Home ಜನ-ಗಣ-ಮನ ಕೃಷಿ ನೋಟ ಹವಾಮಾನ ಬದಲಾವಣೆಯನ್ನು ಎದುರಿಸಲು ಮಾದರಿ ಕೃಷಿ!

ಹವಾಮಾನ ಬದಲಾವಣೆಯನ್ನು ಎದುರಿಸಲು ಮಾದರಿ ಕೃಷಿ!

0

ಕ್ಷಯಕಲ್ಪದ ಮಾದರಿ ಪುನರುತ್ಪಾದಕ ಕೃಷಿಯಲ್ಲಿ ಖರ್ಚು ಹೆಚ್ಚು ಇದ್ದರೂ ಪ್ರತಿಫಲಗಳು ಹತ್ತು ಪಟ್ಟು ಹೆಚ್ಚು. ಪ್ರತಿ ತಿಂಗಳು ಸರಾಸರಿ ಒಂದು ಲಕ್ಷ ವರಮಾನದೊಂದಿಗೆ ಅನೇಕರು ಕೃಷಿಯಲ್ಲಿ ಲಾಭ ಕಂಡುಕೊಂಡಿದ್ದಾರೆ ಮಂಜುನಾಥ ಹೊಳಲು

ಹವಾಮಾನ ಬದಲಾವಣೆಯು (Climate Change) ಭಾರತದ ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯ ಮೇಲೆ ಸವಾರಿ ಮಾಡುತ್ತಿದೆ. 21ನೇ ಶತಮಾನದ ಅಂತ್ಯದ ವೇಳೆಗೆ ಭಾರತದಲ್ಲಿ ತಾಪಮಾನವು 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಬದಲಾವಣೆಯನ್ನು ಕುರಿತ ‘ಅಂತರಸರ್ಕಾರಿ ಸಮಿತಿ’ಯು (IPCC) ಅಂದಾಜಿಸಿದೆ. ಇದು ನಿವ್ವಳ ಕೃಷಿ ಆದಾಯದಲ್ಲಿ 3-26% ದಷ್ಟು ನಷ್ಟಕ್ಕೆ ಕಾರಣವಾಗುತ್ತದೆ.

ಆಹಾರದಲ್ಲಿನ ಪೌಷ್ಠಿಕಾಂಶವು ಮಣ್ಣಿನಲ್ಲಿರುವ ಪೋಷಕಾಂಶಗಳ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ. ಆರೋಗ್ಯಕರ ಮಣ್ಣು ಎಂದರೆ ಆರೋಗ್ಯಕರ ಸಸ್ಯ, ಹಣ್ಣುಗಳು ಮತ್ತು ತರಕಾರಿಗಳು. ಆದರೆ ಮಣ್ಣಿನಲ್ಲಿಯೇ ಪೋಷಕಾಂಶಗಳ ಕೊರತೆಯಿದ್ದರೆ ಏನಾಗುತ್ತದೆ?

ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ

ಭಾರತ ಸರ್ಕಾರವು 2019-20ರಲ್ಲಿ ನಡೆಸಿದ ಮಣ್ಣಿನ ಆರೋಗ್ಯ ಸಮೀಕ್ಷೆಯ ಪ್ರಕಾರ, ಸರಾಸರಿ ಭಾರತೀಯ ಮಣ್ಣಿನಲ್ಲಿ ಸಾರಜನಕದಲ್ಲಿ 55% ಕೊರತೆಯಿದೆ, 42% ರಂಜಕದ ಕೊರತೆಯಿದೆ ಮತ್ತು 44% ಸಾವಯವ ಇಂಗಾಲದ ಕೊರತೆಯಿದೆ. ಮಣ್ಣು ಆರೋಗ್ಯಕರವಾಗಿಲ್ಲದಿದ್ದಾಗ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಉತ್ಪಾದಿಸುವ ಅದರ ಸಾಮರ್ಥ್ಯವು ಕುಂಠಿತವಾಗುತ್ತದೆ. ಇದರಿಂದ ನಮ್ಮ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ. ಫಲವತ್ತತೆಯಿಂದ ಕೂಡಿದ ಕೃಷಿ ಮಣ್ಣು ಬರಿದಾಗಲು ಬೃಹತ್ ಪ್ರಮಾಣದ ಆಹಾರ ಉತ್ಪಾದನೆಯು ಮುಖ್ಯ ಕಾರಣವಾಗಿದೆ.

ನಮ್ಮ ಕೃಷಿಯೋಗ್ಯ ಮಣ್ಣಿನ ಆರೋಗ್ಯವನ್ನು ಸರಿಪಡಿಸಲು ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನಮ್ಮಲ್ಲಿ ಕೇವಲ 60 ವರ್ಷಗಳ ಕೃಷಿ ಉಳಿಯಬಹುದು ಎಂದು ವಿಶ್ವಸಂಸ್ಥೆಯ ‘ಕಿಸ್ ದಿ ಗ್ರೌಂಡ್’ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವು ಅಂದಾಜಿಸಿದೆ.

ಈ ಆಧುನಿಕ ಸಂಕಷ್ಟವನ್ನು ನಿವಾರಿಸುವ ಪ್ರಯತ್ನವಾಗಿ ರೈತರು ಸಾಂಪ್ರದಾಯಿಕ ಕೃಷಿಗೆ ಮರಳುತ್ತಿದ್ದಾರೆ ಮತ್ತು ಪರಿಹಾರಕ್ಕಾಗಿ ನೆಲದೊಂದಿಗಿನ ತಮ್ಮ ಬೇರುಗಳ ಕಡೆ ನೋಡುತ್ತಿದ್ದಾರೆ. ಉದ್ದೇಶಪೂರ್ವಕ ಮತ್ತು ಯೋಜಿತ ಕೃಷಿ ಪದ್ಧತಿಗಳ ಮೂಲಕ ನೈಸರ್ಗಿಕವಾಗಿ ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವ ಒಂದು ಉಪಾಯವೆಂದರೆ ಅಕ್ಷಯಕಲ್ಪದ ಮಾದರಿ ಪುನರುತ್ಪಾದಕ ಕೃಷಿ.

ಅಕ್ಷಯಕಲ್ಪದ ಮಾದರಿ ಪುನರುತ್ಪಾದಕ ಕೃಷಿ

ಈ ಕೃಷಿ ಪದ್ಧತಿಯುಪರಿಸರದ ಮೇಲೆ ಕಡಿಮೆ ದುಷ್ಪರಿಣಾಮ ಬೀರುತ್ತದೆ. ಪ್ರಕೃತಿಯೊಂದಿಗೆ ಸಮರಸದಿಂದ ಕೂಡಿದ ಅಭ್ಯಾಸಗಳನ್ನು ಒಳಗೊಳ್ಳುತ್ತದೆ. ಇದು ಮಣ್ಣಿನ ಗುಣಮಟ್ಟವನ್ನು ಮಾತ್ರವಲ್ಲದೆ ನೀರು, ಗಾಳಿ ಮತ್ತು ನಮ್ಮ ಆಹಾರದ ಗುಣಮಟ್ಟವನ್ನು ಹೆಚ್ಚಿಸಲು ಈಗಾಗಲೇ ಇರುವ ಪರಿಸರ ವ್ಯವಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಪ್ರಕ್ರಿಯೆಯಾಗಿದೆ. ಮಣ್ಣಿನ ಆರೋಗ್ಯವನ್ನು ಆದ್ಯತೆಯಾಗಿ ಪರಿಗಣಿಸುವುದು ಆಹಾರದ ಪೌಷ್ಟಿಕತೆಯ ಮೇಲೆ ನೇರವಾಗಿ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಅಕ್ಷಯಕಲ್ಪ ಮಾದರಿ ಒಂದು ಪರಿಪೂರ್ಣ ಉದಾಹರಣೆಯಾಗಿದೆ.

ಅಕ್ಷಯಕಲ್ಪದ ಮಾದರಿ ಪುನರುತ್ಪಾದಕ ಕೃಷಿಯ ನಿಖರವಾದ ವ್ಯಾಖ್ಯಾನವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಆದರೂ ಭೂಮಿಯ ಅಗತ್ಯವನ್ನು ಅವಲಂಬಿಸಿ, ವಿಶಾಲ ವರ್ಗದ ತತ್ತ್ವಗಳು ಒಂದೇ ಆಗಿರುತ್ತವೆ. ಅವುಗಳೆಂದರೆ:

1. ಕನಿಷ್ಠ ಮಣ್ಣಿನ ಅಡಚಣೆ

ಭೂಮಿಯನ್ನು ಉಳುಮೆ ಮಾಡಿದಾಗ, ಮಣ್ಣಿನ ರಚನೆಯ ಭೌತಿಕ ಅಡ್ಡಿಯು, ಮಣ್ಣನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಸಾವಯವ ಪದಾರ್ಥವನ್ನು ಒಡೆಯಲು ಕಾರಣವಾಗುತ್ತದೆ. ಕನಿಷ್ಠ ಪ್ರಮಾಣದ ಬೇಸಾಯವು ಮಣ್ಣನ್ನು ಆರೋಗ್ಯಕರವಾಗಿರಿಸಿಕೊಳ್ಳುವ ಒಂದು ಮಾರ್ಗವಾಗಿದೆ.

2. ವೈವಿಧ್ಯವು ಬಹಳ ಮುಖ್ಯ

ಬೆಳೆ ಸರದಿ ಮತ್ತು ವಿವಿಧ ಬೆಳೆಗಳ ಕೃಷಿಯು ಸಾರಜನಕ ಸ್ಥಿರೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಕೃತಕ ರಸಗೊಬ್ಬರಗಳ ಬಳಕೆಯಿಲ್ಲದೆ ಮಣ್ಣಿಗೆ ಪೋಷಕಾಂಶಗಳನ್ನು ಹಿಂದಿರುಗಿಸುತ್ತದೆ.

3. ಪ್ರಾಣಿಗಳನ್ನು ಮೇಯಿಸುವುದು

ಜಮೀನಿನಲ್ಲಿ ಮೇಯುವ ಪ್ರಾಣಿಗಳು ಅನಗತ್ಯವಾದ ಕಳೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತವೆ ಮತ್ತು ಅವುಗಳ ಗೊಬ್ಬರವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.

4. ಸಾವಯವವಾಗಿರಿಸಿ

ಸಾವಯವ ಕೃಷಿ ಪದ್ಧತಿಯಿಂದ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆ ದೂರವಾಗುತ್ತದೆ. ಇದರಿಂದ ಕಾಲಾನಂತರದಲ್ಲಿ ಮಣ್ಣಿನ ಸಹಜ ಪೋಷಕಾಂಶಗಳು ವೃದ್ಧಿಯಾಗುತ್ತವೆ. ಸಾವಯವ ಮಣ್ಣು ಹೆಚ್ಚು ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಉತ್ತಮ ಇಳುವರಿಯನ್ನು ಒದಗಿಸುತ್ತದೆ.

5. ಮಣ್ಣನ್ನು ಮುಚ್ಚಿಡಿ

ರಾಗಿ, ಅಲಸಂದೆ, ಹುರುಳಿ ಹಾಗು ಮೇವುಗಳಂತಹ ಕವರ್ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣನ್ನು ಜಾರದಂತೆ ಸ್ಥಳದಲ್ಲಿಯೇ ಇರಿಸಲು ಸಹಾಯವಾಗುತ್ತದೆ; ಮಣ್ಣಿನ ಸವೆತದಿಂದ ಉಂಟಾಗುವ ಖನಿಜ ನಷ್ಟ ಇಲ್ಲವಾಗುತ್ತದೆ.

6. ಮಣ್ಣಿನಲ್ಲಿ ಜೀವಂತ ಬೇರುಗಳು

ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹಿಡಿದುಕೊಂಡು  ಅದನ್ನು ಮಣ್ಣಿನಲ್ಲಿ ಸಂಗ್ರಹಿಸಿಡುತ್ತದೆ ಮತ್ತು ಅಂತರ್ಜಲವನ್ನು ನಿಯಂತ್ರಿಸುತ್ತದೆ.

ಖರ್ಚೂ ಹೆಚ್ಚು ಪ್ರತಿಫಲವೂ ಹೆಚ್ಚು

ಅಕ್ಷಯಕಲ್ಪದ ಮಾದರಿ ಪುನರುತ್ಪಾದಕ ಕೃಷಿಯಲ್ಲಿ ಖರ್ಚು ಹೆಚ್ಚು ಇದ್ದರೂ ಪ್ರತಿಫಲಗಳು ಹತ್ತು ಪಟ್ಟು ಹೆಚ್ಚು. ಪ್ರತಿ ತಿಂಗಳು ಸರಾಸರಿ ಒಂದು ಲಕ್ಷ ವರಮಾನದೊಂದಿಗೆ ಅನೇಕರು ಕೃಷಿಯಲ್ಲಿ ಲಾಭ ಕಂಡುಕೊಂಡಿದ್ದಾರೆ. ಅಕ್ಷಯಕಲ್ಪದ ಮಾದರಿ ಪುನರುತ್ಪಾದಕ ಕೃಷಿಯನ್ನು ಸಾವಯವದಂತಹ ಫಾರ್ಮ್‌ಗಳು ಕಡಿಮೆ ವೆಚ್ಚದ ಮೂಲಕ ಒದಗಿಸುತ್ತವೆ. ಇದರಿಂದ ದೀರ್ಘಾವಧಿಯಲ್ಲಿ ರೈತರ ಜೀವನೋಪಾಯದಲ್ಲಿ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಮಣ್ಣಿನಲ್ಲಿ ನೈಸರ್ಗಿಕವಾಗಿ ಸಂಭವಿಸುವ ಪೋಷಕಾಂಶಗಳನ್ನು ರಕ್ಷಿಸುವ ಜೊತೆಗೆ ನಮ್ಮ ಗಾಳಿ ಮತ್ತು ನೀರಿನಿಂದ ರಾಸಾಯನಿಕಗಳನ್ನು ದೂರವಿಟ್ಟಂತಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪುನರುತ್ಪಾದಕ ಕೃಷಿಯು ಹವಾಮಾನ ಬದಲಾವಣೆಯನ್ನು ಮೂಲದಲ್ಲಿಯೇ ಎದುರಿಸಲು ನಮಗೆ ಸಹಾಯ ಮಾಡುವ ನೀಲನಕ್ಷೆಯಂತೆ ಕಾರ್ಯನಿರ್ವಹಿಸುತ್ತದೆ.

ಮಂಜುನಾಥ ಹೊಳಲು

ಕೃಷಿ ಬರಹಗಾರರು

You cannot copy content of this page

Exit mobile version