ಹಾಸನ: ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ಹಾಸನಾಂಬ ದೇವಾಲಯದ ಸುತ್ತಮುತ್ತ ಶಾಸಕ ಹೆಚ್.ಪಿ. ಸ್ವರೂಪ್ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಶ್ರಮದಾನ ನಡೆಯಿತು. ಶಾಸಕ ಹಾಗೂ ಡಿಸಿ ಅವರು ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಯೊಂದಿಗೆ ಕೈಜೋಡಿಸಿ ದೇವಾಲಯದ ಸುತ್ತಮುತ್ತ ಸ್ವಚ್ಛಗೊಳಿಸಿದರು. ಈ ವೇಳೆ ಪೌರಕಾರ್ಮಿಕರ ಸೇವೆಯನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಶ್ಲಾಘಿಸಿದರು.
ಸ್ವಚ್ಛತೆ ಕೇವಲ ಪೌರಕಾರ್ಮಿಕರ ಜವಾಬ್ದಾರಿಯಲ್ಲ. ಸಾರ್ವಜನಿಕರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕರಿಸಬೇಕು. ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಿಗೆ ಕಸ ಎಸೆಯದಂತೆ ಮತ್ತು ಪ್ಲಾಸ್ಟಿಕ್ ಕವರ್ಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಸಾರ್ವಜನಿಕರಿಗೆ ಡಿಸಿ ಮನವಿ ಮಾಡಿದರು.
ಗಾಂಧೀಜಿಯವರ ಸ್ವಚ್ಛತೆಯ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಾರ್ವಜನಿಕರು ಹಾಗೂ ಪೌರಕಾರ್ಮಿಕರು ಒಟ್ಟಾಗಿ ಕೈಜೋಡಿಸಿದರೆ ಸ್ವಚ್ಛ ಹಾಸನ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು. ಗಾಂಧೀ ಜಯಂತಿಯ ಅಂಗವಾಗಿ ಶ್ರಮದಾನ ಮಾಡುವ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಾಂಧೀಜಿಯವರ ಸ್ವಚ್ಛತೆಯ ಸಂದೇಶವನ್ನು ಸಾರಿದರು.
