ಸಾರ್ವಜನಿಕ ಮತ್ತು ಸರ್ಕಾರಿ ಸ್ಥಳಗಳಲ್ಲಿ ‘RSS’ ನಿಷೇಧಕ್ಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಸ್ವತಃ ಪ್ರಿಯಾಂಕ್ ಖರ್ಗೆ ತಮ್ಮ X ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿ, ನನಗೆ ನಿರಂತರ ಬೆದರಿಕೆ ಕೆರೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದಾರೆ.
“ಕಳೆದ ಎರಡು ದಿನಗಳಿಂದ ನನ್ನ ಫೋನ್ ರಿಂಗಣಿಸುವುದನ್ನು ನಿಲ್ಲಿಸಿಲ್ಲ. ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಪ್ರಶ್ನಿಸುವ ಹಾಗೂ ತಡೆಯುವ ಧೈರ್ಯ ಮಾಡಿದ್ದರಿಂದ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಬೆದರಿಕೆಗಳು, ಅತ್ಯಂತ ಕೀಳು ಪದಗಳ ನಿಂದನೆಗಳಿಂದ ತುಂಬಿದ ಕರೆಗಳು ಬರುತ್ತಲೇ ಇವೆ” ಎಂದು ಟ್ವಿಟ್ ನಲ್ಲಿ ಹೇಳಿದ್ದಾರೆ.
“ಆದರೆ ನಾನು ಇದರಿಂದ ವಿಚಲಿತನಾಗುವುದಿಲ್ಲ ಅಥವಾ ನನಗೆ ಅಚ್ಚರಿಯೂ ಆಗಿಲ್ಲ. ಮಹಾತ್ಮ ಗಾಂಧಿ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರನ್ನೇ ಆರ್‌ಎಸ್‌ಎಸ್ ಬಿಟ್ಟಿಲ್ಲ, ಇನ್ನು ಅವರು ನನ್ನನ್ನು ಹೇಗೆ ಬಿಡುತ್ತಾರೆ?” ಎಂದಿದ್ದಾರೆ.
ಮುಂದುವರೆದು “ಬೆದರಿಕೆಗಳು ಮತ್ತು ವೈಯಕ್ತಿಕ ನಿಂದನೆಗಳಿಂದ ನನ್ನ ಬಾಯಿ ಮುಚ್ಚಿಸಬಹುದು ಎಂದು ಅವರು ಭಾವಿಸಿದ್ದರೆ, ಅದು ಅವರ ಕಲ್ಪನೆ ಮಾತ್ರ. ಇದಿನ್ನೂ ಆರಂಭವಷ್ಟೇ.”
“ಇದು ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ್ ಅವರ ತತ್ವಗಳ ಮೇಲೆ ಸಮಾಜವನ್ನು ನಿರ್ಮಿಸುವ ಕಾಲ. ಸಮಾನತೆ, ವಿವೇಚನೆ ಮತ್ತು ಕರುಣೆಯಲ್ಲಿ ಬೇರೂರಿರುವ ಸಮಾಜ ಹಾಗೂ ಈ ರಾಷ್ಟ್ರವನ್ನು ಅತ್ಯಂತ ಅಪಾಯಕಾರಿ “viRuSS” ಗಳಿಂದ ಶುದ್ಧೀಕರಿಸುವ ಸಮಯ ಇದಾಗಿದೆ” ಎಂದು ಮತ್ತಷ್ಟು ತೀಕ್ಷ್ಣವಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಧ್ಯ ಬಿಜೆಪಿ ಮತ್ತು RSS ನ ತಳಮಟ್ಟದ ಕಾರ್ಯಕರ್ತರುಗಳು ಅಷ್ಟೇ ಅಲ್ಲದೆ, ಹಲವು ರಾಜ್ಯಮಟ್ಟದ ಮುಖಂಡರು ಈಗ ಪ್ರಿಯಾಂಕ್ ಖರ್ಗೆ ವಿರುದ್ಧ ತಿರುಗಿಬಿದ್ದಿದ್ದಾರೆ.