Wednesday, July 16, 2025

ಸತ್ಯ | ನ್ಯಾಯ |ಧರ್ಮ

“ಮೋದಿ ಒಬ್ಬರೇ ವಾರಕ್ಕೆ 100 ಗಂಟೆ ಕೆಲಸ ಮಾಡೋದು” : ಇನ್ಫಿ ನಾರಾಯಣಮೂರ್ತಿ ಹೇಳಿಕೆ ದಾಖಲಿಸಿದ ತೇಜಸ್ವಿ ಸೂರ್ಯ

“ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು” ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಇಂದಿಗೂ ಟ್ರೋಲ್‌ಗೆ ಗುರಿಯಾಗುತ್ತಿರುವ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಈ ಸುದ್ದಿ ದಾಖಲಿಸಿದ್ದು ಬೇರಾರೂ ಅಲ್ಲ, ಸಂಸದ ತೇಜಸ್ವಿ ಸೂರ್ಯ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ನಡೆದ ಮಾತನ್ನು ತೇಜಸ್ವಿ ಸೂರ್ಯ ತಮ್ಮ X ಖಾತೆಯಲ್ಲಿ ದಾಖಲಿಸಿಕೊಂಡಿದ್ದಾರೆ.

ಮುಂಬೈನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡುವ ವೇಳೆ ಎನ್.ಆರ್. ನಾರಾಯಣ ಮೂರ್ತಿ ಅವರನ್ನು ಅನಿರೀಕ್ಷಿತವಾಗಿ ತೇಜಸ್ವಿ ಸೂರ್ಯ ಭೇಟಿಯಾಗಿದ್ದಾರೆ. ಈ ಭೇಟಿಯ ಬಗ್ಗೆ ತಮ್ಮ ಎಕ್ಸ್​​ನಲ್ಲಿ ತೇಜಸ್ವಿ ಸೂರ್ಯ ಹಂಚಿಕೊಂಡಿದ್ದಾರೆ.

ಅವರ ಜೊತೆ ಕಳೆದ ಸಮಯವನ್ನು ‘ಎರಡು ಗಂಟೆಗಳ ಮಾಸ್ಟರ್‌ಕ್ಲಾಸ್’ ಎಂದು ತೇಜಸ್ವಿ ಸೂರ್ಯ ಹೇಳಿಕೊಂಡಿದ್ದಾರೆ. ಭಾರತದ ತಂತ್ರಜ್ಞಾನ ಭೂದೃಶ್ಯವನ್ನು ಪರಿವರ್ತಿಸಿದ ಮತ್ತು ಇನ್ಫೋಸಿಸ್ ಮೂಲಕ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಕೆಲಸವನ್ನು ಸೃಷ್ಟಿಸಿದ ಕೀರ್ತಿಗೆ ಪಾತ್ರರಾದ ಐಟಿ ಪ್ರವರ್ತಕರೊಂದಿಗೆ ಬಹುದೊಡ್ಡ ಸ್ಪೂರ್ತಿದಾಯಕ ಸಂಭಾಷಣೆ ನಡೆಸಿದೆ. AI ನಿಂದ ಉತ್ಪಾದನೆಯವರೆಗೆ, ನಮ್ಮ ನಗರಗಳ ಸ್ಥಿತಿ, ಯುವಕರ ಕೌಶಲ್ಯವರ್ಧನೆ, ನೀತಿಶಾಸ್ತ್ರ ಮತ್ತು ನಾಯಕತ್ವ, ಪ್ರತಿಯೊಂದು ವಿಷಯಕ್ಕೂ NRN ತರುವ ಜ್ಞಾನ ಮತ್ತು ಸ್ಪಷ್ಟತೆಯ ವಿಸ್ತಾರದ ಬಗ್ಗೆ ನಾನು ಅವರೊಂದಿಗೆ ಮಾತನಾಡಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೊಂಡಿದ್ದಾರೆ.

ರಾಷ್ಟ್ರೀಯ ಅಭಿವೃದ್ಧಿಯನ್ನು ಹೆಚ್ಚಿಸಲು ಯುವ ಭಾರತೀಯರು ಹೆಚ್ಚು ಸಮಯ ಕೆಲಸ ಮಾಡಬೇಕು ಎಂಬ ಮೂರ್ತಿಯವರ ಸಲಹೆ ಎಂದು ಹೇಳಿದ್ದಾರೆ. ಈ ವೇಳೆ ನಾರಾಯಣ ಮೂರ್ತಿ ಅವರು ಹೇಳಿದ ಒಂದು ವಿಚಾರದ ಬಗ್ಗೆ ತುಂಬಾ ಖುಷಿಯಿಂದ ಹಂಚಿಕೊಂಡಿದ್ದಾರೆ. ನಾನು 70 ಗಂಟೆ ಕೆಲಸದ ಬಗ್ಗೆ ಮಾತನಾಡಿದಾಗ ಅವರು ನಕ್ಕು ಹೇಳಿದ ಮಹತ್ವದ ಮಾತು ಏನೆಂದರೆ ನನಗೆ ತಿಳಿದಿರುವಂತೆ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ಮೋದಿ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಸಧ್ಯ ತೇಜಸ್ವಿ ಸೂರ್ಯರ ಈ ಟ್ವಿಟ್ ವೈರಲ್ ಆಗಿದೆ. ಹೆಚ್ಚು ವಿರೋಧದ ಪ್ರತಿಕ್ರಿಯೆಗಳೇ ಬಂದಿದ್ದು, ಅನೇಕ ಮಂದಿ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿಕೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಸ್ವತಃ ಬಂಡವಾಳಶಾಹಿಯಾಗಿರುವ ನಾರಾಯಣಮೂರ್ತಿ ಐಟಿ ಟೆಕ್ಕಿಗಳನ್ನು ಜೀತದಾಳುಗಳಂತೆ ಕಾಣುತ್ತಿದ್ದಾರೆ. ಇದಕ್ಕೆ ಈಗ ನರೇಂದ್ರ ಮೋದಿಯ ಸಮರ್ಥನೆ ಬೇರೆ ಸೇರಿಕೊಂಡಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ತೇಜಸ್ವಿ ಸೂರ್ಯ ‘ಎಮರ್ಜೆನ್ಸಿ ಎಕ್ಸಿಟ್’ ಬಾಗಿಲನ್ನು ತೆರೆಯಿರಿ ಎಂದು ಹಾಸ್ಯ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page