Friday, June 14, 2024

ಸತ್ಯ | ನ್ಯಾಯ |ಧರ್ಮ

ದಾವಣಗೆರೆ ಮಾಜಿ ಶಾಸಕರ ಸಮಾಧಿ ಒಡೆದ ದುಷ್ಕರ್ಮಿಗಳು ; ಜಮೀನಿನ ಅಕ್ರಮ ಪರಭಾರೆ ನಡೆದ ಬಗ್ಗೆ ಶಂಕೆ

ದಾವಣಗೆರೆಯ ವಿದ್ಯುತ್ ನಗರದ ಶಿವಕುಮಾರ್ ಬಡಾವಣೆಯಲ್ಲಿ ಇರುವ ದಾವಣಗೆರೆ ಮಾಜಿ ಶಾಸಕರಾದ ದಿ. ಬಿ.ಎಂ. ತಿಪ್ಪೇಸ್ವಾಮಿ ಅವರಿಗೆ ಸೇರಿದ್ದ ಜಾಗ ಮತ್ತು ಅವರ ಸಮಾಧಿಯನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ಈ ಬಗ್ಗೆ ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದ ಬಿ‌.ಎಂ. ತಿಪ್ಪೇಸ್ವಾಮಿ ಅವರ ಮಗಳು, ಖ್ಯಾತ ಲೇಖಕಿ ಬಿ.ಟಿ. ಜಾಹ್ನವಿಯವರು ನಡೆದ ಘಟನೆಯನ್ನು ವಿವರಿಸಿದ್ದಾರೆ

1978 ರಲ್ಲಿ ಬಿ.ಎಂ.ತಿಪ್ಪೇಸ್ವಾಮಿಯವರಿಗೆ ಅವರ ಸಮಾಜ ಸೇವೆ ಮತ್ತು ಶಾಸಕರಾಗಿ ಕಾರ್ಯ ನಿರ್ವಹಿಸಿದ ಕಾರಣಕ್ಕೆ ಸರ್ಕಾರದಿಂದ ಈ ಜಾಗದಲ್ಲಿ 2 ಎಕರೆ ಜಾಗ ನೀಡಲಾಗಿತ್ತು. ಅಂದಿನಿಂದ 1990 ರ ವರೆಗೂ ಈ ಜಾಗವನ್ನು ತಿಪ್ಪೇಸ್ವಾಮಿಯವರು ಯಾವುದೇ ಕಾಮಗಾರಿ ಮಾಡದೇ ಹಾಗೆಯೇ ಇರಿಸಿಕೊಂಡಿದ್ದರು.

ಮಾಜಿ ಶಾಸಕರಾದ ಡಾ.ಬಿ.ಎಂ.ತಿಪ್ಪೇಸ್ವಾಮಿಯವರು

1990 ರ ನಂತರ ತಿಪ್ಪೇಸ್ವಾಮಿಯವರ ಅಗಲಿಕೆಯ ನಂತರ ಅದೇ ಜಾಗದಲ್ಲಿ ಅವರ ಅಂತ್ಯಕ್ರಿಯೆ ನಡೆಸಿ ಅಲ್ಲೇ ಸಮಾಧಿ ಕಟ್ಟಲಾಗಿತ್ತು. ಆ ನಂತರದ ದಿನಗಳಲ್ಲಿ ಅವರ ಕುಟುಂಬ ವರ್ಗದವರಿಗೂ ತಂದೆಯ ಸಮಾಧಿ ಅಕ್ಕ ಪಕ್ಕದಲ್ಲೇ ಸಮಾಧಿ ನಿರ್ಮಾಣ ಮಾಡಲಾಗಿತ್ತು.

ತಿಪ್ಪೇಸ್ವಾಮಿಯವರ ಸಮಾಧಿ ಸ್ಥಳ

ಆದರೆ ನಿನ್ನೆ ಭಾನುವಾರದ ದಿನ ಅನಿರೀಕ್ಷಿತವಾಗಿ ದುಷ್ಕರ್ಮಿಗಳು ಇವರ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಜೊತೆಗೆ ಜೆಸಿಬಿ ಟ್ರಾಕ್ಟರ್ ಗಳ ಸಮೇತರಾಗಿ ಬಂದು ತಿಪ್ಪೇಸ್ವಾಮಿಯವರ ಸಮಾಧಿಯನ್ನು ಧ್ವಂಸ ಮಾಡಿದ್ದಾರೆ. ಇದನ್ನು ತಡೆಯಲು ಹೋದ ತಿಪ್ಪೇಸ್ವಾಮಿಯವರ ಮಗಳು, ಲೇಖಕಿ ಬಿ.ಟಿ.ಜಾಹ್ನವಿ ಮತ್ತು ಕುಟುಂಬಸ್ಥರ ಮೇಲೂ ಸಹ ದುಷ್ಕರ್ಮಿಗಳು ಹಲ್ಲೆಗೆ ಮುಂದಾಗಿದ್ದಾರೆ.

ಸಧ್ಯದ ಪರಿಸ್ಥಿತಿಯಲ್ಲಿ ತಮ್ಮ ನೆರವಿಗೆ ಯಾರೂ ಬಾರದಿರುವ ಹಿನ್ನೆಲೆಯಲ್ಲಿ ಅಲ್ಲಿಂದ ತೆರಳಿದ ಬಿ.ಟಿ.ಜಾಹ್ನವಿಯವರು ಇಂದು ಸೋಮವಾರ ಬೆಳಿಗ್ಗೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಸಂಪರ್ಕಿಸಿ ತಮಗಾದ ಅನ್ಯಾಯವನ್ನು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ

ದಾಖಲೆಗಳ ಆಧಾರದಲ್ಲಿ ಜಾಗದ ಎಲ್ಲಾ ಹಕ್ಕುಗಳು ಬಿ.ಎಂ. ತಿಪ್ಪೇಸ್ವಾಮಿಯವರ ಕುಟುಂಬಕ್ಕೆ ಇದ್ದರೂ ಅತಿಕ್ರಮ ಪ್ರವೇಶ ಮಾಡಿದ ವ್ಯಕ್ತಿಗಳು ಪಹಣಿ ಪತ್ರದಲ್ಲಿ ತಮ್ಮ ಹೆಸರು ಇರುವುದನ್ನು ತೋರಿಸಿದ್ದಾರೆ. ಇದನ್ನೆಲ್ಲಾ ನೋಡಿದರೆ ಅಧಿಕಾರಿ ವರ್ಗದವರು ಭ್ರಷ್ಟಾಚಾರದ ಮೂಲಕ ಜಮೀನಿನ ನಕಲಿ ದಾಖಲೆ ಸೃಷ್ಟಿಸಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದ ಲೇಖಕಿ ಬಿ.ಟಿ.ಜಾಹ್ನವಿಯವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು