Wednesday, August 20, 2025

ಸತ್ಯ | ನ್ಯಾಯ |ಧರ್ಮ

ರೋಗಿಯೊಂದಿಗೆ ಅನುಚಿತ ವರ್ತನೆ: ವೈದ್ಯನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ ಕರ್ನಾಟಕ ಪೊಲೀಸ್‌

ಬೆಂಗಳೂರು:  19 ವರ್ಷದ ರೋಗಿಯೊಂದಿಗೆ ಅನುಚಿತವಾಗಿ ವರ್ತಿಸಿ ತಲೆಮರೆಸಿಕೊಂಡ ವೈದ್ಯನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಚಂದ್ರಾ ಲೇಔಟ್ ಸಮೀಪದ ಅರುಂಧತಿ ನಗರದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಉದೇದುಲ್ಲಾ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆದಷ್ಟು ಬೇಗ ಬಂಧಿಸಲು ತಂಡಗಳು ಆರೋಪಿ ವೈದ್ಯನ ಬಗ್ಗೆ ಸುಳಿವುಗಳನ್ನು ಸಂಗ್ರಹಿಸುತ್ತಿವೆ ಎಂದು ಚಂದ್ರ‌ ಲೇಔಟ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ವೈದ್ಯ ಬೆಂಗಳೂರಿನ ಕಾಟನ್‌ಪೇಟೆಯ ಪಿಂಚಣಿ ಮೊಹಲ್ಲಾ ನಿವಾಸಿಯಾಗಿದ್ದು, ವಿವಾಹಿತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ ಕೊನೆಯ ವಾರದಲ್ಲಿ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಆರೋಪಿ ವೈದ್ಯರನ್ನು ಭೇಟಿಯಾದಾಗ ಬಾಲಕಿ ದೂರು ನೀಡಿದ್ದಳು.

ದೂರಿನ ಮಾಹಿತಿ ಪ್ರಕಾರ,ಸೆಪ್ಟೆಂಬರ್ 28ರ ರಾತ್ರಿ ನಾನು ನನ್ನ ತಾಯಿಯೊಂದಿಗೆ ಕ್ಲಿನಿಕ್‌ಗೆ ಹೋಗಿದ್ದೆ. ಆ ವೇಳೆ ವೈದ್ಯರು ನನ್ನನ್ನು ಅನುಚಿತವಾಗಿ ಮುಟ್ಟಿದ್ದರು. ಸೆಪ್ಟೆಂಬರ್ 29 ರಂದು ನಾನು ಎರಡನೇ ಬಾರಿಗೆ ಭೇಟಿ ನೀಡಿದಾಗ ಗ್ಲೂಕೋಸ್ ನೀಡುವಾಗ ನನ್ನ ಕೆನ್ನೆಯನ್ನು ಅನುಚಿತವಾಗಿ ಮುಟ್ಟಿದ್ದರು. ತದನಂತರ ಸೆಪ್ಟೆಂಬರ್ 30 ರಂದು, ನಾನು ನನ್ನ ಸಹೋದರನೊಂದಿಗೆ ವೈದ್ಯರ ಬಳಿಗೆ ಹೋಗಿದ್ದೆ. ಈ ವೇಳೆ ನನ್ನ ಸಹೋದರನನ್ನು ಹೊರಗೆ ಕಳುಹಿಸಿ ಕ್ಲಿನಿಕ್‌ನಲ್ಲಿ ಬೆಡ್ ಮೇಲೆ ಮಲಗುವಂತೆ ಹೇಳಿದರು. ನಂತರ ಅವರು ನನಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದರು. ಆಗ ನಾನು ಅಳಲು ಪ್ರಾರಂಭಿಸದ ನಂತರ ಅವರು ಕಿರುಕುಳ ನೀಡುವುದನ್ನು ನಿಲ್ಲಿಸಿದರು ಎಂದು ಸಂತ್ರಸ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಮೇಲೆ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರು ಆರೋಪಿ ಡಾ.ಉದೇದುಲ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸ್‌ ಮಾಹಿತಿ ಪ್ರಕಾರ, ಚಿಕಿತ್ಸೆ ವೇಳೆ ಆರೋಪಿ ವೈದ್ಯ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಮತ್ತು ವಿಷಯವನ್ನು ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಆರೋಪಿ ವೈದ್ಯರ ಕ್ಲಿನಿಕ್‌ಗೆ ಹೋಗಲು ನಿರಾಕರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆಕೆಯ ಮನೆಯವರು ಆರೋಪಿಯ ಬಳಿಗೆ ಕರೆದೊಯ್ಯಲು ಪಟ್ಟು ಹಿಡಿದಾಗ, ಕ್ಲಿನಿಕ್‌ನಲ್ಲಿ ತನಗಾದ ಕಷ್ಟವನ್ನು ಪೋಷಕರಿಗೆ ಹೇಳಿದ್ದಾಳೆ. ನಂತರ ಸಂತ್ರಸ್ತೆಯ ಸಹೋದರರು ಕ್ಲಿನಿಕ್‌ಗೆ ಹೋಗಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು, ಕ್ಲಿನಿಕ್‌ನಲ್ಲಿರುವ ಪೀಠೋಪಕರಣಗಳನ್ನು ಒಡೆದು ಹಾನಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page