನತೆಯಿಂದ ಕೊಡಬೇಕು ಎಂದರು.

ಪ್ರಾದೇಶಿಕ ವೈವಿಧ್ಯತೆ ನಿರ್ನಾಮಕ್ಕೆ ಯತ್ನ
ಬಹುತ್ವವವೇ ನಮ್ಮ ಮೂಲ ಅಸ್ತಿತ್ವ. ಆದರೆ, ಇಂದು ಪ್ರಾದೇಶಿಕ ವೈವಿದ್ಯತೆಯ ಮೇಲೆ ಸಮರೋಪಾದಿಯಲ್ಲಿ ಯುದ್ದ ನಡೆಯುತ್ತಿದೆ. ಇದನ್ನು ನಿರ್ನಾಮ ಮಾಡುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿದೆ. ಆ ಸಂದರ್ಭದಲ್ಲಿ ನಾವು ನಮ್ಮತನವನ್ನು ಕಳೆದುಕೊಂಡರೆ ಸ್ವಾಭಿಮಾನಿ ಯಾಗಿ ಬದುಕಲು ಸಾಧ್ಯವಿಲ್ಲ. ನಮ್ಮ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಜಾಗೃತಿಯ ಇತಿಹಾಸ ಪ್ರಬಲ ವಾಗಿದೆ. ಆದರೆ, ನಮ್ಮಲ್ಲಿ ಜಾಗೃತಿ ಕಡಿಮೆಯಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page