ಚೆನ್ನೈ: ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ತಮ್ಮ ಜೈಲು ಇತಿಹಾಸದ ಕುರಿತು ನಡೆದ ಅಪಹಾಸ್ಯದ ಚರ್ಚೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್, ಮುಖ್ಯಮಂತ್ರಿ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯನ್ನು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಲು ಬಳಸಿಕೊಳ್ಳದೆ, ಜನರ ಕಲ್ಯಾಣ ಮತ್ತು ಆಡಳಿತದತ್ತ ಗಮನಹರಿಸಿ ಎಂದು ಅವರು ನೇರವಾಗಿ ಚಾಟಿ ಬೀಸಿದ್ದಾರೆ.
ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಸ್ಟಾಲಿನ್, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಜಯ್ ತಮ್ಮ ಮನೆಗೆ ಭೇಟಿ ನೀಡಿದ್ದ ಸಂದರ್ಭವನ್ನು ನೆನಪಿಸಿದ್ದಾರೆ. “ಮುಖ್ಯಮಂತ್ರಿಯಾದ ಬಳಿಕ ಸೌಜನ್ಯಕ್ಕಾಗಿ ನನ್ನ ಮನೆಗೆ ಬಂದಿದ್ದ ನೀವು, ಚುನಾವಣಾ ಪ್ರಚಾರದ ವೇಳೆ ನಿಮ್ಮ ಬಗ್ಗೆ ಹೆಚ್ಚು ಕಟುವಾಗಿ ಮಾತನಾಡಿದೆ, ಕ್ಷಮಿಸಿ ಎಂದಿದ್ದಿರಿ. ಆಗ ನಾನು ಸಹಜವಾಗಿ ಸ್ವೀಕರಿಸಿ, ನೀವು ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದೀರಿ, ಆ ಸ್ಥಾನದ ಘನತೆ ಮತ್ತು ಮರ್ಯಾದೆಯನ್ನು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದ್ದೆ. ಆದರೆ ಅಧಿಕಾರದ ಮದದಲ್ಲಿ ಆ ಮಾತನ್ನು ನೀವು ಮರೆತಂತೆ ಕಾಣುತ್ತಿದೆ,” ಎಂದು ಕಿಡಿಕಾರಿದ್ದಾರೆ.
1976ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಿಸಾ (MISA) ಕಾಯ್ದೆಯಡಿ ತಾವು ಅನುಭವಿಸಿದ ಕರಾಳ ಸೆರೆವಾಸವನ್ನು ಸ್ಮರಿಸಿದ ಸ್ಟಾಲಿನ್, ಜೈಲಿನಲ್ಲಿ ತಮ್ಮ ಮೇಲೆ ನಡೆದ ಅಮಾನುಷ ಹಲ್ಲೆಯನ್ನು ವಿವರಿಸಿದರು. ತಮ್ಮನ್ನು ರಕ್ಷಿಸಲು ಹೋಗಿ ಒಡನಾಡಿ ಸಂಸದ ಸಿಟ್ಟಿ ಬಾಬು ಪ್ರಾಣ ತ್ಯಾಗ ಮಾಡಿದ್ದನ್ನು ಹಾಗೂ ತಮ್ಮ ದವಡೆ ಮೂಳೆ ಮುರಿದು ಇಂದಿಗೂ ಆ ಗಾಯದ ಗುರುತುಗಳು ಉಳಿದಿರುವುದನ್ನು ಉಲ್ಲೇಖಿಸಿದ ಅವರು, ಸಂಶಯವಿದ್ದರೆ ವಿಧಾನಸಭೆಯ ಗ್ರಂಥಾಲಯದಲ್ಲಿರುವ ಇಸ್ಮಾಯಿಲ್ ಆಯೋಗದ ವರದಿಯನ್ನು ಓದಿ ನೋಡಲಿ ಎಂದು ಸವಾಲು ಹಾಕಿದರು.
ಇದೇ ವೇಳೆ ವಿಜಯ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದರು. ಪರಂದೂರು ವಿಮಾನ ನಿಲ್ದಾಣ ರದ್ದುಪಡಿಸಿ ತಮಿಳುನಾಡಿನ ಬೆಳವಣಿಗೆಯನ್ನು 15 ವರ್ಷಗಳಷ್ಟು ಹಿಂದಕ್ಕೆ ತಳ್ಳಲಾಗಿದೆ ಎಂದು ದೂರಿದ ಅವರು, ಸಂಪೂರ್ಣ ಕೃಷಿ ಸಾಲ ಮನ್ನಾ, ವರ್ಷಕ್ಕೆ 6 ಗ್ಯಾಸ್ ಸಿಲಿಂಡರ್ ಹಾಗೂ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವ ಚುನಾವಣಾ ಭರವಸೆಗಳನ್ನು ಈಡೇರಿಸದೆ ಜನರಿಗೆ ವಂಚಿಸಲಾಗಿದೆ ಎಂದು ಟೀಕಿಸಿದರು. ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಡಿಎಂಕೆ ತಮಿಳು ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
