ಲಕ್ನೋ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಅಪ್ರಾಪ್ತ ಮಗನೊಬ್ಬ ತನ್ನ ಸೋದರಸಂಬಂಧಿಯ ಸಹಾಯದಿಂದ, ಹಲವಾರು ವರ್ಷಗಳಿಂದ ತನ್ನ ಇಬ್ಬರು ಪುತ್ರಿಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಆರೋಪದ ಮೇಲೆ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಅಪರಾಧದ ನಂತರ ಈ ಇಬ್ಬರು ಅಪ್ರಾಪ್ತರು ಪೊಲೀಸರಿಗೆ ಶರಣಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮೃತಪಟ್ಟ ವ್ಯಕ್ತಿಯು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ನಿವಾಸಿಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಸಂತ್ರಸ್ತೆಯರ ತಾಯಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು.
ಸಂತ್ರಸ್ತರ ಅಪ್ರಾಪ್ತ ಸಹೋದರ ಈ ಹಿಂದೆ ಕೂಡ ತನ್ನ ತಂದೆಯಿಂದ ನಡೆಯುತ್ತಿದ್ದ ಲೈಂಗಿಕ ಕಿರುಕುಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದರೂ, ವಿಫಲನಾಗಿದ್ದ.
ಕೆಲವು ದಿನಗಳ ಹಿಂದೆ ಆ ಅಪ್ರಾಪ್ತ ಮಗ ತನ್ನ ಸಹೋದರಿಯರನ್ನು ಮಥುರಾ ಜಿಲ್ಲೆಯ ಕೋಸಿಕಲಾನ್ ಪ್ರದೇಶದಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಸ್ಥಳಾಂತರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಭಾನುವಾರ ತಂದೆ ಅಲ್ಲಿಗೆ ಬಂದು ಇಬ್ಬರು ಪುತ್ರಿಯರನ್ನು ಮನೆಗೆ ಬರುವಂತೆ ಒತ್ತಾಯಿಸಿದ. ಅಪ್ರಾಪ್ತ ಮಗ ಮತ್ತೆ ವಿರೋಧಿಸಿದಾಗ, ಇಬ್ಬರ ನಡುವೆ ಜಗಳ ನಡೆಯಿತು. ಆಗ ಅಪ್ರಾಪ್ತ ಮಗ ತನ್ನ ಸೋದರಸಂಬಂಧಿಯ ಸಹಾಯದಿಂದ ಖಡ್ಗದಿಂದ ತಂದೆಯ ಮೇಲೆ ಹಲ್ಲೆ ಮಾಡಿದ. ತಂದೆ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಸಾವನ್ನಪ್ಪಿದ.
ನಂತರ, ಈ ಇಬ್ಬರು ಕೋಸಿಕಲಾನ್ ಪೊಲೀಸ್ ಠಾಣೆಗೆ ತೆರಳಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಳೆದ ಕೆಲವು ವರ್ಷಗಳಿಂದ ತಮ್ಮ ತಂದೆಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಗಿ ಹೆಣ್ಣುಮಕ್ಕಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ದಾಖಲಿಸಲಾಗಿದೆ.
