Tuesday, December 23, 2025

ಸತ್ಯ | ನ್ಯಾಯ |ಧರ್ಮ

ಹೈದರ್ ಮತ್ತು ಟಿಪ್ಪು ಬಗೆಗಿನ ಶಾಸಕ ಸುರೇಶ್ ಕುಮಾರ್ ಕಟ್ಟು ಕತೆಯ ವಾಸ್ತವ ಇತಿಹಾಸ

“..ಹೈದರಾಲಿ, ಟಿಪ್ಪು ಬಗ್ಗೆ ಶಾಸಕ ಸುರೇಶ್ ಕುಮಾರ್ ವಿಧಾನಸಭೆಯಲ್ಲಿ ಹೇಳಿದ ಈ ಕತೆ ಸದನದ ದಾಖಲೆಗಳಲ್ಲಿ ದಾಖಲಾಗಿದೆ. ಶಾಸಕರು ಹೇಳಿದ ಈ ಕತೆ ಇತಿಹಾಸದಲ್ಲಿ ಎಲ್ಲೂ ದಾಖಲಾಗಿಲ್ಲ..” ನವೀನ್ ಸೂರಿಂಜೆಯವರ ಬರಹದಲ್ಲಿ

‘ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಪಾವತಿಯಾಗುತ್ತಿಲ್ಲ’ ಎಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಎಸ್ ರವರು ಟಿಪ್ಪು ಸುಲ್ತಾನ್ ತಂದೆ ಹೈದರಾಲಿ ನೀಡುತ್ತಿದ್ದ ಸಂಬಳದ ಕತೆ ಹೇಳಿದ್ದಾರೆ. ಅವರು ಹೇಳಿದ ಕತೆ ಈ ರೀತಿ ಇತ್ತು. ‘ಟಿಪ್ಪು ಸುಲ್ತಾನ್ ಅವರ ತಂದೆ ಹೈದರಾಲಿಯು ತಮ್ಮ ಸೈನ್ಯಕ್ಕೆ ಜನವರಿ ಒಂದನೇ ತಾರೀಕು ಸಂಬಳ ನೀಡುತ್ತಿದ್ದನಂತೆ. ಫೆಬ್ರವರಿ ಬಂದಾಗ ಐದನೇ ತಾರೀಕಿಗೆ ಸಂಬಳ ನೀಡುತ್ತಿದ್ದನಂತೆ. ಐದು ದಿನವಷ್ಟೇ ವ್ಯತ್ಯಾಸ ಎಂದು ಸೈನಿಕರು ಸುಮ್ಮನಾಗುತ್ತಿದ್ದರು. ಮಾರ್ಚ್ ಬಂದಾಗ 10 ನೇ ತಾರೀಕಿಗೆ ಸಂಬಳ ಕೊಡುತ್ತಿದ್ದ. ಎಪ್ರಿಲ್ ನಲ್ಲಿ 15 ನೇ ತಾರೀಕಿಗೆ ಸಂಬಳ ನೀಡುತ್ತಿದ್ದ. ಹೀಗೆ ಐದೈದೇ ದಿನ ಸಂಬಳವನ್ನು ಮುಂದೂಡಿ ಜೂನ್ ಸಂಬಳ ನೀಡುವ ವೇಳೆಗೆ ಒಂದು ತಿಂಗಳ ಸಂಬಳವನ್ನೇ ಹೊಡೆದುಕೊಳ್ಳುತ್ತಿದ್ದ.(ಸದನದಲ್ಲಿ ನಗು)’
ಶಾಸಕ ಸುರೇಶ್ ಕುಮಾರ್ ವಿಧಾನಸಭೆಯಲ್ಲಿ ಹೇಳಿದ ಈ ಕತೆ ಸದನದ ದಾಖಲೆಗಳಲ್ಲಿ ದಾಖಲಾಗಿದೆ. ಶಾಸಕರು ಹೇಳಿದ ಈ ಕತೆ ಇತಿಹಾಸದಲ್ಲಿ ಎಲ್ಲೂ ದಾಖಲಾಗಿಲ್ಲ. ವಾಸ್ತವವಾಗಿ ಕಾರ್ಮಿಕರು, ಸೈನಿಕರ ಸಂಬಳದ ವಿಷಯದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಈ ಕತೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ.

ಹೈದರಾಲಿಯವರು ಕ್ರಿ. ಶ. 1721 ರಲ್ಲಿ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ ಜನಿಸಿದರು.  ಸೈನಿಕ ತರಬೇತಿ ಪಡೆದಿದ್ದ ಹೈದರಾಲಿಯವರು ಮೈಸೂರು ಸೈನ್ಯವನ್ನು ಸೇರಿಕೊಂಡು, ದೇವನಹಳ್ಳಿಯ ಯುದ್ಧದಲ್ಲಿ ಅಪ್ರತಿಮ ಸಾಹಸ ತೋರಿ ಅಂದಿನ ದಳವಾಯಿಯಾಗಿದ್ದ ನಂಜರಾಜಯ್ಯನ ಗಮನ ಸೆಳೆದರು. ಈ ಯುದ್ಧದ ಬಳಿಕ ನಂಜರಾಜಯ್ಯನು ಹೈದರಾಲಿಯವರನ್ನು ಸೈನಿಕ ತುಕಡಿಯೊಂದರ ನಾಯಕನನ್ನಾಗಿ ನೇಮಿಸಿದನು. ಆ ಬಳಿಕ ಹೈದರಾಲಿಯವರು ದಿಂಡಿಗಲ್ಲಿನ ಪೌಜುದಾರನಾಗಿ ನೇಮಕವಾಗಿ, ಮೈಸೂರಿಗೆ ಮುತ್ತಿದ್ದ ಮರಾಠರನ್ನು ಸೋಲಿಸಿ ಓಡಿಸಿ ಕನ್ನಡಿಗರನ್ನೂ, ಕನ್ನಡದ ಸಾಮ್ರಾಜ್ಯವನ್ನೂ ರಕ್ಷಿಸಿದರು. ಹಾಗಾಗಿ ಮೈಸೂರು ರಾಜಮನೆತನದಲ್ಲಿ ಸೇನಾನಾಯಕ ಹೈದರಾಲಿಯವರ ಬಗ್ಗೆ ಅಪಾರ ಗೌರವವಿತ್ತು. ಮುಂದೊಂದು ದಿನ ಮೈಸೂರು ಸೈನ್ಯಕ್ಕೆ ಸಂಬಳ ನೀಡಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಸೈನಿಕರು ಮೈಸೂರು ರಾಜರ ವಿರುದ್ಧ ಬಂಡೆದ್ದರು. ಕರ್ನಾಟಿಕ್‌ ಯುದ್ಧಗಳಿಂದ ಪೌಜುದಾರನಾಗಿ ಹೈದರ್‌ ತಂದಿದ್ದ ಅಪಾರ ಸಂಪತ್ತು ಹೈದರ್ ಬಳಿಯೇ ಇತ್ತು. ಅದನ್ನು ಮೈಸೂರು ಸೈನಿಕರ ವೇತನ ಬಾಕಿ ನಿರ್ವಹಿಸಲು ಬಳಸಿಕೊಂಡು ಸೈನಿಕರ ಸಂಪೂರ್ಣ ವಿಶ್ವಾಸ ಗಳಿಸಿಕೊಂಡರಲ್ಲದೇ, ಮೈಸೂರಿಗೆ ಒದಗಿದ್ದ ಆರ್ಥಿಕ ಸಂಕಷ್ಟ ಪರಿಹರಿಸಿದರು. ಈ ವೇಳೆಗೆ ಹೈದರರ ಕೈಯಡಿ 1500 ಕುದುರೆಗಳೂ, 300 ಪದಾತಿದಳವೂ, 2000 ಜವಾನರೂ ಇದ್ದರು. ಅಂದು ಹೈದರಾಲಿಯವರು ಸೈನಿಕರಿಗೆ ಸಂಬಳ ವಿತರಿಸದೇ ಇದ್ದರೆ ಮೈಸೂರು ಪೂರ್ತಿ ಸೈನ್ಯ ಕಳೆದುಕೊಂಡು ಮರಾಠರದ್ದೋ, ಇನ್ಯಾರದ್ದೋ ಪಾಲಾಗುತ್ತಿತ್ತು. ಸೇನಾಧಿಕಾರಿಯಾಗಿದ್ದ ಹೈದರಾಲಿ ಸೈನಿಕರ ಮೇಲಿನ ಪ್ರೀತಿಯಿಂದ ತಾನೇ ಮುಂದೆ ನಿಂತು ಸಂಬಳದ ವ್ಯವಸ್ಥೆ ಮಾಡುತ್ತಾರೆ. ಇದನ್ನು ಮೆಚ್ಚಿ ಮೈಸೂರಿನ ದಳವಾಯಿಯಾಗಿದ್ದ ನಂಜರಾಜಯ್ಯರು ಹೈದರಾಲಿಯವರಿಗೆ ಕೆಲವು ತಾಲ್ಲೂಕುಗಳನ್ನು ಬಿಟ್ಟು ಕೊಟ್ಟರು. ಮುಂದೆ ಹೈದರ್ ಪ್ರಬಲರಾಗುತ್ತಾ ಸರ್ವಾಧಿಕಾರಿಯಾದರು.

ಅರಸರಾದ ಬಳಿಕ ಹೈದರಾಲಿಯವರು ಎಂತದ್ದೇ ಸಂದರ್ಭದಲ್ಲಿ ಸೈನಿಕರ ಸಂಬಳವನ್ನು ನಿಲ್ಲಿಸುತ್ತಿರಲಿಲ್ಲ. ಹೈದರಾಲಿಯವರು ರಾಜಮನೆತನದಲ್ಲಿ ಹುಟ್ಟಿದವರಲ್ಲ. ಕಾಲಾಳು ಮಟ್ಟದ ಸೈನಿಕರಾಗಿ ಅರಸ ಪಟ್ಟಕ್ಕೇರಿದ್ದ ಹೈದರಾಲಿಯವರಿಗೆ ಸೈನಿಕರ ಕಷ್ಟ ತಿಳಿದಿತ್ತು. ಆ ಕಾರಣಕ್ಕಾಗಿ ಸೈನಿಕರು ಯಾವತ್ತೂ ಕೂಡಾ ಹೈದರಾಲಿಯವರ ವಿರುದ್ಧ ಬಂಡೆದ್ದಿರಲಿಲ್ಲ. ಬ್ರಿಟೀಷರು, ಡಚ್ಚರು, ಪೋರ್ಚುಗೀಸರು ಹೈದರಾಲಿಯವರ ಸೈನ್ಯವನ್ನು ಒಡೆಯಲು ಯತ್ನಿಸಿದರೂ ಯಾಕೆ ವಿಫಲರಾದರು ಎಂದರೆ ಹೈದರಾಲಿಯವರ ಆಡಳಿತದಲ್ಲಿ ಕಾರ್ಮಿಕರು ಮತ್ತು ಸೈನಿಕರಿಗೆ ಸರಿಯಾದ ಸಂಬಳ ಸಿಗುತ್ತಿತ್ತು.

ಸೈನಿಕರಿಗೆ ಸಂಬಳ ನೀಡಲೆಂದೇ ಹೈದರಾಲಿಯವರು ಬಿದನೂರಿನಲ್ಲಿ ಹೊಸ ಟಂಕಸಾಲೆಯನ್ನು ನಿರ್ಮಿಸಿ ಬಹದ್ದೂರಿ ವರಹ ಎಂಬ ನಾಣ್ಯವನ್ನು ಜಾರಿಗೆ ತರುತ್ತಾರೆ. ಈ ಬಹದ್ದೂರಿ ವರಹ ನಾಣ್ಯದ ಒಂದು ಮುಖದಲ್ಲಿ ಶಿವಪಾರ್ವತಿಯರ ಚಿತ್ರವನ್ನು ಅಚ್ಚು ಹಾಕಲಾಗಿತ್ತು. ನಾಣ್ಯದ ಇನ್ನೊಂದು ಮುಖದಲ್ಲಿ ಹೈದರ್ ಸಹಿಯಾದ ‘ಹೈ’ ಎಂದು ಅಚ್ಚು ಹಾಕಲಾಗಿತ್ತು.

ಹೈದರಾಲಿಯವರ ಪುತ್ರ ಟಿಪ್ಪು ಸುಲ್ತಾನ್ ಅವರು ‘ಕಾರ್ಮಿಕರ ಬೆವರು ಆರುವ ಮುನ್ನ ಕೂಲಿ ನೀಡಬೇಕು’ ಎಂಬ ನಿಲುವನ್ನು ಪಾಲಿಸುತ್ತಿದ್ದರು.  1783 ಜುಲೈನಲ್ಲಿ ಟಿಪ್ಪು ಸುಲ್ತಾನ್ ಅವರು ಮಂಗಳೂರಿನಲ್ಲಿ ಬ್ರಿಟೀಷರ ವಿರುದ್ಧ ಯುದ್ಧ ನಡೆಸುತ್ತಿರುತ್ತಾರೆ. ಮಂಗಳೂರಲ್ಲಿ ನಡೆಯುತ್ತಿದ್ದ ಘನಘೋರ ಯುದ್ಧದಲ್ಲಿ ಸಾವು ನೋವುಗಳು ಸಂಭವಿಸುತ್ತಿರುತ್ತವೆ. ಆದರೆ ಜುಲೈ ತಿಂಗಳ ಪ್ರತೀ 24 ನೇ ತಾರೀಕು ನೀಡುವ ಸಂಬಳವನ್ನು ನಿಲ್ಲಿಸದಂತೆ ಟಿಪ್ಪು ಆದೇಶಿಸಿದ್ದರು. ಹಾಗಾಗಿ ಶ್ರೀರಂಗಪಟ್ಟಣದ ಅರಮನೆಯಲ್ಲಿ ಟಿಪ್ಪು ಇಲ್ಲದೇ ಇದ್ದರೂ, ಟಿಪ್ಪು ಸುಲ್ತಾನರು ಮಂಗಳೂರು ಯುದ್ದರಂಗದಲ್ಲಿ ಇದ್ದರೂ ಜುಲೈ 24 ನೇ ತಾರೀಕಿನಂದು ಶ್ರೀರಂಗಪಟ್ಟಣದಲ್ಲಿದ್ದ ಟಿಪ್ಪು ಸೈನಿಕರಿಗೆ ಸಂಬಳವಾಗುತ್ತದೆ.
ಟಿಪ್ಪುವಿನ ಈ ಕಾರ್ಮಿಕ ಪರ ನೀತಿಯನ್ನು ಬ್ರಿಟೀಷರು ಕುತಂತ್ರಕ್ಕೆ ಬಳಸಿಕೊಳ್ಳುತ್ತಾರೆ. ಟಿಪ್ಪು ಬ್ರಿಟಿಷರ ವಿರುದ್ಧ ಮಂಗಳೂರಿನಲ್ಲಿ ಯುದ್ಧ ಮಾಡುತ್ತಿರುವಾಗಲೇ ಟಿಪ್ಪುವನ್ನು ಪದಚ್ಯುತಗೊಳಿಸಲು ಶ್ರೀರಂಗಪಟ್ಟಣ-ಮೈಸೂರಿನಲ್ಲಿ ಸಂಚು ನಡೆಯುತ್ತದೆ. ಟಿಪ್ಪುವನ್ನು ನೇರ ಯುದ್ಧದ ಮೂಲಕ ಸೋಲಿಸಲು ಸಾಧ್ಯವಾಗದ ಬ್ರಿಟಿಷರು ಈ ಸಂಚಿನ ಮಾರ್ಗ ಹಿಡಿಯುತ್ತಾರೆ. ಬ್ರಿಟಿಷರ ಕುಮ್ಮಕ್ಕಿನಂತೆ, ಮಹಾರಾಣಿ ಲಕ್ಷ್ಮಮ್ಮಣ್ಣಿ, ಅವರ ಮ್ಯಾನೇಜರ್ ತಿರುಮಲರಾಯ ಮತ್ತು ಅವರ ಸಹೋದರ ನಾರಾಯಣರಾಯ ಈ ಸಂಚಿನ ಪ್ರಮುಖ ರೂವಾರಿಗಳಾಗಿದ್ದರು. ಟಿಪ್ಪು ಮಂಗಳೂರಿನಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ನಿರತ ಆಗಿರುವಾಗಲೇ 1783 ಜುಲೈ 24 ರಂದು ಶ್ರೀರಂಗಪಟ್ಟಣದ ಟಿಪ್ಪುವಿನ ಅರಮನೆಗೆ ಟಿಪ್ಪುವಿನ ಅಧಿಕಾರಿಗಳೇ ದಾಳಿ ನಡೆಸುವುದು ಇವರ ಉದ್ದೇಶವಾಗಿತ್ತು. ಅದಕ್ಕಾಗಿ ಟಿಪ್ಪುವಿನ ಅರಮನೆ ರಕ್ಷಕರಾಗಿದ್ದ ಕೆಲ ಮುಸ್ಲಿಂ ಅಧಿಕಾರಿಗಳು, ಖಜಾನೆಯ ಪರಿಚಾರಕರು, ವೃತ್ತಿ ನಿರತ ಜಟ್ಟಿಗಳು ಒಳಸಂಚಿನ ಭಾಗವಾಗಿದ್ದರು. ಇವೆರೆಲ್ಲರೂ ಮರಾಠರು, ಬ್ರಿಟಿಷರು ಮತ್ತು ಮೈಸೂರು ಮಹಾರಾಜರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಟಿಪ್ಪುವಿನ ರಾಜ್ಯದಲ್ಲಿ ಅಂಚೆ ಮತ್ತು ಪೊಲೀಸ್ ಇಲಾಖೆಯ ಮುಖ್ಯಸ್ಥನಾಗಿದ್ದ ಶಾಮಯ್ಯನು ಟಿಪ್ಪುವಿನ ಜೊತೆ ಮಂಗಳೂರಿನಲ್ಲಿದ್ದನು. ಈ ಒಳಸಂಚಿನಲ್ಲಿ ಅವನೂ ಭಾಗಿಯಾಗಿದ್ದ. ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ಈ ಒಳಸಂಚು ಮಂಗಳೂರಿನಲ್ಲಿದ್ದ ಪೊಲೀಸ್ ಮುಖ್ಯಸ್ಥ ಶಾಮಯ್ಯನಿಗೆ ತಿಳಿಯುತ್ತಿತ್ತು. ಶ್ರೀರಂಗಪಟ್ಟಣಕ್ಕೆ ದಾಳಿ ಮಾಡುವ ಟಿಪ್ಪುವಿನ ಅಧಿಕಾರಿಗಳು ಮೊದಲನೆಯದಾಗಿ ಜೈಲಿನ ಬಾಗಿಲು ತೆರೆದು ಬ್ರಿಟಿಷ್ ಅಧಿಕಾರಿಗಳನ್ನು ಬಿಟ್ಟು ಬಿಡಬೇಕು ಎಂದು ಯೋಜಿಸಲಾಗಿತ್ತು. ಆ ಬಳಿಕ ಬ್ರಿಟಿಷರೆ ದಾಳಿಯ ನೇತೃತ್ವ ವಹಿಸಿ, ಟಿಪ್ಪು ಮಂಗಳೂರಿನಿಂದ ಮರಳಿ ಶ್ರೀರಂಗಪಟ್ಟಣಕ್ಕೆ ಬರದಂತೆ ಯೋಜನೆ ರೂಪಿಸಲಾಗಿತ್ತು. ಈ ಸಂಚು ಸಂಪೂರ್ಣ ರೂಪುಗೊಂಡ ಬಳಿಕ ಬ್ರಿಟಿಷ್ ಸರ್ಕಾರವು ಕರ್ನಲ್ ಲಾಂಗ್  ನೇತೃತ್ವದಲ್ಲಿ ಸೈನ್ಯವನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಲಾಯಿತು. ಈ ಮಧ್ಯೆ ಬ್ರಿಟಿಷರು ಸೇನೆಯ ನಾಯಕತ್ವವನ್ನು ಬದಲಿಸಿ ಕರ್ನಲ್ ಲಾಂಗ್ ಜಾಗಕ್ಕೆ ಕರ್ನಲ್ ಪುಲ್ಲಾರ್ಟ್ ಅನ್ನು ನೇಮಕ ಮಾಡುತ್ತಾರೆ. 1783 ಜುಲೈ 24 ರಂದು ಈ ಕ್ಷಿಪ್ರಕ್ರಾಂತಿಗೆ ಯಾಕೆ ದಿನ ನಿಗದಿಗೊಳಿಸಲಾಗಿತ್ತು ಎಂದರೆ, ಅಂದು ಸಂಬಳದ ದಿನವಾಗಿತ್ತು. ಟಿಪ್ಪು ಯುದ್ಧ ಕಾಲದಲ್ಲೂ, ಅರಮನೆಯಲ್ಲಿ ತಾನಿಲ್ಲದಿದ್ದರೂ ಸೈನಿಕರಿಗೆ ಸಂಬಳ ನಿಲ್ಲಿಸುತ್ತಿರಲಿಲ್ಲ. ಅಂದು ಅರಮನೆಯ ಸೈನಿಕರೆಲ್ಲರೂ ಸಂಬಳಕ್ಕಾಗಿ ಸರತಿಯಲ್ಲಿದ್ದು ನಿಶಸ್ತ್ರರಾಗಿರುತ್ತಾರೆ. ಮೊದಲು ಟಿಪ್ಪುವಿನ ಮುಖ್ಯ ಅಧಿಕಾರಿಗಳನ್ನು ಟಿಪ್ಪುವಿನ ಅಧಿಕಾರಿಗಳೇ ಕೊಂದು ಅರಮನೆಯನ್ನು ಸ್ವಾಧೀನ ಮಾಡಿಕೊಳ್ಳುವುದು ಕ್ಷಿಪ್ರಕ್ರಾಂತಿಯ ಯೋಜನೆಯಾಗಿತ್ತು. ಆದರೆ ಈ ಕ್ಷಿಪ್ರಕ್ರಾಂತಿಯ ಯೋಜನೆಯು 1783 ಜುಲೈ 23 ರ ರಾತ್ರಿ ಬಯಲಾಗುತ್ತದೆ. ಎಲ್ಲಾ ಸಂಚುಕೊರ ಭ್ರಷ್ಟ ಅಧಿಕಾರಿಗಳನ್ನು ಬಂಧಿಸಲಾಗುತ್ತದೆ. ಮಂಗಳೂರಿನಲ್ಲಿ ಟಿಪ್ಪು ಬ್ರಿಟಿಷರ ವಿರುದ್ಧದ ಹೋರಾಟವನ್ನು ಮುಂದುವರೆಸುತ್ತಾರೆ.

ಈ ರೀತಿ ಎಂತದ್ದೇ ಕಷ್ಟದ ಸಂದರ್ಭದಲ್ಲೂ ಟಿಪ್ಪು ಸುಲ್ತಾನರು ಮತ್ತು ಹೈದರಾಲಿಯವರು ಸೈನಿಕರ ಸಂಬಳವನ್ನು ನಿಲ್ಲಿಸಲಿಲ್ಲ. ತಾನು ಶತ್ರುಗಳ ಗುಂಡಿನ ದಾಳಿ ಎದುರಿಸುತ್ತಿದ್ದಾಗಲೂ ಅರಮನೆಯಲ್ಲಿ ಸೈನಿಕರ ಸಂಬಳದ ಸರತಿ ಸಾಲಿಗೆ ಯಾವ ತೊಂದರೆ ಇರುತ್ತಿರಲಿಲ್ಲ. ಮಾಜಿ ಸಚಿವರೂ, ಶಾಸಕರಾಗಿರುವ ಎಸ್ ಸುರೇಶ್ ಕುಮಾರ್ ಹೇಳಿದ ಸುಳ್ಳು ಮತ್ತು ಕಟ್ಟುಕತೆಗಳು ಇತಿಹಾಸವಾಗುವುದಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page