Home ರಾಜಕೀಯ ತಮಿಳುನಾಡಿನಲ್ಲಿ ಮಣಿಪುರ ಮಾದರಿ ಹಿಂಸಾಚಾರಕ್ಕೆ ಬಿಜೆಪಿ ಸಂಚು: ಸಿಎಂ ಸ್ಟಾಲಿನ್ ಗಂಭೀರ ಆರೋಪ

ತಮಿಳುನಾಡಿನಲ್ಲಿ ಮಣಿಪುರ ಮಾದರಿ ಹಿಂಸಾಚಾರಕ್ಕೆ ಬಿಜೆಪಿ ಸಂಚು: ಸಿಎಂ ಸ್ಟಾಲಿನ್ ಗಂಭೀರ ಆರೋಪ

0

ತಿರುಚಿರಾಪಳ್ಳಿ: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಹಿನ್ನೆಲೆಯಲ್ಲಿ ಡಿಎಂಕೆ (DMK) ಆಯೋಜಿಸಿದ್ದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯದಲ್ಲಿ ಉತ್ತರ ಪ್ರದೇಶ ಮತ್ತು ಮಣಿಪುರ ಮಾದರಿಯ ಜಾತಿ ಹಾಗೂ ಧರ್ಮ ಆಧಾರಿತ ಹಿಂಸಾಚಾರವನ್ನು ಪ್ರಚೋದಿಸಲು ಬಿಜೆಪಿ ಸಂಚು ರೂಪಿಸಿತ್ತು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಡಿಎಂಕೆ ಸರ್ಕಾರದ ಆಡಳಿತದಲ್ಲಿ ತಮಿಳುನಾಡು ಶಾಂತಿಯುತವಾಗಿದ್ದು, ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಆದರೆ, ಇಲ್ಲಿನ ಸಾಮರಸ್ಯವನ್ನು ಕೆಡಿಸಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಿದೆ. “ಉತ್ತರ ಪ್ರದೇಶದಲ್ಲಿ ಕಂಡುಬರುವ ಗುಂಪು ಹಿಂಸಾಚಾರ ಅಥವಾ ಮಣಿಪುರದ ನಿರಂತರ ಅಶಾಂತಿ ತಮಿಳುನಾಡಿನಲ್ಲಿ ಇಲ್ಲ. ಬಿಜೆಪಿಯ ಎಲ್ಲಾ ಕುತಂತ್ರಗಳನ್ನು ನಾವು ಯಶಸ್ವಿಯಾಗಿ ಮೆಟ್ಟಿ ನಿಂತಿದ್ದೇವೆ” ಎಂದು ಅವರು ಗುಡುಗಿದ್ದಾರೆ. ಅಲ್ಲದೆ, ಅಧಿಕಾರಕ್ಕಾಗಿ ಎಐಎಡಿಎಂಕೆ (AIADMK) ಅಲ್ಪಸಂಖ್ಯಾತರಿಗೆ ದ್ರೋಹ ಬಗೆದಿದೆ ಎಂದು ಅವರು ಟೀಕಿಸಿದ್ದಾರೆ.

ಚುನಾವಣಾ ಭರವಸೆಗಳ ಸುರಿಮಳೆಗೈದ ಸ್ಟಾಲಿನ್, ಡಿಎಂಕೆ ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಲಾ 8,000 ರೂಪಾಯಿ ಮೌಲ್ಯದ ಕೂಪನ್ ನೀಡಲಾಗುವುದು ಎಂದು ಘೋಷಿಸಿದರು. ಈ ಕೂಪನ್ ಬಳಸಿ ಮಹಿಳೆಯರು ತಮಗೆ ಇಷ್ಟವಾದ ಗೃಹೋಪಯೋಗಿ ವಸ್ತುಗಳನ್ನು ಉಚಿತವಾಗಿ ಖರೀದಿಸಬಹುದು. ಇದು ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದಲ್ಲದೆ, ಪ್ರಸ್ತುತ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ ನಗದು ಸಹಾಯವನ್ನು 2,000 ರೂಪಾಯಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು 1,500 ರೂಪಾಯಿಗೆ ಏರಿಕೆ ಮಾಡಲಾಗುವುದು ಎಂದು ಸ್ಟಾಲಿನ್ ಭರವಸೆ ನೀಡಿದರು. ಬಿಜೆಪಿಯ ವಿಭಜಕ ರಾಜಕಾರಣಕ್ಕೆ ತಮಿಳುನಾಡಿನ ಜನತೆ ಮರುಳಾಗುವುದಿಲ್ಲ ಮತ್ತು ಅಭಿವೃದ್ಧಿ ಪರವಿರುವ ಡಿಎಂಕೆ ಕೈಹಿಡಿಯಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

You cannot copy content of this page

Exit mobile version