ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಯುವತಿ ನಾಲ್ಕು ದಿನಗಳ ಬಳಿಕ ಪತ್ತೆ

ಮಡಿಕೇರಿ: ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಅವರು ಅಂತಿಮವಾಗಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಂಯುಕ್ತ ಶೋಧ ಕಾರ್ಯಾಚರಣೆ ಯಶಸ್ವಿಯಾಗಿದೆ.

ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದ ಶರಣ್ಯ
ಕಕ್ಕಬ್ಬೆ ಸಮೀಪದ ಕಬ್ಬಿನಕಾಡು ಹೋಂ ಸ್ಟೇನಲ್ಲಿ ತಂಗಿದ್ದ ಶರಣ್ಯ, ಕಳೆದ ಗುರುವಾರ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೊರಟಿದ್ದರು. ಚಾರಣದ ನಡುವೆ ತಂಡದಿಂದ ಬೇರ್ಪಟ್ಟ ಅವರಿಗೆ ವಾಪಸು ದಾರಿ ಸಿಗದೆ ಕಾಡಿನಲ್ಲಿ ಒಂಟಿಯಾಗಿ ಸಿಲುಕಿಕೊಂಡರು. ಕೊನೆಗೆ ಅಲ್ಲಿಯೇ ಇದ್ದ ಪಾಳು ಬಿದ್ದ ಬಂಗಲೆಯೊಂದರಲ್ಲಿ ಆಶ್ರಯ ಪಡೆದಿದ್ದರು.

ಡ್ರೋನ್, ಶ್ವಾನ ದಳ ಸೇರಿ ವ್ಯಾಪಕ ಶೋಧ
ಕಾಣೆಯಾದ ವರದಿ ದಾಖಲಾದ ತಕ್ಷಣ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಹಾಗೂ ಶ್ವಾನ ದಳದ ನೆರವಿನೊಂದಿಗೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದರು. ಸ್ಥಳೀಯರೂ ಹುಡುಕಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ನಾಲ್ಕು ದಿನಗಳ ಸತತ ಪ್ರಯತ್ನದ ಬಳಿಕ ಇಂದು ಶರಣ್ಯ ಅವರು ಪತ್ತೆಯಾಗಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು